Isaiah - Chapter 15
Holy Bible

1 : ಮೋವಾಬನ್ನು ಕುರಿತ ದೈವೋಕ್ತಿ ಇದು: “ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಆರ್ ಪಟ್ಟಣವು. ಅಳಿದು ಹಾಳಾಯಿತು ಒಂದೇ ರಾತ್ರಿಯೊಳು, ಮೋವಾಬಿನ ಕೀರ್ ಪಟ್ಟಣವು.
2 : ಹತ್ತಿಹರು ಗುಡಿಗೋಪುರಗಳನು ಆಳುವುದಕ್ಕಾಗಿ, ದೀಬೋನಿನವರು, ಗೋಳಾಡುತಿಹರು ನೆಬೋವಿನಲಿ ಮೇಣ್ ಮೇದೆಬದಲಿ, ಮೋವಾಬ್ಯರು ತಲೆ ಬೋಳಿಸಿಹರು, ಗಡ್ಡಕತ್ತರಿಸಿಹರು ದುಃಖದಿಂದ ಎಲ್ಲರು.
3 : ಗೋಣಿತಟ್ಟನುಟ್ಟು ತಿರುಗುತಿಹರು ಹಾದಿಬೀದಿಗಳಲಿ, ಕಣ್ಣೀರಿಡುತ ಸೊರಗಿಹರು ಮಳಿಗೆಗಳಲಿ, ಬೀದಿ ಚೌಕಗಳಲಿ.
4 : ಕೂಗಿಕೊಳ್ಳುತಿಹವು ಹೆಷ್ಬೋನ್ ಎಲೆಯಾಲೆಗಳು, ಕೇಳಿಬರುತಿಹುದು ಯಹಚಿನವರೆಗೂ ಅವುಗಳ ರೋದನವು, ಕಿರಿಚಿಕೊಳ್ಳುತಿಹರು ಮೋವಾಬಿನ ಸೇನೆಯಾಳುಗಳು, ತತ್ತರಿಸಿ ಹೋಗಿಹವು ಅವರ ಗುಂಡಿಗೆಗಳು.
5 : ಮೊರೆಯಿಡುತ್ತಿದೆ ಎನ್ನ ಮನ ಮೋವಾಬಿನ ನಿಮಿತ್ತ, ಪಲಾಯನ ಗೈದವರು ಓಡುತಿಹರು ಚೋಯರತ್ತ, ಎಗ್ಲತ್ - ಶೆಲಿಶೀಯ ದತ್ತ, ಹತ್ತಿಹರು ಲೂಹೀತ್ ದಿಣ್ಣೆಯನ್ನು ಅಳುತ್ತ, ಪಿಡಿದಿಹರು ಹೊರೋನಯಿಮಿನ ದಾರಿಯನು ಹಾಳಾದೆವೆಂದು ಧ್ವನಿಗೈಯುತ.
6 : ಬತ್ತಿಹೋಯಿತು ನಿಮ್ರೀಮ್ ನದಿಯು, ಬಾಡಿಹೋಯಿತು ಹಸಿಹುಲ್ಲು, ಮುಗಿಯಿತು ಮೇವು, ಇಲ್ಲವಾಯಿತು ಪಚ್ಚೆಪಸಿರಾವುದು.
7 : ಎಂತಲೇ ವಿಲ್ಲೊ ಕಣಿವೆಯಾಚೆ ಹೊತ್ತು ಹೋಗುತಿಹರು, ತಾವು ಗಳಿಸಿದ ಆಸ್ತಿಯನ್ನು, ಕೂಡಿಸಿಟ್ಟ ಸ್ವತ್ತನ್ನು.
8 : ಹಬ್ಬಿದೆ ಅದರ ಪ್ರಲಾಪ ಮೋವಾಬಿನ ಎಲ್ಲೆಗಳ ಪರಿಯಂತ, ವ್ಯಾಪಿಸಿದೆ ಅದರ ಆಕ್ರಂದ ಎಗ್ಲಯಿಮಿನ್, ಬೆಯೇರ್ ಏಲೀಮಿನತನಕ.
9 : ಹರಿಯುತಿದೆ ದೀಮೋನಿನ ನದಿ ರಕ್ತಮಯವಾಗಿ, ಕಾದಿದೆ ದೀಮೋನರಿಗೆ ಇನ್ನೂ ಹೆಚ್ಚಿನ ಹಾನಿ, ಎರಗಲಿದೆ ಅಳಿದುಳಿದ ಮೋವಾಬ್ಯರ ಮೇಲೆ ಒಂದು ಕೇಸರಿ.”

Holydivine