Sirach - Chapter 17
Holy Bible

1 : ಸರ್ವೇಶ್ವರ ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದರು ಪುನಃ ಮಣ್ಣಿಗೇ ಅವನು ಸೇರುವಂತೆ ಮಾಡಿದರು.
2 : ಮಾನವನಿಗೆ ನಿಯಮಿತ ಕಾಲಗಳನ್ನೂ ದಿನಗಳನ್ನೂ ನೇಮಿಸಿದರು ಭೂಮಿಯ ಮೇಲಿರುವ ಸಕಲದರ ಮೇಲೆ ಅವನಿಗೆ ಅಧಿಕಾರ ವಹಿಸಿದರು.
3 : ತಮ್ಮ ಪ್ರತಿರೂಪದಲ್ಲಿಯೇ ಮಾನವನನ್ನು ಸೃಷ್ಟಿಸಿದರು ಅವನಿಗೆ ಬೇಕಾದ ಶಕ್ತಿಯನು ಅನುಗ್ರಹಿಸಿದರು.
4 : ಮಾಡಿದರು ಎಲ್ಲಾ ಜೀವಿಗಳು ಮನುಷ್ಯನಿಗೆ ಭಯಪಡುವಂತೆ ಅಂತೆಯೇ ಮನುಷ್ಯನು ಪಶುಪಕ್ಷಿಗಳ ಮೇಲೆ ಒಡೆತನ ಮಾಡುವಂತೆ.
5 : ಪಂಚೇಂದ್ರಿಯಗಳನ್ನು ಸರ್ವೇಶ್ವರ ಮನುಷ್ಯನಿಗೆ ದಯಪಾಲಿಸಿದರು ಆರನೇದಾಗಿ, ತನ್ನ ಬುದ್ಧಿಶಕ್ತಿಯಲ್ಲಿ ಅವನು ಪಾಲುಗಾರನನ್ನಾಗಿ ಮಾಡಿದರು ಇವುಗಳನ್ನೆಲ್ಲಾ ವಿಚಾರಿಸಿ ಗ್ರಹಿಸಿಕೊಳ್ಳಲು ಏಳನೇ ವರವನ್ನು ನೀಡಿದರು.
6 : ಇದಲ್ಲದೆ, ತಿಳಿದುಕೊಳ್ಳಲು ಅವರಿಗೆ ಬುದ್ಧಿಮತಿಯನ್ನು ನೀಡಿದರು ನಾಲಗೆ, ಕಣ್ಣು, ಕಿವಿ, ಹೃದಯಗಳನು ದಯಪಾಲಿಸಿದರು.
7 : ಜ್ಞಾನವನ್ನೂ ಅರಿವನ್ನೂ ಅವನಲ್ಲಿ ತುಂಬಿಸಿದರು ಒಳ್ಳೆಯದು ಕೆಟ್ಟದು ಯಾವುದೆಂಬುದನ್ನು ವಿವೇಚಿಸುವಂತೆ ಮಾಡಿದರು.
8 : ತನ್ನ ಕಾರ್ಯಗಳ ಮಹತ್ವವನ್ನು ಅವನಿಗೆ ತೋರಿಸಬೇಕೆಂದು ಇರಿಸಿದರು ಅವನ ಅಂತಃಕರಣದ ಮೇಲೆ ತಮ್ಮ ದೃಷ್ಟಿಯನು.
9 : ತಮ್ಮ ಈ ಎಲ್ಲ ಕಾರ್ಯಗಳನು ಮನುಷ್ಯ ಹೊಗಳುವಂತೆ ಅನುಗ್ರಹಿಸಿದರು ಸೌಲಭ್ಯವನ್ನು ಅವನಿಗೆ.
10 : ವಂದಿಸುವರು ಜನರು ಆತನ ಪವಿತ್ರ ನಾಮವನು ಹೊಗಳುವರು ಆತನ ಕಾರ್ಯಗಳ ಮಹಿಮೆಯನು.
11 : ದಯಪಾಲಿಸಿದನಾತ ಅವರಿಗೆ ವಿವೇಕವನು ಸ್ವಾಸ್ತ್ಯವಾಗಿ ನೀಡಿದನು ಜೀವದಾಯಕ ಧರ್ಮಶಾಸ್ತ್ರವನು.
12 : ನರರೊಂದಿಗೆ ಮಾಡಿಕೊಂಡನಾತ ಶಾಶ್ವತ ಒಡಂಬಡಿಕೆಯನು ತೋರಿಸಿಕೊಟ್ಟನು ಅವರಿಗೆ ತನ್ನ ವಿಧಿವಚನಗಳನು.
13 : ಮಾನವರ ಕಣ್ಣುಗಳು ಕಂಡವು ಆತನ ಮಹಿಮೆಯ ಪ್ರಭಾವವನು ಅವರ ಕಿವಿಗಳು ಕೇಳಿದವು ಆತನ ಧ್ವನಿಯ ಗಾಂಭೀರ್ಯವನು.
14 : ‘ಎಲ್ಲಾ ದುಷ್ಟಕಾರ್ಯಗಳ ಬಗ್ಗೆ ಎಚ್ಚರಿಕೆ’ ಎಂದು ವಿಧಿಸಿದನಾತ ನೆರೆಯವನನ್ನು ಕುರಿತ ನಿಯಮವನು ಆಜ್ಞಾಪಿಸಿದನಾತ.
15 : ಸರ್ವೇಶ್ವರಸ್ವಾಮಿಯೇ ನ್ಯಾಯಾಧೀಶ ಮನುಷ್ಯರ ಮಾರ್ಗಗಳಿವೆ ನಿತ್ಯವೂ ದೇವರ ಎದುರಿಗೆ ಅವು ಮರೆಯಾಗಿರಲಾರವು ಆತನ ದೃಷ್ಟಿಗೆ.
16 : ಬಾಲ್ಯದಿಂದಲೇ ಕೇಡಿಗೆ ಒಯ್ಯುತ್ತವೆ ಮಾನವರ ಮಾರ್ಗಗಳು ಅವುಗಳಿಂದಾಗದು ಕಲ್ಲು ಹೃದಯವನ್ನು ಮಾಂಸದ ಹೃದಯವನ್ನಾಗಿ ಮಾಡಲು.
17 : ಒಬ್ಬೊಬ್ಬ ದೊರೆಯನ್ನು ನೇಮಿಸಿದನಾತ ಸಕಲ ರಾಷ್ಟ್ರಗಳಿಗೆ ತಾನೇ ದೊರೆಯಾದನು ಇಸ್ರಯೇಲರಿಗೆ.
18 : ಇಸ್ರಯೇಲೇ ಆತ ಶಿಸ್ತಿನಿಂದ ಬೆಳೆಸುವ ಚೊಚ್ಚಲು ಮಗನು ಅವನನ್ನು ನಿರಾಕರಿಸದೆ ನೀಡುವನವನಿಗೆ ಪ್ರೀತಿಯ ಬೆಳಕನ್ನು.
19 : ಆತನ ಮುಂದೆ ಅವರ ಕಾರ್ಯಗಳೆಲ್ಲ ಸೂರ್ಯನ ಬೆಳಕಿನಂತೆ ಆತನ ದೃಷ್ಟಿಯಿರುವುದು ಸದಾ ಅವರ ಮಾರ್ಗಗಳ ಮೇಲೆ.
20 : ಮರೆಯಾಗಿಲ್ಲ ಆತನಿಗೆ ಅವರ ಅಧರ್ಮಗಳೆಲ್ಲ ಆತನ ಎದುರಿನಲ್ಲಿವೆ ಅವರ ಪಾಪಗಳೆಲ್ಲ.
21 : ಸರ್ವೇಶ್ವರ ಒಳ್ಳೆಯವರು, ತಮ್ಮ ಸೃಷ್ಟಿಗಳನ್ನು ಕೈ ಬಿಡುವುದಿಲ್ಲ; ಬದಲಿಗೆ ಅವುಗಳನ್ನು ಕಾಪಾಡುವರು, ತೊರೆದುಬಿಡುವುದಿಲ್ಲ.
22 : ಮನುಜರು ಮಾಡುವ ದಾನಧರ್ಮ, ಆತನಿಗೆ ಮುದ್ರಯುಂಗುರದಂತೆ; ಅವರ ಸತ್ಕಾರ್ಯಗಳನ್ನು ಕಾಪಾಡುವನು, ಕಣ್ಣುಗುಡ್ಡೆಯಂತೆ.
23 : ತದನಂತರ ಆತನೆದ್ದು ಅವರಿಗೆ ಕೊಡುವನು ಸಂಭಾವನೆಯನ್ನು ಹೊರಿಸುವನು ಅವರ ಮೇಲೆ ಅವರವರ ಪ್ರತಿಫಲವನ್ನು.
24 : ಮನಪರಿವರ್ತನೆ ತನ್ನಲ್ಲಿಗೆ ಬರಗೊಡಿಸುವನು ಪಶ್ಚಾತ್ತಾಪ ಪಡುವವನನ್ನು ಸಂತೈಸುವನು ತಾಳ್ಮೆಗೆಡುತ್ತಿರುವವರನ್ನು.
25 : ಸರ್ವೇಶ್ವರನ ಕಡೆ ತಿರುಗಿಕೊಂಡು, ಪಾಪವನ್ನು ತೊರೆದುಬಿಡು; ಆತನನ್ನು ಪ್ರಾರ್ಥಿಸಿ, ಅಪರಾಧಗಳ ಅಡ್ಡಿಯನ್ನು ಕಡಿಮೆಮಾಡು.
26 : ಮಹೋನ್ನತನ ಕಡೆ ಹಿಂದಿರುಗಿ, ಅಧರ್ಮವನ್ನು ಬಿಡು ಅಸಹ್ಯ ಕೃತ್ಯಗಳನ್ನು ಸಂಪೂರ್ಣವಾಗಿ ಹಗೆಮಾಡು.
27 : ಜೀವಿಸುತ್ತಾ ಮಹೋನ್ನತನಿಗೆ ಉಪಕಾರ ಸ್ತುತಿಮಾಡುವವರನ್ನು ಬಿಟ್ಟರೆ ಪಾತಾಳದಲ್ಲಿ ಆತನಿಗೆ ಸ್ತುತಿಹಾಡುವವರಾರಿದ್ದಾರೆ?
28 : ಕೃತಜ್ಞತಾಸ್ತುತಿ ಇರುವುದಿಲ್ಲ ಜೀವಿಸದೆ ಇದ್ದವನಲ್ಲಿ ಅಂತೆಯೇ ಅದು ಲಯವಾಗುತ್ತದೆ ಮೃತರಾದವರಲ್ಲಿ ಸರ್ವೇಶ್ವರನ ಸ್ತುತಿಗೈವನು ಜೀವಂತನು ಹಾಗು ಆರೋಗ್ಯಶಾಲಿ.
29 : ನಮ್ಮ ದೇವರಾದ ಸರ್ವೇಶ್ವರನ ಕೃಪೆ ಎಷ್ಟು ಘನವಾದುದು ಶುದ್ಧರಾಗಿ ಆತನ ಕಡೆ ತಿರುಗುವವರ ಮೇಲೆ ಆತನ ಕನಿಕರ ಎಷ್ಟು ವಿಶೇಷವಾದುದು !
30 : ಸರ್ವವೂ ಇರಲಾರದು ಮನುಷ್ಯ ಮಾತ್ರದವರಲ್ಲಿ ಕಾರಣ, ಅಮರತ್ವವು ಇಲ್ಲ ಅವರಲ್ಲಿ.
31 : ಸೂರ್ಯನಿಗಿಂತ ಪ್ರಕಾಶಮಾನವಾದುದು ಏನಿದೆ? ಆದರೂ ಅದರ ಬೆಳಕು ಕುಂದುತ್ತದೆ ಕೆಡುಕನ ಆಲೋಚನೆ ಕೇವಲ ರಕ್ತಮಾಂಸದಂತಿದೆ.
32 : ದೇವರ ದೃಷ್ಟಿಯಲ್ಲಿವೆ ಉನ್ನತಾಕಾಶದ ಶಕ್ತಿಗಳು ನರಮಾನವರೆಲ್ಲರು ಕೇವಲ ಮಣ್ಣು – ಬೂದಿಯು.

Holydivine