Sirach - Chapter 4
Holy Bible

1 : ಮಗನೇ, ಬಡವನ ಜೀವನಾಧಾರವನ್ನು ಕಸಿದುಕೊಳ್ಳಬೇಡ ಗತಿಗೆಟ್ಟು ಬಂದವನನ್ನು ಬಹು ಸಮಯ ಕಾಯಿಸಬೇಡ.
2 : ಹಸಿದವರನ್ನು ಗೋಳಾಡಿಸಬೇಡ ಕಷ್ಟದಲ್ಲಿರುವವರನ್ನು ಕಾಡಬೇಡ.
3 : ನೊಂದ ಹೃದಯವನ್ನು ಇನ್ನೂ ನೋಯಿಸಬೇಡ ಗತಿಯಿಲ್ಲದವನಿಗೆ ದಾನಮಾಡಲು ತಡಮಾಡಬೇಡ.
4 : ಕುಗ್ಗಿದವನ ಮೊರೆಯನ್ನು ತಿರಸ್ಕರಿಸಬೇಡ ಬಡವನಿಂದ ಮುಖವನ್ನು ತಿರುಗಿಸಿಕೊಳ್ಳಬೇಡ.
5 : ಗತಿಗೆಟ್ಟು ಕೇಳುವವನಿಗೆ ಕಣ್ಣು ತಪ್ಪಿಸಬೇಡ ನಿನ್ನನ್ನು ಶಪಿಸಲು ಅವನಿಗೆ ಆಸ್ಪದಕೊಡಬೇಡ.
6 : ವೇದನೆಯಲ್ಲಿರುವ ಅವನು ನಿನ್ನನ್ನು ಶಪಿಸಿಯಾನು ಅವನ ಸೃಷ್ಟಿಕರ್ತನು ಅವನ ಮೊರೆಯನ್ನು ಕೇಳಿಯಾನು.
7 : ಪ್ರೀತಿಪಾತ್ರನಾಗಿರು ಸಭಿಕರಿಗೆ ನಿನ್ನ ತಲೆಬಾಗಿಸು ಹಿರಿಯರಿಗೆ.
8 : ಬಡವನಿಗೆ ಕಿವಿಗೊಡು ಸನ್ನುಡಿಗಳಿಂದ ಅವನಿಗೆ ಸದುತ್ತರ ಕೊಡು.
9 : ತುಳಿತಕ್ಕೀಡಾದವರನ್ನು ಪಾರುಮಾಡಲು ಹೆದರಬೇಡ ನ್ಯಾಯತೀರಿಸುವಾಗ ಚಂಚಲಚಿತ್ತನಾಗಿ ಇರಬೇಡ.
10 : ಅನಾಥರಿಗೆ ತಂದೆಯಂತಿರು ವಿಧವೆಗೆ ಪತಿಯಂತೆ ಆಧಾರವಾಗಿರು. ಆಗ ನೀನು ಪರಾತ್ಪರನಿಗೆ ಮಗನಾಗುವೆ ತಾಯಿ ಪ್ರೀತಿಗಿಂತ ಹೆಚ್ಚಿನ ಪ್ರೀತಿಯನ್ನು ಆತನಿಂದ ಪಡೆಯುವೆ.
11 : ಸುಜ್ಞಾನವೆಂಬಾಕೆ ಮಕ್ಕಳನ್ನು ಉನ್ನತಿಗೆ ಏರಿಸುವಳು ತನ್ನನ್ನು ಅರಸುವವರನ್ನು ತನಗೇ ವಶಮಾಡಿಕೊಳ್ಳುವಳು.
12 : ಆಕೆಯನ್ನು ಪ್ರೀತಿಸುವವನು, ಪ್ರೀತಿಸುವುದು ಜೀವವನ್ನೇ ತಡವಿಲ್ಲದೆ ಆಕೆಯನ್ನು ಅರಸುವವನು ಪಡೆವನು ಅಮಿತಾನಂದವನ್ನೇ.
13 : ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು ಆಗುವನು ಕೀರ್ತಿವಂತ ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ ದೇವರ ಆಶೀರ್ವಾದ.
14 : ಆಕೆಗೆ ಸೇವೆಮಾಡುವವನು ಪರಮಪಾವನನನ್ನು ಸೇವೆ ಮಾಡುತ್ತಾನೆ, ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ ಪ್ರೀತಿಸುತ್ತಾನೆ.
15 : ಆಕೆಗೆ ಕಿವಿಗೊಡುವವರು ಜನಾಂಗಗಳಿಗೆ ನ್ಯಾಯತೀರಿಸುವರು, ಆಕೆಗೆ ಗಮನಕೊಡುವವರು ಸುರಕ್ಷಿತವಾಗಿ ಬದುಕುವರು.
16 : ಆಕೆಯನ್ನು ನೆಚ್ಚಿಕೊಂಡಿರುವವನು ಪಡೆಯುವು ಆಕೆಯನ್ನು ಬಾಧ್ಯವಾಗಿ ಆತನ ಪೀಳಿಗೆಯೂ ಆಕೆಯನ್ನು ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ.
17 : ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ ಅಡ್ಡದಿಡ್ಡ ನಡೆಯುವಳು; ಅವನಲ್ಲಿ ಅಳುಕು ಅಂಜಿಕೆಗಳನ್ನು ಹುಟ್ಟಿಸುತ್ತಾ ಸಾಗುವಳು; ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ ಶಿಕ್ಷೆಯಿತ್ತು ಬಾಧಿಸುವಳು; ನೀತಿನಿಯಮಗಳಿಂದ ಆತನನ್ನು ಪರೀಕ್ಷಿಸುವಳು.
18 : ತದನಂತರ ಅವನನ್ನು ನೇರವಾದ ಮಾರ್ಗಕ್ಕೆ ತಿರುಗಿಸುವಳು ಅವನಲ್ಲಿ ಸಂತೋಷವನ್ನು ಮೂಡಿಸುವಳು ಅವನಿಗೆ ತನ್ನ ಗುಟ್ಟುಗಳನು ತಿಳಿಸುತ್ತಾ ನಡೆಯುವಳು.
19 : ಆಗಲೂ ಅವನು ಅಡ್ಡದಾರಿ ಹಿಡಿದರೆ, ಅವನನ್ನು ತೊರೆದುಬಿಡುವಳು ತಾನು ಮಾಡಿದ್ದನು ತಾನೇ ಉಣ್ಣಲೆಂದು ಕೈಬಿಟ್ಟುಬಿಡುವಳು.
20 : ಆತ್ಮವಿಶ್ವಾಸ ಸಂದರ್ಭನೋಡಿಕೊಂಡು, ದುರಾತ್ಮನ ಬಗ್ಗೆ ಎಚ್ಚರದಿಂದಿರು; ನಿನ್ನ ಅಂತರಾತ್ಮದ ವಿಷಯದಲಿ ನಾಚಿಕೆಪಡದಿರು.
21 : ಒಂದು ವಿಧವಾದ ನಾಚಿಕೆಯಿದೆ, ಪಾಪವೇ ಅದರ ಫಲ; ಮತ್ತೊಂದು ವಿಧವಾದ ನಾಚಿಕೆಯಿದೆ, ಕೀರ್ತಿಕೃಪೆಗಳೇ ಅದರ ಫಲ.
22 : ಇತರರ ಮುಖಸ್ತುತಿ ಮಾಡಿ ನಿನಗೇ ಹಾನಿ ತಂದುಕೊಳ್ಳಬೇಡ, ಮಿತಿಮೀರಿ ತಲೆಬಾಗಿ ನೀನೇ ನೆಲಸಮವಾಗಬೇಡ.
23 : ಪರರಿಗೆ ಹಿತವಾಗಿದ್ದಲ್ಲಿ, ನಿನ್ನ ಮಾತನ್ನು ತಡೆಹಿಡಿಯಬೇಡ, ನಿನ್ನಲ್ಲಿರುವ ಜ್ಞಾನ ಬೆಳಕನ್ನು ಅಡಗಿಸಬೇಡ.
24 : ಮಾತಿನಿಂದ ಜ್ಞಾನ ಪ್ರಕಟವಾಗುತ್ತದೆ, ಸನ್ನುಡಿಯಿಂದ ಶಿಕ್ಷಣ ವ್ಯಕ್ತವಾಗುತ್ತದೆ.
25 : ಮಾತಾಡಬೇಡ ಎಂದೂ ಸತ್ಯಕ್ಕೆ ವಿರುದ್ಧವಾಗಿ, ಬದಲಿಗೆ ನಾಚಿಕೆಪಡು ನಿನ್ನ ಅಜ್ಞಾನಕ್ಕಾಗಿ.
26 : ನಿನ್ನ ಪಾಪಗಳನ್ನು ಒಪ್ಪಿಕೊಳ್ಳಲು ನಾಚಿಕೆ ಪಡಬೇಡ, ನದಿಯ ಓಟವನ್ನು ತಡೆಹಿಡಿಯಲು ಪ್ರಯತ್ನಿಸಬೇಡ.
27 : ಮೂಢನಿಗೆ ಅಡಿಯಾಳಾಗಬೇಡ, ಬಲವಂತನ ಪಕ್ಷ ವಹಿಸಬೇಡ.
28 : ಮರಣದ ಪರ್ಯಂತರ ಹೋರಾಡು ಸತ್ಯಕ್ಕಾಗಿ ದೇವರಾದ ಸರ್ವೇಶ್ವರ ಕಾದಾಡುವನು ನಿನಗಾಗಿ.
29 : ಮಾತಾಡುವುದಕ್ಕೆ ತವಕಪಡಬೇಡ, ಕೆಲಸಮಾಡಲು ಮೈಗಳ್ಳನೂ ಉದಾಸೀನನೂ ಆಗಬೇಡ.
30 : ನಿನ್ನ ಮನೆಯಲ್ಲಿ ಹುಲಿಯಂತಿರಬೇಡ, ನಿನ್ನ ಸೇವಕರ ಎದುರಿನಲ್ಲಿ ಚಂಚಲನಾಗಿರಬೇಡ.
31 : ತೆಗೆದುಕೊಳ್ಳುವುದರಲ್ಲಿ ಕೈಯೊಡ್ಡುವವನಾಗಿರಬೇಡ, ಹಿಂದಕ್ಕೆ ಕೊಡುವುದರಲ್ಲಿ ಬಿಗಿಮುಷ್ಟಿಯಾಗಿರಬೇಡ.

Holydivine