Psalms - Chapter 31
Holy Bible

1 : ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ | ನಿನ್ನ ಶರಣನಾದೆ, ನನಗಾಗದಿರಲಿ ತಾತ್ಸಾರ ||
2 : ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ | ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೆ ||
3 : ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ | ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ ||
4 : ವೈರಿಗಳ ಉರುಲುಬಲೆಯಿಂದೆನ್ನನು ರಕ್ಷಿಸು | ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು ||
5 : ನನಗಾಧಾರ ನೀನಲ್ಲವೆ? ನನ್ನಾತ್ಮವನು ನಿನಗೊಪ್ಪಿಸಿರುವೆ / ನಂಬಿಕಸ್ತನಾದ ದೇವನೆ, ನೀಯೆನ್ನ ಮುಕ್ತಗೊಳಿಸಿರುವೆ//
6 : ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ / ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ //
7 : ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು / ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಕ್ಷಿಸಿದೆ ಬಾಧೆಗಳನು //
8 : ವಿರೋಧಿಗಳ ವಶಕ್ಕೆ ಎನ್ನನು ನೀ ಬಿಟ್ಟುಬಿಡಲಿಲ್ಲ / ನಿರಾತಂಕದೆಡೆಯಲಿ ನನ್ನ ನಿಲ್ಲಿಸಿದೆಯಲ್ಲಾ //
9 : ಸಂಕಟದಲಿ ನಾ ಸಿಲುಕಿಕೊಂಡಿರುವೆ / ಕಣ್ಣುಗುಡ್ಡೆಗಳಿದೋ ಸೇದಿ ಹೋಗಿವೆ / ದೇಹಾತ್ಮಗಳೆರಡು ಕುಗ್ಗಿ ಹೋಗಿವೆ //
10 : ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ ಶಕ್ತಿ ಪಾಪದಲಿ / ಸವೆದು ಹೋಗುತ್ತಿವೆ ನನ್ನ ದೇಹದೆಲುಬುಗಳು ಕಾಲ ಚಕ್ರದಲಿ //
11 : ಶತ್ರುಗಳ ದೂಷಣೆಗೆ ಗುರಿಯಾದೆ, ನೆರೆಯವರಿಗೆ ನಿಂದಾಸ್ಪದನಾದೆ / ಮಿತ್ರರೂ ಬೆದರುವಂತಾದೆ; ದಾರಿಹೋಕರು ದೂರವಾಗುವಂತಾದೆ//
12 : ನುಚ್ಚುನೂರಾದೆ, ಮಡಕೆಚಿಪ್ಪಿನಂತಾದೆ / ಸತ್ತವರಂತಾದೆ: ನೆನಪಿಗೆ ಬಾರದಾದೆ //
13 : ನನಗೆ ವಿರುದ್ಧ ಜನರಾಡುವ ಗುಸುಗುಸು ಮಾತು ಕೇಳಿ ಬರುತಿದೆ / ಭಯಭೀತಿ ಎನ್ನನಾವರಿಸಿದೆ, ಒಳಸಂಚು, ಪ್ರಾಣಹರಣ ನಡೆಯುತಿವೆ //
14 : ನಾನಾದರೋ ಪ್ರಭೂ, ನಿನ್ನಲೆ ಭರವಸೆಯಿಟ್ಟಿರುವೆ / ನೀನೆ ನನ್ನ ದೇವರೆಂದು ಪ್ರಭು ಸಾರುವೆ //
15 : ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ / ಬೆನ್ನಟ್ಟಿಬರುವ ವೈರಿಯಿಂದ ರಕ್ಷಿಸೆನ್ನ //
16 : ಬೆಳಗಿಸಲಿ ದಾಸನನು ನಿನ್ನ ಮುಖತೇಜವು / ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು //
17 : ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ / ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ //
18 : ಸೇದಿಹೋಗಲಿ ಸಜ್ಜನರ ವಿರುದ್ಧ ಸುಳ್ಳಾಡುವ ನಾಲಿಗೆ / ಬಿದ್ದುಹೋಗಲಿ, ಸೊಕ್ಕಿನಿಂದವರನು ಧಿಕ್ಕರಿಸುವ ನಾಲಿಗೆ //
19 : ನಿನಗಂಜಿ ನಡೆವರಿಗೆ ನೀ ಕಟ್ಟಿಟ್ಟಿರುವ ಬುತ್ತಿ ಅದೆಷ್ಟು ಅಗಾಧ / ನಿನ್ನ ನಂಬಿದವರಿಗೆ ಬಟ್ಟ ಬಯಲಾಗಿ ನೀಡುವ ನೆರವದೆಷ್ಟು ಅಪಾರ //
20 : ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು, ಜನರೊಳಸಂಚಿನಿಂದ / ದೂರವಿಡುವುದವರನು ನಿನ್ನಾಸರೆಯು, ವ್ಯಾಜ್ಯ ಮಾಡುವ ಜಿಹ್ವೆಯಿಂದ //
21 : ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ / ಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ //
22 : ದೇವರಿಂದ ದೂರನಾದೆಯೆಂಬ ದಿಗಿಲೇರಲು / ಅಕ್ಕರೆಯಿಂದ ನೀ ಕಿವಿಗೊಟ್ಟೆ ನಾ ಮೊರೆಯಿಡಲು //
23 : ಪ್ರಭುವಿನ ಭಕ್ತರೇ, ಪ್ರೀತಿಸಿ ನೀವಾತನನು ಅಧಿಕಾಧಿಕವಾಗಿ / ಶರಣರನು ರಕ್ಷಿಸಿ, ಸೊಕ್ಕಿನವರನು ಶಿಕ್ಷಿಸುವ ನಾತ ಸರಿಯಾಗಿ //
24 : ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ / ಧೈರ್ಯದಿಂದಿರಲಿ ನಿರುತ ನಿಮ್ಮೆಲ್ಲರ ಹೃದಯ //

Holydivine