Isaiah - Chapter 37
Holy Bible

1 : ಈ ವರದಿಯನ್ನು ಕೇಳಿದ ಹಿಜ್ಕೀಯನು ಕೂಡ ಬಟ್ಟೆಯನ್ನು ಹರಿದುಕೊಂಡು, ಗೋಣಿತಟ್ಟನ್ನು ಕಟ್ಟಿಕೊಂಡು, ಸರ್ವೇಶ್ವರ ಸ್ವಾಮಿಯ ಆಲಯಕ್ಕೆ ಹೋದನು.
2 : ಇದಲ್ಲದೆ, ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಕಾರ್ಯದರ್ಶಿ ಶೆಬ್ನ, ಹಿರಿಯ ಯಾಜಕರು ಇವರನ್ನು ಕರೆಸಿ: “ನೀವು ಗೋಣಿತಟ್ಟನ್ನು ಕಟ್ಟಿಕೊಂಡು, ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ಬಳಿಗೆ ಹೋಗಿ
3 : ಅವನಿಗೆ ಹೀಗೆಂದು ಹೇಳಿ: ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ. ಹೆರಿಗೆಯ ಕಾಲ ಬಂದಿದೆ, ಆದರೆ ಹೆರುವುದಕ್ಕೆ ಶಕ್ತಿ ಸಾಲದು.
4 : ಅಸ್ಸೀರಿಯದ ಅರಸನಿಂದ ಬಂದಿರುವ ಸೇನಾಪತಿ ಆಡಿದ ಮಾತುಗಳನ್ನು ನಿನ್ನ ದೇವರಾದ ಸರ್ವೇಶ್ವರ ಕೇಳಿದ್ದಾರೆ. ಆ ಸೇನಾಪತಿ ತನ್ನ ಒಡೆಯನ ಹೆಸರಿನಲ್ಲಿ ಜೀವ ಸ್ವರೂಪರಾದ ಆ ದೇವರನ್ನು ದೂಷಿಸಿದ್ದಾನೆ. ಅವನಿಗೆ ತಕ್ಕ ದಂಡನೆಯಾಗಬೇಕು. ಹೀಗಿರಲು ಅಳಿದುಳಿದಿರುವ ಜನರಿಗಾಗಿ ದೇವರನ್ನು ನೀನು ಪ್ರಾರ್ಥನೆ ಮಾಡಬೇಕೆಂದು ಹಿಜ್ಕೀಯ ಕೇಳಿಕೊಂಡಿದ್ದಾನೆ,’ ಎಂದು ತಿಳಿಸಿ.”
5 : ಅರಸ ಹಿಜ್ಕೀಯನ ಸೇವಕರು ತನ್ನ ಬಳಿಗೆ ಬಂದು ವರದಿ ಮಾಡಿದ ಮೇಲೆ ಯೆಶಾಯನು,
6 : “ನೀವು ಹಿಂದಿರುಗಿ ಹೋಗಿ ನಿಮ್ಮ ರಾಜನಿಗೆ ಹೀಗೆಂದು ತಿಳಿಸಿರಿ: ‘ಇದು ಸರ್ವೇಶ್ವರನ ನುಡಿ: ಅಸ್ಸೀರಿಯದ ಅರಸನ ಸೇವಕರು ನನ್ನನ್ನು ದೂಷಿಸಿ ಆಡಿದ ಮಾತುಗಳನ್ನು ಕೇಳಿದ್ದೇನೆ. ಅವುಗಳಿಗಾಗಿ ನೀನು ಹೆದರಬೇಕಾಗಿಲ್ಲ.
7 : ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು, ಅವನ ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೆ ಕತ್ತಿಗೆ ತುತ್ತಾಗುವಂತೆ ಮಾಡುವೆನು.”
8 : ಅಸ್ಸೀರಿಯದ ಸೇನಾಪತಿಯು ತನ್ನ ಅರಸನು ಲಾಕೀಷನ್ನು ಬಿಟ್ಟು ಲಿಬ್ನಕ್ಕೆ ಹೋಗಿ ಆ ರಾಜ್ಯದ ವಿರುದ್ಧ ಯುದ್ಧಮಾಡುತ್ತಿರುವುದಾಗಿ ಸಮಾಚಾರ ಪಡೆದನು. ಆದುದರಿಂದ ಅವನು ಅಲ್ಲಿಗೆ ತೆರಳಿದನು.
9 : ಅಷ್ಟರಲ್ಲೆ ಸುಡಾನಿನ ಅರಸ ತಿರ್ಹಾಕನು ತನಗೆ ವಿರುದ್ಧವಾಗಿ ಹೊರಟಿದ್ದಾನೆ ಎಂಬ ದುದ್ದಿ ಅಸ್ಸೀರಿಯದ ಅರಸನಿಗೆ ಮುಟ್ಟಿತು. ಆಗ ಅವನು ಜುದೇಯದ ಅರಸ ಹಿಜ್ಕೀಯನಿಗೆ,
10 : “ಜೆರುಸಲೇಮ್ ನನ್ನ ವಶವಾಗುವುದಿಲ್ಲವೆಂದು ನೀನು ನಂಬುವ ದೇವರು ಹೇಳಿ, ನಿನ್ನನ್ನು ಮೋಸಗೊಳಿಸಿದ್ದಾನೆ.
11 : ಅಸ್ಸೀರಿಯದ ಅರಸನು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾನೆಂಬ ಸಮಾಚಾರ ನಿನಗೆ ಮುಟ್ಟಿರಬೇಕು. ಹೀಗಿರುವಲ್ಲಿ ನೀನು ಮಾತ್ರ ತಪ್ಪಿಸಿಕೊಳ್ಳುವಿಯೋ?
12 : ನನ್ನ ತಂದೆ ತಾತಂದಿರು ಗೋಜಾನ್, ಹಾರನ್, ರೆಚೆಪ್ ಎಂಬ ನಗರಗಳ ಜನರನ್ನು ಮತ್ತು ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನು ನಾಶಮಾಡಿದರು. ಆಗ ಅವರ ದೇವರುಗಳು ಅವರನ್ನು ರಕ್ಷಿಸಲಾಗಲಿಲ್ಲ.
13 : ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ್ ಮತ್ತು ಇವ್ವಾ ಎಂಬ ನಗರಗಳ ಅರಸರ ಗತಿ ಏನಾಯಿತು?” ಎಂದು ಪತ್ರ ಬರೆದು ದೂತರ ಸಮೇತ ಕಳುಹಿಸಿದನು.
14 : ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ, ದೇವಾಲಯಕ್ಕೆ ಹೋಗಿ ಅದನ್ನು ಸರ್ವೇಶ್ವರಸ್ವಾಮಿಯ ಮುಂದೆ ತೆರೆದಿಟ್ಟು,
15 : ಹೀಗೆಂದು ಪ್ರಾರ್ಥನೆ ಮಾಡಿದನು:
16 : “ಇಸ್ರಯೇಲಿನ ದೇವರೇ, ಸೇನಾಧೀಶ್ವರ ಸರ್ವೇಶ್ವರಾ, ಕೆರೂಬಿಗಳ ಮೇಲೆ ಆಸೀನಾರೂಢರಾಗಿರುವವರೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀವೊಬ್ಬರೇ; ಪರಲೋಕ ಭೂಲೋಕಗಳನ್ನುಂಟು ಮಾಡಿದವರು ನೀವೇ.
17 : ಸರ್ವೇಶ್ವರಾ, ಕಿವಿಗೊಟ್ಟು ಕೇಳಿ; ಸರ್ವೇಶ್ವರಾ, ಕಣ್ಣಿಟ್ಟು ನೋಡಿ. ಸನ್ಹೇರೀಬನು ಜೀವಸ್ವರೂಪ ದೇವರಾದ ನಿಮ್ಮನ್ನು ನಿಂದಿಸುವುದಕ್ಕೋಸ್ಕರ ಹೇಳಿಕಳುಹಿಸಿದ ಈ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೊಳ್ಳಿ.
18 : ಸರ್ವೇಶ್ವರಾ, ಅಸ್ಸೀರಿಯರ ರಾಜರು ಸಕಲ ರಾಷ್ಟ್ರಗಳನ್ನೂ ಹಾಗೂ ಅವರ ನಾಡುಗಳನ್ನೂ ಹಾಳುಮಾಡಿದ್ದಾರೆ.
19 : ಅವರ ದೇವರುಗಳನ್ನೂ ಬೆಂಕಿಗೆ ಹಾಕಿದ್ದು ನಿಜ. ಅವು ದೇವರುಗಳಲ್ಲ, ಕೇವಲ ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳಷ್ಟೆ, ಆದುದರಿಂದಲೇ ಅವು ಅವರಿಂದ ಹಾಳಾದವು.
20 : ನಮ್ಮ ದೇವರಾದ ಸರ್ವೇಶ್ವರಾ, ನೀವೇ ಏಕೈಕ ಸರ್ವೇಶ್ವರ ಎಂಬುದನ್ನು ಭೂಮಿಯ ರಾಷ್ಟ್ರಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಅಸ್ಸೀರಿಯರ ಕೈಯಿಂದ ಬಿಡಿಸಿರಿ.”
21 : ಆಗ ಆಮೋಚನ ಮಗ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ: “ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ಅರಸ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನಿಗೆ ವಿರುದ್ಧ ಹೀಗೆಂದಿದ್ದಾರೆ -
22 : “ನಿನ್ನನ್ನು ಪರಿಹಾಸ್ಯಮಾಡಿ ತಿರಸ್ಕರಿಸುತಿಹಳು ಕನ್ಯೆಯಾದ ಸಿಯೋನಿನ ಕುವರಿಯು, ನಿನ್ನ ಹಿಂದೆ ತಲೆಯಾಡಿಸಿ ಮೂದಲಿಸುತಿಹಳು ಜೆರುಸಲೇಮಿನ ಆ ಕುವರಿಯು.
23 : ನೀನು ನಿಂದಿಸಿ ದೂಷಿಸುತ್ತಿರುವುದು ಯಾರನ್ನು? ಕಿರಿಚಿ ಹೀಯಾಳಿಸುತ್ತಿರುವುದು ಯಾರನ್ನು? ಗರ್ವದಿಂದ ದುರುಗುಟ್ಟಿ ನೋಡಿದುದು ಯಾರನ್ನು? ಇಸ್ರಯೇಲರ ಪರಮಪಾವನ ಸ್ವಾಮಿಯನ್ನಲ್ಲವೇನು?
24 : ನೀನು ನಿನ್ನ ಸೇವಕರ ಮೂಲಕ ಸರ್ವೇಶ್ವರನನ್ನು ನಿಂದಿಸಿರುವೆ. ಅಲ್ಲದೆ, ಈ ಮಾತುಗಳನ್ನಾಡಿ ಜಂಬಕೊಚ್ಚಿಕೊಂಡಿರುವೆ: ‘ಹತ್ತಿದ್ದೇನೆ ಗಿರಿಶಿಖರಗಳನ್ನು ರಥಸಮೂಹದೊಡನೆ, ಸೇರಿದ್ದೇನೆ ಲೆಬನೋನಿನ ದುರ್ಗಮ ಸ್ಥಳಗಳನ್ನೇ. ಕಡಿದಿದ್ದೇನೆ ಅದರ ಎತ್ತರವಾದ ದೇವದಾರು ವೃಕ್ಷಗಳನ್ನೇ, ಕತ್ತರಿಸಿದ್ದೇನೆ ಅದರ ಶ್ರೇಷ್ಠವಾದ ತುರಾಯಿ ಮರಗಳನ್ನೇ. ಒಳಹೊಕ್ಕಿದ್ದೇನೆ ಅಲ್ಲಿನ ದೂರದ ಶಿಖರವನ್ನೇ, ಪ್ರವೇಶಿಸಿದ್ದೇನೆ ದಟ್ಟವಾದ ಆ ಕಾಡುಮೇಡುಗಳನ್ನೇ.
25 : ಪರನಾಡುಗಳಲ್ಲಿ ಬಾವಿತೋಡಿ ನೀರುಕುಡಿದ್ದೇನೆ, ನನ್ನ ಅಂಗಾಲಿನಿಂದಲೇ ಈಜಿಪ್ಟಿನ ನದಿಗಳನ್ನೆಲ್ಲಾ ಬತ್ತಿಸಿದ್ದೇನೆ.
26 : ಇದನ್ನೆಲ್ಲಾ ಬಹುಕಾಲದ ಹಿಂದೆ ಗೊತ್ತು ಮಾಡಿದವನು ನಾನೇ, ಪೂರ್ವಕಾಲದಲ್ಲಿ ನಿರ್ಣಯಿಸಿದುದನ್ನು ಈಗ ನೆರವೇರಿಸಿದ್ದೇನೆ. ಕೋಟೆ ನಗರಗಳನ್ನು ನೀನು ಹಾಳು ದಿಬ್ಬಗಳನ್ನಾಗಿಸಿದೆ, ಆದರೆ ಸಾಧ್ಯವಾಯಿತಿದು ನನ್ನಿಂದಲೇ, ನಿನಗಿದು ತಿಳಿಯದೆ ಹೋಯಿತೆ?
27 : ಬಲವಿಲ್ಲದವರಾದರು ಆ ನಗರವಾಸಿಗಳು ನನ್ನ ನಿಮಿತ್ತವೆ, ಸಮಾನರಾದರು ಹೊಲದ ಸಸಿಗೆ, ಎಳೆಗರಿಕೆಗೆ, ಮಾಳಿಗೆ ಮೇಲಿನ ಹುಲ್ಲಿಗೆ. ಬೆಳೆಯುವುದಕ್ಕೆ ಮೊದಲೆ ತುತ್ತಾದರು ಬಿರುಗಾಳಿಯ ಹೊಡೆತಕ್ಕೆ.
28 : ನನಗೆ ಗೊತ್ತಿದೆ ನೀ ಕೂರುವುದು ಹೋಗಿಬರುವುದು, ನನಗೆ ತಿಳಿದಿದೆ ನೀ ನನ್ನ ಮೇಲೆ ರೌದ್ರಾವೇಶಗೊಂಡಿರುವುದು.
29 : ನನ್ನ ವಿರುದ್ಧ, ನಿನಗಿರುವ ಕ್ರೋಧ, ಗರ್ವ ತಿಳಿದಿದೆ ನನಗೆ, ಎಂದೇ ಹಾಕುವೆ ಮೂಗಿಗೆ ದಾರ, ಬಾಯಿಗೆ ಕಡಿವಾಣ. ನೀ ಬಂದ ದಾರಿಯಿಂದಲೇ ಅಟ್ಟುವೆ ನಿನ್ನನ್ನು ಹಿಂದಕ್ಕೆ’.”
30 : ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ, “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು: ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿ ತೋಟದಲ್ಲಿ ವ್ಯವಸಾಯ ಮಾಡಿ ಶೇಖರಿಸಿದ್ದನ್ನು ಅನುಭವಿಸುವಿರಿ.
31 : ಅಳಿದುಳಿದ ಯೆಹೂದ್ಯರು ನಾಡಿನಲ್ಲಿ ಬೇರೂರಿ ನೆಲೆಗೊಳ್ಳುವರು; ಬೆಳೆದು ಅಭಿವೃದ್ಧಿಯಾಗುವರು.
32 : ಆ ಅಳಿದುಳಿದವರು ಜೆರುಸಲೇಮಿನಲ್ಲೇ ಹರಡಿಕೊಳ್ಳುವರು, ಸಿಯೋನ್ ಪರ್ವತದಲ್ಲಿ ಅಭಿವೃದ್ಧಿಯಾಗುವರು, ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಆಗ್ರಹವೇ ಇದನ್ನು ಸಾಧಿಸುವುದು.
33 : “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು – ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣು ದಿಬ್ಬಗಳನ್ನು ಎಬ್ಬಿಸುವುದಿಲ್ಲ.
34 : ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಕಾಲಿಡನು. 35ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು – ಎಂದಿದ್ದಾರೆ,” ಎಂದು ಹೇಳಿದನು.
35 : ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು – ಎಂದಿದ್ದಾರೆ,” ಎಂದು ಹೇಳಿದನು. ಸನ್ಹೇರೀಬನ ಮರಣ
36 : ಆಗ ಸರ್ವೇಶ್ವರಸ್ವಾಮಿಯ ದೂತನು ಹೊರಟು ಬಂದು ಅಸ್ಸೀರಿಯರ ಪಾಳೆಯದಲ್ಲಿ 185,000 ಮಂದಿ ಸೈನಿಕರನ್ನು ಮರಣಕ್ಕೆ ಈಡು ಮಾಡಿದನು; ಬೆಳಿಗ್ಗೆ ಎದ್ದುನೋಡುವಾಗ ಅವರೆಲ್ಲರೂ ಹೆಣಗಳಾಗಿದ್ದರು.
37 : ಆದ್ದರಿಂದ ಅಸ್ಸೀರಿಯರ ಅರಸನಾದ ಸನ್ಹೇರೀಬನು ಹಿಂದಿರುಗಿದನು. ನಿನೆವೆ ಪಟ್ಟಣಕ್ಕೆ ಹೋಗಿ ಅಲ್ಲಿನ ದೇವರಾದ ನಿಸ್ರೋಕನನ್ನು ಆರಾಧನೆ ಮಾಡುತ್ತಿರುವಾಗ, ಅದ್ರಮ್ಮೆಲೆಕ್ ಮತ್ತು ಸರೆಚೆರ್ ಎಂಬ ಅವನ ಇಬ್ಬರು ಮಕ್ಕಳು ಅವನನ್ನು ಕತ್ತಿಯಿಂದ ಕೊಂದು ಅರರಾಟ್ ನಾಡಿಗೆ ಪಲಾಯನ ಗೈದರು. ಬಳಿಕ ಅವನ ಇನ್ನೊಬ್ಬ ಮಗ ಏಸರ್ ಹದ್ದೋನನು ಅರಸನಾದನು.

Holydivine