Isaiah - Chapter 33
Holy Bible

1 : ಹಾಳು ಮಾಡುತ್ತಿರುವವನೇ, ನಿನಗೆ ಧಿಕ್ಕಾರ! ನಿನ್ನನ್ನು ಯಾರೂ ಹಾಳು ಮಾಡದಿದ್ದರೂ ನೀನು ಹಾಳುಮಾಡುತ್ತಿರುವೆ. ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆ ಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳುಮಾಡುತ್ತಿರುವ ನೀನು ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ.
2 : ಸರ್ವೇಶ್ವರಾ, ನಮಗೆ ಕೃಪೆತೋರಿ. ನಿಮಗಾಗಿ ಕಾದಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಬೆಂಬಲವಾಗಿರಿ. ಆಪತ್ಕಾಲದಲ್ಲಿ ನಮಗೆ ರಕ್ಷಣೆ ನೀಡಿರಿ.
3 : ನಿಮ್ಮ ಮೇಘಗರ್ಜನೆಗೆ ಜನಾಂಗಗಳು ಓಡುತ್ತವೆ. ನೀವು ಎದ್ದು ನಿಂತಾಗ ರಾಷ್ಟ್ರಗಳು ದಿಕ್ಕುಪಾಲಾಗುತ್ತವೆ.
4 : ಅವರು ಕೊಳ್ಳೆಗೆ ಒಳಗಾಗುವರು; ಜನ ಮಿಡತೆಗಳಂತೆ ಆ ಕೊಳ್ಳೆಗೆ ಹಾರಿ ಬೀಳುವರು.
5 : ಸರ್ವೇಶ್ವರಸ್ವಾಮಿ ಉನ್ನತೋನ್ನತರು, ಮೇಲಿನ ಲೋಕದಲ್ಲಿ ಆಸೀನರು. ಅವರು ಜೆರುಸಲೇಮನ್ನು ನ್ಯಾಯನೀತಿಯಿಂದಲೂ ಸತ್ಯ ಸಂಧತೆಯಿಂದಲೂ ತುಂಬಿಸುವರು.
6 : ನಿಮ್ಮ ಕಾಲಕ್ಕೆ ಬೇಕಾದ ಸ್ಥಿರತೆಯನ್ನು ನೀಡುವರು. ರಕ್ಷಣೆಗೆ ಬೇಕಾದ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡುವರು. ಸರ್ವೇಶ್ವರಸ್ವಾಮಿಯಲ್ಲಿ ನಿಮಗಿರುವ ಭಯಭಕ್ತಿಯೇ ನಿಮ್ಮ ನಿಧಿಯಾಗಿರುವುದು.
7 : ಇಗೋ, ವೀರರು ಹೊರಗೆ ಹಾಹಾಕಾರ ಮಾಡುತಿಹರು. ಶಾಂತಿದೂತರಾದ ರಾಯಭಾರಿಗಳು ಘೋರವಾಗಿ ಅಳುತಿಹರು.
8 : ರಾಜ ಮಾರ್ಗಗಳು ಬರಿದಾಗಿವೆ. ದಾರಿಗರೇ ಇಲ್ಲ. ಶತ್ರುಗಳು ಒಪ್ಪಂದವನ್ನು ಮುರಿದಿದ್ದಾರೆ. ಸಾಕ್ಷಿಗಳನ್ನು ತಿರಸ್ಕರಿಸಿದ್ದಾರೆ. ಮಾನವರನ್ನು ಗಣನೆಗೆ ತಂದುಕೊಳ್ಳದವರಾಗಿದ್ದಾರೆ.
9 : ನಾಡು ದುಃಖದಿಂದ ಸೊರಗುತ್ತಿದೆ. ಲೆಬನೋನ್ ನಾಚಿಕೆಯಿಂದ ಒಣಗುತ್ತಿದೆ. ಶಾರೋನ್ ಬೆಂದು ಬೆಂಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳಿಲ್ಲದೆ ಬೋಳಾಗಿವೆ. ಶತ್ರುಗಳಿಗೆ ದೇವರಿತ್ತ ಎಚ್ಚರಿಕೆ
10 : ಸರ್ವೇಶ್ವರ ಹೀಗೆನ್ನುತ್ತಾರೆ: “ಈಗ ಏಳುವೆನು. ಈಗಲೇ ಎದ್ದು ಸಿದ್ದನಾಗುವೆನು. ಇದೀಗಲೇ ನನ್ನ ಮಹಿಮೆಯನ್ನು ತೋರಿಸುವೆನು.
11 : ನೀವು ಹೊಟ್ಟನ್ನು ಗರ್ಭದಲ್ಲಿ ಬೆಳೆಸಿ ಕೂಳೆಯನ್ನು ಹೆರುವಿರಿ. ನಿಮ್ಮ ನಿಟ್ಟುಸಿರು ನಿಮ್ಮನ್ನೇ ನುಂಗುವ ಬೆಂಕಿಯಾಗುವುದು.
12 : ನೀವು ಸುಟ್ಟ ಸುಣ್ಣದಂತಾಗುವಿರಿ.
13 : ದೂರ ಇರುವವರೇ, ನಾನು ಎಸಗಿದ ಕಾರ್ಯಗಳನ್ನು ಕೇಳಿ ತಿಳಿದುಕೊಳ್ಳಿರಿ. ಹತ್ತಿರ ಇರುವವರೇ, ನನ್ನ ಪರಾಕ್ರಮವನ್ನು ಒಪ್ಪಿಕೊಳ್ಳಿರಿ.”
14 : ಸಿಯೋನಿನಲ್ಲಿರುವ ಪಾಪಾತ್ಮರು ಭಯಪಡುತ್ತಾರೆ. ಭಕ್ತಿಹೀನರು ಗಡಗಡನೆ ನಡುಗುತ್ತಾರೆ. ‘ನಮ್ಮಲ್ಲಿ ಯಾರು ತಾನೇ ಕಬಳಿಸುವ ಕಿಚ್ಚಿನ ಬಳಿ ವಾಸಿಸಬಲ್ಲರು?’ ಎಂದು ಹೇಳಿಕೊಳ್ಳುತ್ತಾರೆ.
15 : ಸನ್ಮಾರ್ಗದಲ್ಲಿ ನಡೆವವನು, ಸತ್ಯವನ್ನೇ ನುಡಿವವನು, ಬಲಾತ್ಕಾರದಿಂದ ಲಭಿಸಿದ್ದನ್ನು ತಿರಸ್ಕರಿಸುವವನು, ಲಂಚಕ್ಕೆ ಕೈಚಾಚದೆ ಹಿಂದಕ್ಕೆ ಸರಿವವನು, ಕೊಲೆಮಾತುಗಳಿಗೆ ಕಿವಿ ಮುಚ್ಚಿಕೊಳ್ಳುವವನು, ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನು – ಇಂಥವನೇ ಉನ್ನತ ಸ್ಥಾನದಲ್ಲಿ ವಾಸಿಸುವನು.
16 : ಅಂಥವನಿಗೆ ಗಿರಿದುರ್ಗವೇ ಆಶ್ರಯ, ಅನ್ನ ಆಹಾರ ಉಚಿತ, ನೀರುನಿಡಿ ನಿಸ್ಸಂದೇಹ. ಭವ್ಯವಾದ ಭವಿಷ್ಯ
17 : ಅಲಂಕೃತ ರಾಜನನ್ನು ನಿಮ್ಮ ಕಣ್ಣುಗಳು ಕಾಣುವುವು. ಸವಿಸ್ತಾರವಾದ ನಾಡೊಂದನ್ನು ನಿಮ್ಮ ಕಣ್ಣುಗಳು ನೋಡಿ ನಲಿಯುವುವು.
18 : ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ – “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕಮಾಡಿದವನು ಎಲ್ಲಿ? ಗೋಪುರಗಳನ್ನು ಗಣಿಸಿದವನು ಎಲ್ಲಿ?” ಎಂದು ಹೇಳಿಕೊಳ್ಳುವಿರಿ.
19 : ನಿಮಗೆ ತಿಳಿಯಲಾಗದ ಅನ್ಯ ಭಾಷೆಯನ್ನು, ನೀವು ಗ್ರಹಿಸಲಾಗದ ಅಸ್ಪಷ್ಟ ಮಾತುಗಳನ್ನು ಆಡುವ ಅಹಂಕಾರದ ಜನರನ್ನು ಇನ್ನು ಮೇಲೆ ಕಾಣಲಾರಿರಿ.
20 : ನಮ್ಮ ಹಬ್ಬ ಆಚರಣೆಗಳ ನಗರವಾದ ಸಿಯೋನನ್ನು ದೃಷ್ಟಿಸಿ ನೋಡಿ. ಆ ಜೆರುಸಲೇಮನ್ನು ಕಣ್ಣಿಟ್ಟು ನೋಡಿ. ಅದು ನೆಮ್ಮದಿಯ ನಿವಾಸವಾಗಿ, ಕೀಳಲಾಗದ, ಕೆಡವಲಾಗದ ದೃಢವಾದ ಗುಡಾರದಂತೆ ನಿಂತಿರುವುದನ್ನು ನೀವು ಕಣ್ಣಾರೆ ಕಾಣುವಿರಿ.
21 : ಅಲ್ಲಿ ಸರ್ವೇಶ್ವರ ತಮ್ಮ ಶಕ್ತಿಯನ್ನು ತೋರ್ಪಡಿಸುವರು. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟವು.
22 : ಸರ್ವೇಶ್ವರ ಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರಸ್ವಾಮಿಯೇ ನಮಗೆ ಶಾಸನದಾಯಕ, ಸರ್ವೇಶ್ವರಸ್ವಾಮಿಯೇ ನಮ್ಮ ರಾಜ. ಅವರೇ ನಮ್ಮ ಉದ್ಧಾರಕ.
23 : ಶತ್ರು ಹಡಗುಗಳ ಹಗ್ಗಗಳು ಸಡಿಲ, ಅದರ ಕೂವೆಯ ಬುಡ ಸಡಿಲ; ಅದರ ಹಾಯಿಯನ್ನು ಮುದುರದಂತೆ ಹಿಡಿದುಕೊಳ್ಳಲು ಅಸಾಧ್ಯ. ಅವುಗಳನ್ನು ಸೂರೆಮಾಡಿ ಕೊಳ್ಳೆಹೊಡೆದು, ಸಮನಾಗಿ ಹಂಚಿಕೊಳ್ಳಲು ಎಲ್ಲರಿಗೂ ಆಸ್ಪದವುಂಟು. ಕುಂಟರು ಕೂಡ ತಮ್ಮ ಪಾಲನ್ನು ಪಡೆಯಬಲ್ಲರು.
24 : ಸಿಯೋನಿನ ಯಾವ ನಿವಾಸಿಯೂ “ನಾನು ಅಸ್ವಸ್ಥನು” ಎಂದು ಹೇಳನು, ಅಲ್ಲಿಯ ಜನರ ಪಾಪವು ಪರಿಹಾರವಾಗುವುದು.

Holydivine