Isaiah - Chapter 51
Holy Bible

1 : “ಸದ್ಧರ್ಮಾರ್ಥಿಗಳಾದ ಸರ್ವೇಶ್ವರನ ಶರಣರೇ ಕೇಳಿ: ನೀವು ಯಾವ ಬಂಡೆಗಲ್ಲಿನಿಂದ ರೂಪು ಪಡೆದಿರಿ, ಯಾವ ಕಲ್ಲುಗುಂಡಿಯಿಂದ ಅಗೆಯಲ್ಪಟ್ಟಿರಿ, ಎಂಬುದನ್ನು ಪರಿಭಾವಿಸಿ ನೋಡಿರಿ.
2 : ನೆನೆಯಿರಿ ನಿಮ್ಮ ಮೂಲಪುರುಷ ಅಬ್ರಹಾಮನನು ಅವನ ಸತಿ ಸಾರಳನು. ಅಬ್ರಹಾಮನನ್ನು ನಾ ಕರೆದಾಗ ಆತನು ಒಬ್ಬಂಟಿಗನು ಆಶೀರ್ವಾದದಿ ನಾ ಬೆಳೆಸಿದೆ ಆತನ ಸಂತಾನವನು.
3 : ಸರ್ವೇಶ್ವರನಾದ ನಾನು ಸಂತೈಸದೆ ಬಿಡೆನು ಸಿಯೋನನ್ನು, ಉದ್ಧರಿಸುವೆನು ಆ ಹಾಳುಬಿದ್ದ ಸ್ಥಳಗಳೆಲ್ಲವನು. ಮಾರ್ಪಡಿಸುವೆನು ಕಾಡುನೆಲವನು ಏದೆನ್ ಉದ್ಯಾನದಂತೆ ಮರುಭೂಮಿಯನು, ದೇವತೆಗಳ ಉದ್ಯಾನವಾಗುವಂತೆ ಹರ್ಷೋಲ್ಲಾಸ, ಸ್ತುತಿಸ್ತೋತ್ರ, ಮಧುರಗಾನ ಅಲ್ಲಿ ನೆಲೆಸುವಂತೆ.
4 : ಆಲಿಸಿರಿ ನನ್ನ ಜನರೆ; ಕಿವಿಗೊಡಿ ನನ್ನ ಪ್ರಜೆಗಳೆ: ಧರ್ಮೋಪದೇಶ ಹೊರಡುವುದು ರಾಷ್ಟ್ರಗಳಿಗೆ ನನ್ನಿಂದಲೆ; ಬೆಳಗುವುದು ಜಗಜ್ಯೋತಿಯಾಗಿ ನನ್ನ ನ್ಯಾಯಬೋಧೆ.
5 : ಹತ್ತಿರದಲ್ಲೇ ಇದೆ ನಾ ನೀಡುವ ಮುಕ್ತಿ ಸಿಗುವುದು ನನ್ನಿಂದ ವಿಮೋಚನಾ ಶಕ್ತಿ ನ್ಯಾಯನೀಡುವೆನು ರಾಷ್ಟ್ರಗಳಿಗೆ ನನ್ನ ಭುಜಬಲದಿಂದ ನನ್ನನ್ನು ನಿರೀಕ್ಷಿಸಿಕೊಂಡಿರುವರು ಜನರು ದೂರದೇಶಗಳಿಂದ ಕಾದಿರುವರು ಆ ಭುಜಬಲ ಸಾಧನೆಗಾಗಿ ನಂಬಿಕೆಯಿಂದ.
6 : ಆಕಾಶಮಂಡಲವನು ನೋಡಿ ಕಣ್ಣೆತ್ತಿ ಭೂಮಂಡಲದತ್ತ ನೋಡಿ ಕೆಳಗೆ ದಿಟ್ಟಿಸಿ. ಆಕಾಶ ಚದರಿಹೋಗುವುದು ಹೊಗೆಯಂತೆ ಭೂಮಿ ಹರಿದುಹೋಗುವುದು ಬಟ್ಟೆಯಂತೆ ಸಾಯುವರು ಭೂನಿವಾಸಿಗಳು ಅದರಂತೆ. ನಾ ಕೊಡುವ ವಿಮೋಚನೆಯೋ ನಿಲ್ಲುವುದು ಶಾಶ್ವತವಾಗಿ ನಾ ನೀಡುವ ಮುಕ್ತಿಯೋ ಅಳಿದುಹೋಗದು ಭಂಗವಾಗಿ.
7 : “ಕಿವಿಗೊಟ್ಟು ಕೇಳಿರಿ ಸದ್ಧರ್ಮದ ಸುಜ್ಞಾನಿಗಳೇ, ನನ್ನ ಬೋಧೆಯಲ್ಲಿ ಶ್ರದ್ಧೆಯಿಡುವವರೇ, ಹೆದರಬೇಡಿ ಮನುಜರಾಡುವ ದೂರಿಗೆ ಅಂಜದಿರಿ ಅವರ ನಿಂದೆದೂಷಣೆಗೆ.
8 : ನುಸಿ ಅವರನ್ನು ತಿಂದುಹಾಕುವುದು ಬಟ್ಟೆಯಂತೆ ಹುಳು ಅವರನ್ನು ಮೆದ್ದುಬಿಡುವುದು ಉಣ್ಣೆಯಂತೆ. ನಾ ನೀಡುವ ಮುಕ್ತಿಯೋ ನಿಲ್ಲುವುದು ಶಾಶ್ವತವಾಗಿ ನಾ ಕೊಡುವ ವಿಮೋಚನೆ ಸದಾ ಇರುವುದು ನೆಲೆಯಾಗಿ.”
9 : ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?
10 : ಸಮುದ್ರ ಜನರಾಶಿಗಳನು ಬತ್ತಿಸಿದ ಬಾಹು ನೀನು ವಿಮುಕ್ತ ಜನ ಹಾಯುವಂತೆ ಸಮುದ್ರದಲಿ ದಾರಿಮಾಡಿದೆ ನೀನು.
11 : ಹಿಂದಿರುಗುವರು ಸರ್ವೇಶ್ವರನಿಂದ ರಕ್ಷಣೆ ಪಡೆದವರು ಉತ್ಸಾಹ ಗೀತೆಯೊಂದಿಗೆ ಸಿಯೋನನ್ನು ಸೇರುವರವರು. ಧರಿಸಿಕೊಳ್ಳುವರು ಶಾಶ್ವತ ಸಂತಸವೆಂಬ ಕಿರೀಟವನು ಅನುಭವಿಸುವರು ಹರ್ಷಾನಂದಗಳನು ತೊಲಗಿ ಓಡುವುವು ದುಃಖದುಗುಡಗಳು.
12 : “ನಾನೆ, ನಾನೆ ನಿನ್ನನು ಸಂತೈಸುವವನಾಗಿರೆ, ನೀ ಭಯಪಡುವುದೇಕೆ ಮತ್ರ್ಯನಾದ ಮಾನವನಿಗೆ? ನೀ ಹೆದರಿ ನಡುಗುವುದೇಕೆ ಹುಲುಮಾನವನಿಗೆ?
13 : ಆಕಾಶವನು ಹರಡಿ ಭೂಮಿಯನು ಸ್ಥಾಪಿಸಿದಾ ನಿನ್ನ ಸೃಷ್ಟಿಕರ್ತ ಸರ್ವೇಶ್ವರನನು ಮರೆತುಬಿಟ್ಟೆಯಾ? ನಾಶಮಾಡಲು ಹವಣಿಸುವ ಹಿಂಸಕನ ಕ್ರೋಧಕೆ ನೀ ಎಡೆಬಿಡದೆ ದಿನವೆಲ್ಲ ಅಂಜುತ್ತಿರಬೇಕೆ? ಆ ಹಿಂಸಕನ ಕ್ರೋಧವು ಈ ಗ ಹೋದುದೆಲ್ಲಿಗೆ?
14 : ಸೆರೆಯಲ್ಲಿ ಸೊರಗಿದವನು ಸಾಯನು; ಇಳಿಯನವನು ಪಾತಾಳಕ್ಕೆ, ಬಿಡುಗಡೆಯಾಗುವನು ಬೇಗನೆ, ಇರದವನಿಗೆ ಅನ್ನದ ಕೊರತೆ.
15 : ನಿನ್ನ ದೇವರಾದ ಸರ್ವೇಶ್ವರ ನಾನೆ ಸಮುದ್ರವನು ಕಲ್ಲೋಲಗೊಳಿಸುವವನು ನಾನೆ ಅದರ ಅಲೆಗಳನು ಭೋರ್ಗರೆಸುವವನು ನಾನೆ ನನ್ನ ಹೆಸರು ಸೇನಾಧೀಶ್ವರ ಸರ್ವೇಶ್ವರ !
16 : ಆಕಾಶವನ್ನು ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.” ಚೇತರಿಸಿಕೊಳ್ಳಲು ಜೆರುಸಲೇಮಿಗೆ ಕರೆ
17 : ಎಚ್ಚೆತ್ತುಕೊ, ಎಚ್ಚೆತ್ತುಕೊ, ನೀನೆದ್ದು ನಿಲ್ಲು ಜೆರುಸಲೇಮೆ ! ಕುಡಿದುಬಿಟ್ಟಿರುವೆ ನೀ ಮತ್ತುತರುವ ಪಾನ ಪಾತ್ರೆಯಿಂದ ತೊಟ್ಟನ್ನೂ ಬಿಡದೆ ಹೀರಿರುವೆ ಸರ್ವೇಶ್ವರನ ಕೋಪ ತುಂಬಿದಾ ಕೊಡದಿಂದ!
18 : ಅವಳನ್ನು ಕರೆದುಕೊಂಡು ಹೋಗುವವನಾರೂ ಇಲ್ಲ, ಆಕೆ ಹೆತ್ತಾ ಮಕ್ಕಳೊಳು; ಅವಳ ಕೈಹಿಡಿದು ನಡೆಸುವವನು ಒಬ್ಬನೂ ಇಲ್ಲ, ಆಕೆ ಸಾಕಿದ ಕುವರರೊಳು.
19 : ಬಂದೊದಗಿವೆ ಇಮ್ಮಡಿ ಬಾಧೆ ನಿನಗೆ ಪ್ರಲಾಪಿಸಿ ಗೋಳಿಡುವವರಾರು ನಿನ್ನೊಂದಿಗೆ? ನಾಡು ಹಾಳುಪಾಳಾಗಿದೆ, ತುತ್ತಾಗಿದೆ ಪ್ರಜೆ ಕ್ಷಾಮಕ್ಷೋಭೆಗೆ; ನಿನ್ನನು ಸಂತೈಸುವುದಾದರು ಹೇಗೆ?
20 : ನಿನ್ನ ಮಕ್ಕಳು ಬಿದ್ದರು ಬೀದಿ ಚೌಕಗಳಲಿ ಬಲೆಗೆ ಬಿದ್ದ ಜಿಂಕೆಯಂತಿಹರು ಪ್ರಜ್ಞೆತಪ್ಪಿ. ನಿನ್ನ ದೇವರನು ಮೂದಲಿಸಿಹರು ಸರ್ವೇಶ್ವರನ ರೋಷವನ್ನನುಭವಿಸಿಹರು.
21 : ಇಂತಿರಲು ಶೋಷಿತಳೇ, ಕೇಳು ನನ್ನ ಮಾತನು ದ್ರಾಕ್ಷಾರಸದಿಂದಲ್ಲ ನೀ ಅಮಲೇರಿರುವುದು.
22 : ಕೇಳು, ಸ್ವಾಮಿ ಸರ್ವೇಶ್ವರ ಆದ ನಾ ಹೇಳುವ ಮಾತನು: ತನ್ನ ಜನರ ಪರವಾಗಿ ವಾದಿಸುವ ನಿನ್ನ ದೇವರು ನಾನು: “ಇಗೋ, ಅಮಲೇರಿಸುವ ಪಾತ್ರೆಯನು ನನ್ನ ಕೋಪದಿಂದ ತುಂಬಿತುಳುಕುವಾ ಕೊಡವನು ನೀ ಕುಡಿಯಬಾರದೆಂದು ನಿನ್ನಿಂದ ತೆಗೆದುಬಿಡುವೆನು.
23 : ಕೊಡುವೆ ಆ ಕೋಪದ ಕೊಡವನು ನಿನ್ನನು ಶೋಷಿಸಿದವರಿಗೆ ‘ನಾವು ತುಳಿದು ಹಾದುಹೋಗುವಂತೆ ನೆಲಕಚ್ಚಿ ಬೀಳು ಕೆಳಗೆ’ ಎಂದು ನಿಮ್ಮ ಬೆನ್ನನೆ ನೆಲವಾಗಿಸಿ, ಬೀದಿಕಸವನ್ನಾಗಿಸಿದವರಿಗೆ.”

Holydivine