Isaiah - Chapter 10
Holy Bible

1 : ಅನ್ಯಾಯವಾದ ನಿಬಂಧನೆಗಳನ್ನು, ಕ್ರೂರವಾದ ಕಾನೂನುಗಳನ್ನು ರಚಿಸುವ ನಿಮಗೆ ಧಿಕ್ಕಾರ!
2 : ನೀವು ದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತೀರಿ. ಬಡಬಗ್ಗರಿಂದ ಹಕ್ಕುಬಾಧ್ಯತೆಗಳನ್ನು ಕಸಿದುಕೊಳ್ಳುತ್ತೀರಿ. ವಿಧವೆಯರನ್ನು ಸೂರೆಮಾಡುತ್ತೀರಿ. ಅನಾಥರನ್ನು ಕೊಳ್ಳೆಹೊಡೆಯುತ್ತೀರಿ.
3 : ದಂಡನೆಯ ದಿನದಂದು ಏನು ಮಾಡುವಿರಿ? ದೂರದಿಂದ ಬರುವ ವಿನಾಶದಿಂದ ಹೇಗೆ ಪಾರಾಗುವಿರಿ? ಸಹಾಯಕ್ಕಾಗಿ ಯಾರ ಬಳಿಗೆ ಓಡುವಿರಿ? ನಿಮ್ಮ ಆಸ್ತಿಪಾಸ್ತಿಯನ್ನು ಎಲ್ಲಿ ಅವಿತಿಡುವಿರಿ?
4 : ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.
5 : ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ.
6 : ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದು ಬಿಡಲು ಅದಕ್ಕೆ ಆಜ್ಞೆ ಮಾಡುತ್ತೇನೆ.
7 : ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು.
8 : “ನನ್ನ ದಂಡನಾಯಕರೆಲ್ಲ ಅರಸರಲ್ಲವೇ?
9 : ಕರ್ಕೆಮೀಷಿನ ಗತಿ ಕಲ್ನೋವಿಗೂ ಬಂತಲ್ಲವೇ? ಅರ್ಪದಿಗೆ ಬಂದ ಪಾಡು ಹಮಾತಿಗೂ ಬಂದಿತಷ್ಟೆ. ದಮಸ್ಕಸ್ಸಿನ ಅವಸ್ಥೆಯು ಸಮಾರ್ಯಕ್ಕೂ ಸಂಭವಿಸಿತು.
10 : ಜೆರುಸಲೇಮ್ ಮತ್ತು ಸಮಾರ್ಯದ ವಿಗ್ರಹಗಳಿಗಿಂತ ಹೆಚ್ಚಿನ ಮೌಲ್ಯದ ಕೆತ್ತನೆಯ ಮೂರ್ತಿಗಳನ್ನು ಆರಾಧಿಸುವ ರಾಜ್ಯಗಳನ್ನು ನಾನು ಗೆದ್ದಿದ್ದೇನೆ.
11 : ಸಮಾರ್ಯವನ್ನೂ ಅದರ ವಿಗ್ರಹಗಳನ್ನೂ ನಾಶಮಾಡಿದ ಪ್ರಕಾರ ಜೆರುಸಲೇಮನ್ನೂ ಅದರ ಮೂರ್ತಿಗಳನ್ನೂ ನಾಶಮಾಡುತ್ತೇನೆ” ಎಂದು ಅಸ್ಸೀರಿಯ ಕೊಚ್ಚಿಕೊಳ್ಳುತ್ತಿದೆ.
12 : ಆದರೆ ಸರ್ವೇಶ್ವರನಾದ ನಾನು ಸಿಯೋನ್ ಪರ್ವತದಲ್ಲೂ ಜೆರುಸಲೇಮಿನಲ್ಲೂ ನನ್ನ ಗುರಿಯನ್ನು ಸಾಧಿಸಿದ ಮೇಲೆ ಆ ಅಸ್ಸೀರಿಯದ ಅರಸನನ್ನು ಅವನ ದುರಹಂಕಾರಕ್ಕಾಗಿ ಗರ್ವದ ಭಾವನೆಗಳಿಗಾಗಿ ಸರಿಯಾಗಿ ದಂಡಿಸುವೆನು
13 : ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತು ಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಧಿನಿಕ್ಷೇಪಗಳನ್ನು ಸೂರೆ ಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿ ಬಿಟ್ಟಿದ್ದೇನೆ.
14 : (ಬೇಡನು) ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟು ಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟು ಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕುತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.”
15 : ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು!
16 : ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.
17 : ಇಸ್ರಯೇಲಿನ ಪರಂಜ್ಯೋತಿಯಾದ ದೇವರು ಅಗ್ನಿಯಂತಾಗುವರು: ಇಸ್ರಯೇಲಿನ ಪರಮಪಾವನ ಸ್ವಾಮಿ ಜ್ವಾಲೆಯಂತಾಗುವರು; ಅದು ಒಂದೇ ಒಂದು ದಿನದಲ್ಲಿ ಅಸ್ಸೀರಿಯರ ಮುಳ್ಳುಪೊದರುಗಳನ್ನೂ ಬಿಡದೆ ಎಲ್ಲವನ್ನೂ ದಹಿಸಿಬಿಡುವುದು
18 : ದೇಹಾತ್ಮದಂಥ ಅದರ ಉದ್ಯಾನವನವನ್ನೂ ಫಲಭರಿತ ತೋಟವನ್ನೂ ನಿರ್ಮೂಲ ಮಾಡುವುದು. ಮಾರಕರೋಗ ತಗಲಿದ ರೋಗಿಯಂತೆ ದೇಶವೆಲ್ಲವೂ ಕರಗಿ ಹೋಗುವುದು.
19 : ಅದರ ಅಳಿದುಳಿದ ಮರಗಳು ಒಂದು ಕೂಸು ಕೂಡ ಎಣಿಸಿ ಬರೆಯುವಷ್ಟು ಕಡಿಮೆಯಾಗುವುವು.
20 : ಆ ದಿನದಂದು ಅಳಿದುಳಿದ ಇಸ್ರಯೇಲರು, ತಪ್ಪಿಸಿಕೊಂಡ ಯಕೋಬ ಮನೆತನದವರು ತಮ್ಮನ್ನು ಬಾಧಿಸಿದವರನ್ನು ನೆಮ್ಮುವುದಿಲ್ಲ. ಬದಲಿಗೆ ಇಸ್ರಯೇಲರ ಪರಮಪಾವನ ಸ್ವಾಮಿಯಾದ ಸರ್ವೇಶ್ವರನನ್ನೇ ನಿಶ್ಚಯವಾಗಿ ಆಶ್ರಯಿಸುವರು.
21 : ಯಕೋಬ ಮನೆತನದವರಲ್ಲಿ ಅಳಿದುಳಿದ ಕೆಲವರು ಪರಾಕ್ರಮಿಯಾದ ದೇವರ ಕಡೆಗೆ ತಿರುಗಿಕೊಳ್ಳುವರು.
22 : ಇಸ್ರಯೇಲೇ, ನಿನ್ನ ಜನರು ಸಮುದ್ರದ ಮರಳಿನಂತೆ ಅಸಂಖ್ಯಾತರಾಗಿ ಇದ್ದರೂ ಅವರಲ್ಲಿ ಕೆಲವರು ಮಾತ್ರ ಉಳಿದು ಹಿಂದಿರುಗುವರು. ಅವರ ಅಳಿವು ಶಾಸನಬದ್ಧವಾದುದು ಹಾಗೂ ಸಂಪೂರ್ಣವಾಗಿ ನ್ಯಾಯ ಸಮ್ಮತವಾದುದು.
23 : ಹೌದು, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ, ತಮ್ಮ ಆಜ್ಞೆಯ ಪ್ರಕಾರ ನಾಡಿನಲ್ಲೆಲ್ಲ ಪೂರ್ಣ ವಿನಾಶವನ್ನು ಬರಮಾಡುವರು.
24 : ಹೀಗಿರಲು ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೇಳುವುದೇನೆಂದರೆ: “ಸಿಯೋನಿನಲ್ಲಿ ವಾಸಿಸುವ ನನ್ನ ಜನರೇ, ಈಜಿಪ್ಟಿನವರು ನಿಮಗೆ ಮಾಡಿದಂತೆ ಅಸ್ಸೀರಿಯದವರು ನಿಮ್ಮನ್ನು ಬಡಿಗೆಯಿಂದ ಹೊಡೆದು, ನಿಮಗೆ ವಿರುದ್ಧ ದೊಣ್ಣೆಯನ್ನು ಎತ್ತುವಾಗ ಅವರಿಗೆ ಹೆದರಬೇಡಿ;
25 : ನಿಮ್ಮ ಮೇಲಿರುವ ನನ್ನ ಕೋಪ ಬಹುಬೇಗನೆ ಇಳಿದು, ಅವರ ಮೇಲೆ ತಿರುಗಿಕೊಳ್ಳುವುದು.
26 : ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯಾದ ನಾನು, ಒಮ್ಮೆ ಓರೇಬನ ಬಂಡೆಯ ಬಳಿ ಮಿದ್ಯಾನರಿಗೆ ಮಾಡಿದಂತೆ, ಅಸ್ಸೀರಿಯದವರನ್ನು ಚಾಟಿಯಿಂದ ಥಳಿಸುವೆನು. ಕೆಂಪು ಸಮುದ್ರದಲ್ಲಿ ಈಜಿಪ್ಟರನ್ನು ದಂಡಿಸಿದಂತೆ ಅಸ್ಸೀರಿಯದವರನ್ನು ದಂಡಿಸಲು ದೊಣ್ಣೆಯನ್ನೆತ್ತುವೆನು.
27 : ಆ ದಿನ ಬಂದಾಗ ಅವರು ನಿಮ್ಮ ಮೇಲೆ ಹೊರಿಸಿರುವ ಗುಲಾಮಗಿರಿಯನ್ನು ಕಳಚಿ ಹಾಕಲಾಗುವುದು. ನಿಮ್ಮ ಕೊರಳಿಗೆ ಕಟ್ಟಿದ ದಾಸ್ಯದ ನೊಗವನ್ನು ಮುರಿದು ಹಾಕಲಾಗುವುದು.”
28 : ಶತ್ರುಸೇನೆ ಅಯ್ಯಾಥಿನ ಮೇಲೆ ಬಂದು ಇಳಿದಿದೆ. ಮಿಗ್ರೋನನ್ನು ಹಾದು ಹೋಗಿದೆ; ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಗಳನ್ನು ಬಿಟ್ಟಿದೆ.
29 : ಕಣಿವೆಯನ್ನು ದಾಟಿದೆ; ‘ಗೆಬಾದಲ್ಲಿ ದಂಡಿಳಿಸೋಣ’ ಎಂದು ಹೇಳುತ್ತಿದೆ. ರಾಮಾ ಜನತೆ ನಡುಗುತ್ತಿದೆ, ಸೌಲನ ಗಿಬೆಯದ ಜನ ಪಲಾಯನ ಗೈದಿದೆ.
30 : ಗಲ್ಲೀಮ್ ಗ್ರಾಮಸ್ಥರೇ, ಕೂಗಿ ಕಿರಿಚಿಕೊಳ್ಳಿ, ಲಯೇಷದ ಜನರೇ, ಕಿವಿಗೊಡಿರಿ. ಅನಾತೋತಿನ ಜನರೇ, ಪ್ರತ್ಯುತ್ತರ ಕೊಡಿ.
31 : ದಿಕ್ಕು ಪಾಲಾಗಿಹರು ಮದ್ಮೇನಿನ ಜನರು; ವಲಸೆ ಹೋಗಿಹರು ಗೇಬೆಮಿನ ನಿವಾಸಿಗಳು.
32 : ಅದೇ ದಿನ ಬೀಡುಬಿಡುವರು ಶತ್ರುಗಳು ನೋಬಿನಲ್ಲಿ; ಸಿಯೋನ್ ಬೆಟ್ಟದ ಕಡೆಗೆ, ಜೆರುಸಲೇಮಿನ ಗುಡ್ಡದ ಕಡೆಗೆ ಮುಷ್ಟಿ ತೋರಿಸುತ್ತಿಹರಿದೊ ಆ ದಿಕ್ಕಿಗೆ.
33 : ಇಗೋ, ಪ್ರಭುವಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಮರದ ಕೊಂಬೆಗಳನ್ನು ದುಡುಮ್ಮನೆ ಬೀಳುಸುವರು. ಉನ್ನತವಾದ ವೃಕ್ಷಗಳನ್ನು ಕಡಿದು ಹಾಕುವರು. ಎತ್ತರದ ಮರಗಳನ್ನು ನೆಲಕ್ಕೆ ಉರುಳಿಸುವರು.
34 : ಕಾಡಿನ ಪೊದೆಗಳನ್ನು ಕೊಡಲಿಯಿಂದ ಕಡಿದುಬಿಡುವರು. ಲೆಬನೋನಿನ ಭವ್ಯ ಮರಗಳು ಬಿದ್ದುಹೋಗುವುವು.

Holydivine