Isaiah - Chapter 34
Holy Bible

1 : ರಾಷ್ಟ್ರಗಳೇ, ಬನ್ನಿ, ಹತ್ತಿರಕ್ಕೆ ಬಂದು ಕೇಳಿರಿ; ಜನಾಂಗಗಳೇ, ಕಿವಿಗೊಡಿರಿ; ಜಗವೂ ಅದರಲ್ಲಿರುವ ಸಮಸ್ತವೂ, ಲೋಕವೂ ಅದರ ನಿವಾಸಿಗಳೆಲ್ಲರೂ ಆಲಿಸಲಿ.
2 : ಸರ್ವೇಶ್ವರ ಸ್ವಾಮಿ ಸಕಲ ರಾಷ್ಟ್ರಗಳ ಮೇಲೆ ಕೋಪಗೊಂಡಿದ್ದಾರೆ – ಅವುಗಳ ಸೈನ್ಯಗಳ ಮೇಲೆ ರೋಷಗೊಂಡಿದ್ದಾರೆ. ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ಸಂಹರಿಸಲು ನಿಶ್ಚಯಿಸಿದ್ದಾರೆ.
3 : ಅವರಲ್ಲಿ ಹತರಾದವರು ಬೀದಿ ಪಾಲಾಗುವರು, ಅವರ ಶವಗಳಿಂದ ದುರ್ವಾಸನೆಯು ಬಡಿಯುವುದು. ಅವರ ರಕ್ತಪ್ರವಾಹವು ಗುಡ್ಡಗಳನ್ನು ತೋಯಿಸುವುದು.
4 : ಗಗನದ ನಕ್ಷತ್ರವ್ಯೂಹವು ಕ್ಷಯಿಸುವುದು, ಆಕಾಶಮಂಡಲವು ಸುರುಳಿಯಂತೆ ಸುತ್ತಿಕೊಳ್ಳುವುದು. ದ್ರಾಕ್ಷಿಯ ಎಲೆಗಳು ಒಣಗಿಬೀಳುವಂತೆ, ಅಂಜೂರದ ತರಗುಗಳು ಉದುರುವಂತೆ ತಾರಾಮಂಡಲವೆಲ್ಲ ಕಳಚಿ ಬೀಳುವುದು.
5 : ಆಕಾಶದಲ್ಲಿ ನನ್ನ ಖಡ್ಗವು ಆವೇಶದಿಂದ ಕಾರ್ಯಮಾಡಿದೆ. ಇಗೋ, ನಾನು ಶಪಿಸಿದ ಎದೋಮ್ ಎಂಬ ಜನಾಂಗದ ಮೇಲೆ ನ್ಯಾಯ ತೀರಿಸಲು ಅದು ಎರಗಲಿದೆ.
6 : ಸರ್ವೇಶ್ವರ ಸ್ವಾಮಿಯ ಖಡ್ಗವು ರಕ್ತಮಯವಾಗಿದೆ; ಅದು ಕೊಬ್ಬಿನಿಂದಲೂ ಕುರಿಹೋತಗಳ ರಕ್ತದಿಂದಲೂ ಟಗರುಗಳ ಮೂತ್ರಪಿಂಡಗಳ ವಪೆಯಿಂದಲೂ ತುಂಬಿದೆ; ಸರ್ವೇಶ್ವರ ಬೊಚ್ರದಲ್ಲಿ ಈ ಬಲಿಯನ್ನೂ ಎದೋಮಿನಲ್ಲಿ ಈ ದೊಡ್ಡ ಸಂಹಾರವನ್ನೂ ಮಾಡಬೇಕೆಂದಿದ್ದಾರೆ.
7 : ಕಾಡುಕೋಣಗಳಂತೆ, ಹೋರಿಗೂಳಿಗಳಂತೆ, ಈ ಯಜ್ಞಪಶುಗಳು ಬೀಳುವುವು; ನಾಡು ರಕ್ತದಿಂದ ತೊಯಿದಿರುವುದು, ಅಲ್ಲಿನ ದೂಳು ಕೊಬ್ಬಿನಿಂದ ಜಿಡ್ಡಾಗಿರುವುದು.
8 : ಏಕೆಂದರೆ ಸರ್ವೇಶ್ವರ ಮುಯ್ಯಿತೀರಿಸುವ ದಿನವು ಬಂದಿದೆ. ಸಿಯೋನಿಗೆ ನ್ಯಾಯ ದೊರಕಿಸಿ ಎದೋಮಿಗೆ ದಂಡನೆ ವಿಧಿಸುವ ವರ್ಷವು ಒದಗಿದೆ.
9 : ಎದೋಮಿನ ತೊರೆಗಳು ಡಾಂಬರಾಗಿ ಹರಿಯುವುವು. ಅದರ ಮಣ್ಣು ಗಂಧಕವಾಗುವುದು, ನಾಡೆಲ್ಲಾ ಉರಿಯುವ ಡಾಂಬರಿನಂತೆ ಇರುವುದು.
10 : ಅದು ಹಗಲಿರುಳು ಆರದೆ ಉರಿಯುವುದು. ಅದರ ಹೊಗೆ ನಿರಂತರವಾಗಿ ಏರುತ್ತಿರುವುದು. ನಾಡು ತಲತಲಾಂತರಕ್ಕೂ ಹಾಳು ಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದು ಹೋಗರು.
11 : ಅದು ಹದ್ದುಗಳ, ಮುಳ್ಳುಹಂದಿಗಳ ಸ್ವಾಧೀನವಾಗುವುದು. ಕಾಗೆ ಗೂಗೆಗಳಿಗೆ ಅದು ಗೂಡಾಗುವುದು. ಸರ್ವೇಶ್ವರ ಹಾಳುಪಾಳನ್ನೇ ಅದರ ಅಳತೆಗೋಲನ್ನಾಗಿಯೂ ಅಸ್ತವ್ಯಸ್ತತೆಯನ್ನೇ ಅದರ ಮಟ್ಟಗೋಲನ್ನಾಗಿಯೂ ಮಾಡುವರು.
12 : ಅಲ್ಲಿ ಪಟ್ಟಕ್ಕೆ ಪ್ರಮುಖರಾರೂ ಸಿಕ್ಕರು, ನಾಡಿಗೆ ಒಡೆಯರಾರೂ ಇಲ್ಲದಾಗುವರು.
13 : ಅಲ್ಲಿನ ಅರಮನೆಗಳಲ್ಲಿ ಕಳ್ಳಬಳ್ಳಿಗಳೂ ಕೋಟೆಗಳಲ್ಲಿ ಮುಳ್ಳುಗಿಳ್ಳುಗಳೂ ಹಬ್ಬಿಕೊಳ್ಳುವುವು. ಅದು ಮರಿಗಳಿಗೆ ಗುಹೆಯಾಗಿಯೂ ಗೂಬೆಗಳಿಗೆ ಗೂಡಾಗಿಯೂ ಇರುವುದು.
14 : ಕಾಡುನಾಯಿಗಳೂ ತೋಳಗಳೂ ಅಲ್ಲಿ ಸೇರುವುವು; ಕಾಡುಮೇಕೆ ತನ್ನ ಜೊತೆ ಮೇಕೆಯನ್ನು ಕರೆದು ಕೂಗುವುದು; ಭೂತ ಪ್ರೇತಗಳು ಅಲ್ಲಿ ಹಾಯಾಗಿ ವಾಸಮಾಡುವುವು.
15 : ಹಾರುವ ಹಾವು ಅಲ್ಲಿ ಗೂಡು ಮಾಡಿಕೊಂಡು, ಮೊಟ್ಟೆಯಿಕ್ಕಿ ಮರಿಮಾಡಿ, ರೆಕ್ಕೆಗಳ ಅಡಿಯಲ್ಲಿ ಅವುಗಳನ್ನು ಕೂಡಿಸಿಕೊಳ್ಳುವುದು. ರಣಹದ್ದುಗಳು ಅಲ್ಲಿ ಜೋಡಿಜೋಡಿಯಾಗಿ ಸೇರಿಕೊಳ್ಳುವುವು.
16 : ಸರ್ವೇಶ್ವರಸ್ವಾಮಿಯ ಗ್ರಂಥದಲ್ಲಿ ಬರೆದಿರುವುದನ್ನು ಹುಡುಕಿ ಓದಿರಿ. ಆ ಸೃಷ್ಟಿಗಳಲ್ಲಿ ಯಾವುದೂ ಇಲ್ಲದಿರದು. ಎಲ್ಲವು ಜೊತೆಜೊತೆಯಾಗಿ ಇರುವುವು. ಸ್ವಾಮಿಯ ಬಾಯಿಂದ ಅಪ್ಪಣೆ ಆಯಿತು, ಅವರ ಆತ್ಮವು ಅವುಗಳನ್ನು ಒಟ್ಟಿಗೆ ಬರಮಾಡಿತು
17 : ಅವರೇ, ಇವುಗಳಿಗೆ ಹಂಚಿಕೊಟ್ಟಿದ್ದಾರೆ, ಅವರ ಕೈಯೇ ನೂಲುಹಿಡಿದು ನಾಡನ್ನು ಇವುಗಳಿಗೆ ವಿಭಾಗ ಮಾಡಿದೆ; ಅದು ಇವುಗಳಿಗೆ ಶಾಶ್ವತ ಸೊತ್ತಾಗುವುದು, ತಲತಲಾಂತರಕ್ಕೂ ಅವು ಅಲ್ಲಿ ವಾಸ ಮಾಡುವುವು.

Holydivine