Isaiah - Chapter 30
Holy Bible

1 : ಸರ್ವೇಶ್ವರಸ್ವಾಮಿಯ ನುಡಿಯಿದು: “ದ್ರೋಹಿಗಳಾದ ಈ ಪೀಳಿಗೆಗೆ ಧಿಕ್ಕಾರ! ಇವರು ನನ್ನನ್ನು ಕೇಳದೆ ತಮ್ಮದೇ ಆದ ಯೋಜನೆಯನ್ನು ಸಾಧಿಸುತ್ತಾರೆ. ನನ್ನಾತ್ಮ ಪ್ರೇರಣೆಯಿಲ್ಲದೆ ತಂತ್ರೋಪಾಯಗಳನ್ನು ಹೂಡುತ್ತಾರೆ. ಪಾಪದ ಮೇಲೆ ಪಾಪವನ್ನು ಸೇರಿಸಿಕೊಳ್ಳುತ್ತಾರೆ.
2 : ನನ್ನ ಸಲಹೆಯನ್ನು ಕೇಳದೆ ಈಜಿಪ್ಟಿಗೆ ಪ್ರಯಾಣ ಬೆಳೆಸಿದ್ದಾರೆ. ಫರೋಹನ ಆಶ್ರಯವನ್ನು ಬಯಸುತ್ತಾರೆ. ಈಜಿಪ್ಟಿನವರನ್ನು ಮರೆಹೋಗಬೇಕೆಂದಿದ್ದಾರೆ.
3 : ಆದರೆ ಫರೋಹನ ಆಶ್ರಯದಿಂದ ಅವರಿಗೆ ನಾಚಿಕೆಯಾಗುವುದು. ಈಜಿಪ್ಟಿನವರನ್ನು ಮರೆಹೋಗುವುದರಿಂದ ಅವರಿಗೆ ಅವಮಾನ ಉಂಟಾಗುವುದು.
4 : ಫರೋಹನ ಸಾಮಂತರಾಜರು ಚೊವನಿನಲ್ಲಿದ್ದಾರೆ. ಅವನ ರಾಯಭಾರಿಗಳು ಹಾನೇಸನ್ನು ತಲುಪಿದ್ದಾರೆ.
5 : ಆದರೂ ಅವರು ಯಾವ ಸಹಾಯವನ್ನಾಗಲೀ ಸೌಕರ್ಯವನ್ನಾಗಲೀ ನೀಡಲಾರರು. ಬದಲಿಗೆ, ಈ ಪೀಳಿಗೆಯವರಿಗೆ ನಾಚಿಕೆಯಾಗುವುದು, ಅವಮಾನವಾಗುವುದು, ಆ ನಿಷ್ಪ್ರಯೋಜಕ ರಾಷ್ಟ್ರದ ಬಗ್ಗೆ ಎಲ್ಲರೂ ವಿಷಾದಿಸುವರು.
6 : ನೆಗೇಬಿನ ಮೃಗಗಳನ್ನು ಕುರಿತ ದೈವವಾಣಿ: ಸಿಂಹಸಿಂಹಿಣಿಗಳಿಂದಲೂ ವಿಷಸರ್ಪ – ಘಟಸರ್ಪಗಳಿಂದಲೂ ಕೂಡಿದ ಭಯಂಕರ ಹಾಗೂ ಸಂಕಟಕರವಾದ ಆ ನಾಡಿನ ಮಾರ್ಗವಾಗಿ ತಮ್ಮ ಧನಕನಕಗಳನ್ನು ಕತ್ತೆಗಳ ಮೇಲೂ ಆಸ್ತಿಪಾಸ್ತಿಗಳನ್ನು ಒಂಟೆಗಳ ಮೇಲೂ ಹೊರಿಸಿಕೊಂಡು ನಿಷ್ಪ್ರಯೋಜಕವಾದ ಆ ರಾಷ್ಟ್ರಕ್ಕೆ ಹೋಗುತ್ತಾರೆ.
7 : ಈಜಿಪ್ಟ್ ನೀಡುವ ಸಹಾಯ ನಿರರ್ಥಕ, ನಿಷ್ಪ್ರಯೋಜಕ. ಆದುದರಿಂದಲೇ ಅದಕ್ಕೆ ನಾನು ಜಡವಾಗಿ ಬಿದ್ದಿರುವ ಘಟಸರ್ಪ ಎಂದು ಹೆಸರು ಇಟ್ಟಿದ್ದೇನೆ.
8 : ಸರ್ವೇಶ್ವರ ನನಗೆ ಇಂತೆಂದರು: “ನೀನು ಈಗಲೇ ಹೋಗಿ, ನಾನು ಹೇಳುವುದನ್ನು ಅವರೆದುರಿನಲ್ಲಿಯೆ ಹಲಗೆಯ ಮೇಲೆ ಕೆತ್ತು, ಪುಸ್ತಕದಲ್ಲಿ ಬರೆ. ಅದು ಮುಂದಿನ ಕಾಲಕ್ಕೆ ಶಾಶ್ವತ ಸಾಕ್ಷಿಯಾಗಿರಲಿ.
9 : ಇವರು ದಂಗೆ ಏಳುವ ಜನರು. ಸುಳ್ಳಾಡುವ ಪೀಳಿಗೆ, ಸರ್ವೇಶ್ವರನ ಉಪದೇಶಕ್ಕೆ ಕಿವಿಗೊಡದ ಸಂತಾನ,
10 : ಇವರು ದಿವ್ಯದರ್ಶಿಗಳನ್ನು ನೋಡಿ: “ನಿಮಗೆ ದರ್ಶನವಾಗದಿರಲಿ” ಎನ್ನುತ್ತಾರೆ. ಪ್ರವಾದಿಗಳಿಗೆ: “ನಯವಾದುದ್ದನ್ನು ನಮಗೆ ನುಡಿಯಿರಿ. ಮಾಯವಾದವುಗಳನ್ನೇ ಪ್ರವಾದನೆ ಮಾಡಿರಿ.
11 : ನಮಗೆ ಅಡ್ಡ ಬರಬೇಡಿ. ನಮ್ಮ ದಾರಿಯಿಂದ ದೂರವಿರಿ. ಇಸ್ರಯೇಲರ ಪರಮ ಪಾವನ ಸ್ವಾಮಿಯ ವಿಷಯವನ್ನು ನಮ್ಮ ಮುಂದೆ ಎತ್ತಬೇಡಿ” ಎಂದು ಹೇಳುತ್ತಾರೆ.
12 : ಆದಕಾರಣ, ಇಸ್ರಯೇಲಿನ ಪರಮ ಪಾವನ ಸ್ವಾಮಿ ಹೀಗೆನ್ನುತ್ತಾರೆ: “ನೀವು ನನ್ನ ಮಾತನ್ನು ತಿರಸ್ಕರಿಸಿ ಹಿಂಸೆ ಕುತಂತ್ರಗಳನ್ನೇ ನೆಚ್ಚಿಕೊಂಡಿದ್ದೀರಿ.
13 : ಇದ್ದಕ್ಕಿದ್ದಂತೆ ಆ ಗೋಡೆ ತಟ್ಟನೆ ಬಿದ್ದುಹೋಗುವುದು. ಅಂತೆಯೇ ನಿಮ್ಮ ಅಪರಾಧ ನಿಮಗೆ ಅಪಾಯಕರವಾಗಿರುವುದು.
14 : ಆ ಗೋಡೆಯೆಂಬ ಕುಂಬಾರನ ಮಡಕೆಯ ಚೂರಿನಿಂದ, ಬೆಂಕಿಯ ಒಲೆಯಿಂದ ಕೆಂಡವನ್ನು ತೆಗೆಯುವುದಕ್ಕಾಗಲೀ ತೊಟ್ಟಿಯ ನೀರನ್ನು ತೋಡಿಕೊಳ್ಳುವುದಕ್ಕಾಗಲೀ ಸಾಧ್ಯವಾಗದು.”
15 : ಪರಮಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರಸ್ವಾಮಿಯಾದ ನಾನು ನಿಮಗೆ ಹೇಳುವುದೇನೆಂದರೆ: “ನೀವು ಪಶ್ಚಾತ್ತಾಪಪಟ್ಟು ನನಗೆ ಅಭಿಮುಖವಾಗಿ ನೆಮ್ಮದಿಯಿಂದಿದ್ದರೆ ಉದ್ಧಾರವಾಗುವಿರಿ. ಶಾಂತಿಸಮಾಧಾನ ಮತ್ತು ಭಕ್ತಿ ಭರವಸೆಯಲ್ಲೇ ಶಕ್ತಿಯನ್ನು ಪಡೆಯುವಿರಿ.” ಆದರೆ ನೀವು ಒಪ್ಪಿಕೊಂಡಿಲ್ಲ.
16 : ಬದಲಿಗೆ “ಬೇಡ ಬೇಡ, ನಾವು ಕುದುರೆಗಳ ಮೇಲೆ ಓಡಿ ಹೋಗುತ್ತೇವೆ” ಎಂದುಕೊಂಡಿರಿ. ಅಂತೆಯೇ ಓಡಿಹೋಗುವಿರಿ. “ನಾವು ದೌಡೋಡುವ ಕುದುರೆಗಳ ಮೇಲೆ ಸವಾರಿಮಾಡುತ್ತೇವೆ” ಎಂದುಕೊಂಡಿರಿ. ಅಂತೆಯೇ ದೌಡೋಡುವವರೇ ನಿಮ್ಮನ್ನು ಅಟ್ಟಿಕೊಂಡು ಬರುವರು.
17 : ಒಬ್ಬ ಸೈನಿಕನ ಬೆದರಿಕೆಗೆ ಸಾವಿರ ಜನರು ಪರಾರಿಯಾಗುವರು. ಐದು ಸೈನಿಕರ ಬೆದರಿಕೆಗೆ ನೀವೆಲ್ಲರೂ ಓಡಿಹೋಗುವಿರಿ. ಕಟ್ಟ ಕಡೆಗೆ ಬೆಟ್ಟದ ತುದಿಯಲ್ಲಿರುವ ಧ್ವಜಸ್ತಂಭದಂತೆ, ಗುಡ್ಡದ ಮೇಲಿರುವ ಕೈಕಂಬದಂತೆ ಒಬ್ಬಂಟಿಗನಾಗಿ ಉಳಿಯುವಿರಿ.
18 : ಆದರೆ ಸರ್ವೇಶ್ವರ ನಿಮಗೆ ಕೃಪೆತೋರಬೇಕೆಂದು ಕಾದಿರುತ್ತಾರೆ. ನಿಮ್ಮನ್ನು ಕರುಣಿಸಲು ಎದ್ದುನಿಂತಿದ್ದಾರೆ. ಅವರು ನ್ಯಾಯಪರರಾದ ದೇವರು, ಅವರಿಗಾಗಿ ಕಾದಿರುವವರೆಲ್ಲರೂ ಧನ್ಯರು.
19 : ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು.
20 : ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ.
21 : ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು.
22 : ಆಗ ಬೆಳ್ಳಿಯ ಕವಚಗಳಿಂದ ಕೂಡಿದ ನಿಮ್ಮ ವಿಗ್ರಹಗಳನ್ನೂ ಚಿನ್ನದಿಂದ ಲೇಪಿತವಾದ ನಿಮ್ಮ ಬೊಂಬೆಗಳನ್ನೂ ಬಿಸಾಡುವಿರಿ. ಅವುಗಳನ್ನು ಹೊಲೆ ಮಾಡಿ ‘ತೊಲಗಿ’ ಎಂದು ಹೇಳುತ್ತಾ ಎಸೆದು ಬಿಡುವಿರಿ.
23 : ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲು ಗಾವಲುಗಳಲ್ಲಿ ಮೇಯುವುವು.
24 : ಹೊಲಗೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು.
25 : ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು.
26 : ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು. ಅಸ್ಸೀರಿಯಾಕ್ಕೆ ಬರಲಿರುವ ದಂಡನೆ
27 : ಇಗೋ, ಸರ್ವೇಶ್ವರನಾಮಧೇಯನು ಬರುತಿಹನು ದೂರದಿಂದ; ಭುಗಿಲೇರುತಿದೆ ಆತನ ಕೋಪ ಏಳುತಿದೆ ದಟ್ಟವಾದ ಧೂಮ ಅದರಿಂದ. ದಹಿಸುವ ಅಗ್ನಿಯಂತಿದೆ ಆತನ ನಾಲಗೆ. ಭರಿತವಾಗಿದೆ ಆತನ ತುಟಿಗಳು ರೋಷದಿಂದ.
28 : ತುಂಬಿತುಳುಕಿ ಕಂಠದವರೆಗೆ ಏರುವ ತೊರೆಯಂತಿದೆ ಆತನ ಶ್ವಾಸ ಆತನ ಕೈಯಲ್ಲಿದೆ ಜನಾಂಗಗಳನ್ನು ಜಾಲಿಸುವ ಜರಡಿಯ ವಿನಾಶ ಜನರ ಕಟಿಬಾಯಲ್ಲಿರುವುದು ದಾರಿ ತಪ್ಪಿಸುವ ಕಡಿವಾಣದ ಪಾಶ.
29 : ನೀವಾದರೋ ಹಾಡುವಿರಿ ಹಬ್ಬದ ರಾತ್ರಿಯಲ್ಲೋ ಎಂಬಂತೆ ಹೃದಯಾನಂದ ಪಡುವಿರಿ, ಇಸ್ರಯೇಲರ ರಕ್ಷಣೆಯ ಕೋಟೆಗೆ, ಸರ್ವೇಶ್ವರನ ಶಿಖರಕ್ಕೆ ಕೊಳಲನೂದುತ ಹೋಗುವವರಂತೆ.
30 : ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರ ಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ – ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು.
31 : ಹೀಗೆ ಸರ್ವೇಶ್ವರಸ್ವಾಮಿಯ ವಾಣಿಯನ್ನು ಕೇಳಿದ ಅಸ್ಸೀರಿಯಾದವರು ದಿಗ್ಭ್ರಮೆಗೊಳ್ಳುವರು. ರಾಜದಂಡದ ಶಿಕ್ಷೆಯನ್ನು ಸವಿಯುವರು.
32 : ಸರ್ವೇಶ್ವರ ಸ್ವಾಮಿ ವಿಧಿಸುವ ಪ್ರತಿಯೊಂದು ಪೆಟ್ಟು ತಾಳ ತಮ್ಮಟೆಯಂತೆ ಅವರ ಮೇಲೆ ಬೀಳುವುದು. ಸರ್ವೇಶ್ವರ ತಾವೇ ಅವರ ವಿರುದ್ಧವಾಗಿ ಕೈಬೀಸಿ ಯುದ್ಧಮಾಡುವರು.
33 : ಪುರಾತನ ಕಾಲದಿಂದಲೇ ಅಸ್ಸೀರಿಯದ ಅರಸನಿಗೆ ಅಗ್ನಿಕುಂಡವು ಅಣಿಯಾಗಿದೆ. ಅದನ್ನು ಆಳವಾಗಿಯೂ ಅಗಲವಾಗಿಯೂ ಮಾಡಲಾಗಿದೆ. ಅದರಲ್ಲಿನ ಚಿತೆಯೊಳಗೆ ಬೆಂಕಿಯೂ ಸೌದೆಯೂ ತುಂಬಿದೆ. ಗಂಧಕದ ಪ್ರವಾಹದೋಪಾದಿಯಲ್ಲಿ ಸರ್ವೇಶ್ವರಸ್ವಾಮಿ ತಮ್ಮ ಶ್ವಾಸವನ್ನೂದಿ ಅದನ್ನು ಭುಗಿಲೆಬ್ಬಿಸುವರು.

Holydivine