Sirach - Chapter 2
Holy Bible

1 : ಮಗನೇ, ದೇವರ ಸೇವೆಮಾಡಲು ಬಯಸುವಿಯೋ? ಹಾಗಾದರೆ ಶೋಧನೆಗಳನ್ನೆದುರಿಸಲು ನಿನ್ನಾತ್ಮವನ್ನು ಸಿದ್ಧಪಡಿಸಿಕೊ!
2 : ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ, ಸ್ಥಿರತೆ ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ.
3 : ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ ಅಭಿವೃದ್ಧಿ ಹೊಂದುವೆ ಅಂತಿಮ ದಿನ.
4 : ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು ಬಡತನ ಬಂದರೂ ದೀರ್ಘಶಾಂತಿಯಿಂದಿರು.
5 : ಬಂಗಾರದ ಪರೀಕ್ಷೆಯಾಗುವುದು ಬೆಂಕಿಯಲ್ಲಿ ಆತನ ಭಕ್ತರ ಪರೀಕ್ಷೆ ಅವಮಾನದ ಕುಲುಮೆಯಲ್ಲಿ.
6 : ಆತನಲ್ಲಿಡು ಭರವಸೆ; ನೆರವೀಯುವನಾತ ನಿನಗೆ, ಸರಿಪಡಿಸಿಕೊ ನಿನ್ನ ನಡತೆಯನು; ನಿರೀಕ್ಷೆಯಿಡು ಆತನಲೇ.
7 : ದೇವರಲ್ಲಿ ಭಯಭಕ್ತಿಯುಳ್ಳವರೇ, ಆತನ ಕರುಣೆಗಾಗಿ ಕಾದಿರಿ ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ; ಬಿದ್ದು ಹೋದೀರಿ!
8 : ದೇವರಿಗೆ ಭಯಪಡುವವರೇ, ಆತನಲ್ಲಿಡಿ ಭರವಸೆ ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ.
9 : ದೇವರಿಗೆ ಭಯಪಡುವವರೇ, ಒಳಿತನ್ನು ನಿರೀಕ್ಷಿಸಿರಿ ನಿತ್ಯ ಸಂತೋಷವನ್ನೂ ಕೃಪೆಯನ್ನೂ ಹಾರೈಸಿರಿ.
10 : ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ ಲಕ್ಷ್ಯಕೆ ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ? ಭಯಭಕ್ತಿಯಿಂದ ಬಾಳಿದವನನು ಆತ ಕೈಬಿಟ್ಟದ್ದುಂಟೆ?
11 : ಏಕೆನೆ, ಸರ್ವೇಶ್ವರನು ದಯಾಪೂರಿತನು, ಕನಿಕರವುಳ್ಳವನು ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ ರಕ್ಷಿಸುವವನು.
12 : ಅಂಜುಬುರುಕರೇ, ದುರ್ಬಲರೇ, ಕಪಟ ಪಾಪಿಗಳೇ, ಧಿಕ್ಕಾರ ನಿಮಗೆ !
13 : ದುರ್ಬಲಮನಸ್ಸುಳ್ಳವನಿಗೆ ಧಿಕ್ಕಾರ! ಆತನಿಗೆ ನಂಬಿಕೆಯಿಲ್ಲ; ಎಂತಲೇ ಆಶ್ರಯ ದೊರಕುವುದಿಲ್ಲ.
14 : ಸಹನಾಶಕ್ತಿ ಕಳೆದುಕೊಂಡವರೇ, ನಿಮಗೆ ಧಿಕ್ಕಾರ ! ಏನು ಮಾಡುವಿರಿ ಆತ ನಿಮ್ಮನ್ನು ಪರೀಕ್ಷಿಸುವಾಗ ?
15 : ದೇವರಿಗೆ ಭಯಪಡುವವರು ಆತನ ಮಾತುಗಳನ್ನು ಮೀರರು ಆತನನ್ನು ಪ್ರೀತಿಸುವವರು ಆತನ ಮಾರ್ಗಗಳನ್ನು ಅನುಸರಿಸುವರು.
16 : ದೇವರಿಗೆ ಭಯಪಡುವವರು, ಅರಸುವರು ಆತನಿಗೆ ಮೆಚ್ಚಿಕೆಯಾದುದನೇ ಆತನನು ಪ್ರೀತಿಸುವವರು, ನಿರತರಾಗಿರುವರು ಆತನ ನಿಯಮಗಳಲೇ.
17 : ದೇವರಿಗೆ ಭಯಪಡುವವರು ಅಣಿಮಾಡುವರು ತಮ್ಮ ಹೃದಯಗಳನು ಆತನ ಮುಂದೆ ತಗ್ಗಿಸಿಕೊಳ್ಳುವರು ತಮ್ಮ ಅಂತರಾತ್ಮವನು.
18 : ಮಾನವನ ಕೈಗೆ ಸಿಕ್ಕಿಬೀಳದಂತೆ ಒಪ್ಪಿಸಿಬಿಡೋಣ ನಮ್ಮನ್ನೇ ದೇವರಿಗೆ ಕಾರಣ, ಆತನ ಮಹಿಮೆಯಿದ್ದಂತೆಯೇ ಇರುವುದು ಆತನ ಕೃಪೆ.

Holydivine