Sirach - Chapter 43
Holy Bible

1 : ಸೂರ್ಯ ಉನ್ನತದಲ್ಲಿ ನಿರ್ಮಲ ಆಕಾಶ ಎಷ್ಟೋ ಪ್ರಭಾವವುಳ್ಳದ್ದು ಗಗನದ ದೃಶ್ಯ ಎಷ್ಟೋ ಮಹಿಮೆಯುಳ್ಳದ್ದು!
2 : ಸೂರ್ಯನು ಉದಯವಾಗಿ ಸಾರುತ್ತಾನೆ ಶುಭಸಂದೇಶ ಏರುವ ರವಿ ಎಷ್ಟು ಆಶ್ಚರ್ಯಕರ, ಎಂಥ ಮಹೋನ್ನತ ಸಾಧನ !
3 : ಭೂಮಿಯನ್ನೆಲ್ಲಾ ಒಣಗಿಸುತ್ತಾನೆ ಮಧ್ಯಾಹ್ನದೊಳು ಯಾರಿಂದ ಸಾಧ್ಯ ಅವನ ಉರಿಯ ತಾಪವನು ಸಹಿಸಲು?
4 : ಕುಲುಮೆಯನ್ನು ಊದುವವನು ಕಾವಿನ ಕೆಲಸದಲ್ಲೇ ಇರುತ್ತಾನೆ ಸೂರ್ಯನಾದರೋ ಮೂರರಷ್ಟು ತೀಕ್ಷ್ಣ ಆಗಿದ್ದು ಪರ್ವತಗಳನ್ನೇ ಸುಡುತ್ತಾನೆ. ಬಿಸಿ ಹವೆಬಿಡುತ್ತಾ ಹೊಳೆಯುವ ಕಿರಣಗಳಿಂದ ಕಣ್ಣುಗಳನ್ನೆ ಕುಕ್ಕಿಸುತ್ತಾನೆ.
5 : ಅವನನ್ನು ರಚಿಸಿದ ಸರ್ವೇಶ್ವರ ಘನವಂತ ಆತನ ಅಪ್ಪಣೆಯಂತೆ ಹಿಡಿದೋಡುತ್ತಾನೆ ರವಿ ತನ್ನ ಪಥ.
6 : ಚಂದ್ರ ಚಂದ್ರನು ಸಹ ಕಾಣಿಸಿಕೊಳ್ಳುತ್ತಾನೆ ಸದಾ ಸಮಯಕ್ಕೆ ಸರಿಯಾಗಿ ಪ್ರಪಂಚಕ್ಕೆ ಗುರುತನ್ನು ತೋರಿಸುತ್ತಾನೆ, ವಿಶೇಷ ದಿನಗಳನ್ನು ಸೂಚಿಸಿ.
7 : ಹಬ್ಬದ ದಿನಗಳು ಸೂಚಿತವಾಗುವುದು ಚಂದ್ರನಿಂದಲೇ ಅವನ ಬೆಳಕು ಕಡಿಮೆಯಾಗುತ್ತಾ ಬರುವುದು ಹುಣ್ಣಿಮೆಯಾದ ಮೇಲೆ.
8 : ತಿಂಗಳು ಸಹ ಕರೆಯಲಾಗುತ್ತದೆ ಚಂದ್ರನ ಹೆಸರಿನಿಂದ ಬೆಳೆಯುತ್ತಾನೆ ಆಶ್ಚರ್ಯಕರವಾಗಿ ಪೂರ್ಣವಾಗುತ. ಆಕಾಶದಲಿ ಹೊಳೆಯುತ್ತಿರುವನು ಮಹೋನ್ನತ ಗಣಗಳ ಸಾಧನವಾಗಿ ಗಗನ ಮಂಡಲದ ತಾರಾಗಣಗಳಿಗೆ ಬೆಳಗುವ ಪತಾಕೆಗೆ ಸಮನಾಗಿ.
9 : ನಕ್ಷತ್ರಗಳು ಮಿಣುಗುವ ನಕ್ಷತ್ರಗಳು ಆಕಾಶದ ಸೌಂದರ್ಯಸೊಬಗುಗಳು ಮಹೋನ್ನತ ಸರ್ವೇಶ್ವರನ ದೇದೀಪ್ಯಮಾನವಾದ ಆಭರಣಗಳು.
10 : ಇವೆಲ್ಲವು ನಿಂತುಕೊಳ್ಳುತ್ತವೆ ತಮಗೆ ನಿಯಮಿತ ಸ್ಥಳಗಳಲಿ ಅವು ಬಳಲಿಹೋಗುವುದಿಲ್ಲ ತಮ್ಮ ಕಾವಲಿನಲಿ ಅನುಸರಿಸುತ್ತವೆ ಈ ಪರಿ ಪರಿಶುದ್ಧನ ಅಣತಿ.
11 : ಮುಗಿಲು ಬಿಲ್ಲು ಮಳೆಬಿಲ್ಲನು ನೋಡು: ಅದನ್ನುಂಟು ಮಾಡಿದಾತನನ್ನು ಕೊಂಡಾಡು ಅದು ಹೊಳೆಯುವಾಗ ಎಷ್ಟು ರಮ್ಯವಾಗಿದೆ ನೋಡು !
12 : ಆಕಾಶವನ್ನೆಲ್ಲ ಬಳಸುವುದು ಕಾಂತಿಯ ಆವರಣದಿಂದ ಬಿಲ್ಲಂತೆ ಅದು ಬಗ್ಗಿರುವುದು, ಮಹೋನ್ನತನ ಕೈಗಳಿಂದ.
13 : ಪ್ರಕೃತಿಯ ಅದ್ಭುತಗಳು ಸರ್ವೇಶ್ವರ ತನ್ನ ಅಪ್ಪಣೆಯ ಪ್ರಕಾರ ಹಿಮಬೀಳುವಂತೆ ಮಾಡುತ್ತಾನೆ ತನ್ನ ನ್ಯಾಯತೀರ್ಪಿನ ಸಿಡಿಲುಗಳನ್ನು ತೀವ್ರವಾಗಿ ಕಳುಹಿಸುತ್ತಾನೆ.
14 : ಈ ಕಾರಣ ತೆರೆಯುವುವು ನಿಧಿನಿಲಯಗಳು ಹಕ್ಕಿಗಳಂತೆ ಹಾರಿಬರುವುವು ಮೋಡಗಳು.
15 : ಆತನ ಅಪಾರಶಕ್ತಿಯಿಂದ ಬಲಗೊಳ್ಳುತ್ತವೆ ಮೋಡಗಳು ಸಣ್ಣಗೆ ಒಡೆದು ಚದುರುತ್ತವೆ ಆಲಿಕಲ್ಲುಗಳು.
16 : ಬೆಟ್ಟಗಳು ನಡುಗುವುವು ಆತನು ಪ್ರತ್ಯಕ್ಷವಾದಾಗ ತೆಂಕಣಗಾಳಿ ಬೀಸುವುದು ಆತನಿಗೆ ಇಷ್ಟವಾದಾಗ ಅಂತೆಯೇ ಬಡಗಣ ಗಾಳಿ, ಸುಂಟರಗಾಳಿ ಆತನಿಗೆ ಇಷ್ಟಬಂದಾಗ.
17 : ಆತನ ಗುಡುಗಿನ ಶಬ್ದಕ್ಕೆ ಜಗ ಗುರಿಯಾಗುತ್ತದೆ ವೇದನೆಗೆ ಮಂಜನು ಚಿಮುಕಿಸುವನಾತ ಹಕ್ಕಿಗಳು ಹಾರಿಬರುವಂತೆ ಮಿಡಿತೆಗಳು ಧರೆಗೆ ಇಳಿದು ಬರುವ ಹಾಗೆ.
18 : ಬೆರಗಾಗುವುವು ಕಣ್ಣುಗಳು ಅದರ ಬಿಳುಪಿನ ಚೆಲುವಿಗೆ ಚಕಿತಗೊಳ್ಳುವುದು ಹೃದಯ ಅದರ ಹನಿಹನಿಗೆ.
19 : ಭೂಮಿಯ ಮೇಲೆ ಆತ ಸುರಿಸುವನು ಇಬ್ಬನಿಯನು ಉಪ್ಪಿನಂತೆ ಹೆಪ್ಪುಗಟ್ಟಿದಾಗ ಅದಾಗುವುದು ಮುಳ್ಳಿನ ಮೊನೆಯಂತೆ.
20 : ನೀರ್ಗಲ್ಲಾಗುವುದಾ ನೀರು ಬಡಗಣ ಶೀತಲ ಗಾಳಿಬೀಸಲು ಅದು ಹರಡಿ ನೆಲೆಸುವುದು ಎಲ್ಲ ನೀರಿನ ಗುಂಡಿಗಳ ಮೇಲೂ ಆ ನೀರೇ ಆಗ ಕವಚ ಧರಿಸಿಕೊಂಡಂತಾಗುವುದು.
21 : ಪರ್ವತಗಳ ಕಬಳಿಸಿ, ಅರಣ್ಯವನು ಸುಡುವುದು ಗಾಳಿ ಹಸಿರು ಹುಲ್ಲನ್ನೆಲ್ಲಾ ಬೆಂಕಿಯಂತೆ ದಹಿಸಿಬಿಡುವುದಾ ಗಾಳಿ.
22 : ತೀವ್ರವಾಗಿ ಬರುವ ಮಂಜು ಎಲ್ಲಕೂ ಕ್ಷೇಮಕರ ಶೆಕೆಯ ನಂತರ ಬರುವ ಇಬ್ಬನಿ ಸುಖಕರ.
23 : ತನ್ನ ಸಂಕಲ್ಪದನುಸಾರ ಶಾಂತಪಡಿಸುವನಾತ ಸಾಗರಗಳನ್ನು ಅವುಗಳಲ್ಲಿ ನೆಟ್ಟಿಹನು ದ್ವೀಪಗಳನು.
24 : ಸಮುದ್ರ ಪ್ರಯಾಣಮಾಡುವವರು ತಿಳಿಸುವರು ಅದರ ಗಂಡಾಂತರಗಳನು ಚಕಿತರಾಗುವೆವು ಹೀಗೆ ಕಿವಿಯಿಂದ ಕೇಳಿದವುಗಳ ಕುರಿತು.
25 : ಅಲ್ಲಿಯೂ ಇರುವುವು ವಿಲಕ್ಷಣವಾದ, ಅಗಾಧವಾದ ಸೃಷ್ಟಿಗಳು ಬಗೆಬಗೆಯ ಜೀವಿಗಳು, ಹಲವಾರು ಜಾತಿಯ ಜಲಚರಗಳು.
26 : ಆತನ ದೂತರು ದಡಸೇರುವುದು ಆತನ ದೆಸೆಯಿಂದಲೆ ಎಲ್ಲಕ್ಕು ಆಧಾರವಾಗಿರುವುದು ಆತನ ಮಾತೊಂದೇ.
27 : ನಾನು ಎಷ್ಟು ಮಾತುಗಳನ್ನಾಡಿದರೂ ಕಡಿಮೆಯೆ ನನ್ನ ಮಾತಿನ ಸಾರಾಂಶ ಇದುವೇ: “ಎಲ್ಲವೂ ಆತನೆ”.
28 : ನಮಗೆ ಬಲವೆಲ್ಲಿಂದ ಬಂದೀತು ಆತನನು ಘನಪಡಿಸುವುದಕ್ಕೆ? ಆತನೇ ದೊಡ್ಡವನು ಆತ ಗೈದ ಸಕಲ ಕೆಲಸಕಾರ್ಯಗಳಿಗೆ.
29 : ಭಯಂಕರನು, ಘನವಂತನು ಸರ್ವೇಶ್ವರ ಆತನ ಶಕ್ತಿಸಾಮಥ್ರ್ಯ ಆಶ್ಚರ್ಯಕರ.
30 : ಸರ್ವೇಶ್ವರನನ್ನು ನೀವು ಮಹಿಮೆಪಡಿಸುವಾಗ ನಿಮ್ಮ ಕೈಯಿಂದಾದಷ್ಟು ಆತನನ್ನು ಕೀರ್ತಿಸಿರಿ ಆದರೂ ಆತ ಮಿಗಿಲಾಗಿರುವನು; ಆತನನ್ನು ಕೀರ್ತಿಸುವಾಗ ದಣಿಯದೆ ಶಕ್ತಿಯನ್ನೆಲ್ಲ ಬಳಸಿರಿ. ಏಕೆಂದರೆ ಸಾಕಾಗುವಷ್ಟು ಆತನನ್ನು ನೀವು ಹೊಗಳಲಾರಿರಿ.
31 : ಆತನನ್ನು ನೋಡಿದವರು ಯಾರಿದ್ದಾರೆ ಆತನನ್ನು ವಿವರಿಸಲಾಗುವಂತೆ? ಆತನನ್ನು ಘನಪಡಿಸುವವರು ಯಾರಿದ್ದಾರೆ ಆತನಿದ್ದಂತೆ?
32 : ಇವುಗಳಿಗಿಂತಲೂ ಹೆಚ್ಚಾಗಿ ಇನ್ನು ಅನೇಕ ವಿಷಯಗಳು ಮರೆಯಾಗಿವೆ ಆತನ ಕೆಲಸಕಾರ್ಯಗಳಲ್ಲಿ ನಾವು ನೋಡಿದ್ದು ಅತಿ ಸ್ವಲ್ಪವೇ.
33 : ಎಲ್ಲವನು ಮಾಡಿದವನು ಸರ್ವೇಶ್ವರನೇ ಜ್ಞಾನವನು ಅನುಗ್ರಹಿಸಿಹನು ಭಕ್ತರಿಗೆ.

Holydivine