Sirach - Chapter 50
Holy Bible

1 : ಮಹಾಯಾಜಕ ಸಿಮೋನ್ ಮಹಾಯಾಜಕನೂ ಒನೀಯನ ಮಗನೂ ಆದ ಸಿಮೋನನು ತನ್ನ ಜೀವನಕಾಲದಲ್ಲಿ ದೇವಮಂದಿರವನ್ನು ಜೀರ್ಣೋದ್ಧಾರ ಮಾಡಿದನು ತನ್ನ ದಿನಗಳಲ್ಲಿ ಮಹಾದೇವಾಲಯವನ್ನು ಭದ್ರಪಡಿಸಿದನು.
2 : ಕಟ್ಟಿಸಿದನವನು ಅಸ್ತಿವಾರದಿಂದ ಹಿಡಿದು ಇಮ್ಮಡಿಗೋಡೆಯನ್ನು ಪೂರ್ತಿಯಾಗಿ ಮಹಾದೇವಾಲಯದ ಆವರಣದ ಗೋಡೆಯ ಕಟ್ಟಿಸಿದನು ಎತ್ತರವಾಗಿ.
3 : ಇವನ ಕಾಲದಲ್ಲಿ ತೋಡಿ ಕಂಡು ಹಿಡಿಯಲಾಯಿತು ‘ಕಂಚಿನ ಕಡಲು’ ಎಂಬ ಪಾತ್ರೆಯನ್ನು.
4 : ತನ್ನ ಜನಾಂಗವು ಸೋತುಹೋಗಬಾರದೆಂದು ಆಲೋಚನೆ ಮಾಡಿದನು ಮುತ್ತಿಗೆಯ ಕಾಲಕ್ಕಾಗಿ ಪಟ್ಟಣವನ್ನು ಭದ್ರಪಡಿಸಿದನು.
5 : ಘನ ಗಂಭೀರವಾಗಿ ಕಾಣಿಸಿಕೊಳ್ಳುತ್ತಿದ್ದನು ಪವಿತ್ರಾಲಯದಿಂದ ಹೊರಬಂದಾಗ, ಜನರು ಅವನ ಸುತ್ತಲೂ ಸೇರಿಬಂದಾಗ!
6 : ಅವನಿದ್ದನು ಮೋಡಗಳ ಮಧ್ಯೆ ಬೆಳಗುವ ಬೆಳಗಿನ ಚುಕ್ಕೆಯಂತೆ, ಪೂರ್ಣಚಂದ್ರನಂತೆ,
7 : ಮಹೋನ್ನತನ ಆಲಯದ ಮೇಲೆ ಹೊಳೆದ ಸೂರ್ಯನಂತೆ, ಘನಮೇಘಗಳ ಮಧ್ಯೆ ಮೆರೆಯುವ ಮಳೆಬಿಲ್ಲಿನಂತೆ,
8 : ವಸಂತಕಾಲದ ಗುಲಾಬಿ ಹೂಗಳಂತೆ ಬುಗ್ಗೆಯ ಬಳಿಯಲ್ಲಿರುವ ನೈದಿಲೆಯಂತೆ ಬೇಸಿಗೆಯಲಿ ಎದ್ದ ಧೂಪಮರದ ಅಂಕುರದಂತೆ;
9 : ಧೂಪದ ಪಾತ್ರೆಯಲ್ಲಿ ಉರಿಯುವ ಸಾಂಬ್ರಾಣಿಯಂತೆ ಚಿನ್ನದ ತಗಡಿನಿಂದ ಮಾಡಿದ ರತ್ನಖಚಿತ ಪಾತ್ರೆಯಂತೆ;
10 : ಕಂಗೊಳಿಸುತ್ತಿದ್ದನು ಫಲವನ್ನು ಬಿಡುವ ಓಲಿವ್ ಮರದಂತೆ ಮುಗಿಲು ಮುಟ್ಟುವ ಹಾಗೆ ಬೆಳೆದ ತುರಾಯಿ ಮರದಂತೆ.
11 : ವೈಭವದ ವಸ್ತ್ರವನ್ನು ಗೌರವಯುತ ಪದಕವನ್ನು ಧರಿಸಿಕೊಂಡಾಗ ಪವಿತ್ರ ವೇದಿಕೆಯ ಮೇಲೆ ಅವುಗಳೊಂದಿಗೆ ಏರಿದಾಗ ಪವಿತ್ರ ಸ್ಥಳದ ಆವರಣಕ್ಕೆ ಅವನೊಂದು ಭೂಷಣವಾಗಿದ್ದ.
12 : ಯಾಜಕರ ಕೈಯಿಂದ ಅರ್ಪಣಾ ಭಾಗಗಳನ್ನು ತೆಗೆದುಕೊಂಡಿರಲು ವೇದಿಕೆಯ ಅಗ್ನಿಕುಂಡದ ಬಳಿ ನಿಂತಿರಲು ಇತರ ಯಾಜಕರು ಅವನ ಸುತ್ತ ನಿಲ್ಲುತ್ತಿದ್ದರು. ಆಗ ಕಂಡುಬಂದನವನು ಲೆಬನೋನಿನ ದೇವದಾರು ಮರದಂತೆ ಸುತ್ತು ನಿಂತವರಿದ್ದರು ಖರ್ಜೂರ ಮರದ ಕಾಂಡಗಳಂತೆ.
13 : ಆರೋನನ ಪುತ್ರರೆಲ್ಲರು ನಿಂತು ಕೊಳ್ಳುತ್ತಿದ್ದರು ಇಸ್ರಯೇಲರ ಸಭೆಯ ಸಮ್ಮುಖದಲಿ ಘನತೆ ಗೌರವದಿಂದ ಸರ್ವೇಶ್ವರನಿಗೆ ಅರ್ಪಣೆಗಳ ಹಿಡಿದು ಕೈಯಲ್ಲಿ.
14 : ಬಲಿಪೀಠದ ಬಳಿ ಆರಾಧನೆಯನ್ನು ಮುಗಿಸಿದ ಬಳಿಕ ಮಹೋನ್ನತನೂ ಸರ್ವಶಕ್ತನೂ ಆದವಗೆ ಕಾಣಿಕೆಯನ್ನು ಸಮರ್ಪಿಸಿದ ನಂತರ ಬಟ್ಟಲಿಗೆ ಕೈಹಾಕಿ, ದ್ರಾಕ್ಷಿಯ ರಸವನೆತ್ತಿ ಸುರಿಯುತ್ತಿದ್ದನ್ನು ವೇದಿಯ ಬುಡಕೆ ಮಹೋನ್ನತನೂ ಸಕಲರ ಅರಸನೂ ಆದಾತನಿಗೆ ಸುಗಂಧವಾಗಿರುವಂತೆ.
15 : ಬಲಿಪೀಠದ ಬಳಿ ಆರಾಧನೆಯನ್ನು ಮುಗಿಸಿದ ಬಳಿಕ ಮಹೋನ್ನತನೂ ಸರ್ವಶಕ್ತನೂ ಆದವಗೆ ಕಾಣಿಕೆಯನ್ನು ಸಮರ್ಪಿಸಿದ ನಂತರ ಬಟ್ಟಲಿಗೆ ಕೈಹಾಕಿ, ದ್ರಾಕ್ಷಿಯ ರಸವನೆತ್ತಿ ಸುರಿಯುತ್ತಿದ್ದನ್ನು ವೇದಿಯ ಬುಡಕೆ ಮಹೋನ್ನತನೂ ಸಕಲರ ಅರಸನೂ ಆದಾತನಿಗೆ ಸುಗಂಧವಾಗಿರುವಂತೆ.
16 : ತರುವಾಯ ಆರೋನನ ಪುತ್ರರು ಆರ್ಭಟಿಸುತ್ತಿದ್ದರು ತಗಡಿನ ತುತೂರಿಗಳನ್ನು ಊದುತ್ತಿದ್ದರು ಮಹೋನ್ನತನನ್ನು ಆತನ ಎದುರಿನಲ್ಲೇ ಜ್ಞಾಪಕಪಡಿಸಲೆಂದು ಎಲ್ಲರಿಗೂ ಕೇಳಿಸುವಂತೆ ಮಹಾಧ್ವನಿ ಗೈಯುತ್ತಿದ್ದರು.
17 : ಕೂಡಲೇ ಜನರೆಲ್ಲರೂ ನೆಲದಮೇಲೆ ಬೀಳುತ್ತಿದ್ದರು ಬೋರಲಾಗಿ ತಮ್ಮ ಮಹೋನ್ನತ, ಸರ್ವಶಕ್ತ ಸರ್ವೇಶ್ವರನನ್ನು ಆರಾಧಿಸುವುದಕ್ಕಾಗಿ.
18 : ಆತನನು ಕೊಂಡಾಡುತ್ತಿದ್ದರು ಗಾಯಕರು ಸ್ವರವೆತ್ತಿ ಇಡೀ ದೇವಮಂದಿರದಲ್ಲಿ ಕೇಳಿಸುತ್ತಿತ್ತಾ ರಾಗವು ಇಂಪಾಗಿ.
19 : ಆರಾಧನೆ ಮುಗಿಯುವವರೆಗೆ ಜನರು ಪ್ರಾರ್ಥಿಸುತ್ತಿದ್ದರು ಆ ಕರುಣಾ ಸಾಗರನನ್ನು, ಆ ಮಹೋನ್ನತನನ್ನು ಬೇಡಿಕೊಂಡು ಮುಗಿಸುತ್ತಿದ್ದರು ಆರಾಧನೆಯನ್ನು.
20 : ಬಳಿಕ ಕೆಳಗಿಳಿದು ತನ್ನ ಕೈಗಳನ್ನೆತ್ತುತ್ತಿದ್ದನು, ಇಸ್ರಯೇಲ್ ಸಭೆಗೆ ದೇವರ ಆಶೀರ್ವಾದವನ್ನು ನೀಡುವುದಕ್ಕೆ ಆತನ ಶ್ರೀನಾಮವನ್ನು ಉಚ್ಚರಿಸುವುದಕ್ಕೆ.
21 : ತಲೆ ಬಾಗುತ್ತಿದ್ದರು ಜನರು ಮತ್ತೊಮ್ಮೆ ಮಹೋನ್ನತನ ಆಶೀರ್ವಾದವನ್ನು ಸ್ವೀಕರಿಸುವುದಕ್ಕೆ.
22 : ಪ್ರಬೋಧನೆ ಈಗ ನೀವೆಲ್ಲರು ಕೊಂಡಾಡಿ ದೇವರನ್ನು ಆತ ನಡೆಸುವನು ಮಹತ್ಕಾರ್ಯಗಳನ್ನು ಎಲ್ಲೆಡೆಗಳಲ್ಲು ಹುಟ್ಟಿನಿಂದ ನಮ್ಮ ದಿನಗಳನ್ನು ಹೆಚ್ಚಿಸು ವಂಥವನು ಆತನು. ಕೊಂಡಾಡಿ, ತನ್ನ ಕರುಣೆಗನುಸಾರ ನಮ್ಮೊಂದಿಗೆ ವರ್ತಿಸುವಾ ದೇವರನ್ನು.
23 : ಆತನು ನಮಗೆ ಉಲ್ಲಾಸದ ಹೃದಯವನ್ನು ದಯಪಾಲಿಸಲಿ ನಮ್ಮ ದಿನಗಳಲ್ಲಿ ಶಾಂತಿಯನ್ನು ಅನುಗ್ರಹಿಸಲಿ ಅದು ಇಸ್ರಯೇಲರಲ್ಲಿ ಶಾಶ್ವತವಾಗಿರಲಿ!
24 : ಹೀಗೆ ಆತನ ಕೃಪೆ ನಮ್ಮಲ್ಲಿ ದೃಢವಾಗಿರಲಿ ತನ್ನ ಕಾಲದಲ್ಲಿ ಆತ ನಮ್ಮನು ಬಿಡುಗಡೆ ಮಾಡಲಿ !
25 : ಎರಡು ಜನಾಂಗಗಳ ವಿಷಯದಲ್ಲಿ ಸಿಟ್ಟುಗೊಂಡಿದೆ ನನ್ನ ಆತ್ಮ ಮೂರನೆಯದು ಜನಾಂಗವೇ ಅಲ್ಲ.
26 : ಸಮಾರ್ಯದ ಗುಡ್ಡದ ಮೇಲೆ ಕುಳಿತಿರುವವರು, ಫಿಲಿಷ್ಟಿಯರು ಹಾಗು ಶೆಕೆಮಿನಲ್ಲಿ ವಾಸಿಸುವ ಮೂಢರು.
27 : ವಿದಾಯ ವಂದನೆ ಜೆರುಸಲೇಮಿನ ಸಿರಾಖ ಎಲ್ಲಾಜಾರನ ಮಗ ಯೆಷೂವನೆಂಬ ನಾನು ಈ ಗ್ರಂಥದಲ್ಲಿ ಜ್ಞಾನವನ್ನು, ವಿವೇಕವನ್ನು, ಸುಶಿಕ್ಷಣವನ್ನು ಬರೆದಿರುವೆನು; ನನ್ನ ಹೃದಯದಿಂದ ಸುಜ್ಞಾನವನ್ನು ಸುರಿಸಿರುವೆನು.
28 : ಇವುಗಳನ್ನು ಅನುಸರಿಸುವವನು ಧನ್ಯನು ! ಇವುಗಳನ್ನು ತನ್ನ ಹೃದಯದಲ್ಲಿ ಇಟ್ಟುಕೊಳ್ಳುವವನು ಜಾಣನು.
29 : ಇದರಂತೆ ನಡೆದರೆ ಸರ್ವವಿಷಯಗಳಲ್ಲೂ ಬಲ್ಲಿದನಾಗುವನು ಸರ್ವೇಶ್ವರನ ಪ್ರಭೆಯೇ ಅವನಿಗೆ ಮಾರ್ಗದರ್ಶಿ ಆಗಿರುವುದು.

Holydivine