Sirach - Chapter 11
Holy Bible

1 : ಮೋಸದ ವೇಷ ಸುಜ್ಞಾನಿಯಾದ ದೀನನು ತಲೆಯೆತ್ತಿ ನಿಲ್ಲುವನು ಮಹಾಪುರುಷರ ಮಧ್ಯೆ ಆಸೀನನಾಗಲು ಅರ್ಹನಾಗುವನು.
2 : ಒಬ್ಬನ ಚೆಲುವಿನ ನೋಟಕ್ಕಾಗಿ ಅವನನ್ನು ಹೊಗಳಬೇಡ ಒಬ್ಬನ ಹೊರನೋಟವನ್ನೆ ಮುಂದಿಟ್ಟು ಹೀನೈಸಬೇಡ.
3 : ರೆಕ್ಕೆಯುಳ್ಳವುಗಳಲ್ಲಿ ಚಿಕ್ಕದು ಜೇನುಹುಳ ಆದರೆ ಸಿಹಿಗಳಲ್ಲಿ ಸಿಹಿ ಅದರ ಫಲ.
4 : ಉಡುಗೆತೊಡುಗೆಗಳಲ್ಲಿ ಹೆಚ್ಚಳಪಡಬೇಡ ಕೀರ್ತಿ ಪ್ರತಿಷ್ಟೆ ಬಂದಾಗ ಉಬ್ಬಿಕೊಳ್ಳಬೇಡ. ಕಾರಣ, ದೇವರ ಕಾರ್ಯಗಳು ಅಗಾಧ ಮಾನವರಿಗೆ ಅವು ಅಗೋಚರ.
5 : ಪ್ರಭುಗಳನೇಕರು ನೆಲದ ಮೇಲೆ ಪವಡಿಸಿಹರು ಗಣನೆಗೆ ಬಾರದವರು ಕಿರೀಟಧಾರಿಗಳು ಆಗಿಹರು.
6 : ಬಲವಂತರನೇಕರು ನಾಚಿಕೆಗೀಡಾಗಿಹರು ಘನವಂತರನೇಕರು ಇತರರ ಕೈವಶವಾಗಿಹರು.
7 : ಆಲೋಚನೆ-ಪರಿಶೀಲನೆ ದೂಷಣೆ ಮಾಡಬೇಡ ಯಾವುದನ್ನೂ ತೂಗಿನೋಡುವ ತನಕ ಬೇಕಾದರೆ ಗದರಿಸು ಸಂಪೂರ್ಣವಾಗಿ ಅರಿತುಕೊಂಡನಂತರ.
8 : ಹೇಳಿದ ಮಾತನ್ನು ಕೇಳಿ ತಿಳಿದುಕೊಳ್ಳುವ ತನಕ ಉತ್ತರಿಸಬೇಡ ಒಬ್ಬನು ಮಾತನಾಡುತ್ತಿರುವಾಗಲೇ ಬಾಯಿ ತೆರೆಯಬೇಡ.
9 : ನಿನಗೆ ಸಂಬಂಧವಿಲ್ಲದ ಚರ್ಚೆಯಲ್ಲಿ ತಲೆಹಾಕಬೇಡ ದುರುಳರು ನ್ಯಾಯಕ್ಕೆ ಕೂರುವಾಗ ಅವರ ಜೊತೆ ಕೂರಬೇಡ.
10 : ಮಗನೇ, ಕೈಹಾಕಬೇಡ ಕಂಡಕಂಡ ಕೆಲಸಗಳಿಗೆ ಕೇಡು ತಪ್ಪದು ಅನೇಕ ಕೆಲಸಗಳಿಗೆ ಕೈ ಹಾಕುವವರಿಗೆ; ನೀನವುಗಳನ್ನು ಹಿಮ್ಮೆಟ್ಟದಿದ್ದರೆ ಏನನ್ನೂ ಸಾಧಿಸಲಾರೆ ಬಿಟ್ಟು ಓಡಿದರೆ ಅವುಗಳಿಂದ ತಪ್ಪಿಸಿ ಕೊಳ್ಳಲಾರೆ.
11 : ದೇವರಲ್ಲಿ ಭರವಸೆ ಒಬ್ಬನು ದುಡಿಯುತ್ತಾನೆ; ಕಷ್ಟಪಡುತ್ತಾನೆ ಅವಸರಪಡುತ್ತಾನೆ; ಎಷ್ಟು ಮಾಡಿದರೂ ಕೊರತೆಯಿಂದಿರುತ್ತಾನೆ;
12 : ಇನ್ನೊಬ್ಬನು ಮಂಕುತಿಮ್ಮ, ಇತರರ ಸಹಾಯದ ಅಗತ್ಯವುಳ್ಳವನು ಆತನು ಬಲಹೀನನು ಹಾಗು ದಟ್ಟದರಿದ್ರನು; ಸರ್ವೇಶ್ವರನ ಕಟಾಕ್ಷ ಬೀಳುತ್ತದೆ ಅವನ ಮೇಲೆ ಹೀನಸ್ಥಿತಿಯಿಂದ ಮೇಲುಸ್ಥಿತಿಗೆ ಅವನನ್ನು ಏರಿಸುತ್ತದೆ.
13 : ಅದು ಮಾಡುತ್ತದೆ ನಾಲ್ಕು ಜನರಲ್ಲಿ ಅವನು ತಲೆಯೆತ್ತಿ ನಡೆವಂತೆ ಅನೇಕರು ಅವನನ್ನು ಕಂಡು ಆಶ್ಚರ್ಯಪಡುವಂತೆ.
14 : ಜಯ, ಅಪಜಯ, ಜೀವ, ಸಾವು ಸರ್ವೇಶ್ವರನಿಂದಲೇ ಬಡತನ, ಸಿರಿತನ ಎಲ್ಲವು ಆತನಿಂದಲೇ.
15 : ಜ್ಞಾನ, ತಿಳುವಳಿಕೆ, ಧರ್ಮಶಾಸ್ತ್ರದ ಅರಿವು ಸರ್ವೇಶ್ವರನಿಂದಲೆ ಪ್ರೀತಿ, ಸತ್ಕಾರ್ಯವೆಸಗುವ ಆಸಕ್ತಿ ಸಹ, ಆತನಿಂದಲೆ.
16 : ಮೂರ್ಖತನ, ಕತ್ತಲು ಇರುವುವು ಪಾಪಿಗಳೊಂದಿಗೆ ಕೇಡಿನಲ್ಲಿ ನಲಿವವನಲ್ಲಿ ಅವು ಇರುವುವು ಮುಪ್ಪಿನವರೆಗೆ.
17 : ದೇವರ ವರ ನೆಲೆಗೊಳ್ಳುವುದು ಸದ್ಭಕ್ತರಲ್ಲಿ ಆತ ಮೆಚ್ಚುವಂಥಾದ್ದು ವೃದ್ಧಿಯಾಗುವುದು ಸತತವಾಗಿ.
18 : ಒಬ್ಬನು ದುಡಿದು ದುಡಿದು ಗಂಟಿಕ್ಕಿ ಸಿರಿವಂತನಾಗಬಹುದು ಇಂಥವನ ಪಾಲಿಗೆ ಬರತಕ್ಕ ಪ್ರತಿಫಲ ಹೀಗಿರುವುದು:
19 : ‘ನನಗೆ ಬಂತು ನೆಮ್ಮದಿ, ಈಗ ಅನುಭವಿಸುವೆ ಆಸ್ತಿ’ ಎಂದರೂ Wಳಿಯದು ಅವನಿಗೆ ಅದು ಎಷ್ಟು ಕಾಲ ಇರುವುದೆಂದು ಅದನ್ನು ಇತರರಿಗೆ ಬಿಟ್ಟು ತಾನು ಸಾಯಬೇಕೆಂದು.
20 : ನೀನು ಕೈಗೊಂಡ ಕಾರ್ಯದಲಿ ಸ್ಥಿರವಾಗಿರು, ನಿರತನಾಗಿರು ಹಳಬನಾಗುವವರೆಗೂ ಅದನ್ನೆ ಮಾಡುತ್ತಿರು.
21 : ಪಾಪಾತ್ಮರ ಕಾರ್ಯಗಳನ್ನು ಕಂಡು ಆಶ್ಚರ್ಯ ಪಡದಿರು; ದೇವರನ್ನು ನಂಬಿ, ನಿನ್ನ ಕಾರ್ಯದಲಿ ನಿರತನಾಗಿರು; ಆತನಿಗೆ ಕಠಿಣವೇನೂ ಅಲ್ಲ, ಬಡವನನ್ನು ಬಲ್ಲಿದವನನ್ನಾಗಿಸಲು ಕ್ಷಣಮಾತ್ರದೊಳು.
22 : ದೇವರ ಆಶೀರ್ವಾದವಿದೆ ಭಕ್ತರಿಗೆ ದೊರಕುವ ಫಲದಲ್ಲಿ ಆ ಆಶೀರ್ವಾದವನ್ನು ಬೆಳಗಿಸುವನಾತ ಒಂದೇ ಕ್ಷಣದಲ್ಲಿ.
23 : ‘ನನ್ನ ಬಾಳಿನಿಂದ ಪ್ರಯೋಜನವೇನು?’ ಎಂದು ಹೇಳದಿರು ‘ಮುಂದೆ ನನಗೆ ಬರುವ ಗತಿಯೇನು?’ ಎಂದು ಕೊರಗದಿರು.
24 : ಅಂತೆಯೇ, ‘ಸಾಕಷ್ಟು ಆಸ್ತಿ ನನಗಿದೆ’ ಎಂದು ಆಡಿಕೊಳ್ಳಬೇಡ ‘ಇನ್ನು ಮುಂದೆ ನನಗೆ ಯಾವ ಕೊರತೆ?’ ಎಂದು ಉಬ್ಬಿಕೊಳ್ಳಬೇಡ.
25 : ಸುಖಕಾಲದಲ್ಲಿ ದುಃಖದ ನೆನಪಾಗುವುದಿಲ್ಲ ವಿಪತ್ಕಾಲದಲ್ಲಿ ಸುಖದ ನೆನಪಾಗುವುದಿಲ್ಲ.
26 : ಮರಣದ ವೇಳೆಯಲ್ಲಿ ದೇವರಿಗೆ ಅತಿ ಸುಲಭವಾಗಿರುವುದು ಮನುಷ್ಯನ ನಡತೆಗೆ ಸರಿಯಾದ ಪ್ರತಿಫಲವೀಯಲು.
27 : ವಿಪತ್ತು ಸಂತೋಷವನ್ನೆ ಮರೆಯಿಸಿ ಬಿಡುತ್ತದೆ ಒಂದೇ ಗಳಿಗೆಯಲ್ಲಿ ಮನುಷ್ಯನ ಕಾರ್ಯಗಳೆಲ್ಲ ಬಯಲಿಗೆ ಬೀಳುವುವು ಅಂತ್ಯಕಾಲದಲ್ಲಿ.
28 : ಒಬ್ಬನನ್ನು ಧನ್ಯನೆನಬೇಡ ಅವನು ಸಾಯುವುದಕ್ಕೆ ಮೊದಲೇ ಅವನೆಂಥವನೆಂಬುದು ತಿಳಿದು ಬರುವುದು ಅವನ ಮಕ್ಕಳಿಂದಲೆ.
29 : ಪ್ರತಿಯೊಬ್ಬನನ್ನು ಕರೆದು ತರಬೇಡ ಮನೆಯೊಳಗೆ ಯುಕ್ತಿ ಬಹಳವಾಗಿರುವುದು ವಂಚಕನಿಗೆ.
30 : ಕೆಡುಕರ ಬಗ್ಗೆ ಎಚ್ಚರಿಕೆ ಗರ್ವಿಯು ಆತ್ಮ ಪಂಜರದಲ್ಲಿರುವ ಕವುಜುಗ ಹಕ್ಕಿಯಂತೆ ಅವನು ನಿನ್ನ ಅಳಿವಿಗಾಗಿ ಹೊಂಚುಹಾಕುತ್ತಾನೆ. ಗೂಢಾಚಾರನಂತೆ;
31 : ಹೊಂಚಿಕೊಂಡಿರುವನವನು ಒಳ್ಳೆಯದನ್ನು ಕೆಟ್ಟದ್ದನ್ನಾಗಿಸಲು ಸ್ತುತ್ಯಾರ್ಹವಾದುದನ್ನು ಖಂಡನೆಗೆ ಒಳಪಡಿಸಲು.
32 : ಕಿಡಿಯೊಂದರಿಂದ ಹೊತ್ತಿಕೊಳ್ಳುವುದು ದೊಡ್ಡ ಬೆಂಕಿ ಅಧರ್ಮಿ ಹೊಂಚಿಕೊಂಡೇ ಇರುವನು ರಕ್ತಪಾತಕ್ಕಾಗಿ.
33 : ಕೆಡುಕನ ವಿಷಯದಲ್ಲಿ ಎಚ್ಚರಿಕೆ! ಕಾರಣ, ಅವನು ಮಾಡುವುದೆಲ್ಲ ಕೆಡುಕೇ ಅಂಥವನು ನಿತ್ಯಕಳಂಕ ಹಚ್ಚಾನು ನಿನಗೆ!
34 : ಮನೆಯಲ್ಲಿ ಇಟ್ಟುಕೊಳ್ಳಬೇಡ ಅಪರಿಚಿತನನ್ನು ಅವನು ಇಲ್ಲಸಲ್ಲದ ಗದ್ದಲವನ್ನು ಎಬ್ಬಿಸಿಯಾನು ನಿನಗೂ ನಿನ್ನವರಿಗೂ ಮನಸ್ತಾಪ ಹುಟ್ಟಿಸಿಯಾನು.

Holydivine