Isaiah - Chapter 20
Holy Bible

1 : ಅಸ್ಸೀರಿಯಾದ ಅರಸನಾದ ಸರ್ಗೋನನು ಕಳುಹಿಸಿದ ದಳಪತಿ, ಫಿಲಿಷ್ಟಿಯರ ಪಟ್ಟಣವಾದ ಅಷ್ಡೋದಿಗೆ ಬಂದು ಅದನ್ನು ಮತ್ತಿ ಆಕ್ರಮಿಸಿಕೊಂಡನು.
2 : ಅದಕ್ಕೆ ಮೂರು ವರ್ಷಗಳಿಗೆ ಮುಂಚೆಯೆ ಆಮೋಚನ ಮಗ ಯೆಶಾಯನಿಗೆ ಸರ್ವೇಶ್ವರ ಮುನ್ಸೂಚನೆಯಾಗಿ ಹೀಗೆಂದು ಹೇಳಿದ್ದರು: “ಎದ್ದೇಳು, ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು, ಕಾಲಿಗೆ ಹಾಕಿರುವ ಕೆರವನ್ನು ಕಳಚು.” ಅಂತೆಯೇ ಯೆಶಾಯನು ದಿಗಂಬರನಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.
3 : ಆಗ ಸರ್ವೇಶ್ವರ: “ನನ್ನ ದಾಸ ಯೆಶಾಯನು ಈಜಿಪ್ಟಿನ ಮತ್ತು ಸುಡಾನಿನ ವಿನಾಶಕ್ಕೆ ಸೋಜಿಗದ ಗುರುತಾಗಿ ಮೂರು ವರ್ಷ ಬಟ್ಟೆಯಿಲ್ಲದೆ ಬರಿಗಾಲಿನಲ್ಲಿ ತಿರುಗಾಡಿದನು.
4 : ಅದೇ ಪ್ರಕಾರ ಅಸ್ಸೀರಿಯದ ಅರಸನು ಈಜಿಪ್ಟಿನ ಸೆರೆಯಾಳುಗಳನ್ನೂ ಸುಡಾನಿನ ಕೈದಿಗಳನ್ನೂ - ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರನ್ನೂ ಬಟ್ಟೆಯಿಲ್ಲದೆ ಬೆತ್ತಲೆಯಾಗಿಸಿ, ಬರಿಗಾಲಿನಲ್ಲೇ ಸೆರೆಮನೆಗೆ ನಡೆಯುವಂತೆ ಮಾಡುವನು. ಹೀಗೆ ಈಜಿಪ್ಟಿನ ನಿವಾಸಿಗಳನ್ನು ಮಾನಭಂಗಕ್ಕೆ ಗುರಿಪಡಿಸುವನು.
5 : ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು.
6 : ಆ ದಿನದಂದು (ಫಿಲಿಷ್ಟಿಯದ) ಕರಾವಳಿಯಲ್ಲಿ ವಾಸಿಸುವರು. ‘ಅಯ್ಯೋ ಅಸ್ಸೀರಿಯರ ಅರಸನಿಂದ ನಾವು ಬಿಡುಗಡೆಯಾಗಬೇಕೆಂದು ಯಾರ ಆಶ್ರಯವನ್ನು ನಿರೀಕ್ಷಿಸಿಕೊಂಡಿದ್ದೇವೋ ಅವರಿಗೇ ಈ ಗತಿ ಬಂತಲ್ಲಾ; ಇನ್ನು ನಮ್ಮಂಥವರು ಉದ್ಧಾರವಾಗುವುದು ಹೇಗೆ?’ ಎಂದುಕೊಳ್ಳುವರು.”

Holydivine