Sirach - Chapter 5
Holy Bible

1 : ಸಿರಿತನ ಮತ್ತು ಸೊಕ್ಕು ನಿನ್ನ ಆಸ್ತಿಯನ್ನೇ ನೆಚ್ಚಿಕೊಂಡಿರಬೇಡ, ಅದರಲ್ಲೇ ಸಂತುಷ್ಟನಾಗಿರಬೇಡ.
2 : ನಿನ್ನ ಇಚ್ಛಾಸಕ್ತಿಗಳಿಗೆ ಬಲಿಯಾಗಬೇಡ, ನಿನ್ನ ಮನದಾಶೆಗೆ ಗುಲಾಮನಾಗಬೇಡ.
3 : ಕೊಚ್ಚಿಕೊಳ್ಳಬೇಡ, ನನ್ನನ್ನು ಕಟ್ಟಿ ಆಳುವವರಾರೆಂದು ಸರ್ವೇಶ್ವರ ನಿನ್ನ ಸೊಕ್ಕನ್ನು ಮುರಿದುಬಿಟ್ಟಾನು!
4 : ಪಾಪಮಾಡಿದ ನನಗೇನಾಯಿತು? ಎಂದುಕೊಳ್ಳಬೇಡ ಏಕೆಂದರೆ ದೀರ್ಘಶಾಂತನು ಸರ್ವೇಶ್ವರ !
5 : ಪಾಪಕ್ಕೆ ಪಾಪವನ್ನು ಕೂಡಿಸಿ ಹಾಕಿಕೊಳ್ಳಬೇಡ, ದೇವರಿಂದ ಕ್ಷಮೆ ಪಡೆಯುವ ಬಗ್ಗೆ ನಿರ್ಭಯದಿಂದಿರಬೇಡ.
6 : ದೇವರು ಕರುಣಾಸಾಗರ ಎಂದು ನೆಪಹೇಳಬೇಡ, ಲೆಕ್ಕವಿಲ್ಲದ ಪಾಪಮಾಡಿದರೂ ಕ್ಷಮೆ ದೊರಕುವುದೆಂದು ನೆನೆಯಬೇಡ. ದಯೆಯಿದ್ದಂತೆ ಕೋಪವೂ ಆತನಲ್ಲಿದೆ ಪಾಪಿಗಳ ಮೇಲೆ ಆತನ ಕೋಪ ಎರಗಲಿದೆ.
7 : ಸರ್ವೇಶ್ವರನಿಗೆ ಅಭಿಮುಖನಾಗಲು ತಡಮಾಡಬೇಡ, ‘ಇಂದು, ನಾಳೆ’ ಎಂದು ದಿನವನ್ನು ಮುಂದೂಡಬೇಡ. ಸರ್ವೇಶ್ವರನ ಕೋಪ ಎರಗಬಹುದು ದಿಢೀರೆಂದು ನೀ ಹಾಳಾಗಿ ಹೋಗುವೆ ಮುಯ್ಯಿತೀರಿಸುವ ದಿನದಂದು.
8 : ಮನಸ್ಸಿಡಬೇಡ ಅನ್ಯಾಯದ ಗಳಿಕೆಯಲಿ ಅದರಿಂದ ಯಾವ ಲಾಭವಿರದು ವಿನಾಶದ ದಿನದಲಿ. ಸರಳತೆ ಮತ್ತು ಸಂಯಮ
9 : ತೂರಿಕೊಳ್ಳಬೇಡ ಕಂಡಕಂಡ ಗಾಳಿಗಳಲಿ ಸಂಚರಿಸಬೇಡ ಕಂಡಕಂಡ ಹಾದಿಗಳಲಿ (ಎರಡು ನಾಲಗೆಯುಳ್ಳ ಪಾಪಿಗಳು ವರ್ತಿಸುವರು ಈ ಪರಿ).
10 : ನಿನ್ನ ಮನವರಿಕೆ ಸ್ಥಿರವಾಗಿರಲಿ ನಿನ್ನ ಮಾತು ಒಂದೇ ಆಗಿರಲಿ.
11 : ಕಿವಿಗೊಡುವುದರಲ್ಲಿ ಚುರುಕಾಗಿರು, ಉತ್ತರಕೊಡುವುದರಲ್ಲಿ ತಾಳ್ಮೆಯಿಂದಿರು.
12 : ಗೊತ್ತಿದ್ದರೆ ನೆರೆಯವನ ಪ್ರಶ್ನೆಗೆ ಉತ್ತರಕೊಡು ಇಲ್ಲದಿದ್ದರೆ ಬಾಯಿಮುಚ್ಚಿಕೊಂಡು ಸುಮ್ಮನಿರು.
13 : ಕೀರ್ತಿಯೂ ಅಪಕೀರ್ತಿಯೂ ಬರುವುದು ಮಾತಿನಿಂದ, ಮನುಷ್ಯ ಪತನವಾಗುವುದು ಅವನ ನಾಲಗೆಯಿಂದ.
14 : ಚಾಡಿಕೋರನೆಂದು ಕರೆಯಿಸಿಕೊಳ್ಳಬೇಡ, ನಿನ್ನ ನಾಲಗೆಯಿಂದ ಇತರರನು ಬಲೆಯೊಡ್ಡಿ ಬೀಳಿಸಬೇಡ. ನಾಚಿಕೆ ಕಾದಿರುವುದು ಕಳ್ಳನಿಗೆ ಕಠಿಣವಾದ ತೀರ್ಪಾಗುವುದು ಸುಳ್ಳನಿಗೆ.
15 : ವಿಷಯ ಸಣ್ಣದಿರಲಿ, ದೊಡ್ಡದಿರಲಿ, ತಿಳಿಗೇಡಿಯಾಗಿರಬೇಡ ಗೆಳೆಯನಾಗಿರುವ ಬದಲು ಹಗೆಯಾಗಿರಬೇಡ.

Holydivine