Sirach - Chapter 51
Holy Bible

1 : ಅನುಬಂಧ ವಂದನಾಗೀತೆ ಹೇ ಸರ್ವೇಶ್ವರಾ, ಅರಸರೇ, ಸ್ತುತಿಸುವೆ ನಾ ನಿಮ್ಮನ್ನು ನನ್ನ ರಕ್ಷಕರಾದ ದೇವರೇ, ಕೊಂಡಾಡುವೆ ನಾ ನಿಮ್ಮನ್ನು ಸ್ತುತಿಸುವೆ ನಾ ನಿಮ್ಮ ನಾಮವನ್ನು.
2 : ನೀವೇ ನನ್ನ ಪಾಲಕ ಹಾಗು ಸಹಾಯಕ ನಿಮ್ಮ ನೆರವಿಂದ ನನ್ನ ದೇಶ ಪಾರಾಗಿದೆ ವಿನಾಶದಿಂದ, ವಂಚಿಸುವ ನಾಲಿಗೆಯ ಕುಯುಕ್ತಿಯಿಂದ, ಸುಳ್ಳಾಡುವ ತುಟಿಗಳಿಂದ. ನನ್ನ ಬಳಿ ನಿಂತವರೆದುರಿನಲ್ಲಿ ನೀವಾಗಿರುವಿರಿ ನನ್ನ ಸಹಾಯಕ.
3 : ಕಾಪಾಡಿದಿರಿ ನನ್ನನ್ನು ನಿಮ್ಮ ಪರಮ ಕಾರುಣ್ಯದ ನಿಮಿತ್ತ ನಿಮ್ಮ ನಾಮದ ಮಹತ್ತಿನ ಪ್ರಯುಕ್ತ. ರಕ್ಷಿಸಿದಿರಿ, ನನ್ನ ಹಾಳುಮಾಡಲು ಹಲ್ಲು ಕಡಿಯುತ ಸಜ್ಜಾಗಿದ್ದವರಿಂದ; ರಕ್ಷಿಸಿದಿರಿ, ನನ್ನ ಜೀವತೆಗೆಯಲು ಹವಣಿಸುತ್ತಿದ್ದವರ ಕೈಯಿಂದ, ನನಗೆ ಬಂದೊದಗಿದ್ದ ಅನೇಕಾನೇಕ ಕಷ್ಟಗಳಿಂದ.
4 : ನನ್ನ ಉಳಿಸಿದಿರಿ ಸುತ್ತುವರಿದ, ಉಸಿರುಗಟ್ಟಿಸುವ ಉರಿಯಿಂದ, ನಾನೇ ಹೊತ್ತಿಸಿದ ಬೆಂಕಿಯಿಂದ.
5 : ಕಾಪಾಡಿದಿರಿ ಪಾತಾಳಗರ್ಭದ ಅಂತರಾಳದಿಂದ ಹೊಲೆನಾಲಿಗೆಯಿಂದ, ಸುಳ್ಳುನುಡಿಗಳಿಂದ, ಅರಸನೆದುರಿಗೆ ಚಾಡಿಹೇಳಿದ ದುರ್ಜನರ ನಾಲಿಗೆಯಿಂದ. ನನ್ನ ಆತ್ಮ ಸಮೀಪವಾಗಿತ್ತು ಮರಣಕ್ಕೆ ನನ್ನ ಪ್ರಾಣವು ಹತ್ತಿರವಾಗಿತ್ತು ಕೆಳಪಾತಾಳಕ್ಕೆ.
6 : ಕಾಪಾಡಿದಿರಿ ಪಾತಾಳಗರ್ಭದ ಅಂತರಾಳದಿಂದ ಹೊಲೆನಾಲಿಗೆಯಿಂದ, ಸುಳ್ಳುನುಡಿಗಳಿಂದ, ಅರಸನೆದುರಿಗೆ ಚಾಡಿಹೇಳಿದ ದುರ್ಜನರ ನಾಲಿಗೆಯಿಂದ. ನನ್ನ ಆತ್ಮ ಸಮೀಪವಾಗಿತ್ತು ಮರಣಕ್ಕೆ ನನ್ನ ಪ್ರಾಣವು ಹತ್ತಿರವಾಗಿತ್ತು ಕೆಳಪಾತಾಳಕ್ಕೆ.
7 : ಬಳಸಿಬಂದಿರಲವರು ನನ್ನ ಸುತ್ತಲು ನನಗಿರಲಿಲ್ಲ ಸಹಾಯಕರಾರು ನಿರೀಕ್ಷಿಸಿದೆ ನಾ ಮನುಜರ ಸಹಾಯವನು; ಅದು ಸಿಕ್ಕದೆ ಹೋಯಿತು.
8 : ಆಗ ಸರ್ವೇಶ್ವರಾ, ನೆನೆಸಿಕೊಂಡೆ ನಾ ನಿಮ್ಮ ಕೃಪೆಯನ್ನು ಯುಗಯುಗಾಂತರಕ್ಕು ಇರುವ ನಿಮ್ಮ ಕಾರ್ಯ ಸಾಧನೆಯನ್ನು. ನಿಮ್ಮನ್ನು ನಿರೀಕ್ಷಿಸಿಕೊಂಡಿರುವವರನ್ನು ಬಿಡಿಸುವವರು ನೀವು ಶತ್ರುಗಳ ಕೈಯಿಂದವರನ್ನು ರಕ್ಷಿಸುವವರು ನೀವು.
9 : ಭೂಮಿಯಿಂದ ಮೇಲಕ್ಕೇರಿಸಿದಿರಿ ನನ್ನ ಮನವಿಯನ್ನು ಬೇಡಿಕೊಳ್ಳಲು, ರಕ್ಷಿಸಿದಿರಿ ಮರಣದಿಂದೆನ್ನನ್ನು.
10 : ನನ್ನೊಡೆಯನ ತಂದೆಯಾದ ಸರ್ವೇಶ್ವರನಿಗೆ ಮೊರೆಯಿಟ್ಟೆನು ನನ್ನ ಕಷ್ಟಕಾಲದೊಳು, ಸೊಕ್ಕಿನವರ ವಿರುದ್ಧ, ಸಹಾಯವಿಲ್ಲದ ತರುಣದೊಳು ನನ್ನನ್ನು ಕೈಬಿಡಬೇಡವೆಂದು ಕೇಳಿಕೊಂಡೆನು.
11 : ಎಡೆಬಿಡದೆ ನಾ ಕೀರ್ತಿಸುವೆ ನಿನ್ನ ನಾಮವನು ಕೃತಜ್ಞತಾ ಸ್ತುತಿಯೊಡನೆ ನಿಮ್ಮನು ಕೊಂಡಾಡುವೆನು. ನೀವಾಲಿಸಿದಿರಿ ನನ್ನ ಮನವಿಯನ್ನು.
12 : ವಿನಾಶದಿಂದ ನನ್ನನ್ನು ರಕ್ಷಿಸಿದಿರಿ ಕಷ್ಟಕಾಲದಲ್ಲಿ ಎನ್ನನ್ನು ಕಾಪಾಡಿದಿರಿ ಎಂದೇ ಕೃತಜ್ಞತಾಸ್ತುತಿ ಸಲ್ಲಿಸುವೆ; ನಿಮ್ಮ ನಾಮವನ್ನು ಸರ್ವೇಶ್ವರಾ, ಕೊಂಡಾಡುವೆ.
13 : ಸುಜ್ಞಾನದ ಅನ್ವೇಷಣೆ ನಾನಿನ್ನೂ ಎಳೆಯವನಾಗಿದ್ದಾಗ, ದೇಶಾಂತರ ಹೋಗುವುದಕ್ಕೆ ಮುನ್ನ ಬಹಿರಂಗ ಪ್ರಾರ್ಥನೆಯಲ್ಲಿ ಜ್ಞಾನವನ್ನರಸಿದೆನಯ್ಯಾ.
14 : ಮಹಾಮಂದಿರದ ಎದುರಿನಲ್ಲಿ ನಾನದನ್ನು ಕೇಳಿಕೊಂಡೆ ಕಡೆಯವರೆಗೂ ಅದನ್ನು ಹುಡುಕಿದೆ.
15 : ದ್ರಾಕ್ಷಿ ಹೂಬಿಡುವ ಕಾಲದಿಂದ ಫಲಬಿಡುವ ತನಕ ಜ್ಞಾನದಲ್ಲಿ ಆನಂದಿಸಿತು ನನ್ನ ಹೃದಯ ಸರಳತೆಯಲ್ಲೇ ನಡೆಯಿತು ನನ್ನ ಪಾದ ನಾನದನ್ನು ಅರಸುತ್ತಾ ಬಂದೆ ಯೌವನದಿಂದ.
16 : ನನ್ನ ಕಿವಿಯನ್ನು ಕೊಂಚ ಬಾಗಿಸಿ, ಅದನ್ನು ಸ್ವೀಕರಿಸಿದೆ ಅದರಿಂದ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡೆ.
17 : ಆದುದರಿಂದ ನಾ ಮುಂದುವರಿದೆ ಸುಜ್ಞಾನ ನೀಡುವಾತನನ್ನು ನಾ ಕೊಂಡಾಡುವೆ.
18 : ಅದನ್ನು ಅಭ್ಯಾಸಿಸಲು ನಿಶ್ಚಯಮಾಡಿದೆ ಒಳಿತನ್ನು ಕುರಿತು ಆಸಕ್ತನಾದೆ ನಾನೆಂದಿಗೂ ಆಶಾಭಂಗಪಡೆ.
19 : ಹೋರಾಡಿತು ನನ್ನಾತ್ಮ ಅದನ್ನು ಗಳಿಸಲು ನಿಷ್ಠೆಯಿಂದಿದ್ದೆ ನನ್ನ ಕಾರ್ಯಕಷ್ಟದೊಳು ನನ್ನ ಕೈಯೆತ್ತಿದೆ ಆಕಾಶದ ಕಡೆಗೆ ನನ್ನ ಅಜ್ಞಾನಕ್ಕಾಗಿ ನಾನೇ ಹಲುಬಿಕೊಂಡೆ.
20 : ಇಚ್ಛೆಯಿಂದ ನಾನದರ ಮೇಲೆ ಮನಸ್ಸಿಟ್ಟೆ ನಿರ್ಮಲತೆಯಲ್ಲಿ ಅದನ್ನು ಕಂಡುಕೊಂಡೆ ಮೊದಲಿನಿಂದಲೇ ಅದರೊಂದಿಗೆ ಸೇರುವ ಬುದ್ಧಿಯನ್ನು ಪಡೆದೆ ಇನ್ನು ನಾನೆಂದಿಗೂ ಅದನ್ನು ಕೈಬಿಡಲಾರೆ.
21 : ನನ್ನ ಅಂತರಂಗ ಚಿಂತಿಸಿತು ಅದನ್ನು ಅರಸುವುದಕ್ಕಾಗಿ ಒಳ್ಳೆಯ ಸ್ವಾಸ್ತ್ಯವನ್ನು ಪಡೆದುಕೊಂಡೆ ಅದರಿಂದಾಗಿ.
22 : ಪ್ರತಿಫಲವಾಗಿ ಕೊಟ್ಟರು ಸರ್ವೇಶ್ವರ ನನಗೆ ವಾಕ್ಚಾತುರ್ಯವನ್ನು ಆದುದರಿಂದಲೇ ಕೊಂಡಾಡುವೆ ನಾನವರನ್ನು.
23 : ಅಶಿಕ್ಷಿತರೇ, ನನ್ನ ಬಳಿಗೆ ಬನ್ನಿ ಶಿಕ್ಷಣದ ಮನೆಯಲ್ಲಿ ತಂಗಿ.
24 : ಈ ವಿಚಾರದಲ್ಲಿ ನಮಗೆ ಕೊರತೆಯಿದೆ ಎಂದು ನೀವು ಹೇಳುವುದೇಕೆ? ನಿಮ್ಮ ಆತ್ಮಗಳು ಬಹಳವಾಗಿ ದಾಹಗೊಂಡಿರುವುದೇಕೆ?
25 : ನಾನು ಬಾಯ್ದೆರೆದು ಮಾತಾಡಿದೆ ನೀವದನ್ನು ತೆಗೆದುಕೊಳ್ಳಿ ಹಣವಿಲ್ಲದೆ.
26 : ನಿಮ್ಮ ಕೊರಳನ್ನು ಒಡ್ಡಿ ಅದರ ನೊಗಕ್ಕೆ ದೊರಕಲಿ ಸುಶಿಕ್ಷಣ ನಿಮ್ಮ ಆತ್ಮಕ್ಕೆ ದೊರಕಲಿದೆ ಅದು ನಿಮ್ಮ ಸಮೀಪದಲ್ಲೆ.
27 : ಕಣ್ಣಾರೆ ನೋಡಿರಿ ನೀವಿದನ್ನು: ‘ನಾಪಟ್ಟ ದುಡಿಮೆ ಅಲ್ಲ, ಪಡೆದ ವಿಶ್ರಾಂತಿ ಬಹಳ’ ಎಂಬುದನ್ನು.
28 : ಪಡೆದುಕೊಳ್ಳಿ ಶಿಕ್ಷಣವನ್ನು ಬೆಳ್ಳಿಯಿಂದ ಗಳಿಸಿಕೊಳ್ಳಿ ಬಂಗಾರವನ್ನು ಅದರಿಂದ.
29 : ಆನಂದಿಸಲಿ ನಿಮ್ಮಾತ್ಮ ಸರ್ವೇಶ್ವರನ ಕೃಪೆಯಲ್ಲಿ ನಾಚಿಕೆಪಡದಿರಿ ಆತನನ್ನು ಕೊಂಡಾಡುವುದರಲ್ಲಿ.
30 : ಕಾರ್ಯಸಾಧಿಸಿರಿ ಕಾಲಬರುವ ಮುಂಚೆ ಪ್ರತಿಫಲವನ್ನೀಯುವನಾತ ಸೂಕ್ತ ಕಾಲದಲ್ಲೆ.

Holydivine