Sirach - Chapter 8
Holy Bible

1 : ಸಾಮಾನ್ಯ ಜಾಣತನ ವಾದಿಸಬೇಡ ಬಲಶಾಲಿಯೊಂದಿಗೆ ಸಿಕ್ಕಿಬಿದ್ದೀಯೆ ಅವನ ಕೈಯೊಳಗೆ !
2 : ಸಿರಿವಂತನೊಂದಿಗೆ ಹೋರಾಡಬೇಡ ನಿನಗಿಂತಲೂ ಅವನಿಗಿದೆ ಹೆಚ್ಚಾದ ಐಶ್ವರ್ಯ. ಚಿನ್ನವು ಅನೇಕರನ್ನು ವಿನಾಶಕ್ಕೆ ಒಯ್ದಿದೆ ಅಂತೆಯೇ ಅರಸರ ತಲೆಯನ್ನೂ ಕೆಡಿಸಿದೆ.
3 : ಬಾಯಿಬಡುಕನೊಂದಿಗೆ ವಾದಿಸಬೇಡ ಉರಿವ ಅವನ ಬೆಂಕಿಗೆ ಎಣ್ಣೆ ಹೊಯ್ಯಬೇಡ.
4 : ಕುಚೋದ್ಯ ಮಾಡಬೇಡ ಉದ್ಧಟನೊಂದಿಗೆ ಅವನು ನಿನ್ನ ಹಿರಿಯರನ್ನೂ ಈಡು ಮಾಡಿಯಾನು ಅವಮಾನಕ್ಕೆ.
5 : ಹಂಗಿಸಬೇಡ ಪಾಪಕ್ಕೆ ವಿಮುಖರಾಗುವವರನ್ನು ಮರೆಯದಿರು ನಾವೆಲ್ಲ ಶಿಕ್ಷೆಗೆ ಪಾತ್ರರೆಂಬುದನು.
6 : ಮುಪ್ಪಿನವರನ್ನು ಅವಮಾನಪಡಿಸದಿರು ನಮ್ಮಲ್ಲಿಯೂ ಕೆಲವರು ಮುದುಕರಾಗಬಹುದು!
7 : ಸತ್ತವನನ್ನು ಕಂಡು ಸಂತೋಷಪಡಬೇಡ ನಾವೆಲ್ಲರೂ ಸಾಯಬೇಕೆಂಬುದನ್ನು ಮರೆಯಬೇಡ
8 : ಅಲಕ್ಷ್ಯಮಾಡಬೇಡ ಬುದ್ಧಿವಂತರ ಸಂಭಾಷಣೆಯನು ಮನನಮಾಡಿಕೊ ಅಂಥವರ ಜ್ಞಾನೋಕ್ತಿಗಳನು ಏಕೆನೆ, ಗಳಿಸುವೆ ಅವರಿಂದ ಸುಬೋಧೆಯನು ಕಲಿಯುವೆ ಘನವಂತರಿಗೆ ಸೇವೆಮಾಡುವ ರೀತಿಯನು.
9 : ಹಿರಿಯರ ಮಾತುಕತೆಗಳನ್ನು ಅಲಕ್ಷಿಸಬೇಡ, ಅವರು ಸಹ ಕಲಿತುಕೊಂಡರಲ್ಲವೆ ತಮ್ಮ ಹಿರಿಯರಿಂದ?
10 : ಪಾಪಿಯ ಬೆಂಕಿಯನ್ನು ಹೊತ್ತಿಸದಿರು ಅವನ ಕಿಚ್ಚಿನಲ್ಲಿ ಬೆಂದು ಹೋಗದಿರು.
11 : ಸಿಟ್ಟಿನಿಂದ ಎದ್ದೇಳಬೇಡ ಧರ್ಮನಿಂದಕನ ಎದುರಿನಲ್ಲಿ ಅವನು ನಿನ್ನ ಹಿಡಿಯಲು ಹವಣಿಸಿಯಾನು ಮಾತಿನಲ್ಲಿ.
12 : ಸಾಲ ಕೊಡಬೇಡ ನಿನಗಿಂತ ಬಲಿಷ್ಠನಿಗೆ ಕೊಟ್ಟರೆ, ಕಳಕೊಂಡವನಂತಿರುವೆ.
13 : ಶಕ್ತಿಮೀರಿ ಹೊಣೆಯಾಗಿ ನಿಲ್ಲಬೇಡ ಯಾರಿಗೂ ನಿಂತರೆ ಸಿದ್ಧನಾಗಿರು ಆ ಸಾಲವನ್ನು ತೀರಿಸಲು.
14 : ದಾವಾ ಹಾಕಬೇಡ ನ್ಯಾಯಾಧಿಪತಿಗೆ ವಿರುದ್ಧವಾಗಿ ಅವನ ಸ್ಥಾನನೋಡಿ, ತೀರ್ಪು ಕೊಟ್ಟಾರು ಅವನ ಪರವಾಗಿ.
15 : ಪ್ರಯಾಣಮಾಡಬೇಡ ದುಡುಕುವ ವ್ಯಕ್ತಿಯೊಂದಿಗೆ ಅವನು ಗುರಿಪಡಿಸಿಯಾನು ನಿನ್ನನ್ನು ದುಃಖಕೆ; ಅವನು ಮಾಡುವನು ತನ್ನ ಮನಸ್ಸಿಗೆ ಬಂದಂತೆ ಅವನ ಅವಿವೇಕತನದಿಂದ ನೀನೂ ಹಾಳಾಗುವೆ ಅವನೊಂದಿಗೆ.
16 : ಕಲಹ ಮಾಡಬೇಡ ಕೋಪಿಷ್ಠನೊಂದಿಗೆ ಏಕಾಂತದಲಿ ಹೋಗಬೇಡ ಅವನ ಜೊತೆಗೆ; ರಕ್ತಕ್ಕೆ ಬೆಲೆಯಿಲ್ಲ ಅವನ ದೃಷ್ಟಿಯಲಿ ನಿನ್ನನ್ನು ಬಡಿದುಬಿಟ್ಟಾನು ನೆರವೇ ಇಲ್ಲದ ಸ್ಥಳದಲಿ.
17 : ಮೂರ್ಖನೊಂದಿಗೆ ಸಮಾಲೋಚನೆ ಮಾಡಬೇಡ ಏಕೆಂದರೆ ಅವನು ಗುಟ್ಟನ್ನು ಮುಚ್ಚಿಡಲಾರ.
18 : ಗುಟ್ಟಿನ ಕೆಲಸ ಮಾಡಬೇಡ ಅಪರಿಚಿತನ ಮುಂದೆ ನಾಳೆ ಏನು ಮಾಡಿಯಾನೆಂಬುದು ನೀನರಿಯೆ.
19 : ನಿನ್ನ ಹೃದಯವನ್ನು ತೆರೆಯಬೇಡ ಕಂಡಕಂಡವರಿಗೆ ಅವರು ಪ್ರತೀಕಾರ ಮಾಡಿಯಾರು ನಿನಗೆ.

Holydivine