Sirach - Chapter 13
Holy Bible

1 : ಟಾರೆಣ್ಣೆ ಮುಟ್ಟುವವನು ಮೈಲಿಗೆ ಆಗುವನು ಅಂತೆಯೇ ಗರ್ವಿಯ ಜೊತೆ ಒಡನಾಟ ಮಾಡುವವನು.
2 : ನಿನ್ನ ಶಕ್ತಿಮೀರಿ ಭಾರ ಹೊರಲು ಹೋಗಬೇಡ ನಿನಗಿಂತ ಬಲವುಳ್ಳ ಸಿರಿವಂತನೊಂದಿಗೆ ಗೆಳೆತನ ಬೇಡ; ತಪ್ಪಲೆಗೂ ಗಡಿಗೆಗೂ ಸಂಬಂಧವೆಂತು! ಒಂದಕ್ಕೊಂದು ತಾಕಲಾಡಿದರೆ ಗಡಿಗೆ ಒಡೆಯುವುದು.
3 : ಸಿರಿವಂತನು ಅನ್ಯಾಯ ಮಾಡಿದ ಮೇಲೂ ಬೆದರಿಸುವನು ಬಡವನು ತನಗೆ ಅನ್ಯಾಯವಾಗದಿದ್ದರೂ ಬೇಡಿಕೊಳ್ಳುವನು.
4 : ನಿನ್ನನ್ನು ಉಪಯೋಗಿಸಿಕೊಳ್ಳುವನು ಅವನಿಗೆ ಲಾಭವಿರುವಾಗ ನಿನ್ನನ್ನು ತೊರೆದುಬಿಡುವನು ನಿನಗೆ ಕೊರತೆ ಬಂದಾಗ.
5 : ನಿನ್ನೊಂದಿಗೆ ಅವನಿರುವನು ನೀನು ಅನುಕೂಲಸ್ಥನಾಗಿದ್ದರೆ ನಿನ್ನಲ್ಲಿದ್ದುದನ್ನೆಲ್ಲ ಖರ್ಚು ಮಾಡಿಸುವನು ಯಾವ ಚಿಂತೆಯಿಲ್ಲದೆ.
6 : ಅವನಿಗೆ ನಿನ್ನ ಅಗತ್ಯವಿದ್ದಾಗ ನಿನ್ನನ್ನು ವಂಚಿಸುವನು ನಸುನಗೆ ನಕ್ಕು ನಿನ್ನಲ್ಲಿ ನಿರೀಕ್ಷೆ ಹುಟ್ಟಿಸುವನು ‘ನಿನಗೇನು ಬೇಕು, ನನಗೆ ಹೇಳು’ ಎನ್ನುವನು.
7 : ನಿನ್ನಲ್ಲಿದ್ದುದನ್ನೆ ವ್ಯಯಮಾಡಿಸಿ ತನಗೆ ಇಷ್ಟವಾದ ಊಟ ಮಾಡಿಸುವನು ಪದೇ ಪದೇ ನಿನ್ನನ್ನು ನಾಚಿಕೆಗೆ ಗುರಿಪಡಿಸಿ ನಿನಗೆ ಪರಿಹಾಸ್ಯ ಮಾಡುವನು ಕಡೆಗೆ; ಅನಂತರ ನಿನ್ನನ್ನು ಕಂಡೂಕಾಣದಂತೆ ತಲೆಯಾಡಿಸಿ ನಡೆವನು ಓರೆಯಾಗೆ.
8 : ನೀನು ಮೋಸಹೋಗದಂತೆ ಎಚ್ಚರಿಕೆಯಿಂದಿರು ಮೂರ್ಖತನದಿಂದ ಆನಂದವನ್ನು ಕೆಡಿಸಿಕೊಳ್ಳದಿರು. ನಿನ್ನನು ಕರೆದಾಗ ಪುನಃ ಪುನಃ ಅವನು ನಿನ್ನನ್ನು ಕರೆಯುವನು ಹೀಗಾದಾಗ.
9 : ನಿರಾಸಕ್ತಿಯಿಂದಿರು ಮಹನೀಯನೊಬ್ಬ ನಿನ್ನನು ಕರೆದಾಗ ಪುನಃ ಪುನಃ ಅವನು ನಿನ್ನನ್ನು ಕರೆಯುವನು ಹೀಗಾದಾಗ.
10 : ಅವನಿಗೆ ಒತ್ತಾಯ ಮಾಡಬೇಡ; ಹಿಂದಕ್ಕೆ ದೂಡಿಯಾನು ಅವನಿಂದ ಬಹುದೂರ ನಿಲ್ಲಬೇಡ; ನಿನ್ನನ್ನು ಮರೆತುಬಿಟ್ಟಾನು.
11 : ಸರಿಸಮಾನನಂತೆ ಅವನೊಂದಿಗೆ ಮಾತಾಡಲು ಹೋಗಬೇಡ ಅವನ ದೀರ್ಘವಾದ ಮಾತುಗಳಲ್ಲಿ ಭರವಸೆಯಿಡಬೇಡ. ಏಕೆಂದರೆ, ದೀರ್ಘಮಾತಿನಿಂದ ನಿನ್ನನು ಪರೀಕ್ಷಿಸುವನು ನಗುನಗುತ್ತಲೇ ನಿನ್ನ ಗುಟ್ಟನ್ನು ಅರಿತುಕೊಳ್ಳುವನು.
12 : ಹೇಳಿದ ಮಾತುಗಳನ್ನು ಗುಟ್ಟಾಗಿ ಇಡದವನಿಗೆ ಕರುಣೆಯಿಲ್ಲ ಅವನು ಕಷ್ಟಕೊಡಲೂ ಕಟ್ಟಿಹಾಕಲೂ ಹಿಂಜರಿಯುವುದಿಲ್ಲ.
13 : ಗುಟ್ಟುಗಳನ್ನು ನಿನ್ನಲಿ ಇಟ್ಟುಕೊಂಡು ಬಹು ಜಾಗ್ರತೆಯಿಂದಿರು ನಿನ್ನ ವಿನಾಶದ ಅಪಾಯದೆಡೆಯಲ್ಲಿ ನಡೆಯುತ್ತಿಯೆಂದು ತಿಳಿದಿರು.
14 : ನೀನು ಮಲಗಿರುವಾಗಲು ಇಂಥವುಗಳನ್ನು ಕೇಳಿದರೆ, ಎದ್ದೇಳು ನಿನ್ನ ಜೀವಮಾನದಲ್ಲೆಲ್ಲ ದೇವರನ್ನು ಪ್ರೀತಿಸಿ, ರಕ್ಷಣೆಗಾಗಿ ಪ್ರಾರ್ಥಿಸು.
15 : ಸ್ವಜಾತಿಯ ಪ್ರಾಣಿಗಳು ಒಂದನ್ನೊಂದು ಪ್ರೀತಿಸುವುದು ಸಹಜ ಅಂತೆಯೆ ಪ್ರತಿಯೊಬ್ಬ ಮನುಷ್ಯ ನೆರೆಯವನನ್ನು ಪ್ರೀತಿಸುವುದು ಸಹಜ.
16 : ಪ್ರಾಣಿಗಳೆಲ್ಲ ಜೊತೆಯಾಗುವುವು ತಂತಮ್ಮ ಜಾತಿಯ ಪ್ರಾಣಿಗಳೊಂದಿಗೆ ಅಂತೆಯೆ ಮನುಷ್ಯನೂ ಅಂಟಿಕೊಳ್ಳುವನು ತನಗೆ ಸಮಾನವಾದವರಿಗೆ.
17 : ತೋಳಕ್ಕೂ ಕುರಿಮರಿಗೂ ಒಡನಾಟವೇನು? ಅಂತೆಯೆ ಅಧರ್ಮಿಗೂ ಭಕ್ತನಿಗೂ ಸಂಬಂಧವೇನು?
18 : ಕಿರುಬಕ್ಕೂ ನಾಯಿಗೂ ಒಡನಾಟವೇನು? ಬಡವನಿಗೂ ಬಲ್ಲಿದನಿಗೂ ಸಮಾಧಾನವೇನು?
19 : ಕಾಡುಕತ್ತೆ ಕಾಡಿನಲ್ಲಿ ಸಿಂಹಕೆ ಕೊಳ್ಳೆಯಾಗುವಂತೆ ಬಡವರು ಬಲಿಯಾಗುವರು ಬಲ್ಲಿದರಿಗೆ.
20 : ಗರ್ವಿಯು ಹಗೆಮಾಡುವನು ನಮ್ರತೆಯನ್ನು ಐಶ್ವರ್ಯವಂತರು ಹೀನೈಸುವರು ಬಡವರನ್ನು.
21 : ಐಶ್ವರ್ಯವಂತನು ಬಿದ್ದರೆ ಮಿತ್ರರು ಅವನನ್ನು ಎತ್ತಿಹಿಡಿಯುವರು ಬಡವನು ಬಿದ್ದರೆ, ಗೆಳೆಯರು ಅವನನ್ನು ಆಚೆಗೆ ತಳ್ಳಿಬಿಡುವರು.
22 : ಐಶ್ವರ್ಯವಂತನು ಜಾರಿದರೆ ಅವನಿಗೆ ಬಹುಜನ ಸಹಾಯಕರು ಆಡಬಾರದ ಮಾತನ್ನಾಡಿದರೂ ಅವನಲ್ಲಿ ತಪ್ಪು ಎಣಿಸರು; ಬಡವನು ಜಾರಿದರೆ ಅವನನ್ನು ಗದರಿಸುವರು ಅವನು ಸುಜ್ಞಾನವನ್ನೇ ನುಡಿದರೂ ಅವನಿಗೆ ಯಾರೂ ಕಿವಿಗೊಡರು.
23 : ಐಶ್ವರ್ಯವಂತನು ಮಾತಾಡಿದಾಗ ಎಲ್ಲರೂ ಸುಮ್ಮನಾಗುವರು ಅವನು ಹೇಳಿದ್ದೆಲ್ಲವನ್ನು ಮುಗಿಲು ಮುಟ್ಟುವವರೆಗೆ ಹೊಗಳುವರು. ಬಡವನು ಮಾತಾಡಿದರೆ, ಹೇ ಇವನಾರು? ಎನ್ನುವರು, ಅವನು ಎಡವಿದರೆ, ಪೂರ್ತಿಯಾಗಿ ಬೀಳುವಂತೆ ನೂಕಿಬಿಡುವರು.
24 : ಪಾಪವಿಲ್ಲದ ಐಶ್ವರ್ಯ ಒಳ್ಳೆಯದು ದುರ್ಜನರ ಬಾಯಲ್ಲಿ ಬಡತನ ಕೆಟ್ಟದು.
25 : ಒಳ್ಳೆಯದಿರಲಿ, ಕೆಟ್ಟದ್ದಿರಲಿ ಹೃದಯ ಅದರಂತೆ ಬದಲಾಗುತ್ತದೆ ಮನುಷ್ಯನ ಮುಖಚರ್ಯ.
26 : ಹಸನ್ಮುಖವು ಉಲ್ಲಾಸ ಹೃದಯದ ಕುರುಹು ಜ್ಞಾನೋಕ್ತಿಗಳನ್ನು ಹುಡುಕುವುದು ಮನಸ್ಸಿಗೆ ಬೇಸರವು.

Holydivine