Isaiah - Chapter 65
Holy Bible

1 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ನನ್ನನ್ನು ವಿಚಾರಿಸದವರಿಗೂ ನಾ ದರ್ಶನವಿತ್ತೆ. ನನ್ನನ್ನು ಹುಡುಕದವರಿಗೂ ನಾ ಒಡನೆ ಸಿಕ್ಕಿದೆ. ನನ್ನ ನಾಮಸ್ಮರಣೆ ಮಾಡದ ಜನಾಂಗಕ್ಕೆ, ಇಗೋ, ‘ಇದ್ದೇನೆ, ಇಲ್ಲೇ ಇದ್ದೇನೆ’ ಎನ್ನುತ್ತಿದ್ದೆ.
2 : ನನ್ನನ್ನು ತೊರೆದು ತಮಗೆ ಇಷ್ಟ ಬಂದ ಹಾದಿಯನ್ನು ಹಿಡಿದು ದುಷ್ಟಮಾರ್ಗದಲ್ಲೆ ನಡೆದ ಜನತೆಯನ್ನ ಕೈಚಾಚಿ ಕರೆದೆ.
3 : ಈ ಜನರು ತೋಪುಗಳಲ್ಲಿ ಬಲಿಕೊಡುತ್ತಾರೆ, ಇಟ್ಟಿಗೆಯ ಪೀಠಗಳ ಮೇಲೆ ಧೂಪಾರತಿ ಎತ್ತುತ್ತಾರೆ.
4 : ಗೋರಿಗಳಲ್ಲಿ ಕುಳಿತುಕೊಳ್ಳುತ್ತಾರೆ, ಗುಪ್ತ ಸ್ಥಳಗಳಲ್ಲಿ ರಾತ್ರಿಯನ್ನು ಕಳೆಯುತ್ತಾರೆ, ಹಂದಿಯ ಮಾಂಸವನ್ನು ತಿನ್ನುತ್ತಾರೆ, ಅಸಹ್ಯ ಪದಾರ್ಥಗಳ ಸಾರವನ್ನು ತಟ್ಟೆಗಳಲ್ಲಿ ಬಡಿಸಿಕೊಳ್ಳುತ್ತಾರೆ.
5 : ಬೇರೆಯವರಿಗೆ, ‘ಅಲ್ಲೇ ನಿಲ್ಲು, ಹತ್ತಿರ ಬರಬೇಡ; ನಿನಗಿಂತ ನಾನು ಮಡಿವಂತ’ ಎನ್ನುತ್ತಾರೆ. ಹೀಗೆ ಇವರು ನನಗೆ ಉಸಿರುಕಟ್ಟುವ ಹೊಗೆಯಾಗಿದ್ದಾರೆ; ದಿನವೆಲ್ಲ ಉರಿಯುವ ಬೆಂಕಿಯಾಗಿದ್ದಾರೆ.
6 : “ಇಗೋ, ಇವೆಲ್ಲ ನನ್ನ ಕಣ್ಣೆದುರಿಗೆ ಲಿಖಿತವಾಗಿವೆ; ನಾನು ಮುಯ್ಯಿ ತೀರಿಸಿಯೇ ತೀರಿಸುವೆನು, ಸುಮ್ಮನಿರಲಾರೆ.
7 : ಇವರೂ ಇವರ ಪಿತೃಗಳೂ ಬೆಟ್ಟಗುಡ್ಡಗಳ ಮೇಲೆ ಧೂಪಾರತಿ ಎತ್ತಿ ನನ್ನನ್ನು ಅವಮಾನಗೊಳಿಸಿದ್ದಾರೆ. ತಕ್ಕ ಪ್ರತೀಕಾರವನ್ನು ಎಸಗುವೆನು ಈ ಅಪರಾಧಗಳಿಗೆ. ಹೌದು, ಮೊಟ್ಟಮೊದಲು ಪ್ರತೀಕಾರ ಇವರ ಕಾರ್ಯಕ್ಕೆ; ಅದನ್ನು ಸರಿಯಾಗಿ ಅಳೆದು ಸುರಿಸುವೆನು ಇವರ ಮಡಿಲಿಗೆ.”
8 : ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: “ದ್ರಾಕ್ಷಿಯ ಗೊಂಚಲಿನಲ್ಲಿ ರಸವಿರುವತನಕ, ‘ಅದನ್ನು ಹಾಳು ಮಾಡಬೇಡ, ಅದೊಂದು ಪ್ರಸಾದ,’ ಎನ್ನುತ್ತಾರೆ ಜನ. ಅಂತೆಯೇ ನಾನು ನನ್ನ ಭಕ್ತಾದಿಗಳನ್ನು ಲಕ್ಷ್ಯಕ್ಕೆ ತಂದುಕೊಂಡು ಜನರೆಲ್ಲರನ್ನು ಹಾಳು ಮಾಡಬಾರದು ಎಂದುಕೊಂಡೆನು.
9 : ಯಕೋಬನಿಂದ ಒಂದು ಸಂತಾನವನ್ನು ಉತ್ಪನ್ನ ಮಾಡುವೆನು; ಯೆಹೂದ ವಂಶದಿಂದ, ನನ್ನ ಪರ್ವತಗಳ ಸೊತ್ತಿಗೆ ಹಕ್ಕುಬಾಧ್ಯತೆಯುಳ್ಳ ಒಂದು ಸಂತತಿಯನ್ನು ಬರಮಾಡುವೆನು. ನನ್ನಿಂದ ಆಯ್ಕೆಯಾದವರು ಆ ಸೊತ್ತನ್ನು ಅನುಭವಿಸುವರು, ನನ್ನ ಭಕ್ತಾದಿಗಳು ಅಲ್ಲಿ ವಾಸಮಾಡುವರು.
10 : ನನ್ನ ಜನರ ಹಿತಕ್ಕಾಗಿ ಶಾರೋನ್ ಬಯಲು ಮಂದೆಗಳಿಗೆ ಹುಲ್ಲುಗಾವಲಾಗುವುದು; ಆಕೋರಿನ ಕಣಿವೆ ದನಕರುಗಳಿಗೆ ಕೊಟ್ಟಿಗೆಯಾಗುವುದು.
11 : “ಆದರೆ ನನ್ನನ್ನು ತೊರೆದು ನನ್ನ ಪವಿತ್ರ ಪರ್ವತವನ್ನು ಮರೆತು, ‘ಗಾದ್’ ಎಂಬ ಅದೃಷ್ಟ ದೇವತೆಗೆ ಔತಣವನ್ನು ಅಣಿಮಾಡುವ, ‘ಮೆನೀ’ ಎಂಬ ಗತಿ ದೇವತೆಗೆ ಬೆರೆತ ಮದ್ಯವನ್ನು ಭರ್ತಿ ಮಾಡುವ, ನಿಮಗೆ ಕತ್ತಿಯನ್ನೇ ಗತಿಯನ್ನಾಗಿ ಮಾಡುವೆನು.
12 : ನೀವೆಲ್ಲರು ಕೊಲೆಗೆ ಗುರಿಯಾಗುವಿರಿ, ಕತ್ತಿಗೆ ತುತ್ತಾಗುವಿರಿ. ಏಕೆಂದರೆ, ನಾನು ಕೂಗಿದಾಗ ನೀವು ಉತ್ತರ ಕೊಡಲಿಲ್ಲ, ನಾನು ಹೇಳಿದಾಗ ನೀವು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದುದನ್ನೇ ನಡೆಸಿ ನನಗೆ ಇಷ್ಟವಿಲ್ಲದ್ದನ್ನೇ ಆಯ್ಕೆಮಾಡಿಕೊಂಡಿರಿ.
13 : ಇಗೋ, ನನ್ನ ಭಕ್ತರು ಊಟಮಾಡುವರು, ನೀವಾದರೋ ಹಸಿದಿರುವಿರಿ. ನನ್ನ ಭಕ್ತರು ಪಾನಮಾಡುವರು, ನೀವಾದರೋ ದಾಹಗೊಳ್ಳುವಿರಿ. ನನ್ನ ಭಕ್ತರು ಉಲ್ಲಾಸಗೊಳ್ಳುವರು; ನೀವಾದರೋ ಲಜ್ಜೆಗೊಳ್ಳುವಿರಿ.
14 : ನನ್ನ ಭಕ್ತರು ಹೃದಯಾನಂದದಿಂದ ಹಿಗ್ಗಿ ಹಾಡುವರು; ನೀವಾದರೋ ಮನನೊಂದು ಮೊರೆಯಿಡುವಿರಿ; ದುಃಖದಿಂದ ಅಳುವಿರಿ.
15 : ಆಯ್ಕೆಯಾದವರಿಗೆ ನಿಮ್ಮ ಹೆಸರು ಶಾಪದ ಹೆಸರಾಗಿಯೇ ಉಳಿಯುವುದು. ಏಕೆಂದರೆ, ಸ್ವಾಮಿ ಸರ್ವೇಶ್ವರ ಆದ ನಾನು ನಿಮ್ಮನ್ನು ಕೊಲೆಗೀಡುಮಾಡುವೆನು. ನನ್ನ ಭಕ್ತಾದಿಗಳಿಗಾದರೋ ಹೊಸ ಹೆಸರನ್ನು ಕೊಡುವೆನು.
16 : ಹಳೆಯ ಕಷ್ಟದುಃಖಗಳು ಇನ್ನು ಕಣ್ಮರೆಯಾಗಿ ಹೋಗುವುವು: ನಾಡಿನಲ್ಲಿ ಆಶೀರ್ವಾದ ಪಡೆಯುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಆಶೀರ್ವಾದ ಪಡೆಯುವನು. ಶಪಥ ಮಾಡುವವನು ಸತ್ಯಸ್ವರೂಪನಾದ ದೇವರ ಹೆಸರಿನಲ್ಲಿ ಶಪಥಮಾಡುವನು.”
17 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ನಾನು ಹೊಸ ಆಕಾಶವನ್ನೂ ಹೊಸಭೂಮಿಯನ್ನೂ ಸೃಷ್ಟಿಸುವೆನು; ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು.
18 : ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು.
19 : ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿ ಬರದು.
20 : ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು.
21 : ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
22 : ತಾವು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಾಗಲಿ, ತಾವು ನೆಟ್ಟ ತೋಟಗಳ ಫಲವನ್ನು ಬೇರೆಯವರು ಅನುಭವಿಸುವುದಾಗಲಿ ಇನ್ನು ಸಂಭವಿಸದು. ಏಕೆಂದರೆ, ನನ್ನ ಜನರು ಮರಗಳಂತೆ ಬಹುಕಾಲ ಬಾಳುವರು. ನನ್ನಿಂದ ಆಯ್ಕೆಯಾದವರು ತಮ್ಮ ದುಡಿಮೆಯ ಫಲವನ್ನು ದೀರ್ಘಕಾಲ ಅನುಭವಿಸುವರು.
23 : ಅವರು ವ್ಯರ್ಥವಾಗಿ ದುಡಿಯರು, ಅನಾಹುತಕ್ಕಾಗಿ ಮಕ್ಕಳನ್ನು ಹಡೆಯರು. ಸದಾಕಾಲ ಅವರೂ ಅವರ ಸಂತತಿಯವರೂ ಸರ್ವೇಶ್ವರನಿಂದ ಅನುಗ್ರಹಗೊಂಡ ಗೋತ್ರವಾಗುವರು.
24 : ಅವರು ಮೊರೆಯಿಡುವುದಕ್ಕೆ ಮುಂಚೆಯೇ ನಾ ಕಿವಿಗೊಡುವೆನು; ಅವರು ಪ್ರಾರ್ಥಿಸುವಾಗಲೇ ನಾನು ಸದುತ್ತರ ನೀಡುವೆನು.
25 : ತೋಳವೂ ಕುರಿಮರಿಯೂ ಒಂದಾಗಿ ಮೇಯುವುವು; ಸಿಂಹವು ಗೋವಿನಂತೆ ಹುಲ್ಲು ತಿನ್ನುವುದು; ಹಾವಿಗೆ ಮಣ್ಣೇ ಆಹಾರವಾಗುವುದು. ನನ್ನ ಪವಿತ್ರ ಪರ್ವತದೊಳೆಲ್ಲೂ ಅವು ಯಾವ ಕೇಡು ಮಾಡವು, ಹಾಳುಮಾಡವು.” ಇದು ಸರ್ವೇಶ್ವರ ಸ್ವಾಮಿಯ ನುಡಿ.

Holydivine