Sirach - Chapter 41
Holy Bible

1 : ಮರಣ ತನ್ನ ಆಸ್ತಿಪಾಸ್ತಿಯಲ್ಲಿ ನಿಶ್ಚಿಂತೆ ಯಿಂದಿರುವವನಿಗೆ ತಳಮಳವಿಲ್ಲದೆ ಎಲ್ಲದರಲ್ಲು ಸಮೃದ್ಧವಾಗಿರುವವರಿಗೆ ಇನ್ನೂ ತಿಂದು ಕುಡಿಯಲು ಆಸಕ್ತಿಯುಳ್ಳವನಿಗೆ ಮರಣವೇ, ನೆನೆಯಲು ನೀನೆಷ್ಟು ಕಹಿಯಾಗಿರುವೆ !
2 : ಆದರೆ ಮರಣವೇ, ನಿನ್ನಾಗಮನದ ತೀರ್ಪು ಸುಸ್ವಾಗತವೇ: ಗತಿಹೀನರಿಗೆ, ಬಲಗುಂದಿದವರಿಗೆ, ವೃದ್ಧರಿಗೆ, ಎಲ್ಲದರಲು ತೊಂದರೆ ತಾಪತ್ರಯಗಳಿಗೆ ಈಡಾಗಿರುವವರಿಗೆ, ತೀವ್ರ ಅಸಮಾಧಾನದಿಂದಿರುವವರಿಗೆ ತಾಳ್ಮೆಗೆಟ್ಟವರಿಗೆ.
3 : ಮರಣತೀರ್ಪಿಗೆ ನೀನು ಹೆದರದಿರು ನಿನ್ನ ಹಿಂದೆ ಬಂದವರನು, ಮುಂದೆ ಬರಲಿರುವವರನು ಗಮನಿಸು.
4 : ಎಲ್ಲಾ ಜೀವಿಗಳಿಗೆ ಸರ್ವೇಶ್ವರನಿತ್ತಿರುವ ತೀರ್ಪು ಅದು ಅದನ್ನು ನೀನು ನಿರಾಕರಿಸುವುದೆಂತು? ವರ್ಷಹತ್ತಾಗಲಿ, ನೂರಾಗಲಿ, ಸಾವಿರವಾಗಲಿ ನಿನ್ನ ಜೀವನದಾ ವಿಚಾರವೇ ಇರದು ಪಾತಾಳದಲಿ.
5 : ಪಾಪಾತ್ಮರ ಸಂತತಿ ಪಾಪಾತ್ಮರ ಮಕ್ಕಳು ಹೇಸತಕ್ಕವರು ಅವರು ದುರ್ಜನರ ಸಹವಾಸದಲ್ಲೇ ಬೆಳೆದವರು.
6 : ಪಾಪಾತ್ಮರ ಮಕ್ಕಳ ಆಸ್ತಿ ಹಾಳಾಗುವುದು ಅವರ ಪೀಳಿಗೆ ಯಾವಾಗಲು ಅವಮಾನಕ್ಕೆ ಗುರಿಯಾಗುವುದು.
7 : ಅಧರ್ಮಿಯಾದ ತಂದೆಯನ್ನು ಮಕ್ಕಳು ದೂಷಿಸುವಂಥವರೇ ಏಕೆಂದರೆ ಅವರು ಅವಮಾನ ಸಹಿಸಬೇಕಾಗುವುದು ಅವನಿಂದಲೇ.
8 : ಮಹೋನ್ನತ ದೇವರ ಧರ್ಮಶಾಸ್ತ್ರವನ್ನು ತ್ಯಜಿಸಿದ ದುರ್ಜನರೇ, ಅಯ್ಯೋ, ಧಿಕ್ಕಾರ ನಿಮಗೆ !
9 : ನೀವು ಹುಟ್ಟಿದರೆ ಶಾಪಕ್ಕಾಗಿ ಹುಟ್ಟುತ್ತೀರಿ ಸತ್ತರೆ ಪಾಪದ ಪಾಲಿಗಾಗಿ ಸಾಯುತ್ತೀರಿ.
10 : ಮಣ್ಣಿನಿಂದಾದ ವಸ್ತುಗಳು ತಿರುಗಿ ಸೇರುವುವು ಮಣ್ಣಿಗೆ ಅದರಂತೆಯೇ ದುರ್ಜನರು ಶಾಪದಿಂದ ಸೇರುವರು ನಾಶನಕ್ಕೆ.
11 : ಜನರ ಗೋಳಾಟ ಅವರ ದೇಹಕ್ಕಾಗಿ ಪಾಪಾತ್ಮರ ಹೆಸರು ಹೋಗುವುದು ಕಣ್ಮರೆಯಾಗಿ.
12 : ಒಳ್ಳೆಯ ಹೆಸರು ಲಕ್ಷ್ಯವಿರಲಿ ನಿನ್ನ ಹೆಸರಿನತ್ತ ! ಬಂಗಾರದ ಸಾವಿರಗಟ್ಟಿಗಳಿಗಿಂತ ಅದು ನೆಲೆಯಾಗಿ ಮುಂದುವರೆವುದು ಹೆಚ್ಚುಕಾಲ.
13 : ಒಳ್ಳೆಯ ಬಾಳಿನ ದಿನಗಳು ಎಣಿಕೆಯಾಗುವುವು ಆದರೆ ಒಳ್ಳೆಯ ಹೆಸರು ಶಾಶ್ವತವಾಗಿರುವುದು.
14 : ನಾಚಿಕೆ ಮಕ್ಕಳೇ, ಶಿಕ್ಷಣವನ್ನು ಕಾಪಾಡಿಕೊಳ್ಳಿ ಶಾಂತಿಯಿಂದ ಏನು ಲಾಭ ಅಡಗಿಸಿಟ್ಟ ಜ್ಞಾನದಿಂದ, ಹುದುಗಿರುವ ನಿಧಿಯಿಂದ?
15 : ತನ್ನ ಜ್ಞಾನವನು ಮುಚ್ಚಿಟ್ಟುಕೊಳ್ಳುವವನಿಗಿಂತಲೂ ತನ್ನ ಅಜ್ಞಾನವನು ಮುಚ್ಚಿಟ್ಟುಕೊಳ್ಳುವವನೇ ಮೇಲು.
16 : ಆದುದರಿಂದ ನನ್ನ ಮಾತಿಗೆ ಮನ್ನಣೆ ಕೊಡಬಲ್ಲಿರಾ? ಎಲ್ಲಾ ಬಗೆಯ ನಾಚಿಕೆಯನ್ನು ಅಡಗಿಸಿಡುವುದು ಒಳಿತಲ್ಲ: ನಿಜವಾಗಿ ಎಲ್ಲಾ ಸಂಗತಿಗಳು ಎಲ್ಲರಿಗೂ ಸಮ್ಮತವಾಗಿರುವುದಿಲ್ಲ.
17 : ನಾಚಿಕೆಪಡು, ಕೆಟ್ಟನಡತೆಗಾಗಿ ತಂದೆತಾಯಿಗಳ ಮುಂದೆ ಆಡಿದ ಸುಳ್ಳಿಗಾಗಿ ಅರಸನ ಹಾಗು ಮಹಾತ್ಮರ ಮುಂದೆ;
18 : ಮಾಡಿದ ತಪ್ಪಿಗಾಗಿ ನ್ಯಾಯಾಧಿಪತಿಯ ಹಾಗು ಅಧಿಕಾರಿಗಳ ಮುಂದೆ ಎಸಗಿದ ಅಧರ್ಮಕ್ಕಾಗಿ ದೇವಸಭೆಯ ಹಾಗು ಜನಕೂಟದ ಮುಂದೆ.
19 : ನಾಚಿಕೆಪಡು, ಅನ್ಯಾಯದ ವ್ಯವಹಾರಕ್ಕಾಗಿ ಪಾಲುಗಾರನ ಹಾಗು ಸ್ನೇಹಿತನ ಮುಂದೆ.
20 : ನಾಚಿಕೆಪಡು ಕಳ್ಳತನಕ್ಕಾಗಿ ನೀನು ವಾಸಿಸುವ ಸ್ಥಳದ ಹಾಗು ಸತ್ಯ ಒಡಂಬಡಿಕೆಯ ನಿಮಿತ್ತ. ನಾಚಿಕೆಪಡು ಊಟಕ್ಕೆ ಕುಳಿತಿರುವಾಗ ಮೊಳಕ್ಕೆ ಮೇಲೆ ಆತುಕೊಂಡುದಕ್ಕಾಗಿ.
21 : ನಾಚಿಕೆಪಡು ಕೊಡುವ ಮತ್ತು ಕೊಳ್ಳುವ ವಿಷಯದಲ್ಲಿ ಮಾಡಿದ ಬಂಡತನಕ್ಕಾಗಿ. ವಂದಿಸಬೇಕಾದವರ ಮುಂದೆ ಮೌನತಾಳಿದುದಕ್ಕಾಗಿ.
22 : ನಾಚಿಕೆಪಡು ಸೂಳೆಯರ ಕಡೆಗೆ ದೃಷ್ಟಿ ಹಾಯಿಸಿದ್ದಕ್ಕಾಗಿ. ನಿನ್ನ ಬಳಗದವನಿಂದ ಮುಖತಪ್ಪಿಸಿಕೊಂಡುದಕ್ಕಾಗಿ.
23 : ನಾಚಿಕೆಪಡು, ನೆರೆಯವರ ಕಾಣಿಕೆಯನ್ನಾಗಲಿ, ಅದರ ಭಾಗವನ್ನಾಗಲೀ ತೆಗೆದಿಟ್ಟದ್ದಕ್ಕಾಗಿ. ಮದುವೆಯಾದ ಸ್ತ್ರೀಯನ್ನು ದಿಟ್ಟಿಸಿ ನೋಡಿದ್ದಕ್ಕಾಗಿ.
24 : ನಾಚಿಕೆಪಡು, ಒಬ್ಬನ ದಾಸಿಯೊಂದಿಗೆ ಸಹವಾಸ ಮಾಡಿದ್ದಕ್ಕಾಗಿ, ಸ್ನೇಹಿತರನ್ನು ಬಯ್ದು ಹಂಗಿಸಿದ್ದಕ್ಕಾಗಿ. ಒಬ್ಬನ ದಾಸಿಯ ಹಾಸಿಗೆಯ ಬಳಿ ಸುಳಿಯಬೇಡ ಸ್ನೇಹಿತನಿಗೆ ಕೊಟ್ಟ ಮೇಲೆ ಹಂಗಿಸಬೇಡ.
25 : ನಾಚಿಕೆಪಡು, ಒಬ್ಬನ ದಾಸಿಯೊಂದಿಗೆ ಸಹವಾಸ ಮಾಡಿದ್ದಕ್ಕಾಗಿ, ಸ್ನೇಹಿತರನ್ನು ಬಯ್ದು ಹಂಗಿಸಿದ್ದಕ್ಕಾಗಿ. ಒಬ್ಬನ ದಾಸಿಯ ಹಾಸಿಗೆಯ ಬಳಿ ಸುಳಿಯಬೇಡ ಸ್ನೇಹಿತನಿಗೆ ಕೊಟ್ಟ ಮೇಲೆ ಹಂಗಿಸಬೇಡ.
26 : ನಾಚಿಕೆಪಡು, ಕಿವಿಯಿಂದ ಕೇಳಿದ್ದನು, ಬಾಯಿಂದ ಹೇಳಿದ್ದಕ್ಕಾಗಿ ಗುಟ್ಟನು ರಟ್ಟು ಮಾಡಿದ್ದಕ್ಕಾಗಿ.
27 : ನಿಜವಾಗಿಯೂ ಲಜ್ಜಾವಂತನಾಗಿರುವೆ ಹೀಗೆ ನಡೆದಲ್ಲಿ ಆಗ ನಿನಗೆ ಕರುಣೆ ದೊರಕುವುದು ಎಲ್ಲರ ದೃಷ್ಟಿಯಲ್ಲಿ.

Holydivine