Isaiah - Chapter 9
Holy Bible

1 : ಆದರೂ ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಆ ನಾಡಿಗೆ ಇನ್ನು ಮುಂದೆ ಕತ್ತಲಿರುವುದಿಲ್ಲ. ಒಮ್ಮೆ ಜೆಬುಲೋನ್ ಮತ್ತು ನಪ್ತಾಲಿಯ ಗೋತ್ರಗಳಿಗೆ ಬೀಡಾಗಿದ್ದ ಆ ಪ್ರಾಂತ್ಯವು ಅವಮಾನಕ್ಕೆ ಗುರಿಯಾಗಿತ್ತು. ಆದರೆ ಇನ್ನು ಮುಂದೆ ಅದಕ್ಕೆ ಘನತೆಗೌರವ ಬರುವುದು: ಸಮುದ್ರದ ಹಾದಿಯಿಂದ ಹಿಡಿದು ಜೋರ್ಡನಿನ ಆಚೆಯಲ್ಲಿ ಇರುವ ಪ್ರಾಂತ್ಯದವರೆಗೆ ಮಾತ್ರವಲ್ಲ, ಅನ್ಯಜನರು ಇರುವ ಗಲಿಲೇಯ ಪ್ರಾಂತ್ಯದವರೆಗೂ ಘನತೆಗೌರವ ಬಂದೊದಗುವುದು.
2 : ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಡಿಗರಿಗೆ.
3 : ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.
4 : ಮುರಿದುಹಾಕಿದೆ ಭಾರವಾದ ಅವರ ನೊಗವನು ಅವರ ಬೆನ್ನನ್ನು ಬಡಿದ ಬೆತ್ತವನು ದಬ್ಬಾಳಿಕೆ ನಡೆಸಿದವರ ದೊಣ್ಣೆಯನು; ಮಿದ್ಯಾನನ್ನು ಗೆದ್ದ ದಿನದಂದು ಹಾಗೆಯೆ ಮಾಡಿದೆಯಲ್ಲವೆ ನೀನು?
5 : ಅಗ್ನಿಕುಂಡಕ್ಕೆ ಆಹುತಿಯಾಗುವುವು ಯುದ್ಧಕ್ಕೆ ಬಂದ ಯೋಧರ ಪಾದರಕ್ಷೆಗಳು ರಕ್ತಸಿಕ್ತವಾದವರ ದೇಹದ ಕವಚಗಳು.
6 : ಮಗುವೊಂದು ಹುಟ್ಟಿತೆಮಗೆ ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ ‘ಅದ್ಭುತಶಾಲಿ’, ‘ಮಂತ್ರಿಶ್ರೇಷ್ಠ’ ‘ಪರಾಕ್ರಮದೇವ’, ‘ಅನಂತ ಪಿತ’ ‘ಶಾಂತಿ ನೃಪ’ - ಇವು ಆತನ ನಾಮಾಂಕಿತ.
7 : ಅಂತ್ಯವಿರದಾತನ ರಾಜ್ಯಾಭಿವೃದ್ಧಿಗೆ ಕೊನೆಯಿರದಾ ರಾಜ್ಯದ ಶಾಂತಿಗೆ. ಆಸೀನನಾಗುವನಾತ ದಾವೀದನ ಸಿಂಹಾಸನದ ಮೇಲೆ ಅಧಿಕಾರ ನಡೆಸುವನು ಆ ಸಾಮ್ರಾಜ್ಯದ ಮೇಲೆ. ಬಲಪಡಿಸುವನು ನ್ಯಾಯ ನೀತಿಯಿಂದದನು ಇಂದಿಗೂ ಎಂದೆಂದಿಗೂ ಸ್ಥಿರಪಡಿಸುವನದನು. ಸರ್ವಶಕ್ತಸ್ವಾಮಿಯ ಆಗ್ರಹವೆ ಸಾಧಿಸುವುದದನು.
8 : ಯಕೋಬ ಕುಲದವರಿಗೆ ಶಾಪದ ಸಂದೇಶ ಒಂದನ್ನು ಸರ್ವೇಶ್ವರ ಕಳುಹಿಸಿರುವರು. ಅದು ಇಸ್ರಯೇಲರ ಮೇಲೆ ಎರಗುವುದು.
9 : “ಇಟ್ಟಿಗೆಗಳು ಬಿದ್ದುಹೋಗಿವೆ. ಕೆತ್ತನೆ ಕಲ್ಲುಗಳಿಂದ ಮರಳಿ ಕಟ್ಟುವೆವು. ಕಡಿದಿರುವರು ಅತ್ತಿಮರಗಳನ್ನು, ಅಲ್ಲೇ ನೆಡುವೆವು ದೇವದಾರು ವೃಕ್ಷಗಳನ್ನು,” ಎಂದು ಗರ್ವದಿಂದ ಕೊಚ್ಚಿಕೊಳ್ಳುವ
10 : ಎಫ್ರಯಿಮ್ ಜನರಿಗೂ ಸಮಾರ್ಯದ ನಿವಾಸಿಗಳಿಗೂ ಅದು ಗೊತ್ತಾಗುವುದು.
11 : ಸ್ವಾಮಿಯು ರೆಚೀನನ ಶತ್ರುಗಳನ್ನು ಅವರ ವಿರುದ್ಧವಾಗಿ ಎತ್ತಿಕಟ್ಟಿರುವರು. ಅವರ ಮುಂದೆ ಸೀರಿಯರನ್ನು, ಅವರ ಹಿಂದೆ ಫಿಲಿಷ್ಠಿಯರನ್ನು -ಹೀಗೆ ಎಲ್ಲಾ ಶತ್ರುಗಳನ್ನು ಎಬ್ಬಿಸಿರುವರು.
12 : ಇವರು ಇಸ್ರಯೇಲರನ್ನು ನುಂಗಿಬಿಡಲು ಬಾಯಿ ತೆರೆದಿದ್ದಾರೆ. ಇಷ್ಟಾದರೂ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
13 : ಆದರೂ ತಮ್ಮನ್ನು ಶಿಕ್ಷಿಸಿದ ದೇವರಿಗೆ ಇಸ್ರಯೇಲರು ಅಭಿಮುಖರಾಗಲಿಲ್ಲ. ಸೇನಾಧೀಶ್ವರಸ್ವಾಮಿಯನ್ನು ಅರಸಲಿಲ್ಲ.
14 : ಆದಕಾರಣ, ಇಸ್ರಯೇಲಿನ ತಲೆಬಾಲಗಳನ್ನೂ ತುದಿಬುಡವನ್ನೂ ಹುಲ್ಲಿನಂತೆ ಸ್ವಾಮಿ ಒಂದೇ ದಿನದಲ್ಲಿ ಕಡಿದು ಬಿಡುವರು;
15 : ಅಂದರೆ ಸನ್ಮಾನ್ಯ ಹಿರಿಯರನ್ನು, ಸುಳ್ಳುಬೋಧನೆ ಮಾಡುವ ಪ್ರವಾದಿಗಳನ್ನು ಸಂಹರಿಸಿಬಿಡುವರು.
16 : ಈ ಜನರನ್ನು ನಡೆಸುವವರು ತಪ್ಪುದಾರಿಗೆ ಎಳೆಯುವಂಥವರು. ಅವರನ್ನು ಹಿಂಬಾಲಿಸುವವರೆಲ್ಲ ನಾಶವಾಗುವರು.
17 : ಎಂದೇ ಅವರ ಯುವಕ ಯುವತಿಯರ ಬಗ್ಗೆ ಸ್ವಾಮಿಗೆ ಸಂತೋಷವಿಲ್ಲ; ಅವರ ಅನಾಥರ ಮತ್ತು ವಿಧವೆಯರ ಬಗ್ಗೆ ಸಹಾನುಭೂತಿಯಿಲ್ಲ. ಪ್ರತಿಯೊಬ್ಬನೂ ಧರ್ಮಭ್ರಷ್ಟನೂ ಅತಿ ದುಷ್ಟನೂ ಆಗಿದ್ದಾನೆ. ಪ್ರತಿಯೊಬ್ಬನ ಬಾಯಿ ನುಡಿಯುವುದು ಕೆಡುಕನ್ನೇ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
18 : ದುಷ್ಟತನ ಬೆಂಕಿಗೆ ಸಮಾನ. ಅದು ಮುಳ್ಳು ಗಿಳ್ಳುಗಳನ್ನು ಸುಟ್ಟುಹಾಕುತ್ತದೆ. ಕಾಡುಪೊದೆ ಗಳನ್ನು ಭಸ್ಮಮಾಡುತ್ತದೆ. ಹೊಗೆಯಾಡುತ್ತಾ ಮುಗಿಲಂತೆ ಮೇಲೆ ಬೀಳುತ್ತದೆ.
19 : ಸೇನಾಧೀಶ್ವರ ಸ್ವಾಮಿಯ ಕೋಪಾಗ್ನಿಯಿಂದ ನಾಡು ಸುಟ್ಟುಹೋಗಿದೆ. ಪ್ರಜೆಗಳು ಅಗ್ನಿಗೆ ಆಹುತಿಯಾಗಿದ್ದಾರೆ. ಅಣ್ಣನಿಗೆ ತಮ್ಮನ ಮೇಲೆ ದಯೆ ಇಲ್ಲದಾಗಿದೆ.
20 : ಅತ್ತ ಕಿತ್ತು ತಿಂದರೂ ಅವರಿಗೆ ತೃಪ್ತಿಯಿಲ್ಲ. ಇತ್ತ ಕುಡಿದು ಕಬಳಿಸಿದರೂ ಅವರ ಹಸಿವು ನೀಗುವುದಿಲ್ಲ. ಒಬ್ಬೊಬ್ಬನೂ ತನ್ನ ಕಂದನನ್ನೇ ಕೊಂದು ತಿನ್ನುತ್ತಾನೆ.
21 : ಮನಸ್ಸೆ ಎಫ್ರಯಿಮನ್ನು ಎಫ್ರಯಿಮ್ ಮನಸ್ಸೆಯನ್ನು ಕಬಳಿಸುತ್ತದೆ. ಇವೆರಡೂ ಸೇರಿ ಜುದೇಯಕ್ಕೆ ವಿರುದ್ಧವಾಗಿ ಎದ್ದು ನಿಂತಿವೆ. ಇಷ್ಟಾದರೂ ಸಹ ಸ್ವಾಮಿಯ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.

Holydivine