Sirach - Chapter 40
Holy Bible

1 : ಮಾನವನ ದುರವಸ್ಥೆ ತಾಯಗರ್ಭದಿಂದ ಹೊರಬಂದ ದಿನದಿಂದ, ಭೂಮಾತೆಯಲ್ಲಿ ಅಡಕವಾಗುವ ತನಕ ಆದಾಮನ ಮಕ್ಕಳ ಮೇಲೆ ಇಡಲಾಗಿದೆ ಒಂದು ಭಾರವಾದ ನೊಗ ಪ್ರತಿಮನುಷ್ಯನಿಗಾಗಿ ಉಂಟುಮಾಡಲಾಗಿದೆ ತೀವ್ರವಾದ ಕಷ್ಟಸಂಕಟ.
2 : ಮನಸ್ಸು ಕದಲುತ್ತದೆ ಮುಂಬರುವ ಘಟನೆಗಳ ನಿರೀಕ್ಷೆಯಿಂದ ಮರಣದಿನದ ಭಯದಾಲೋಚನೆಯಿಂದ.
3 : ಮಹಿಮಾಸನದಲಿ ಕುಳಿತಿರುವವನಿಂದ ತನ್ನನ್ನೆ ತಗ್ಗಿಸಿಕೊಂಡು ಬೂದಿಮಣ್ಣಿನಲಿ ಕುಳಿತಿರುವವನ ತನಕ.
4 : ಕೆನ್ನೀಲಿ ವಸ್ತ್ರ ಮುಕುಟಧಾರಿಯಾದವನಿಂದ ನಾರಿನ ನಿಲುವಂಗಿಯನು ಧರಿಸಿರುವವನ ತನಕ ಎಲ್ಲರನ್ನು ಆವರಿಸಿದೆ ಈ ಭಯ
5 : ಕೋಪ, ಹೊಟ್ಟೆಕಿಚ್ಚು, ಅಸಮಾಧಾನ, ತೊಂದರೆತಾಪತ್ರಯಗಳು ಮರಣಭಯ, ಕೋಪ, ಜಗಳ-ಇವೆಲ್ಲವು ಪ್ರಾಪ್ತವಾಗುವುವು. ರಾತ್ರಿಕಾಲದೊಳು, ಹಾಸಿಗೆಯಲ್ಲಿ ಮಲಗಿರುವಾಗಲು ಉದ್ಭವಿಸುವುವು ಹೊಸ ಹೊಸ ಚಿಂತೆ ಪೇಚಾಟಗಳು.
6 : ಅವನಿಗೆ ವಿಶ್ರಾಂತಿಯೇ ಇಲ್ಲ, ಇದ್ದರೂ ಅತ್ಯಲ್ಪವೇ ಅವನ ಮನಸ್ಸಿಗೆ ಕನಸುಗಳಿಂದಲೂ ಕಳವಳವೇ. ನಿದ್ರೆಮಾಡುವಾಗ ಬಾಸವಾಗುವುದು ದಿನದಲಿ ಕಾವಲಿದ್ದಂತೆ ಹಾಗು ಯುದ್ಧದಲ್ಲಿ ತಪ್ಪಿಸಿಕೊಂಡು ಓಡಿಹೋಗುವ ಯೋಧನಂತೆ.
7 : ಬಿಡುಗಡೆಯಾದಂತಾಗುವುದರಲ್ಲೇ ಎಚ್ಚರಗೊಳ್ಳುವನು ಅವನಿಗೇ ಆಶ್ಚರ್ಯ, ಭಯವೆಲ್ಲಾ ಭ್ರಾಂತಿಯೆಂದು !
8 : ಮನುಷ್ಯನಿಂದ ಪಶುಪ್ರಾಣಿಗಳವರೆಗೆ ಸಕಲ ಜೀವಿಗಳಿಗೂ ಇದೇ ಗತಿ ಆದರೆ ಪಾಪಿಗಳಿಗೆ ಏಳರಷ್ಟು ದುರ್ಗತಿ !
9 : ಮರಣ, ರಕ್ತಪಾತ, ಜಗಳ, ಖಡ್ಗ, ಅನಾಹುತ, ಬರ, ಸಂಕಟ, ದಂಡನೆ – ಇವೆಲ್ಲ ಕೆಡುಕರಿಗೆಂದು ನಿರ್ಮಿತ ಜಲಪ್ರಳಯ ಬಂದುದೇ ಇಂಥವರ ದೆಸೆಯಿಂದ.
10 : ಮರಣ, ರಕ್ತಪಾತ, ಜಗಳ, ಖಡ್ಗ, ಅನಾಹುತ, ಬರ, ಸಂಕಟ, ದಂಡನೆ – ಇವೆಲ್ಲ ಕೆಡುಕರಿಗೆಂದು ನಿರ್ಮಿತ ಜಲಪ್ರಳಯ ಬಂದುದೇ ಇಂಥವರ ದೆಸೆಯಿಂದ.
11 : ಮಣ್ಣಿನಿಂದಾದುದೆಲ್ಲ ಹಿಂದಿರುಗಬೇಕು ಮಣ್ಣಿಗೆ ನೀರಿನವುಗಳು ಮರಳಬೇಕು ನೀರಿಗೆ.
12 : ಕೆಡುಕಿನ ಪರಿಣಾಮ ಲಂಚಕೋರತನ, ಅನ್ಯಾಯ-ಇವುಗಳೆಲ್ಲ ಅಳಿದುಹೋಗುವುವು ಎಂದೆಂದಿಗೂ ನೆಲೆಯಾಗಿರುವುದು ಪ್ರಾಮಾಣಿಕತೆಯು.
13 : ಅನ್ಯಾಯಗಾರನ ಆಸ್ತಿ ಬತ್ತಿಹೋಗುವುದು ನದಿಯಂತೆ ಅದೃಶ್ಯವಾಗುವುದು ಮಳೆಯ ಮುಂಚೆ ಬಡಿಯುವ ಸಿಡಿಲಿನಂತೆ.
14 : ಧಾರಾಳವಾಗಿ ನೀಡುವವನು ಹರ್ಷಗೊಳ್ಳುವನು ದುರ್ಜನನು ಸಂಪೂರ್ಣವಾಗಿ ಸೋತು ಹೋಗುವನು.
15 : ಕೊಂಬೆಗಳು ಹೆಚ್ಚಾಗುವುದಿಲ್ಲ ದುರ್ಜನರ ಸಂತತಿಗೆ ಬರಡುಬೇರುಗಳಂತಿರುವರವರು ಬರೀ ಬಂಡೆಯ ಮೇಲೆ.
16 : ಜೊಂಡುಹುಲ್ಲು ನೀರಿನಲ್ಲೇ, ನದಿಯ ದಡದಲ್ಲೇ ಬೆಳೆಯುತ್ತದೆ ಆದರೆ ಎಲ್ಲ ಹುಲ್ಲುಗರಿಕೆಗಿಂತ ಮುಂಚಿತವಾಗಿ ಕೀಳಲ್ಪಡುತ್ತದೆ.
17 : ದಯೆಯು ಭಾಗ್ಯವಾದ ಉದ್ಯಾನವನ ದಾನಧರ್ಮ ಎಂದೆಂದಿಗೂ ಶಾಶ್ವತ.
18 : ಜೀವನದ ಸ್ವಾರಸ್ಯ ದುಡಿವವನ ಹಾಗು ಉಂಡು ತೃಪ್ತನಾಗಿರುವವನ ಜೀವನ ಮಧುರ ನಿಧಿ ಕಂಡುಕೊಂಡವನ ಜೀವನ ಇವೆರಡಕ್ಕಿಂತಲೂ ಉತ್ತಮ.
19 : ಸಂತಾನಪ್ರಾಪ್ತಿಯಿಂದ, ನಗರ ನಿರ್ಮಾಣದಿಂದ ಸ್ಥಿರವಾಗಿಸುವರು ತಮ್ಮ ನಾಮವನು ನಿರ್ದೋಷಿಯಾದ ಮಡದಿಯೋ ಉತ್ತಮ ಇವೆರಡಕ್ಕಿಂತಲು.
20 : ಮಧುಪಾನ ಮತ್ತು ಸಂಗೀತ ಮನಸ್ಸಿಗೆ ಆಹ್ಲಾದಕರ ಜ್ಞಾನ ಪ್ರೇಮ ಇವೆರಡಕ್ಕಿಂತಲು ಉತ್ತಮ.
21 : ಕೊಳಲು ಮತ್ತು ತಂತಿವಾದ್ಯ ಸೂಸುತ್ತವೆ ಇಂಪಾದ ನಾದ ಮಧುರವಾದ ನಾಲಗೆ ಇವೆರಡಕ್ಕಿಂತಲೂ ಮೋದ.
22 : ನಿನ್ನ ಕಣ್ಣು ಆಶಿಸುತ್ತದೆ ಅಂದಚಂದವನು ವಸಂತ ಪಚ್ಚೆ ಇವೆರಡಕ್ಕಿಂತಲೂ ಮೋಜು.
23 : ಸ್ನೇಹಿತನಾಗಲೀ ಗೆಳೆಯನಾಗಲೀ ಸಂಧಿಸುವುದು ಸಂತೋಷಕರ ಗಂಡನೊಂದಿಗೆ ಹೆಂಡತಿಯಿರುವುದು ಇವೆರಡಕ್ಕಿಂತಲೂ ಮಧುರ.
24 : ಸಹೋದರ ಮತ್ತು ಸಹಾಯ ಆಪತ್ಕಾಲಕ್ಕೆ ಹಿತಕರ ಇವೆರಡಕ್ಕಿಂತಲೂ ದಾನಧರ್ಮ ಕ್ಷೇಮಕರ.
25 : ಬೆಳ್ಳಿಬಂಗಾರದಿಂದ ಬಾಳು ಭದ್ರ ಒಳ್ಳೆಯ ಆಲೋಚನೆ ಇವೆರಡಕ್ಕಿಂತಲು ಸುಸ್ಥಿರ.
26 : ಮನಸ್ಸನ್ನು ಮೇಲೆತ್ತುತ್ತವೆ ಐಶ್ವರ್ಯ ಮತ್ತು ಶಕ್ತಿ ಇವೆರಡಕ್ಕಿಂತಲೂ ಮೇಲು ದೇವರಲ್ಲಿ ಭಯಭಕ್ತಿ. ದೇವರ ಭಕ್ತಿಯಲ್ಲಿ ಕೊರತೆಯೆಂಬುದಿಲ್ಲ ಸಹಾಯ ಹುಡುಕುವ ಅವಶ್ಯಕತೆಯಿಲ್ಲ.
27 : ದೇವರಲ್ಲಿ ಭಯಭಕ್ತಿಯು ಭಾಗ್ಯವಾದ ಉದ್ಯಾನವನ ಅದು ಭಕ್ತನನ್ನು ಆವರಿಸುವ ಉತ್ತಮ ಭೂಷಣ.
28 : ಭಿಕ್ಷೆ ಮಗನೇ, ಬೇಡ ನಿನಗೆ ತಿರುಕರ ಬಾಳು ತಿರುಪೆಗಿಂತ ಮರಣವೇ ಲೇಸು.
29 : ಮತ್ತೊಬ್ಬನ ಊಟದ ಮೇಲೆ ಕಣ್ಣಿಡುವವನ ಬಾಳು ಜೀವನವಲ್ಲ ಇಂಥವನ ಮನ ಹೆರವರ ಅನ್ನದಿಂದ ಮಲಿನ. ಆದರೆ ಜ್ಞಾನಿ ಹಾಗು ಸುಶಿಕ್ಷಿತನು ಬದುಕುವನು ಎಚ್ಚರಿಕೆಯಿಂದ.
30 : ನಾಚಿಕೆಯಿಲ್ಲದವನ ಬಾಯಲ್ಲಿ ತಿರುಪೆಯೂ ಸಿಹಿ ಆದರೆ ಅವನ ಒಡಲಲ್ಲೆಲ್ಲಾ ಬೆಂಕಿಯ ಉರಿ.

Holydivine