Isaiah - Chapter 54
Holy Bible

1 : ಆನಂದ ಗೀತೆಯನು ಹಾಡು ಹೆರದವಳೇ, ಬಂಜೆಯಾಗಿದ್ದವಳೇ; ಉಲ್ಲಾಸದಿಂದ ಅರಚು, ಬೇನೆಯನು ಅನುಭವಿಸದವಳೇ. ‘ಗಂಡನುಳ್ಳವಳಿಗಿಂತ ಹೆಚ್ಚು ಮಕ್ಕಳನ್ನು ಹೆರುವೆ’ ಎಂದು ಹೇಳುತ್ತಾರೆ ಸರ್ವೇಶ್ವರಸ್ವಾಮಿ ನಿನಗೆ.
2 : ವಿಸ್ತರಿಸು ನಿನ್ನ ಗುಡಾರವನು, ಚಾಚು ಮುಂದಕೆ ಗುಡಾರದ ಬಟ್ಟೆಗಳನು, ಹೆದರಬೇಡ; ಉದ್ದಮಾಡು ಹಗ್ಗಗಳನು, ಬಲಪಡಿಸು ಗೂಟಗಳನು.
3 : ಏಕೆಂದರೆ ಹಬ್ಬಿಕೊಳ್ಳುವೆ ನೀನು ಎಡಬಲದೊಳು ಎಲ್ಲೆಲ್ಲು, ವಶಮಾಡಿಕೊಳ್ಳುವರು ನಿನ್ನ ಸಂತಾನದವರು ಜನಾಂಗಗಳನು. ಜನಭರಿತವಾಗುವಂತೆ ಮಾಡುವರು ಪಾಳುಬಿದ್ದ ಪಟ್ಟಣಗಳನು.
4 : ಅಂಜಬೇಡ, ನಿನಗಾಗುವುದಿಲ್ಲ ಅವಮಾನ ನಾಚಬೇಡ, ನಿನಗಾಗದು ಆಶಾಭಂಗ. ಮರೆವೆ ಯೌವನದಲ್ಲಿ ನಿನಗಾದ ಅವಮಾನವನು ವೈಧವ್ಯದಲ್ಲಾದ ನಿಂದೆ ನೆನಪಿಗೆ ಬಾರದಿನ್ನು.
5 : ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ.
6 : ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು:
7 : “ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ.
8 : ತಟ್ಟನೆ ಉಕ್ಕು ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ.
9 : “ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು.
10 : ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.” ಜೆರುಸಲೇಮಿನ ಭವ್ಯ ಭವಿಷ್ಯ
11 : “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿ ಗಳಿಂದ.
12 : ನಿರ್ಮಿಸುವೆ ನಿನ್ನ ಗೋಪುರಗಳನು ಮಾಣಿಕ್ಯಗಳಿಂದ ನಿನ್ನ ಪೌಳಿಗೋಡೆಯನು ಅನಘ್ರ್ಯ ರತ್ನಗಳಿಂದ.
13 : ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ ಸಮೃದ್ಧವಾಗಿ ಬಾಳುವರು ಅವರು ಸುಖಶಾಂತಿಯಿಂದ.
14 : ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ದೂರ, ಅವು ಬಾರವು ನಿನ್ನ ಹತ್ತಿರ.
15 : ನಿನ್ನ ಮೇಲೆ ಆಕ್ರಮಣಕೆ ಬರುವವನು ಪಡೆದಿಲ್ಲ ಅನುಮತಿ ನನ್ನಿಂದ ನಿನ್ನ ಮೇಲೆ ಆಕ್ರಮಣ ಮಾಡುವವನು ಪಡೆವನು ಸೋಲನು ನಿನ್ನಿಂದ.
16 : ಕೆಂಡ ಊದಿ ಕುಲುಮೆಯಲ್ಲಿ ಆಯುಧ ಮಾಡುವ ಕಮ್ಮಾರನನು ನಾನೇ ಸೃಷ್ಟಿಸಿದಾತ. ವಿನಾಶಮಾಡಲು ಬರುವ ಕೆಡುಕರನು ನಾನೇ ಉಂಟುಮಾಡಿದಾತ.
17 : ಸಫಲವಾಗದು ನಿನ್ನ ವಿರುದ್ಧ ಪ್ರಯೋಗಿಸಿದ ಆಯುಧ ನ್ಯಾಯಸ್ಥಾನದಲ್ಲಿ ನಿನ್ನ ಪ್ರತಿವಾದಿ ಪಡೆವನು ಅಪಜಯ ನನ್ನ ದಾಸನನು ರಕ್ಷಿಸಿ ಆತನಿಗೆ ನೀಡುವೆ ವಿಜಯ” ಇದು ಸರ್ವೇಶ್ವರನ ವಾಕ್ಯ.

Holydivine