Isaiah - Chapter 27
Holy Bible

1 : ಆ ದಿನದಂದು ಸರ್ವೇಶ್ವರಸ್ವಾಮಿ ತಮ್ಮ ಘೋರವಾದ, ಕ್ರೂರವಾದ, ಮಾರಕವಾದ ಖಡ್ಗದಿಂದ ವೇಗವಾಗಿ ಧಾವಿಸುವ ಹಾಗೂ ಡೊಂಕಾಗಿ ಹರಿಯುವ ಸರ್ಪವನ್ನು ಹೊಡೆಯುವರು. ಮಹಾನದಿಯಲ್ಲಿನ ಘಟಸರ್ಪವನ್ನು ಸಹ ಕೊಂದುಹಾಕುವರು. ದ್ರಾಕ್ಷಾತೋಟದ ಗೀತೆ
2 : ಆ ದಿನದಲ್ಲಿ ಪೇಳ್ವರು ಸರ್ವೇಶ್ವರ: “ಇಗೋ, ನನ್ನ ವಿಹಾರದ ದ್ರಾಕ್ಷಾವನ, ಇದ ಕುರಿತು ಹಾಡಿರಿ ಒಂದು ಗಾನ.
3 : ಸರ್ವೇಶ್ವರನಾದ ನಾನೇ ಇದರ ತೋಟಗಾರ, ಕ್ಷಣಕ್ಷಣಕ್ಕೂ ಇದಕೆ ಹೊಯ್ಯುವೆ ನೀರ, ಇದನ್ನಾದರೂ ಮುಟ್ಟದಂತೆ ಕಾಯುವೆ ನಿರಂತರ.
4 : ಇದರ ಬಗ್ಗೆ ನನಗೆ ಇನ್ನಿಲ್ಲ ರೌದ್ರ, ಇದರೊಳಗಿಲ್ಲ ಮುಳ್ಳುಕಳ್ಳಿಗಳ ಗಹ್ವರ, ಇದ್ದಿದ್ದರೆ ಸುಟ್ಟು ಭಸ್ಮಮಾಡುತ್ತಿದ್ದೆ ಹೂಡಿ ಸಮರ.
5 : ಬೇಡವಾದರೆ ಆ ವೈರಿಗಳು ಶರಣಾಗತರಾಗಲಿ, ಬರಲಿ ನನ್ನ ಸಂಗಡ ಸಂಧಾನಕೆ, ಹೌದು, ಬರಲಿ ನನ್ನೊಡನೆ ಸಂಧಾನಕೆ.
6 : ಮುಂಬರುವ ಕಾಲದಲಿ ಬೇರೂರುವುದು ಂiÀiಕೋಬ ಸಂತಾನ, ಚಿಗುರಿ ಹೂಬಿಡುವುದು ಇಸ್ರಯೇಲ್ ಮನೆತನ, ಆ ವೃಕ್ಷಫಲದಿಂದ ತುಂಬಿರುವುದು ಜಗದೆಲ್ಲ ಜನ.
7 : ಸರ್ವೇಶ್ವರ ತಮ್ಮ ಪ್ರಜೆಯ ಘಾತುಕರನ್ನು ದಂಡಿಸಿದಷ್ಟು ತಮ್ಮ ಪ್ರಜೆಯನ್ನು ದಂಡಿಸಲಿಲ್ಲ. ಘಾತುಕರಿಗಾದ ಪ್ರಾಣನಷ್ಟ ತಮ್ಮ ಪ್ರಜೆಗೆ ಆಗಲಿಲ್ಲ.
8 : ಆದರೂ ಸರ್ವೇಶ್ವರ ತಮ್ಮ ಪ್ರಜೆಗೆ ಗಡೀಪಾರು ಶಿಕ್ಷೆಯನ್ನು ವಿಧಿಸಿದರು. ದೂರದ ಮೂಡಣ ಬಿರುಗಾಳಿಯ ಬಡಿತಕ್ಕೆ ಗುರಿಮಾಡಿ ಅವರನ್ನು ತೊಲಗಿಸಿದರು.
9 : ಇಂತಿರಲು ಯಕೋಬ್ಯರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗಬೇಕಾದರೆ, ಅವರ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲ ದೊರಕಬೇಕಾದರೆ, ಅವರ ವಿಗ್ರಹಾರಾಧಕ ಬಲಿಪೀಠದ ಕಲ್ಲುಗಳೆಲ್ಲ ಸುಣ್ಣದಂತೆ ಪುಡಿಪುಡಿ ಆಗಬೇಕು; ಆಶೇರಾ ಎಂಬ ವಿಗ್ರಹಸ್ತಂಭಗಳನ್ನೂ ಸೂರ್ಯ ಸ್ತಂಭಗಳನ್ನೂ ಪ್ರತಿಷ್ಠಾಪಿಸುವುದು ಇನ್ನು ನಿಲ್ಲಬೇಕು.
10 : ಕೋಟೆಕೊತ್ತಲಗಳಿಂದ ಕೂಡಿದ ಪಟ್ಟಣ ಪಾಳುಬಿದ್ದಿದೆ; ಕಾಡಿನಂತೆ ನಿರ್ಜನ ಪ್ರದೇಶವಾಗಿದೆ. ದನಕರುಗಳು ಮೇದು ಮಲಗುವ ಗೋಮಾಳವಾಗಿದೆ.
11 : ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.
12 : ಇಸ್ರಯೇಲಿನ ಜನರೇ, ದಿನವು ಬರಲಿದೆ. ಆಗ ಯೂಫ್ರೆಟಿಸ್ ನದಿಯಿಂದ ಈಜಿಪ್ಟ್ ದೇಶದ ನದಿಯವರೆಗೆ, ಸರ್ವೇಶ್ವರ ತೆನೆಗಳನ್ನು ಒಕ್ಕಣೆ ಮಾಡುವರು. ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಬೇರ್ಪಡಿಸಿ ಆಯ್ಕೆಮಾಡುವರು.
13 : ಆ ದಿನ ಬಂದಾಗ, ಮಹಾ ತುತೂರಿಯೊಂದನ್ನು ಊದಲಾಗುವುದು. ಗಡೀಪಾರಾಗಿ ಚದುರಿಹೋಗಿರುವ ಇಸ್ರಯೇಲರನ್ನು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ಕರೆಯಲಾಗುವುದು. ಅವರೆಲ್ಲರೂ ಜೆರುಸಲೇಮಿಗೆ ಬಂದು ಪವಿತ್ರ ಪರ್ವತದ ಮೇಲೆ ಸರ್ವೇಶ್ವರಸ್ವಾಮಿಗೆ ಅಡ್ಡ ಬೀಳುವರು, ಆರಾಧನೆ ಮಾಡುವರು.

Holydivine