Psalms - Chapter 80
Holy Bible

1 : ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ / ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ / ವಿರಾಜಿಸು, ಕೆರೂಬಿಯರ ಮಧ್ಯೆ ಆಸೀನನಾದವನೇ //
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ / ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ //
3 : ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //
4 : ಸ್ವಾಮಿ ದೇವನೇ, ಸರ್ವಶಕ್ತನೆ / ಅದೆನಿತು ಕಾಲ ನೀ ಮುನಿದಿರುವೆ / ನಿನ್ನವರ ಮೊರೆಯನಾಲಿಸದಿರುವೆ?//
5 : ರೋದನವನೆ ಅವರಿಗೆ ಅನ್ನವಾಗಿಸಿದೆ / ಹರಿಯುವ ಕಂಬನಿಯನೆ ಪಾನವಾಗಿಸಿದೆ //
6 : ನೆರೆಯವರಿಗೆ ನಮ್ಮನು ಕಲಹಕಾರಣವಾಗಿಸಿದೆ | ಶತ್ರುಗಳ ಅಪಹಾಸ್ಯಕೆ ನಮ್ಮನು ಗುರಿಪಡಿಸಿದೆ ||
7 : ಸರ್ವಶಕ್ತನಾದ ದೇವನೆ, ಉದ್ಧರಿಸೆಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //
8 : ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ / ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ //
9 : ಹದಮಾಡಿದೆ ಅದಕೆ ಬೇಕಾದ ನೆಲವನ್ನೆಲ್ಲಾ / ಬೇರೂರಿ ಹಬ್ಬಿಕೊಂಡಿತದು ನಾಡಿನಲ್ಲೆಲ್ಲಾ //
10 : ಬೆಟ್ಟಗುಡ್ಡಗಳನಿದೋ ಕವಿದಿವೆ ಅದರ ಕುಡಿಗಳು / ದೇವದಾರು ಮರಗಳ ಮೇಲೆ ಹಬ್ಬಿವೆ ಬಳ್ಳಿಗಳು //
11 : ಹರಡಿವೆ ಅದರ ಕೊಂಬೆಗಳು ಸಮುದ್ರದವರೆಗೆ / ಬೆಳೆದಿವೆ ಆ ರೆಂಬೆಗಳು ಮಹಾನದಿಯ ವರೆಗೆ //
12 : ಕಿತ್ತುಹಾಕಿದೆಯೇಕೆ ಅದರ ಬೇಲಿಯನು?/ ತರಿದುಬಿಡುವವರಲ್ಲವೆ ದಾರಿಗರು ಅದನು?//
13 : ನಾಶಮಾಡುವುವು ಅದನು ಕಾಡುಹಂದಿಗಳು / ತಿಂದುಹಾಕುವುವು ಅದನು ಅರಣ್ಯ ಮೃಗಗಳು //
14 : ಸರ್ವಶಕ್ತನಾದ ದೇವರೇ, ಮರಳಿ ಮುಖತೋರಿಸು / ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು //
15 : ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು / ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು //
16 : ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ / ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು //
17 : ಕೈ ಹಿಡಿದು ಕಾಪಾಡು ನಿನ್ನ ಬಲಗೈ ಉದ್ಧರಿಸಿದ ಪುರುಷನನು / ನಿನಗೆಂದೇ ನೀ ಸಾಕಿ ಬೆಳೆಸಿದಾ ವರಪುತ್ರನನು //
18 : ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು / ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು //
19 : ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು //

Holydivine