Psalms - Chapter 55
Holy Bible

1 : ಹೇ ದೇವಾ, ಕಿವಿಗೊಡು ನನ್ನ ಪ್ರಾರ್ಥನೆಗೆ / ವಿಮುಖನಾಗಬೇಡ ನನ್ನ ವಿಜ್ಞಾಪನೆಗೆ //
2 : ನನ್ನ ಮನವಿಯನಾಲಿಸು, ದಯಪಾಲಿಸು ಸದುತ್ತರವನು / ಚಿಂತಾಕ್ರಾಂತನಾದ ನಾನು ಪ್ರಲಾಪಿಸುತ್ತಿರುವೆನು //
3 : ಶತ್ರುಗರ್ಜನೆಯಿಂದ, ದುರುಳರ ಹಿಂಸೆಯಿಂದ / ಅವರೆನಗೆ ಬರಮಾಡಿರುವ ಆತಂಕದಿಂದ / ದ್ವೇಷಿಸುತಿಹರೆನ್ನನು ಕೋಪಾವೇಶದಿಂದ //
4 : ನನ್ನ ಹೃದಯವು ನೊಂದು ಬೆಂದಿದೆ / ಮರಣ ಭಯವು ಆವರಿಸಿಕೊಂಡಿದೆ //
5 : ನಡುಗುತ್ತಿರುವೆ ಭಯದಿಂದ / ಕುಸಿಯುತ್ತಿರುವೆ ದಿಗಿಲಿನಿಂದ //
6 : ‘ಆಹಾ ರೆಕ್ಕೆಗಳು ನನಗಿತ್ತಾದರೆ ಪಾರಿವಾಳದಂತೆ / ಹಾರಿ ಹೋಗಿ ನೆಮ್ಮದಿಯಿಂದಿರಬಹುದಿತ್ತು’ ಎನ್ನುತ್ತಿದ್ದೆ//
7 : ದೂರ, ಬಲುದೂರ ಹಾರಿ ಹೋಗುತ್ತಿದ್ದೆ / ನಿರ್ಜನ ಪ್ರದೇಶದಲಿ ವಾಸಿಸುತ್ತಿದ್ದೆ //
8 : ಹುಡುಕುತ್ತಿದ್ದೆ ನಾ ಗೂಡನು ತವಕದಿಂದ / ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ //
9 : ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು ಅವರ ನುಡಿಯನು / ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ ಕಲಹವನು //
10 : ಗೋಡೆ ಸುತ್ತಲೂ ತಿರುಗುತಿಹರವರು ಹಗಲಿರುಳು / ನಗರದೊಳಗೆ ತುಂಬಿವೆ ಅಕ್ರಮ ಅನಾಚಾರಗಳು //
11 : ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು / ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು //
12 : ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು ಶತ್ರುವಾಗಿದ್ದರೆ / ನಾನವಿತುಕೊಳ್ಳುತ್ತಿದ್ದೆ ದ್ವೇಷಿಸುವವನು ವೈರಿಯಾಗಿದ್ದರೆ //
13 : ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು / ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತ ಮಿತ್ರನು //
14 : ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ / ಭಕ್ತರೊಂದಿಗೆ ಮಧುರ ಸಂಭಾಷಣೆಯೊಂದಿಗೆ?//
15 : ಮರಣ ತಟ್ಟನೆ ಆ ದುಷ್ಟರ ಮೇಲೆರಗಲಿ / ಜೀವಸಹಿತ ಪಾತಾಳಕ್ಕವರು ಇಳಿಯಲಿ / ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ //
16 : ನಾನಾದರೋ ಮೊರೆಯಿಡುವೆ ದೇವರಿಗೆ / ರಕ್ಷಣೆ ನೀಡದಿರನು ಪ್ರಭು ನನಗೆ //
17 : ತ್ರಿಕಾಲದೊಳು ಗೋಗರೆದು ಯಾಚಿಸುವೆನು / ಎನ್ನಯ ಮೊರೆಗಾತನು ಕಿವಿಗೊಡದಿರನು //
18 : ನನ್ನ ಸುತ್ತಲೂ ಶತ್ರುವ್ಯೂಹವಿರುವಲ್ಲಿ / ರಕ್ಷಿಸುವನೆನ್ನನು ನಾ ನಡೆಸುವ ದಾಳಿಯಲಿ //
19 : ಆದಿಯಿಂದಾಳುವ ದೇವನು ಅವರ ಸೊಕ್ಕಡಗಿಸದೆ ಬಿಡನು / ಪರಿವರ್ತಿಸಲಾಗದು ದೇವಭಯವಿಲ್ಲದವರ ಹೃದಯವನು //
20 : ಮಿತ್ರರ ಮೇಲೆ ಕೈಯೆತ್ತಿರುವನು ಆ ನನ್ನ ಗೆಳೆಯನು / ತಾನು ಮಾಡಿದ ಒಪ್ಪಂದವನು ತಾನೆ ವಿೂರಿ ನಡೆದಿಹನು //
21 : ಅವನ ಬಾಯಿ ಬೆಣ್ಣೆಗಿಂತ ನಯ, ಆದರೆ ಹೃದಯ ಕಲಹಭರಿತ / ನುಡಿ ಎಣ್ಣೆಗಿಂತ ನುಣುಪು, ಆದರೆ ಬಿಚ್ಚುಗತ್ತಿಗಿಂತ ಹರಿತ //
22 : ಪ್ರಭುವಿನ ಮೇಲೆ ಹಾಕು ನಿನ್ನ ಚಿಂತಾಭಾರವನು / ಉದ್ಧರಿಸುವನು, ಸಜ್ಜನರನೆಂದಿಗೂ ಕದಲಗೊಡಿಸನು //
23 : ದುರ್ಜನರನು ದೇವಾ, ನೀ ದಬ್ಬಿಬಿಡುವೆ ಪಾತಾಳಕೆ / ಅರ್ಧಾಯುಷ್ಯವನೂ ಬಾಳಬಿಡೆ ವಂಚಕ ಕೊಲೆಗಾರರಿಗೆ / ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ ನಿನಗೆ //

Holydivine