Isaiah - Chapter 21
Holy Bible

1 : ದಕ್ಷಿಣ ಸೀಮೆಯ ನಾಡನ್ನು ಕಸದಂತೆ ಗುಡಿಸುವ ಸುಂಟರಗಾಳಿಯ ಹಾಗೆ, ಅರಣ್ಯದ ಕಡೆಯ ಭಯಂಕರ ನಾಡಿನಿಂದ ಗಂಡಾಂತರ ಬರಲಿದೆ.
2 : ಘೋರ ದರ್ಶನವೊಂದು ನನಗೆ ಕಂಡುಬಂತು: ದ್ರೋಹಿ ದ್ರೋಹವೆಸಗುತ್ತಿದ್ದಾನೆ. ಕೊಳ್ಳೆಗಾರ ಕೊಳ್ಳೆಹೊಡೆಯುತ್ತಿದ್ದಾನೆ. ಏಲಾಮೇ ಮುನ್ನುಗ್ಗು! ಮೇದ್ಯವೇ, ಮುತ್ತಿಗೆಹಾಕು! ಬಾಬಿಲೋನಿನಿಂದ ನಿನಗೊದಗಿದ ಗೋಳಾಟವನ್ನು ನಿಲ್ಲಿಸುತ್ತೇನೆ.
3 : ನಾನು ಕಂಡ ಈ ಭೀಕರ ದರ್ಶನದಿಂದ ನನಗೆ ಸೊಂಟ ಮುರಿದಂತಾಗಿದೆ. ಹೆರಿಗೆಯಂಥ ಬೇನೆಯುಂಟಾಗಿದೆ. ಕಿವಿ ಕಿತ್ತುಹೋಗುವಂತಿದೆ. ಕಣ್ಣು ಕುರುಡಾಗುವಂತಿದೆ.
4 : ಹೃದಯ ಬಡಿದುಕೊಳ್ಳುತ್ತಿದೆ. ಭಯದಿಂದ ಮೈ ನಡುಗುತ್ತಿದೆ. ನಾ ಬಯಸಿದ ಸಂಜೆಯೇ ನನಗೆ ಅಂಜಿಕೆ ತರಬೇಕೆ?
5 : ಔತಣ ಸಿದ್ಧವಾಗಿದೆ, ಚಾಪೆ ಹಾಸಿದ್ದಾರೆ. ಅತಿಥಿಗಳು ಭೋಜನ ಮಾಡುತ್ತಾ ಕುಡಿಯುತ್ತಾ ಇದ್ದಾರೆ. ಇದೋ, ಇದ್ದಕ್ಕಿದಂತೆ ಕೂಗೊಂದು ಕೇಳಿಬರುತ್ತಿದೆ: “ಪ್ರಭುಗಳೇ, ಎದ್ದೇಳಿ, ಗುರಾಣಿಗಳನ್ನು ಅಣಿಗೊಳಿಸಿರಿ.”
6 : ಆಗ (ಸರ್ವೇಶ್ವರ ಸ್ವಾಮಿ) ನನಗೆ ಹೀಗೆಂದರು: “ಹೋಗು, ಪಹರೆಯೊಬ್ಬನನ್ನು ಇಡು. ಅವನು ಕಂಡದ್ದನ್ನು ವರದಿ ಮಾಡಲಿ.
7 : ಜೋಡಿಜೋಡಿಯಾಗಿ ಬರುವ ಸವಾರರ ಪಂಕ್ತಿಯನ್ನೂ ಕತ್ತೆಗಳ ಹಾಗೂ ಒಂಟೆಗಳ ಸಾಲನ್ನೂ ನೋಡಿದಾಗ, ಎಚ್ಚರಿಕೆಯಿಂದ ಗಮನಿಸಲಿ!”
8 : ಬಳಿಕ ಪಹರೆಯವನು ಸಿಂಹಧ್ವನಿಯಿಂದ: “ಸ್ವಾಮಿ, ಹಗಲೆಲ್ಲಾ ಕಾವಲು ಗೋಪುರದಲ್ಲಿ ನಿಂತಿದ್ದೇನೆ. ರಾತ್ರಿಯಲ್ಲೂ ಕಾವಲುಗೈದಿದ್ದೇನೆ.
9 : ಇಗೋ, ಸವಾರರು ಜೋಡಿಜೋಡಿಯಾಗಿ ಬರುತಿಹರು” ಎಂದು ಕೂಗಿ ಹೇಳುತ್ತಿದ್ದಾನೆ. ಅನಂತರ ಅವನು, “ಬಾಬಿಲೋನ್ ಬಿದ್ದು ಹೋಯಿತು. ಅದರ ಪೂಜಾ ವಿಗ್ರಹಗಳೆಲ್ಲ ಒಡೆದು ಬೀದಿಪಾಲಾಗಿವೆ” ಎಂದನು.
10 : ನನ್ನ ಪ್ರಜೆಯೇ, ನನ್ನ ಕಣಜದ ದವಸವೇ, ಬಡಿತಕ್ಕೆ ಈಡಾದ ಜನರೇ, ಇಸ್ರಯೇಲರ ದೇವರಾದ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯಿಂದ ನಾನು ಕೇಳಿದ್ದನ್ನೇ ತಿಳಿಸುತ್ತಿದ್ದೇನೆ. ಎದೋಮನ್ನು ಕುರಿತ ಸಂದೇಶ
11 : ‘ದೂಮ’ ಕುರಿತ ದೈವೋಕ್ತಿ: “ಪಹರೆಯವನೇ, ರಾತ್ರಿ ಕಳೆಯುವುದು ಯಾವಾಗ? ಪಹರೆಯವನೇ, ಕತ್ತಲು ಕಳೆಯುವುದು ಯಾವಾಗ?” ಎಂಬ ಕೂಗು ಸೇಯಾರಿನಿಂದ ನನಗೆ ಕೇಳಿಬಂತು.
12 : ಅದಕ್ಕೆ ಪಹರೆಯವನು, “ಹಗಲು ಬರುತ್ತಿದೆ ಮತ್ತೆ ರಾತ್ರಿಯೂ ಬರುತ್ತದೆ. ಬೇಕಾದರೆ ಆಮೇಲೆ ಬಂದು ವಿಚಾರಿಸಿರಿ,” ಎಂದನು. ಅರೇಬಿಯ ಕುರಿತ ಸಂದೇಶ
13 : ಅರೇಬಿಯ ವಿಷಯವಾದ ದೈವೋಕ್ತಿ: “ದೇದಾದಿನ ಜನರೇ ಒಂಟೆ ಸವಾರರೇ, ಅರೇಬಿಯದ ಮರುಭೂಮಿಯಲ್ಲಿ ಬೀಡು ಬಿಡುವವರೇ,
14 : ಬಾಯಾರಿದವರಿಗೆ ನೀರನ್ನು ಕೊಡಿ. ತೇಮಾ ನಾಡಿನ ನಿವಾಸಿಗಳೇ, ವಲಸೆ ಬಂದವರಿಗೆ ಉಣಲು ಕೊಡಿ.
15 : ಅವರೆಲ್ಲ ಖಡ್ಗದಿಂದ, ಹಿರಿದ ಕತ್ತಿಯಿಂದ, ಹೂಡಿದ ಬಿಲ್ಲಿನಿಂದ, ಯುದ್ಧದ ಬಾಧೆಯಿಂದ ತಪ್ಪಿಸಿಕೊಂಡು ಓಡಿ ಬಂದಿರುವರು.”
16 : ಸರ್ವೇಶ್ವರ ನನಗೆ ಹೀಗೆಂದರು: “ಗುಲಾಮಗಿರಿಯ ವಾಯಿದೆಯ ಪ್ರಕಾರ, ಒಂದು ವರ್ಷದೊಳಗೆ ಕೇದಾರಿನ ಸಕಲ ವೈಭವ ಗತಿಸಿ ಹೋಗುವುದು.
17 : ಅಲ್ಲಿನ ಬಿಲ್ಲುಗಾರರಲ್ಲಿ ಉಳಿದವರಾಗಲೀ, ಕೇದಾರಿನ ರಣವೀರರಾಗಲೀ, ವಿರಳರಾಗುವರು. ಇಸ್ರಯೇಲರ ದೇವರಾದ ಸರ್ವೇಶ್ವರಸ್ವಾಮಿ ನಾನೇ ಇದನ್ನು ನುಡಿದಿದ್ದೇನೆ.”

Holydivine