Isaiah - Chapter 42
Holy Bible

1 : ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು.
2 : ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ.
3 : ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು.
4 : ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು.
5 : ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದು ದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು:
6 : ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ.
7 : ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.
8 : ನಾನೇ ಸರ್ವೇಶ್ವರ, ನನ್ನ ನಾಮವು ಅದುವೆ. ಸಲ್ಲಿಸೆನು ನನ್ನ ಮಹಿಮೆಯನ್ನು ಮತ್ತೊಬ್ಬರಿಗೆ ನನ್ನ ಸ್ತೋತ್ರವನು ವಿಗ್ರಹಗಳ ಪಾಲಿಗೆ.
9 : ಮುಂತಿಳಿಸಿದ ಸಂಗತಿಗಳಿದೋ ಈಡೇರಿವೆ ಹೊಸ ಸಂಗತಿಗಳನಿದೋ ಪ್ರಕಟಿಸುವೆ ಅವು ತಲೆದೋರುವುದಕ್ಕೆ ಮುಂಚೆಯೇ ನಿಮಗೆ ತಿಳಿಸುವೆ.” ಸ್ತುತಿಗೀತೆ
10 : ಸಮುದ್ರಯಾತ್ರಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ದ್ವೀಪಾಂತರ ನಿವಾಸಿಗಳೇ, ನೂತನ ಗೀತವ ಹಾಡಿ ಹೊಗಳಿ ಸರ್ವೇಶ್ವರನನು, ದಿಗಂತಗಳಲ್ಲಿಯೂ ಕೀರ್ತಿಸಿ ಆತನನು.
11 : ಘೋಷಿಸಲಿ ಮರುಭೂಮಿಯೂ ಅದರ ನಗರಗಳೂ ಕೇದಾರಿನವರೂ ಗ್ರಾಮನಿವಾಸಿಗಳೂ ಜಯಘೋಷಮಾಡಲಿ ಸೆಲ ಪಟ್ಟಣದವರೂ ಸಂತೋಷದಿಂದ ಹರ್ಷಧ್ವನಿಗೈಯಲಿ ಆ ಪರ್ವತದ ತುತ್ತತುದಿಗಳಿಂದ
12 : ಸರ್ವೇಶ್ವರನ ಮಹಿಮೆಯನು ಹೊಗಳಲಿ ಆತನ ಸ್ತೋತ್ರವ ಪಸರಿಸಲಿ ದ್ವೀಪದ್ವೀಪಗಳಲಿ.
13 : ಸರ್ವೇಶ್ವರ ಹೊರಟಿರುವನು ಶೂರನಂತೆ ರೌದ್ರದಿಂದಿರುವನು ಯುದ್ಧವೀರನಂತೆ ಆರ್ಭಟಿಸಿ ಗರ್ಜಿಡುವನು ರಣಕಹಳೆಯಂತೆ ಪರಾಕ್ರಮಿಯಂತೆ. ದೇವರ ಅಭಯದಾನ
14 : ನನ್ನನ್ನೇ ತಡೆಹಿಡಿದೆನು; ಆದರೀಗ ಸಮಯ ಬಂದಿಹುದು; ಪ್ರಸವವೇದನೆಯನು ಅನುಭವಿಸುವ ಸ್ತ್ರೀಯಂತೆ ಅಬ್ಬರಿಸುವೆನು
15 : ನಾಶಪಡಿಸುವೆನು ಬೆಟ್ಟಗುಡ್ಡಗಳನು ಒಣಗಿಸಿಬಿಡುವೆನು ಹುಲ್ಲುಸಸಿಗಳನು. ಒಣನೆಲ ಮಾಡುವೆನು ನದಿಗಳನು ಬತ್ತಿಸಿಬಿಡುವೆನು ಕೆರೆಕುಂಟೆಗಳನು.
16 : ಕುರುಡರನ್ನು ನೆಪ್ಪಿಲ್ಲದ ಮಾರ್ಗದಲ್ಲಿ ಬರಮಾಡುವೆನು ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಸುವೆನು. ಅವರೆದುರಿನ ಕತ್ತಲನ್ನು ಬೆಳಕಾಗಿಸುವೆನು ಅವರ ಹಾದಿಯ ಡೊಂಕನು ನೇರಮಾಡುವೆನು. ಬಿಡದೆ ಮಾಡುವೆನು ಈ ಕಾರ್ಯಗಳನು.
17 : ಆದರೆ, ಕೆತ್ತಿದ ವಿಗ್ರಹಗಳಲ್ಲಿ ಭರವಸೆಯಿಡುವವರು: “ನೀವೇ ನಮ್ಮ ದೇವರು”ಗಳು ಎಂದು ಎರಕದ ಬೊಂಬೆಗಳಿಗೆ ಅರಿಕೆ ಮಾಡುವವರು; ಅವಮಾನಕ್ಕೆ ಈಡಾಗುವರು ಹಿಂಜರಿದು. ಇಸ್ರಯೇಲಿನ ಹಟಮಾರಿತನ
18 : “ಕಿವುಡ ಜನರೇ ಕೇಳಿ ಕುರುಡರಾದ ನೀವು ಕಣ್ಣಿಟ್ಟು ನೋಡಿ;
19 : ನನ್ನ ಸೇವಕನಿಗಿಂತ ಕುರುಡರು ಯಾರು? ನನ್ನ ದೂತನಿಗಿಂತ ಕಿವುಡರು ಯಾರು? ನನ್ನ ಭಕ್ತನಿಗಿಂತ ಕುರುಡರು ಯಾರು? ಸರ್ವೇಶ್ವರನ ದಾಸನಿಗಿಂತ ಅಂಧಕರು ಯಾರು?
20 : ನೀವು ಗಮನಿಸುವುದಿಲ್ಲ ಹಲವಿಷಯಗಳನ್ನು ಕಂಡಿದ್ದರೂ ನೀವು ಕೇಳುವುದಿಲ್ಲ ನಿಮ್ಮ ಕಿವಿಗಳು ತೆರೆದಿದ್ದರೂ.
21 : ಸರ್ವೇಶ್ವರ ಮುಕ್ತಿದಾತನಾದುದರಿಂದ ಧರ್ಮಶಾಸ್ತ್ರಕ್ಕೆ ಮಹಿಮೆಯಿತ್ತು ಅದನು ಮಹತ್ತಾಗಿಸಿದ.
22 : ಈ ಜನರಾದರೋ ಸೂರೆಯಾಗಿದ್ದಾರೆ ಕೊಳ್ಳೆಗೆ ಈಡಾಗಿ, ಎಲ್ಲರೂ ಬಿದ್ದಿದ್ದಾರೆ ಹಳ್ಳಕೊಳ್ಳಗಳಲ್ಲಿ, ಸೆರೆಮನೆಗಳಲ್ಲಿ ಬಂಧಿಗಳಾಗಿ; ಸುಲಿಗೆಯಾಗಿದ್ದರೂ ಅವರನ್ನು ಬಿಡಿಸುವವರಾರೂ ಇಲ್ಲ ಸೂರೆಯಾಗಿದ್ದರೂ ಅವರನ್ನು ಬಿಟ್ಟುಬಿಡಿ ಎನ್ನುವವರಾರೂ ಇಲ್ಲ.
23 : ಈ ಮಾತಿಗೆ ನಿಮ್ಮಲ್ಲಿ ಕಿವಿಗೊಡುವವರಾರು? ಮುಂದಕ್ಕಾದರೂ ಕಿವಿಗೊಟ್ಟು ಆಲಿಸುವವರಾರು?
24 : ಕೊಟ್ಟವರಾರು ಯಕೋಬನ್ನು ಸುಲಿಗೆಗೆ, ಇಸ್ರಯೇಲನ್ನು ಕೊಳ್ಳೆಗೆ? ಯಾವ ಸರ್ವೇಶ್ವರನಿಗೆ ದ್ರೋಹ ಮಾಡಿದ್ದೇವೋ ಆತನೇ ಅಲ್ಲವೇ? ಆನರು ಆತನ ಮಾರ್ಗದಲ್ಲಿ ನಡೆಯದೇ, ಆತನ ಉಪದೇಶವನ್ನು ಕೇಳದೆ ಹೋದರಲ್ಲವೆ?
25 : ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.

Holydivine