Isaiah - Chapter 52
Holy Bible

1 : ಎಚ್ಚರಗೊಳ್ಳು, ಎಚ್ಚರಗೊಳ್ಳು ಓ ಸಿಯೋನೇ, ಶಕ್ತಿಶಾಲಿಯಾಗು ಪವಿತ್ರನಗರ ಜೆರುಸಲೇಮೆ. ಧರಿಸಿಕೊ ನಿನ್ನ ಚಂದದ ಉಡುಪನು ನಿನ್ನೊಳಗೆ ಪ್ರವೇಶಿಸರು ಇನ್ನು ಅಪವಿತ್ರರು, ಅನ್ಯಧರ್ಮೀಯರು.
2 : ಖೈದಿಯಾಗಿ ಬಿದ್ದಿರುವ ಸಿಯೋನ್ ಕನ್ಯೆಯೆ, ಕಿತ್ತುಬಿಡು ಬಂಧನವನು ನಿನ್ನ ಕುತ್ತಿಗೆಯಿಂದ ಸಿಂಹಾಸನಾರೂಢಳಾಗು ಜೆರುಸಲೇಮೆ ಝಾಡಿಸಿ ಎದ್ದುನಿಂತು ದುಂಬುಧೂಳಿನಿಂದ !
3 : ಏಕೆಂದರೆ ಸರ್ವೇಶ್ವರ ಹೀಗೆಂದು ಹೇಳಿದ್ದಾರೆ – ‘ಬೆಲೆಯಿಲ್ಲದೆ ಮಾರಲ್ಪಟ್ಟಿರಿ; ಹಣವಿಲ್ಲದೆ ಮುಕ್ತರಾಗುವಿರಿ.’
4 : ದೇವರಾದ ಸರ್ವೇಶ್ವರ ಹೇಳಿಕೊಳ್ಳುವುದೇನೆಂದರೆ: “ಹಿಂದೆ ನನ್ನ ಜನರು ಈಜಿಪ್ಟಿನಲ್ಲೆ ಇಳಿದುಕೊಳ್ಳಲು ಹೋದರು. ಕೊನೆಗೆ ಅಸ್ಸೀರಿಯರು ಅವರನ್ನು ನಿಷ್ಕಾರಣವಾಗಿ ಹಿಂಸಿಸಿದರು.
5 : ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಕರೆದೊಯ್ದಿದ್ದಾರೆ. ಇಲ್ಲಿ ನಾನು ಸುಮ್ಮನಿರುವುದಾದರೂ ಹೇಗೆ? ಆಳುತ್ತಿರುವವರು ನನ್ನ ಪ್ರಜೆಯಾದವರನ್ನು ಗೋಳಿಡಿಸುತ್ತಿದ್ದಾರೆ, ಎಡೆಬಿಡದೆ ನನ್ನ ಶ್ರೀ ನಾಮವು ದಿನವೆಲ್ಲ ದೂಷಣೆಗೆ ಗುರಿಯಾಗುತ್ತಿದೆ.
6 : ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ವವನ್ನು ಒಂದು ದಿನ ಅರಿತುಕೊಳ್ಳುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.
7 : ಶುಭಕರ ಸಮಾಚಾರವನು ತರುವ ಶಾಂತಿಸಮಾಧಾನವನು ಸಾರುವ ಸಂತಸದ ಸಂದೇಶವನು ಅರುಹುವ ಜೀವೋದ್ಧಾರವನು ಪ್ರಕಟಿಸುವ ‘ನಿನ್ನ ದೇವರೇ ರಾಜ್ಯಭಾರ ವಹಿಸುವ’ ಎಂದು ಸಿಯೋನಿಗೆ ತಿಳಿಯಪಡಿಸುತ್ತ ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಮಗಳು ಎಷ್ಟೊಂದು ಸುಂದರ !
8 : ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು: ಸರ್ವೇಶ್ವರ ಸಿಯೋನಿಗೆ ಮರಳಿ ಬರುತ್ತಿರುವುದನು ಕಣ್ಣಾರೆ ಕಂಡು ಕೂಡಿಹಾಡುತ್ತಿಹರು ಗೀತವನು.
9 : ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ. ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು.
10 : ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.
11 : ಹೊರಡಿರಿ, ನೀವು ಹೊರಡಿರಿ ಬಾಬಿಲೋನಿನಿಂದ ಅಶುದ್ಧವಾದುವನ್ನು ಮುಟ್ಟದೆ ತೆರಳಿ ಅಲ್ಲಿಂದ. ಸರ್ವೇಶ್ವರನ ಆರಾಧನಾ ಉಪಕರಣಗಳನು ಹೊರುವವರೇ, ನಿಮ್ಮನು ನೀವೆ ಪರಿಶುದ್ಧವಾಗಿರಿಸಿಕೊಂಡು ತೆರಳಿ ಹೊರಗೆ.
12 : ಅವಸರವಾಗಿ ನೀವು ಹೊರಡಬೇಕಿಲ್ಲ ನೆಗೆನೆಗೆದು ನೀವು ಓಡಬೇಕಿಲ್ಲ. ಹೋಗುವನು ಸರ್ವೇಶ್ವರ ನಿಮಗೆ ಮುಂಬಲವಾಗಿ, ನಿಮಗಿರುವನು ಇಸ್ರಯೇಲ್ ದೇವರು ಹಿಂಬಲವಾಗಿ.
13 : ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ.
14 : ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ.
15 : ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು.

Holydivine