Sirach - Chapter 38
Holy Bible

1 : ಅನಾರೋಗ್ಯ – ಔಷಧ ವೈದ್ಯನ ಸೇವೆಗನುಸಾರ ಮರ್ಯಾದೆ ಸಲ್ಲಿಸು ಅವನಿಗೆ ಅವನನ್ನು ಉಂಟು ಮಾಡಿದಾತ ದೇವರೇ.
2 : ಗುಣಪಡಿಸುವ ಶಕ್ತಿ ಬರುವುದು ಮಹೋನ್ನತನಿಂದ ವೈದ್ಯನಿಗೆ ಬಹುಮಾನ ದೊರಕುವುದು ಅರಸನಿಂದ.
3 : ವೈದ್ಯನು ತಲೆಯೆತ್ತುವನು ತನ್ನ ಕೌಶಲ್ಯದ ನಿಮಿತ್ತ ಹಿರಿಯರ ದೃಷ್ಟಿಯಲ್ಲವನು ಕೀರ್ತಿಪಾತ್ರ.
4 : ಸರ್ವೇಶ್ವರ ಔಷಧವನ್ನು ಉತ್ಪನ್ನ ಮಾಡಿದನು ಭೂಮಿಯಿಂದ ಬುದ್ಧಿವಂತನಾರಿಗೂ ಹೇಸಿಗೆಯಾಗುವುದಿಲ್ಲ ಅದರಿಂದ.
5 : ಗಿಡ ಹಾಕಿದ್ದರಿಂದ ನೀರು ಸಿಹಿಯಾಯಿತಲ್ಲಾ ಇದರಿಂದ ಅದರ ಸತ್ವ ತಿಳಿದು ಬಂತಲ್ಲಾ!
6 : ತನ್ನ ಅದ್ಭುತ ಕಾರ್ಯಗಳಿಗಾಗಿ ಮಹಿಮೆಸಲ್ಲುವಂತೆ ದೇವರು ತಿಳುವಳಿಕೆ ದಯಪಾಲಿಸಿದ ಮನುಷ್ಯನಿಗೆ.
7 : ಗಿಡಮೂಲಿಕೆಗಳಿಂದ ಔಷಧಮಾಡುವವನು ತಯಾರಿಸುವನು ಮಿಶ್ರಣವನು ಅದರ ಮೂಲಕ ವಾಸಿ ಮಾಡುವನು ರೋಗವನು, ನೀಗಿಸುವನು ಬೇನೆಯನು. ಹೀಗೆ ದೇವರ ಕೆಲಸಕಾರ್ಯಗಳಿಗೆ ಮುಗಿವೇ ಇಲ್ಲ ಆತನಿಂದಲೇ ಭೂಮಿಯ ಮೇಲೆ ಆರೋಗ್ಯ ದಾನ.
8 : ಗಿಡಮೂಲಿಕೆಗಳಿಂದ ಔಷಧಮಾಡುವವನು ತಯಾರಿಸುವನು ಮಿಶ್ರಣವನು ಅದರ ಮೂಲಕ ವಾಸಿ ಮಾಡುವನು ರೋಗವನು, ನೀಗಿಸುವನು ಬೇನೆಯನು. ಹೀಗೆ ದೇವರ ಕೆಲಸಕಾರ್ಯಗಳಿಗೆ ಮುಗಿವೇ ಇಲ್ಲ ಆತನಿಂದಲೇ ಭೂಮಿಯ ಮೇಲೆ ಆರೋಗ್ಯ ದಾನ.
9 : ಮಗನೇ, ನೀನು ಕಾಯಿಲೆಯಾಗಿರುವಾಗ ಅಲಕ್ಷ್ಯಮಾಡದಿರು ಸರ್ವೇಶ್ವರನನ್ನು ಪ್ರಾರ್ಥಿಸು, ಆತ ನಿನ್ನನು ಗುಣಪಡಿಸುವನು.
10 : ತಪ್ಪು ಮಾಡುವುದನು ಬಿಟ್ಟುಬಿಟ್ಟು, ನಿನ್ನ ಕೈ ಕೆಲಸವನು ಸರಿಪಡಿಸು ಎಲ್ಲಾ ತರದ ಪಾಪಗಳಿಂದ ನಿನ್ನ ಹೃದಯವನು ಶುದ್ಧಗೊಳಿಸು.
11 : ಸುಗಂಧಬಲಿಯನು, ಗೋದಿಹಿಟ್ಟಿನ ನೈವೇದ್ಯವನು ಅರ್ಪಿಸು ನಿನಗೆ ಸಾಧ್ಯವಾದಷ್ಟು ಎಣ್ಣೆಯನು ಅದರ ಮೇಲೆ ಸುರಿಸು.
12 : ಅನಂತರ ತಕ್ಕ ಅವಕಾಶ ನೀಡು ವೈದ್ಯನಿಗೆ ಅವನು ಸೃಷ್ಟಿಯಾದುದು ಸರ್ವೇಶ್ವರನಿಂದಲೇ ಅವನು ನಿನ್ನಿಂದ ಅಗಲದಿರಲಿ; ನಿನಗಿದೆ ಅವನ ಅವಶ್ಯಕತೆ.
13 : ವೈದ್ಯರ ಕೈಯಿಂದ ಗುಣಮುಖನಾಗುವ ಸಂದರ್ಭಗಳಿವೆ.
14 : ಪ್ರಾಣರಕ್ಷೆಗಾಗಿ ಉಪಶಮನವನ್ನೂ ಆರೋಗ್ಯವನ್ನೂ ದಯಪಾಲಿಸುವಂತೆ ಅವರೂ ಪ್ರಾರ್ಥನೆಮಾಡುವರು ಸರ್ವೇಶ್ವರನಿಗೆ.
15 : ಸೃಷ್ಟಿಕರ್ತನಿಗೆ ವಿರುದ್ಧ ಪಾಪಕಟ್ಟಿ ಕೊಳ್ಳುವವನು ವೈದ್ಯರ ಆರೈಕೆಗೆ ಗುರಿಯಾಗುವನು.
16 : ಶೋಕಾಚರಣೆ ಮಗನೇ, ತೀರಿಹೋದವನ ಬಗ್ಗೆ ಕಣ್ಣೀರು ಸುರಿಸು ದುಃಖಾಕ್ರಾಂತನಾಗಿ ಗೋಳಾಟವನ್ನು ಆರಂಭಿಸು ಘನತೆಗೆ ತಕ್ಕಂತೆ ಅವನ ಪಾರ್ಥಿವ ಶರೀರವನ್ನು ಅಲಂಕರಿಸು ಅವನ ಶವಸಂಸ್ಕಾರವನ್ನು ಗೌರವದಿಂದ ನೆರವೇರಿಸು.
17 : ಅತ್ತು ಪ್ರಲಾಪಿಸು: ಗೋಳಾಟ ಮನಃಪೂರ್ವಕವಾಗಿರಲಿ ನಿನ್ನ ಶೋಕಾಚರಣೆ ಮೃತನ ಘನತೆಗೆ ತಕ್ಕಂತಿರಲಿ. ಒಂದೆರಡು ದಿನವಾದರೂ ಅವನ ಬಗ್ಗೆ ಟೀಕೆ ನಿನ್ನ ಬಾಯಿಂದ ಬಾರದಿರಲಿ ಅನಂತರ ನಿನ್ನ ದುಃಖಕ್ಕೆ ಉಪಶಮನ ದೊರಕಲಿ
18 : ಏಕೆಂದರೆ ದುಃಖದಿಂದ ಸಾವು ಬರಬಹುದು ಮನೋವೇದನೆಯಿಂದ ಬಲ ಕುಗ್ಗಿ ಹೋಗಬಹುದು.
19 : ದುಃಖ ನೀಗದು ವ್ಯಕ್ತಿಯು ತೀರಿದ ಬಳಿಕ ಆದರೆ ಮನೋವೇದನೆ ನಡೆಸಬಾರದು ಬಡತನದತ್ತ.
20 : ದುಃಖವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ ಅಂತ್ಯವನ್ನು ನೆನೆಸಿಕೊಂಡು ಅಳಿಸಿಬಿಡದನ್ನು ಮನಸ್ಸಿನಿಂದ.
21 : ಜ್ಞಾಪಕವಿರಲಿ: ಸತ್ತವರು ಹಿಂದಿರುಗಿ ಬರುವಂತಿಲ್ಲ ಅದರಿಂದ ನಿನಗೆ ಹಾನಿಯೇ ಹೊರತು ಸತ್ತವರಿಗೆ ಲಾಭವಿಲ್ಲ.
22 : ಅವನ ಗತಿಯನ್ನು ನೆನಸಿಕೊ; ನಿನ್ನ ಗತಿಯೂ ಅದೇ ನಿನ್ನೆ ಅವನಿಗೆ, ಇಂದು ನಿನಗೆ
23 : ತೀರಿಹೋದವನು ವಿಶ್ರಾಂತಿ ಪಡೆಯುತ್ತಿರುವಾಗ ವಿಶ್ರಮಿಸಲಿ ಅವನ ಸ್ಮರಣೆ ಅವನಿಂದ ಪ್ರಾಣಹೋದಮೇಲೆ ನೀ ತಂದುಕೋ ಸೈರಣೆ.
24 : ಕಾಯಕವೇ ಕೈಲಾಸ ಬಿಡುವಿನ ಸಮಯ ಜ್ಞಾನಾರ್ಜನೆಗೊಂದು ಸದವಕಾಶ ಶಾಸ್ತ್ರಿಗೆ ವ್ಯವಹಾರ ಕಡಿಮೆಯಾದಷ್ಟು ಅನುಕೂಲತೆ ಹೆಚ್ಚು ವಿದ್ಯೆಯ ಗಳಿಕೆಗೆ
25 : ನೇಗಿಲು ಹಿಡಿದು ಚಾಟಿಗೋಲಿನಲ್ಲೇ ಆಸಕ್ತಿವಹಿಸುವವನು, ಎತ್ತುಗಳನ್ನು ಹೊಡೆದು, ಅವುಗಳ ದುಡಿಮೆಯಲ್ಲೇ ಮಗ್ನನಾಗಿರುವವನು, ಹೋರಿಗಳನ್ನು ಸಾಕುವುದರ ಬಗ್ಗೆಯೇ ಮಾತಾಡುವವನು, ಇಂಥವರು ವಿದ್ಯಾವಂತರಾಗುವುದೆಂತು?
26 : ಅವನ ಲಕ್ಷ್ಯ ಹೊಲವನುತ್ತು ಮಣ್ಣು ತಿರುವಿ ಹಾಕುವುದರಲ್ಲಿ ಅವನ ಎಚ್ಚರಿಕೆ ದನಗಳಿಗೆ ಮೇವುಮಿಡಿ ನೀಡುವುದರಲ್ಲಿ
27 : ಅವರಂತೆಯೇ ಎಲ್ಲಾ ಕೆಲಸಗಾರರು, ಕಲಾಕುಶಲರು ಹಗಲಿರುಳೂ ದುಡಿಯುತ್ತಾರೆ ಅವರೆಲ್ಲರು; ಮುದ್ರೆಯುಂಗುರದಲ್ಲಿ ಚಿತ್ರಕೊರೆಯುವ ಅಕ್ಕಸಾಲಿಗನು, ನಾನಾ ಪ್ರಾಕಾರಗಳನ್ನು ರಚಿಸುವುದರಲಿ ಮಗ್ನನಾಗಿರುವ ಕಾರ್ಮಿಕನು, ತನಗೆ ಕೊಡಲಾದ ನಕ್ಷೆಯಂತೆ ಪ್ರತಿಮೆ ಮಾಡುವವನು, ಆಸಕ್ತರಾಗಿರುತ್ತಾರೆ ಇವರೆಲ್ಲರು ತಮ್ಮ ಕೆಲಸವನ್ನು ಮುಗಿಸಲು;
28 : ಅಂತೆಯೇ ಅಡಿಗಲ್ಲಿನೆದುರು ಕುಳಿತಿರುವ ಕಮ್ಮಾರನು, ಗಮನಿಸುತ್ತಿರುವನು ಕಬ್ಬಿಣದ ತುಂಡನ್ನು ಹಿಡಿದು ಅವನ ದೇಹ ಕರಗುತ್ತಿರುವುದು ಕುಲುಮೆಯ ಕಾವಿನಿಂದ ಸೊರಗುತ್ತಿರುವನವನು ಬೆಂಕಿಯ ಝಳದಿಂದ; ಅವನನ್ನು ಕಿವುಡುಗೊಳಿಸುತ್ತಿರುವುದು ಸುತ್ತಿಗೆಯ ಸಪ್ಪಳ ಅವನ ಕಣ್ಣುಗಳನ್ನು ಸೆರೆಹಿಡಿದಿರುವುದು ಪಾತ್ರೆಯ ರೂಪ ಅವನ ಮನಸ್ಸು ಕೆಲಸವನ್ನು ಪೂರ್ತಿಗೊಳಿಸುವುದರಲ್ಲಿ ಅವನ ಗಮನ ಅವುಗಳನು ಸುಂದರಗೊಳಿಸುವುದರಲ್ಲಿ;
29 : ಅಂತೆಯೇ ತಿಗರಿಯನು ತಿರುಗಿಸುತ್ತಿರುವ ಕುಂಬಾರ ಮಡಕೆಗಳನ್ನು ಮಾಡುತ್ತಾ ಕುಳಿತಿರುವನಾತ ಸತತ ಕೆಲಸಮಾಡುವನು ಬಹುಜಾಗ್ರತೆಯಿಂದ ಅವುಗಳನ್ನು ಸರಿಯಾಗಿ ಮಾಡುವನು ಲೆಕ್ಕದ ಪ್ರಕಾರ;
30 : ಇವನು ಮಣ್ಣಿನ ಮುದ್ದೆಗೆ ಆಕಾರ ಕೊಡುವನು ತನ್ನ ಕೈಗಳಿಂದ ಅದನ್ನು ಬಗ್ಗಿಸುವನು ತನ್ನ ಕಾಲುಗಳ ಶಕ್ತಿಯಿಂದ ಮನಸ್ಸಿಟ್ಟು ಒಪ್ಪೆಹಾಕಿ, ಅವಿಗೆಯನ್ನು ಹಸನು ಮಾಡುವನು ಎಚ್ಚರಿಕೆಯಿಂದ;
31 : ಇವರೆಲ್ಲರೂ ನೆಚ್ಚಿಕೊಂಡಿರುವರು ತಮ್ಮ ತಮ್ಮ ಕೈಕೆಲಸಗಳನ್ನೇ ಪ್ರತಿಯೊಬ್ಬನೂ ಕುಶಲನಾಗಿರುವನು ತನ್ನ ತನ್ನ ಕಸಬಿನಲ್ಲೇ;
32 : ಇವರಿಲ್ಲದೆ ಪಟ್ಟಣದ ವಾಸ ಸಾಧ್ಯವಿಲ್ಲ ಜನರು ಅಲ್ಲಿ ಬೀಡು ಬಿಡರು, ಅಲ್ಲಿ ಜನರ ಸುಳಿದಾಟ ಕಾಣುವುದಿಲ್ಲ;
33 : ಹೀಗಿದ್ದರೂ ಕಾಣರಿವರು ಸಭಾಕೂಟಗಳ ಉನ್ನತ ಸ್ಥಾನಗಳಲ್ಲಿ ಕುಳಿತುಕೊಳ್ಳರವರು ನ್ಯಾಯಾಧಿಪತಿಗಳ ಪೀಠಗಳಲ್ಲಿ ತಿಳಿಯಲಾಗದು ಅವರಿಂದ ನ್ಯಾಯನಿರ್ಣಯದ ವಿಧಾನ ಕೊಡಲಾಗದು ಅವರಿಂದ ನೀತಿಬೋಧೆಗಳ ಶಿಕ್ಷಣ ರಚಿಸಲಾಗದು ಅವರಿಂದ ಜ್ಞಾನೋಕ್ತಿಗಳ ವಚನ.
34 : ಹೀಗಿದ್ದರೂ ಇವರ ಕೈಯಲ್ಲಿದೆ ಜಗದ್ರಚನೆಯ ನಕ್ಷೆ ಇವರ ಕೈಕೆಲಸವೇ ಇವರ ಪ್ರಾರ್ಥನೆ !

Holydivine