Psalms - Chapter 103
Holy Bible

1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ನನ್ನ ಅಂತರಂಗವೇ, ಭಜಿಸು ಆತನನು / ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು / ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು //
5 : ಒಳ್ಳೆಯವುಗಳಿಂದ ತುಂಬಿಸುವನು ನನ್ನ ಜೀವಮಾನವನು / ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ ಯೌವನವನು //
6 : ಸಾಧಿಸುವನು ಪ್ರಭು ನ್ಯಾಯನೀತಿಯನು / ದೊರಕಿಸುವನು ಶೋಷಿತರಿಗೆ ನ್ಯಾಯವನು //
7 : ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ / ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ //
8 : ಪ್ರಭು ದಯಾಳು, ಕೃಪಾಪೂರ್ಣನು / ಸಹನಶೀಲನು, ಪ್ರೀತಿಮಯನು //
9 : ಆತನು ಸದಾ ತಪ್ಪು ಹುಡುಕುವವನಲ್ಲ / ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ / ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ //
11 : ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ / ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ //
12 : ಪಡುವಣದಿಂದ ಮೂಡಣವೆಷ್ಟೋ ದೂರ / ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ // 13 ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
13 : ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ / ಕನಿಕರಿಸುವನಾತ ತನಗೆ ಅಂಜುವವರಿಗೆ //
14 : ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ / ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ //
15 : ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ / ಹೊಲದ ಹೂವಿನಂತೆ ಅವನ ಬೆಡಗುಬಿನ್ನಾಣ //
16 : ಬಿದ್ದುಹೋಗುವುದಾ ಹೂವು ಗಾಳಿಯ ಬಡಿತಕ್ಕೆ / ಅದರ ಗುರುತೂ ಇರದಲ್ಲಿ ಮರಳಿ ನೋಡಲಿಕ್ಕೆ //
17 : ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು / ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು //
18 : ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ / ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ //
19 : ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು / ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು //
20 : ಭಜಿಸಿರಿ ಪ್ರಭುವನು ದೇವದೂತರುಗಳೇ / ಆತನ ಆಣತಿ ಪಾಲಿಪ ಪರಾಕ್ರಮಿಗಳೇ / ಆತನ ನುಡಿಯಂತೆಯೇ ನಡೆಯುವ ಜನಾಂಗಗಳೇ //
21 : ಪ್ರಭುವನು ಭಜಿಸಿರಿ ಆತನ ಸೇನೆಗಳೇ / ಭಜಿಸು ಪ್ರಭುವನು, ಓ ಎನ್ನಮನವೇ //
22 : ಭಜಿಸಿರಿ ಪ್ರಭುವನು ಆತನ ಸೃಷ್ಟಿಗಳೇ / ಆತನ ಅಧಿಕಾರದಲ್ಲಿಹ ಸಕಲ ವಸ್ತುಗಳೇ / ಭಜಿಸು ಪ್ರಭುವನು, ಓ ಎನ್ನಮನವೇ //

Holydivine