Sirach - Chapter 12
Holy Bible

1 : ಪರೋಪಕಾರಕ್ಕೆ ನಿಯಮಗಳು ಯಾರಿಗೋಸ್ಕರ ಎಂದು ನೋಡು, ಸತ್ಕಾರ್ಯಮಾಡುವ ಮುಂದೆ ಆಗ ಧನ್ಯವಾದ ದೊರಕುವುದು ನಿನ್ನ ಸತ್ಕಾರ್ಯಕ್ಕೆ.
2 : ಭಕ್ತಿವಂತನಿಗೆ ಒಳ್ಳೇದನ್ನು ಮಾಡು; ನಿನಗೆ ಪ್ರತಿಫಲ ಸಿಗುವುದು ಅವನಿಂದ ಸಿಗದಿದ್ದರೂ ಮಹೋನ್ನತ ನಿಂದಲಾದರೂ ಸಿಗುವುದು.
3 : ಯಾವ ಒಳಿತೂ ಗಿಟ್ಟದು ಕೆಡುಕು ಮಾಡುವವನಿಗೆ ಹಾಗೆಯೇ ದಾನಧರ್ಮಮಾಡಲು ನಿರಾಕರಿಸಿದವನಿಗೆ.
4 : ಭಕ್ತನಿಗೆ ಕೊಡು; ಪಾಪಾತ್ಮನಿಗೆ ನೆರವು ನೀಡಬೇಡ.
5 : ದೀನನಿಗೆ ಧಾರಾಳವಾಗಿ ಕೊಡು; ಅಧರ್ಮಿಗೆ ಕೊಡಬೇಡ ಹಿಂತೆಗೆದಿಡು ಅವನಿಗೆ ಕೊಡಬೇಕೆಂದಿರುವ ರೊಟ್ಟಿಯನ್ನು ಕೂಡ. ಏಕೆನೆ, ನಿನ್ನ ಮೇಲೆ ಅವನು ನಡೆಸ್ಯಾನು ದೊರೆತನ ನೀನು ಮಾಡಿದ ಉಪಕಾರಕ್ಕೆ ಹೊಂದುವೆ ಇಮ್ಮಡಿ ಅಪಕಾರ.
6 : ಪರಾತ್ಪರನು ಪಾಪಿಗಳನ್ನು ದ್ವೇಷಿಸುತ್ತಾನೆ ಭಕ್ತಿಹೀನರಿಗೆ ಮುಯ್ಯಿತೀರಿಸುತ್ತಾನೆ.
7 : ಸಜ್ಜನರಿಗೆ ಕೊಡು ದುರ್ಜನರಿಗೆ ಸಹಾಯ ಮಾಡದಿರು. ನೈಜ ಹಾಗೂ ಕಪಟ ಸ್ನೇಹಿತರ ಗುಣಲಕ್ಷಣಗಳು
8 : ಮಿತ್ರನ ಪರೀಕ್ಷೆಯಾಗುವುದಿಲ್ಲ ಸುಖದಲ್ಲಿ ಶತ್ರುವು ಸಿಕ್ಕಿಬೀಳುವನು ದುಃಖದಲ್ಲಿ.
9 : ವೈರಿಗಳು ವ್ಯಸನಪಡುವರು ಒಬ್ಬನು ಸಮೃದ್ಧಿಯಲ್ಲಿರುವಾಗ ಇದ್ದ ಗೆಳೆಯನೂ ದೂರವಾಗುವನು ಅವನು ಬಡವನಾಗುವಾಗ.
10 : ನಂಬಬೇಡ ವೈರಿಯನ್ನು ಎಂದೂ ಅವನ ಕೆಡುಕು ತಾಮ್ರಕ್ಕೆ ಹತ್ತುವ ಕಿಲುಬು.
11 : ಅವನು ತನ್ನನು ತಗ್ಗಿಸಿಕೊಂಡರೂ, ನೆಲ ಕಚ್ಚಿಕೊಂಡರೂ ಅವನ ವಿಷಯದಲ್ಲಿ ಜೋಕೆಯಾಗಿರು, ಎಚ್ಚರಿಕೆಯಿಂದಿರು; ಕನ್ನಡಿ ಒರೆಸಿದವನಂತೆ ಅವನೊಡನೆ ವರ್ತಿಸು ಆಗ ತಿಳಿಯುವೆ ಅವನ ಕಿಲುಬಿನಿಂದ ಕನ್ನಡಿ ಮಾಸಲಿಲ್ಲವೆಂದು.
12 : ಇರಿಸಿಕೊಳ್ಳಬೇಡ ಅವನನ್ನು ನಿನ್ನೊಂದಿಗೆ ನಿನ್ನ ತಳ್ಳಿ ನಿಂತುಕೊಂಡಾನು ನಿನ್ನ ಸ್ಥಳದಲ್ಲೆ; ಅವನನ್ನು ಕುಳ್ಳಿರಿಸಬೇಡ ನಿನ್ನ ಬಲಗಡೆಯಲ್ಲೆ ಆಕ್ರಮಿಸಿಕೊಂಡಾನು ನಿನ್ನ ಆಸನವನ್ನೆ; ಕಡೆಗೆ ನನ್ನ ಮಾತುಗಳು ನೆನಪಾಗಲು ನಿನಗೆ ಇರಿದಂತಾಗುವುದು ನಿನ್ನ ಎದೆ.
13 : ಸಂತಾಪಪಡುವರೆ ಹಾವಾಡಿಗನಿಗೆ ಹಾವು ಕಚ್ಚಿದರೆ? ಕಾಡುಮೃಗಗಳನ್ನು ಪಳಗಿಸುವವನಿಗೆ ಅವು ಕಚ್ಚಿದರೆ?
14 : ಅಂತೆಯೇ ಪಾಪಾತ್ಮನ ಜೊತೆ ಸೇರಿದವರು ಅವನ ಪಾಪದಲ್ಲಿ ಪಾಲುಗೊಂಡವರು.
15 : ನಿನ್ನ ಬಳಿ ಇರುವನು ಅವನು ಕೆಲಕಾಲ ನಿನ್ನ ಬಳಿ ನಿಲ್ಲನು ನೀನು ಪತನವಾಗುವಾಗ.
16 : ವೈರಿ ಆಡುವುದು ಸವಿಮಾತು ನಿನ್ನನ್ನು ಹಳ್ಳಕ್ಕೆ ತಳ್ಳುವುದೇ ಅವನ ಮಸಲತ್ತು. ಅಳಬಹುದು ಅವನು ಕಣ್ಣಿನಿಂದ ಸಮಯ ಬಂದಾಗ ತೃಪ್ತನಾಗನು ರಕ್ತಪಾತದಿಂದ ಕೂಡ.
17 : ನಿನಗೆ ಬಡತನ ಬಂದಾಗ ನೀನು ಮೊದಲು ಕಾಣುವುದು ಇವನನ್ನೆ ನಟಿಸುವನವನು ನಿನಗೆ ನೆರವಾಗುವವನಂತೆ ಸಮಯ ಕಾಯುತ್ತಿರುವನು ನಿನ್ನನು ಕೆಡವುದಕ್ಕೆ.
18 : ಅವನು ತಲೆ ಅಲ್ಲಾಡಿಸುವನು, ಚಪ್ಪಾಳೆ ತಟ್ಟುವನು ಪಿಸುಮಾತಾಡುವನು, ಮುಖಭಾವವನ್ನು ಬದಲಿಸುವನು.

Holydivine