Sirach - Chapter 26
Holy Bible

1 : ಗುಣವತಿಯಾದ ಹೆಂಡತಿಯನ್ನು ಪಡೆದವನು ಧನ್ಯನು ! ಇಮ್ಮಡಿಯಾಗುವುವು ಅವನ ಬಾಳಿನ ದಿನಗಳು.
2 : ಸದ್ಗುಣಿ ಆನಂದಪಡಿಸುವಳು ತನ್ನ ಗಂಡನನ್ನು ಇಂಥವನು ಸಮಾಧಾನದಿಂದ ಪೂರೈಸುವನು ಬದುಕನ್ನು.
3 : ಒಳ್ಳೆಯ ಹೆಂಡತಿ ಒಂದು ಸೌಭಾಗ್ಯ ಅಂಥವಳು ದೇವರಲ್ಲಿ ಭಯಭಕ್ತಿಯುಳ್ಳವನಿಗೆ ಲಭ್ಯ.
4 : ಅವನು ಬಡವನಿರಲಿ, ಬಲ್ಲಿದನಿರಲಿ ತೃಪ್ತನಾಗಿರುವನು. ಸಕಲ ಸಂದರ್ಭಗಳಲ್ಲಿ ಹಸನ್ಮುಖನಾಗಿರುವನು.
5 : ಮೂರು ವಿಷಯಗಳನ್ನು ಕುರಿತು ಅಳುಕಿತು ನನ್ನ ಹೃದಯ ನಾಲ್ಕನೆಯದನ್ನು ಕುರಿತು, ನನ್ನಲ್ಲುಂಟಾಯಿತು ಭಯ: ನಗರದ ನಿಂದೆ, ಪುಂಡರ ತಂಡ, ಸುಳ್ಳು ಆರೋಪ, ಇವು ಮರಣಕ್ಕಿಂತಲೂ ಭಯಂಕರ!
6 : ಆದರೆ ಇನ್ನೊಬ್ಬಳ ಮೇಲೆ ಹೊಟ್ಟೆಕಿಚ್ಚು ಪಡುವ ಸ್ತ್ರೀಯು ಎಲ್ಲರನ್ನೂ ನಿಂದಿಸುವ ಅವಳ ನಾಲಗೆಯು ಹೃದಯಾಘಾತವನ್ನು, ದುಃಖವನ್ನು ಉಂಟು ಮಾಡುವಂಥವು.
7 : ಕೆಟ್ಟ ಹೆಂಗಸು ಅತ್ತಿತ್ತ ಹೊಯ್ದಾಡುವ ನೊಗವಿದ್ದಂತೆ ಇಂಥವಳನ್ನು ಕಟ್ಟಿಕೊಂಡವನು ಚೇಳನ್ನು ಹಿಡಿದುಕೊಂಡವನಂತೆ.
8 : ಕುಡುಕಳು ಎಂಥವನಲ್ಲೂ ಕಡುಗೋಪ ಎಬ್ಬಿಸುವಳು ಇಂಥವಳು ತನ್ನ ಮಾನವನ್ನು ಸಹ ಮುಚ್ಚಿಕೊಳ್ಳಳು.
9 : ಹೆಣ್ಣಿನ ಸೂಳೆತನ ಕಂಡುಬರುವುದೆಲ್ಲಿ? ಅವಳ ಕಣ್ಣುಹೊಡೆತದಲ್ಲಿ, ರೆಪ್ಪೆಬಡಿತದಲ್ಲಿ.
10 : ಬಿಗಿಬಂಧನದಲ್ಲಿಡು ಮಾನವನ್ನರಿಯದ ಮಗಳನ್ನು ಇಲ್ಲದಿರೆ, ದುರುಪಯೋಗಿಸಿಕೊಂಡಾಳು ಸ್ವಾತಂತ್ರ್ಯವನ್ನು.
11 : ನಾಚಿಕೆಯಿಲ್ಲದ ಅವಳ ಕಣ್ಣಿನ ಬಗ್ಗೆ ಎಚ್ಚರಿಕೆ! ಆಶ್ಚರ್ಯಪಡಬೇಡ ಅದು ನಿನಗೆ ಕೆಡುಕುಮಾಡಿದರೆ.
12 : ನೀರಡಿಕೆಯುಳ್ಳ ದಾರಿಹೋಕನಂತೆ, ಸಿಕ್ಕಿದ ನೀರಿಗೆ ಬಾಯಿ ತೆರೆಯುವಳು ಪ್ರತೀಗೂಟದ ಬಳಿ ಕುಳಿತು, ಬಂದ ಬಾಣಕ್ಕೆ ಬತ್ತಳಿಕೆ ತೆರೆಯುವಳು.
13 : ಗಂಡನನ್ನು ಮೆಚ್ಚಿಸುವುದು ಹೆಂಡತಿಯ ಲಾವಣ್ಯ ಅವಳ ಬುದ್ಧಿವಂತಿಕೆಯಿಂದ ಅವನ ದೇಹಕ್ಕೆ ಮತ್ತಷ್ಟು ಚೈತನ್ಯ.
14 : ಮಿತಿಮಾತಿನ ಸತಿ ದೇವರಿಂದ ಬಂದ ವರವು ಸುಶಿಕ್ಷಿತ ಮನಸ್ಸಿಗೆ ಸಮಾನವಾದುದೊಂದೂ ಇಲ್ಲವು.
15 : ಲಜ್ಷಾಶೀಲ ಸತಿ ಚೆಲುವಿನ ಮೇಲೆ ಚೆಲುವಿದ್ದಂತೆ ಬೆಲೆಯೇ ಕಟ್ಟಲಾಗದು ಆಕೆಯ ಪಾತಿವ್ರತ್ಯಕ್ಕೆ.
16 : ಸರ್ವೇಶ್ವರನ ಉನ್ನತಾಕಾಶದಲ್ಲಿ ಏರುತ್ತಿರುವ ಸೂರ್ಯನೋಪಾದಿ ತನ್ನ ಮನೆತನವನ್ನೆಲ್ಲ ನೋಡಿಕೊಳ್ಳುವ ಸೊಬಗಿನ ಸತಿ.
17 : ಮುಪ್ಪಿನಕಾಲದಲ್ಲಿ ಹೊಳೆಯುವ ಮುಖ ದೀಪಸ್ತಂಭದ ಮೇಲೆ ಬೆಳಗುವ ದೀಪ.
18 : ಸ್ಥಿರಮನಸ್ಸಿನವಳ ಸುಂದರವಾದ ಪಾದ ಬೆಳ್ಳಿಯ ಗದ್ದುಗೆ ಮೇಲಿರಿಸಿದ ಬಂಗಾರದ ಕಂಭ.
19 : ಮಗನೇ, ನಿನ್ನ ಯೌವನದ ಹುರುಪು ಉತ್ಸಾಹವನ್ನು ಕಾಪಾಡು ನಿನ್ನ ಶಕ್ತಿಸಾಮಥ್ರ್ಯವನ್ನು ಅನ್ಯರೊಡನೆ ವ್ಯರ್ಥಮಾಡದಿರು.
20 : ಫಲವತ್ತಾದ ಭೂಮಿಯನ್ನು ಇಡೀ ಬಯಲಿನಲ್ಲಿ ಹುಡುಕು ನಿನ್ನ ಸ್ವಂತ ಬೀಜವನ್ನು ಅಲ್ಲಿ ಬಿತ್ತನೆ ಮಾಡು; ನಿನ್ನ ಬಿತ್ತನೆ ಕಾಳಿನಲಿ ನಂಬಿಕೆಯಿಡು.
21 : ಹೀಗೆ ನಿನ್ನ ಸಂತತಿ ಉತ್ಪನ್ನವಾಗಿ ಬೆಳೆಯುವುದು ತನ್ನ ಸಂತಾನ ಭಾಗ್ಯದಲ್ಲಿ ನಂಬಿಕೆಯಿಟ್ಟು ವೃದ್ಧಿಯಾಗುವುದು.
22 : ವೇಶ್ಯೆಯು ಉಗುಳಿಗಿಂತ ಬೀಳು ಗಂಡನಿರುವವಳು ಕೋಟೆಗಿಂತ ಗಟ್ಟಿಗಳು.
23 : ಅಧರ್ಮಿಯಾದ ಹೆಂಡತಿ ದೈವಾಜ್ಞೆ ಉಲ್ಲಂಘಿಸುವವನ ಗೋಳು ಭಕ್ತಿಯುಳ್ಳವಳಾದರೋ ದೇವರಿಗೆ ಭಯಪಡುವವನ ಮೋಜು.
24 : ನಾಚಿಕೆಯಿಲ್ಲದ ಹೆಂಡತಿಗೆ ನೀಚತನದಲ್ಲೂ ಒಸಗೆ ಶೀಲವತಿಗೆ ತನ್ನ ಗಂಡನ ಮುಂದೆಯೂ ನಾಚಿಕೆ.
25 : ಹಠಮಾರಿಯಾದ ನಾರಿ ನಾಯಿಯಂತೆ ಬೀಳು ಸಭ್ಯಳಾದರೋ ಸರ್ವೇಶ್ವರನಿಗೆ ಅಂಜುವಳು.
26 : ಗಂಡನನ್ನು ಗೌರವಿಸುವ ಹೆಂಡತಿಯನ್ನು ಜ್ಞಾನಿಯೆನ್ನುವರು ಗಂಡನನ್ನು ಗರ್ವದಿಂದ ಕಾಣುವವಳನ್ನು ಅಧರ್ಮಿಯೆಂದು ಕರೆವರು. ಗುಣವತಿಯಾದ ಹೆಂಡತಿಯನ್ನು ಪಡೆದವನು ಧನ್ಯನು !
27 : ವಾಚಾಳಿ ಹೆಂಡತಿಯ ದೊಡ್ಡ ನಾಲಿಗೆ ಶತ್ರುಗಳನ್ನೆಚ್ಚರಿಸುವ ಯುದ್ಧ ಕಹಳೆ ಇಂಥವಳನ್ನು ಕಟ್ಟಿಕೊಂಡಿರುವವನ ಜೀವನ ಕಲಹಕ್ರಾಂತಿಗೆ ಸಮಾನ.
28 : ನೊಂದಿದೆ ನನ್ನ ಮನಸ್ಸು ಎರಡು ವಿಷಯಗಳನು ಕುರಿತು; ನನಗೆ ಸಿಟ್ಟು ತರಿಸುತ್ತದೆ ಮೂರನೆಯದು: ಬಡತನದಲಿ ಬಳಲುತ್ತಿರುವ ಬಂಟನು ಕಸಕ್ಕೆ ಸಮಾನವಾಗಿ ಎಣಿಸಲಾದ ಜ್ಞಾನಿಯು ಪಾಪಮಾರ್ಗಕೆ ತಿರುಗುವ ಸಜ್ಜನನು ದೇವರು ಕತ್ತಿಗಾಗಿ ಸಿದ್ಧಗೊಳಿಸುವರು ಇಂಥವನನ್ನು.
29 : ವ್ಯಾಪಾರ ತಪ್ಪು ಮಾಡದಿರುವ ವ್ಯಾಪಾರಿ ಅಪರೂಪ ಪಾಪದಿಂದ ಮುಕ್ತನಲ್ಲ ಕಿರುಕುಳ ಕೊಡುವ ವರ್ತಕ.

Holydivine