Psalms - Chapter 12
Holy Bible

1 : ನೆರವಾಗು ಪ್ರಭು, ಭಕ್ತರಿಲ್ಲವಾದರು ಜಗದೊಳು / ಶರಣರಾರೂ ಕಾಣಸಿಗರೆನಗೆ ನರಮಾನವರೊಳು //
2 : ಹುಸಿಯ ನುಡಿವರು ನೆರೆಯವರೊಡನೆ ಪ್ರತಿಯೋರ್ವರು / ಕಪಟ ಮನದ ತುಟಿಮಾತಿನ ಸ್ತುತಿಗಾರರವರು //
3 : ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ / ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ //
4 : “ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ / ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ //
5 : “ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ; ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ //
6 : ಪ್ರಭುವಿನ ಈ ವಾಗ್ದಾನ ಪ್ರಮಾಣಬದ್ಧ / ಏಳ್ಮಡಿ ಪುಟಕ್ಕಿಟ್ಟ ಬೆಳ್ಳಿಯಷ್ಟು ಶುದ್ಧ //
7 : ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ / ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಠೆ //
8 : ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು / ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು //

Holydivine