Isaiah - Chapter 38
Holy Bible

1 : ಆ ದಿನಗಳಲ್ಲಿ ಹಿಜ್ಕೀಯನು ರೋಗದಿಂದ ಮರಣಾವಸ್ಥೆಯಲ್ಲಿದ್ದನು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು, “ನೀನು ಉಳಿಯುವ ಹಾಗಿಲ್ಲ, ಸಾಯಬೇಕಾಗಿದೆ. ಆದುದರಿಂದ ನಿನ್ನ ಸಂಸಾರವನ್ನು ವ್ಯವಸ್ಥೆ ಮಾಡಬೇಕು ಎಂದು ಸರ್ವೇಶ್ವರ ಹೇಳಿದ್ದಾರೆ,” ಎಂದು ತಿಳಿಸಿದನು.
2 : ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು,
3 : “ಸರ್ವೇಶ್ವರಾ, ನಿಮಗೆ ಶ್ರದ್ಧೆಯಿಂದಲೂ, ಪ್ರಾಮಾಣಿಕತೆಯಿಂದಲೂ ಸೇವೆ ಮಾಡಿದ್ದೇನೆ. ನಿಮ್ಮ ದೃಷ್ಟಿಯಲ್ಲಿ ಒಳ್ಳೆಯವನಾಗಿಯೇ ನಡೆದುಕೊಂಡಿದ್ದೇನೆ. ಇದನ್ನು ದಯೆಯಿಂದ ನೆನಪಿಗೆ ತಂದುಕೊಳ್ಳಿ,” ಎಂದು ಬಹಳವಾಗಿ ಕಣ್ಣೀರಿಡುತ್ತಾ ಪ್ರಾರ್ಥನೆ ಮಾಡಿದನು.
4 : ಆಗ ಸರ್ವೇಶ್ವರ ಯೆಶಾಯನಿಗೆ,
5 : “ನೀನು ಹೋಗಿ ಹಿಜ್ಕೀಯನಿಗೆ ಹೀಗೆಂದು ತಿಳಿಸು: ‘ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಿನ್ನ ಆಯುಷ್ಯಕ್ಕೆ ಇನ್ನೂ ಹದಿನೈದು ವರ್ಷಗಳನ್ನು ಸೇರಿಸುತ್ತೇನೆ.
6 : ನಿನ್ನನ್ನು ಮತ್ತು ಈ ಪಟ್ಟಣವನ್ನು ಅಸ್ಸೀರಿಯದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸುತ್ತೇನೆ. ಈ ಪಟ್ಟಣವನ್ನು ಉಳಿಸಿ ಕಾಪಾಡುತ್ತೇನೆ’.” 21ಯೆಶಾಯನು ಹಿಜ್ಕೀಯನಿಗೆ, ಅಂಜೂರದ ಹಣ್ಣುಗಳ ಅಡೆಯನ್ನು ತರಿಸಿ, ‘ನಿನ್ನ ಕರುವಿನ ಮೇಲೆ ಕಟ್ಟು, ಆಗ ನೀನು ಗುಣ ಹೊಂದುವೆ,” ಎಂದು ಹೇಳಲು 22ಹಿಜ್ಕೀಯನು, “ನಾನು ಗುಣಹೊಂದಿ ಸರ್ವೇಶ್ವರಸ್ವಾಮಿಯ ಆಲಯವನ್ನು ಸೇರುವೆನು ಎಂಬುದಕ್ಕೆ ಗುರುತೇನು?” ಎಂದು ಕೇಳಿದನು.
7 : ಅದಕ್ಕೆ ಯೆಶಾಯನು, “ಸರ್ವೇಶ್ವರ ನುಡಿದದ್ದನ್ನು ನೆರವೇರಿಸುವರು ಎಂಬುದಕ್ಕೆ ಈ ಗುರುತನ್ನು ಕಾಣುವೆ:
8 : ಇಗೋ, ಅಹಾಜನು ಕಟ್ಟಿಸಿದ ನೆರಳುಗಡಿಯಾರದಲ್ಲಿ ಸೂರ್ಯನ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡುವರು,” ಎಂದು ತಿಳಿಸಿದನು. ಅಂತೆಯೇ ಮುಂದೆ ಹೋಗಿದ್ದ ನೆರಳು ಹತ್ತು ಮೆಟ್ಟಲು ಹಿಂದಕ್ಕೆ ಬಂದಿತು.
9 : ಜುದೇಯದ ಅರಸ ಹಿಜ್ಕೀಯನು ರೋಗದಿಂದ ಗುಣಹೊಂದಿದಾಗ ಬರೆದ ಸ್ತುತಿ ಗೀತೆ:
10 : ನನ್ನ ರೋಗದಲ್ಲಿ ನಾನು ಇಂತೆಂದುಕೊಂಡೆ: ಮಧ್ಯಪ್ರಾಯದಲ್ಲೇ ಮೃತ್ಯುಲೋಕವನ್ನು ಸಮೀಪಿಸಿರುವೆ ನನ್ನ ಆಯುಷ್ಯವನ್ನು ನಾ ಕಳೆದುಕೊಂಡಿರುವೆ.
11 : ಜೀವಲೋಕದಲ್ಲಿ ಇನ್ನು ದೇವನನ್ನು ಕಾಣೆನೆಂದುಕೊಂಡೆ ಭೂಲೋಕನಿವಾಸಿಗಳಲ್ಲಿ ಒಬ್ಬನನ್ನೂ ನೋಡಲಾರೆನೆಂದುಕೊಂಡೆ.
12 : ಕುರುಬನು ತನ್ನ ಗುಡಿಸಲನ್ನು ಕಿತ್ತುಹಾಕುವಂತೆ ನೇಯಿಗೆಯವನು ತನ್ನ ಹಾಸನ್ನು ಸುತ್ತುವಂತೆ ಮಗ್ಗದಿಂದ ಅವನು ದಾರವನ್ನು ಕತ್ತರಿಸುವಂತೆ ಬೆಳಗುಬೈಗಿನೊಳಗೆ ನನ್ನ ಆಯುಷ್ಯವನ್ನು ನೀ ಮುಗಿಸುತ್ತಿರುವೆನೆಂದು.
13 : ಸಿಂಹವು ಮೇಲೆಬಿದ್ದು ಮೂಳೆ ಮುರಿದಂತೆ ನನಗಾಗುತ್ತಿತ್ತು ಅತೀವ ಬಾಧೆ, ಆದರೂ ಇರುಳೆಲ್ಲ ಮೊರೆಯಿಡುತ್ತಿದ್ದೆ ಬೆಳಗು ಬೈಗಿನೊಳಗೆ ನೀ ನನ್ನ ಮುಗಿಸುತ್ತಿರುವೆನೆಂದೆ.
14 : ಕಿಚುಗುಟ್ಟಿದೆ ನಾ ಬಾನಕ್ಕಿ-ಬಕಗಳಂತೆ ಗುಬ್ಬಳಿಸಿದೆ ನಾ ಪಾರಿವಾಳದಂತೆ, ಕಂಗೆಟ್ಟೆ, ನಾ ಮೇಲೆ ಮೇಲಕ್ಕೆ ನೋಡುತಾ ಸರ್ವೇಶ್ವರಾ, ನಾನಿರುವೆ ಬಾಧೆಪಡುತಾ ನೀ ಎನಗೆ ನೆರವಾಗಲು ಬಾ ಎನ್ನುತಾ.
15 : ನುಡಿದಂತೆ ಪ್ರಭು ನೆರವೇರಿಸಿಹನು; ನಾನೇನು ಹೇಳಲಿ; ಮುಳುಗಿದೆ ನನ್ನಾತ್ಮ ದುಃಖಸಾಗರದಲಿ ನಿದ್ರೆಯಿಲ್ಲದೆ ಸೊರಗುತಿದೆ ನನ್ನ ಜೀವಮಾನವಿಡೀ.
16 : ಸರ್ವೇಶ್ವರಾ, ಮಾನವನ ಜೀವನ ಇಂತಿದೆ, ಇವುಗಳಿಂದಲೇ ನನ್ನ ಆತ್ಮ ಚೇತನಗೊಳ್ಳುತಿದೆ, ನೀನೀಗ ಗುಣಪಡಿಸು, ನಾ ಬಾಳುವೆ.
17 : ನಾ ಪಟ್ಟ ದುಃಖವು ನನ್ನ ಸುಖಕ್ಕಾಗಿಯೇ ನನ್ನಾತ್ಮವನ್ನು ನಾಶಕೂಪದಿಂದ ರಕ್ಷಿಸಿದ್ದು ನಿನ್ನ ಪ್ರೀತಿಯೇ: ನನ್ನ ಪಾಪಗಳನ್ನೆಲ್ಲಾ ನೀ ಹಾಕಿರುವೆ ನಿನ್ನ ಬೆನ್ನ ಹಿಂದೆ.
18 : ಸತ್ತವರು ನಿನ್ನನ್ನು ಕೀರ್ತಿಸರು ಪಾತಾಳದವರು ನಿನ್ನನ್ನು ಸ್ತುತಿಸರು ಅಧೋಲೋಕಕ್ಕೆ ಇಳಿದು ಹೋದವರು ನಿನ್ನ ಸತ್ಯಸಂಧತೆಯನ್ನು ಆಶ್ರಯಿಸರು.
19 : ಜೀವಂತನು, ಜೀವಂತನು ಮಾತ್ರವೇ ನಿನ್ನ ಸ್ತುತಿಮಾಡುವಂತೆ ನಾನಿಂದು ನಿನ್ನನ್ನು ಜೀವಂತನಾಗಿ ಸ್ತುತಿಮಾಡುತ್ತಿರುವೆ ನಿನ್ನ ಸತ್ಯಸಂಧತೆಯನ್ನು ಮಕ್ಕಳಿಗೆ ಬೋಧಿಸುವನು ತಂದೆ.
20 : ಸರ್ವೇಶ್ವರಾ, ನೀ ನನ್ನ ಉದ್ಧಾರಕ ಹೊಗಳುವೆ ನಿನ್ನ ನಾ ತಂತಿವಾದ್ಯ ಸಮೇತ ದಿನನಿತ್ಯ, ನಿನ್ನಾಲಯದೊಳು, ಜೀವವಿರುವ ತನಕ.

Holydivine