Sirach - Chapter 24
Holy Bible

1 : ಸುಜ್ಞಾನದ ಸ್ತುತಿ ಸುಜ್ಞಾನವೆಂಬಾಕೆ ಹೊಗಳಿಕೊಳ್ಳು ವಳು ತನ್ನನ್ನೇ ಹೆಚ್ಚಳಪಡುವಳವಳು ದೇವಜನರ ಮಧ್ಯೆ.
2 : ಬಾಯಿ ತೆರೆಯುವಳು ಮಹೋನ್ನತನ ಸಭೆಯಲ್ಲಿ ಹೆಚ್ಚಳಪಡುವಳು ಆತನ ಶಕ್ತಿಯ ಸಮಕ್ಷಮದಲ್ಲಿ.
3 : “ನಾನು ಮಹೋನ್ನತನ ಬಾಯೊಳಗಿಂದ ಬಂದೆ ಮಂಜುಮೋಡದಂತೆ ಭೂಮಿಯೆಲ್ಲವನ್ನೂ ಮುಚ್ಚಿಕೊಂಡೆ.
4 : ನಾ ವಾಸಮಾಡಿದೆ ಉನ್ನತಲೋಕದಲ್ಲಿ ನನ್ನ ಆಸನವಿದೆ ಮೇಘಸ್ತಂಭದಲ್ಲಿ.
5 : ನಾನೊಬ್ಬಳೇ ಸುತ್ತಾಡಿದೆ ಆಕಾಶ ಮಂಡಲವನ್ನೆಲ್ಲಾ ತಿರುಗಾಡಿದೆ ಪಾತಾಳದಲ್ಲೆಲ್ಲಾ.
6 : ಅಧಿಕಾರ ನಡೆಸಿದೆ ಸಮುದ್ರ ತೆರೆಗಳಲ್ಲೂ ಸಮಗ್ರ ಭೂಮಿಯಲ್ಲೂ ಪ್ರತಿಯೊಂದು ಜನಾಂಗದಲ್ಲೂ, ರಾಷ್ಟ್ರದಲ್ಲೂ.
7 : ವಿಶ್ರಾಂತಿನೆಲೆಯನು ನಾ ಕೋರಿದೆ ಇವೆಲ್ಲದರಲ್ಲಿ ಯಾರ ಪ್ರಾಂತ್ಯದಲಿ ನಾನು ತಂಗಿರಲಿ?
8 : ಆಗ ಅಪ್ಪಣೆ ಮಾಡಿದ ನನಗೆ ಎಲ್ಲದರ ಸೃಷ್ಟಿಕರ್ತನು ನಾನೊಂದೆಡೆ ಬೀಡುಬಿಡುವಂತೆ ಮಾಡಿದನು ನನ್ನ ನಿರ್ಮಾಪಕನು. ‘ನಿನ್ನ ಬಿಡಾರ ಇಸ್ರಯೇಲಿನಲ್ಲಿರಲಿ ಯಕೋಬನ ಸಂತಾನ ನಿನಗೆ ಪ್ರಜೆಯಾಗಿರಲಿ’ ಎಂದೆನಗೆ ನುಡಿದನು.
9 : ಆತ ಸೃಷ್ಟಿಸಿದನೆನ್ನನು ಆದಿಯಲ್ಲಿ ಯುಗಕ್ಕೆ ಮೊದಲೆ ಸದಾಸರ್ವದಾ ನಾನಿರುವೆ ಅಳಿಯದೆ.
10 : ಆತನಿಗೆ ನಾ ಸೇವೆ ಮಾಡಿದೆ ಪರಿಶುದ್ಧ ಗುಡಾರದಲ್ಲಿ ಹೀಗೆ ಪ್ರತಿಷ್ಠಾಪಿತಳಾದೆ ಸಿಯೋನಿನಲ್ಲಿ.
11 : ಅಂತೆಯೇ ನಿವಾಸನೆಲೆಯನಿತ್ತರೆನಗೆ ಆ ಪ್ರಿಯ ನಗರದಲ್ಲಿ ಅಧಿಕಾರವಿತ್ತೆನಗೆ ಜೆರುಸಲೇಮಿನಲ್ಲಿ.
12 : ಬೇರೂರಿಕೊಂಡೆ ಗೌರವಾನ್ವಿತ ಆ ಜನಾಂಗದಲ್ಲಿ ಸರ್ವೇಶ್ವರನ ಸ್ವಕೀಯ ಪ್ರಜೆಯಲ್ಲಿ.
13 : ಎತ್ತರವಾಗಿ ಬೆಳೆದ ಲೆಬನೋನಿನ ದೇವದಾರು ಮರದಂತೆ ಹೆರ್ಮೋನ್ ಪರ್ವತದ ತುರಾಯಿ ಗಿಡದಂತೆ.
14 : ಬೆಳೆದೆ ಎತ್ತರವಾಗಿ ಸಮುದ್ರ ತೀರದ ತಾಳೆಮರದಂತೆ ಜೆರಿಕೋವಿನಲ್ಲಿನ ಗುಲಾಬಿ ಗಿಡದಂತೆ ಬಯಲು ನಾಡಿನ ಅಂದವಾದ ಎಣ್ಣೆಮರದಂತೆ ಅಂತೂ ನಾ ಮೆರೆದೆ ಉನ್ನತವಾದ ಮರದಂತೆ.
15 : ಪರಿಮಳ ಬೀರಿದೆ ಲವಂಗಚಕ್ಕೆಯಂತೆ ಗುಲಾಬಿ ಹೂವಿನಂತೆ ಆರಿಸಿದ ಮೀರೆಂಬ ರಸಗಂಧ, ಸುಗಂಧ, ಚಕ್ಕೆಯಂತೆ ಹಾಗು ಗುಗ್ಗುಲ, ಹಾಲುಮಡ್ಡಿಗಳಂತೆ ದೇವದರ್ಶನದ ಗುಡಾರದಲ್ಲೇಳುವ ಸಾಂಬ್ರಾಣಿ ಹೊಗೆಯಂತೆ.
16 : ನನ್ನ ಕೊಂಬೆಗಳನ್ನು ಹರಡಿದೆ ಏಲಾಮರದಂತೆ ಚಿಗುರಿದೆ ನಾ ಅಂದವಾಗಿ ದ್ರಾಕ್ಷಾಬಳ್ಳಿಯಂತೆ. ನನ್ನ ಕೊಂಬೆಗಳಿದ್ದವು ಸೊಗಸಾಗಿ, ರಮ್ಯವಾಗಿ ನನ್ನ ಹೂಗಳಿದ್ದವು ಸೊಂಪಾಗಿ, ಫಲಗಳು ಸಮೃದ್ಧಿಯಾಗಿ.
17 : ನನ್ನ ಕೊಂಬೆಗಳನ್ನು ಹರಡಿದೆ ಏಲಾಮರದಂತೆ ಚಿಗುರಿದೆ ನಾ ಅಂದವಾಗಿ ದ್ರಾಕ್ಷಾಬಳ್ಳಿಯಂತೆ. ನನ್ನ ಕೊಂಬೆಗಳಿದ್ದವು ಸೊಗಸಾಗಿ, ರಮ್ಯವಾಗಿ ನನ್ನ ಹೂಗಳಿದ್ದವು ಸೊಂಪಾಗಿ, ಫಲಗಳು ಸಮೃದ್ಧಿಯಾಗಿ.
18 : ನಿಷ್ಕಳಂಕ ಪ್ರೀತಿ, ದೇವಭಯ, ಸುಜ್ಞಾನ, ಪವಿತ್ರ ನಂಬಿಕೆ. ನಾ ಮಾತೆಯಾಗಿರುವೆ ಇವುಗಳಿಗೆ ನಿತ್ಯವಾಗಿರುವ ನಾನು ಅನುಗ್ರಹಿಸಲಾಗಿರುವೆ ನನ್ನ ಮಕ್ಕಳೆಲ್ಲರಿಗೆ, ಆತನು ಹೆಸರಿಟ್ಟವರಿಗೆ.
19 : ನನ್ನನ್ನು ಬಯಸುವ ಜನರೇ, ನನ್ನ ಬಳಿಗೆ ಬನ್ನಿ ನನ್ನ ಸತ್ಫಲಗಳಿಂದ ಸಂತೃಪ್ತರಾಗಿ.
20 : ಏಕೆಂದರೆ, ಸಿಹಿ ನನ್ನ ಸ್ಮರಣೆ ಜೇನುತುಪ್ಪಕ್ಕಿಂತ ಮಧುರ ನನ್ನಾನುಭವ ಜೇನುಗೂಡಿಗಿಂತ.
21 : ನನ್ನನ್ನು ಭುಜಿಸುವವರು ಇನ್ನೂ ಭುಜಿಸಬೇಕೆನ್ನುವರು ನನ್ನನ್ನು ಪಾನಮಾಡುವವರು ಇನ್ನೂ ಪಾನಮಾಡಬೇಕೆನ್ನುವರು.
22 : ನಾಚಿಕೆಯಾಗದು ನಾನು ಹೇಳಿದಂತೆ ಕೇಳುವವನಿಗೆ ತಪ್ಪುಮಾಡಲಾಗದು ನಾನು ಹೇಳಿದಂತೆ ನಡೆಯುವವನಿಗೆ.”
23 : ಸುಜ್ಞಾನ ಮತ್ತು ಧರ್ಮಶಾಸ್ತ್ರ ಸುಜ್ಞಾನವು ಮಹೋನ್ನತ ದೇವರ ಒಡಂಬಡಿಕೆಯ ಗ್ರಂಥವು ಯಕೋಬ ಸಮಾಜಕ್ಕೆ ಮೋಶೆ ವಿಧಿಸಿ ಸೊತ್ತಾಗಿ ಕೊಟ್ಟ ಧರ್ಮಶಾಸ್ತ್ರವು.
24 : ಎಡೆಬಿಡದೆ ಸರ್ವೇಶ್ವರನಿಂದ ಶಕ್ತಿ ಹೊಂದು ಹಿಡಿದುಕೊ ಶಕ್ತಿನೀಡಲೆಂದು ಆತನನ್ನು ಸರ್ವಶಕ್ತ ಸರ್ವೇಶ್ವರನೊಬ್ಬನೇ ದೇವರು ಆತನ ಹೊರತು ಬೇರೆ ಇಲ್ಲ ಉದ್ಧಾರಕನು.
25 : ಹೊಸ ಫಲಗಳ ಕಾಲದಲ್ಲಿ ಟೈಗ್ರೀಸ್ ನದಿಯಂತೆ, ಪೀಶೋನ್ ನದಿಯಂತೆ ಮಾಡುವನಾತ ಜ್ಞಾನ ತುಂಬಿ ಹರಿವಂತೆ.
26 : ತುಂಬು ವಿವೇಕವನ್ನೀವನು ಯೂಫ್ರೆಟಿಸ್ ನದಿಯಂತೆ ಸುಗ್ಗಿಕಾಲದ ಜೋರ್ಡನ್ ಹೊಳೆಯಂತೆ.
27 : ನೈಲಿನಂತೆ, ದ್ರಾಕ್ಷಿಯ ಸುಗ್ಗಿಕಾಲದ ಗೀಹೋನ್ ನದಿಯಂತೆ ಮಾಡುವುದದು ಸುಶಿಕ್ಷಣ ಪ್ರಜ್ವಲಿಸಿ ಹರಿಯುವಂತೆ.
28 : ಆದಿಮಾನವ ಸುಜ್ಞಾನವನ್ನು ಪೂರ್ತಿಯಾಗಿ ತಿಳಿದುಕೊಳ್ಳಲಿಲ್ಲ ಅಂತೆಯೇ ಕಟ್ಟಕಡೆಯವನೂ ಅದನ್ನು ಸಂಪೂರ್ಣವಾಗಿ ಗ್ರಹಿಸಲಾರ.
29 : ಏಕೆಂದರೆ ಆಕೆಯ ಆಲೋಚನೆಗಳು ಸಾಗರಕ್ಕಿಂತಲೂ ವಿಶಾಲ ಆಕೆಯ ಸಂಕಲ್ಪಗಳು ಪಾತಾಳಕ್ಕಿಂತಲೂ ಅಗಾಧ.
30 : ನಾನಂತೂ ಬಂದೆ ನದಿಯಿಂದ ತೆಗೆದ ಕಾಲುವೆಯಂತೆ ತೋಟದೊಳಗೆ ಬಂದೆ ನೀರಿನ ನಾಳದಂತೆ.
31 : ಆಗ ನಾನೆಂದುಕೊಂಡೆ: “ನನ್ನ ತೋಟಕ್ಕೆ ನೀರು ಬಿಡುವೆ ನನ್ನ ಹೂವಿನ ಮಡಿಗೆ ಯಥೇಚ್ಛವಾಗಿ ಕುಡಿಸುವೆ” ಆಗ ಏನಾಶ್ಚರ್ಯ! ನನ್ನ ಕಾಲುವೆ ನದಿಯಾಯಿತು ನನ್ನ ನದಿ ಸಾಗರವಾಯಿತು!
32 : ಇನ್ನು ಸುಬೋಧೆಯನ್ನು ಬೆಳಗಿಸುವೆ ಉದಯಕಾಲದ ಬೆಳಕಿನಂತೆ ಬಹುದೂರ ಅದು ಹರಡುವಂತೆ.
33 : ಹರಿಯಮಾಡುವೆ ಸುಬೋಧೆಯನ್ನು ಪ್ರವಾದನೆಯಂತೆ ಅದು ಯುಗಯುಗಾಂತರಗಳವರೆಗೂ ಉಳಿಯುವಂತೆ.
34 : ನಾ ಕಷ್ಟಪಟ್ಟಿರುವೆ, ನೋಡಿ, ನನಗಾಗಿ ಮಾತ್ರವಲ್ಲ ಸುಜ್ಞಾನವನ್ನು ಹುಡುಕುವವರೆಲ್ಲರಿಗೋಸ್ಕರ.

Holydivine