Psalms - Chapter 65
Holy Bible

1 : ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ ಸ್ತುತಿಸ್ತೋತ್ರಗಳು / ಪೂರೈಸತಕ್ಕವು ದೇವಾ, ಜನರು ನಿನಗೆ ಹೊತ್ತ ಹರಕೆಗಳು //
2 : ದೇವಾ, ನೀ ನಮ್ಮೆಲ್ಲರ ಪ್ರಾರ್ಥನೆಗೆ ಕಿವಿಗೊಡುವಾತ / ನರರೆಲ್ಲರು ಬರುವರು ನಿನ್ನ ಬಳಿಗೆ ಪಾಪದ ಪ್ರಯುಕ್ತ //
3 : ಪಾಪದ ಹೊರೆಹೊತ್ತವರು ನಾವಯ್ಯಾ / ಅವುಗಳ ಪರಿಹಾರಕನು ನೀನಯ್ಯಾ//
4 : ನಿನ್ನ ಆಸ್ಥಾನದಲಿ ನೆಲೆಸಲು ನೀನಾಯ್ದು ತಂದ ದೈವಭಕ್ತ ಧನ್ಯ / ನಮಗೆ ತರಲಿ ತೃಪ್ತಿ ನೀ ವಾಸಿಸುವ ಪವಿತ್ರಾಲಯದ ಸೌಭಾಗ್ಯ //
5 : ದೇವಾ, ನೀನೆ ನಮ್ಮೆಲ್ಲರ ಜೀವೋದ್ಧಾರ / ದೂರದ ಸಾಗರ ಸೀಮೆಗಳಿಗೂ ಆಶಾಧಾರ / ಗಂಭೀರ ಕಾರ್ಯವೆಸಗಿ ನೀಡುವೆ ವಿಜಯದುತ್ತರ //
6 : ಬಿಗಿದುಕೊಂಡಿರುವೆ ಶಕ್ತಿಶೌರ್ಯದ ನಡುಗಟ್ಟನು / ಬಿಗಿಯಾಗಿ ನಿಲ್ಲಿಸಿರುವೆ ನೀ ಗುಡ್ಡಬೆಟ್ಟಗಳನು //
7 : ಭೋರ್ಗರೆವ ಸಮುದ್ರಗಳನು, ಗರ್ಜಿಸುವ ತರಂಗಗಳನು / ದೊಂಬಿಯೇಳುವ ಜನಾಂಗಗಳನು ಶಮನಗೊಳಿಸುವವನು ನೀನು //
8 : ಅಚ್ಚರಿಗೊಳ್ಳುವುವು ನಿನ್ನ ಮಹತ್ಕಾರ್ಯಗಳ ಕಂಡು ಎಲ್ಲೆ ಎಲ್ಲೆಗಳು / ಹರ್ಷಾನಂದಗೊಳ್ಳುವರು ಅದಕಂಡಾ ಪೂರ್ವಪಶ್ಚಿಮ ಪ್ರವಾಸಿಗಳು //
9 : ಇಳೆಯನು ಸಂಧಿಸಿ, ಮಳೆಯನು ಸುರಿಸಿ, ನೆಲವನು ನೀ ಸಿರಿಗೊಳಿಸುವಾತ / ನಾಲೆ ತುಂಬ ನೀರಹರಿಸಿ, ಹೊಲ ತುಂಬ ನೀ ಧಾನ್ಯನೀಡುವಾತ //
10 : ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ / ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ //
11 : ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ / ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ //
12 : ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿಂದ / ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ //
13 : ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ / ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ / ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ //

Holydivine