Isaiah - Chapter 66
Holy Bible

1 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಆಕಾಶವೇ ನನಗೆ ಸಿಂಹಾಸನವಾಗಿರಲು, ಭೂಮಿಯೇ ನನಗೆ ಪಾದಪೀಠವಾಗಿರಲು ನೀವು ನನಗೆ ಕಟ್ಟುವ ಮನೆ ಇನ್ನು ಎಂಥದ್ದು? ನನ್ನ ವಿಶ್ರಾಂತಿಗೆ ತಕ್ಕ ಸ್ಥಳ ಯಾವುದು?
2 : ಇವುಗಳನ್ನೆಲ್ಲ ನಿರ್ಮಿಸಿದ್ದು ನನ್ನ ಕೈಯೇ. ಹೌದು, ಇವುಗಳೆಲ್ಲ ಆದುವು ನನ್ನಿಂದಲೇ. ವಿನಮ್ರನು, ಪಶ್ಚಾತ್ತಾಪ ಪಡುವವನು, ನನ್ನ ಮಾತಿನಲ್ಲಿ ಭಯಭಕ್ತಿಯುಳ್ಳವನು, ಇಂಥವರೇ ನನಗೆ ಮೆಚ್ಚುಗೆಯಾದವರು.
3 : “ಜನರು ಮನಬಂದ ಮಾರ್ಗವನ್ನು ಅನುಸರಿಸುತ್ತಾರೆ; ತಮ್ಮ ಅಸಹ್ಯ ಕಾರ್ಯಗಳಲ್ಲಿ ಅತ್ಯಾನಂದಪಡುತ್ತಾರೆ. ಹೋರಿಯನ್ನು ಬಲಿಕೊಡುವವನು ನರಬಲಿಯನ್ನು ಕೊಡುತ್ತಾನೆ; ಕುರಿ ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ. ಕಾಣಿಕೆ ಒಪ್ಪಿಸುವವನು ಹಂದಿಯ ನೆತ್ತರನ್ನು ಅರ್ಪಿಸುತ್ತಾನೆ; ಧೂಪಾರತಿ ಎತ್ತುವವನು ವಿಗ್ರಹಾರಾಧನೆಯನ್ನು ಮಾಡುತ್ತಾನೆ.
4 : ಆದುದರಿಂದ ಅವರಿಗೆ ಆಪತ್ತು ಬಂದೊದಗುವಂತೆ ಮಾಡುವೆನು. ಅವರು ಅಂಜುತ್ತಿದ್ದ ವಿಪತ್ತುಗಳನ್ನೇ ಅವರ ಮೇಲೆ ಬರಮಾಡುವೆನು. ಏಕೆಂದರೆ, ನಾನು ಕೂಗಿದಾಗ ಯಾರೂ ಉತ್ತರಿಸಲಿಲ್ಲ, ನಾನು ಹೇಳಿದಾಗ ಅವರು ಕೇಳಲಿಲ್ಲ. ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರು, ನನಗೆ ಇಷ್ಟವಲ್ಲದ್ದನ್ನೇ ಆಯ್ಕೆ ಮಾಡಿಕೊಂಡರು.”
5 : ಸರ್ವೇಶ್ವರಸ್ವಾಮಿಯ ಮಾತಿನಲ್ಲಿ ಭಯ ಭಕ್ತಿಯುಳ್ಳವರೇ, ಕೇಳಿ ಸ್ವಾಮಿಯ ಈ ಮಾತನ್ನು! “ನನ್ನ ನಾಮದ ನಿಮಿತ್ತ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿದ ನಿಮ್ಮ ಸಹೋದರರು, ‘ಸರ್ವೇಶ್ವರ ತನ್ನ ಮಹಿಮೆಯನ್ನು ಬೆಳಗಿಸಲಿ, ಆಗ ನಿಮಗಾಗುವ ಆನಂದವನ್ನು ನೋಡೋಣ,’ ಎಂದು ಜರೆದಿದ್ದಾರಲ್ಲವೆ? ಅವರೇ ನಾಚಿಕೆಪಡಬೇಕಾಗುವುದು!
6 : ಇಗೋ ಕೇಳಿ, ನಗರದ ಕಡೆಯಿಂದ ಕೋಲಾಹಲದ ಶಬ್ದ, ದೇವಾಲಯದಲ್ಲಿ ಶಬ್ದ, ಸರ್ವೇಶ್ವರ ತನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಶಬ್ಧ!
7 : “ ‘ಪ್ರಸವವೇದನೆಗೆ ಮುಂಚೆಯೇ ಹೆರಿಗೆಯಾಯಿತು; ಪ್ರಸವವೇದನೆ ಪಡುವುದರೊಳಗೆ ಗಂಡನ್ನು ಹೆತ್ತಳು’.
8 : ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಂಥ ಸಂಗತಿಯನ್ನು ಕಂಡವರಾರು? ಒಂದೇ ದಿನದಲ್ಲಿ ದೇಶವೊಂದು ಹುಟ್ಟೀತೆ? ಕ್ಷಣಮಾತ್ರದಲ್ಲಿ ರಾಷ್ಟ್ರವನ್ನು ಹೆರಲಿಕ್ಕಾದೀತೆ? ಆದರೂ ಪ್ರಸವವೇದನೆ ತೊಡಗಿದೊಡನೆ ಸಿಯೋನೆಂಬಾಕೆ ಮಕ್ಕಳನ್ನು ಹೆತ್ತಿದ್ದಾಳೆ.”
9 : ಪ್ರಸವಕ್ಕೆ ತಂದ ನಾನು ಹೆರಲಿಕ್ಕೆ ಬಿಡದಿರುವೆನೊ?’ – ಎನ್ನುತ್ತಾರೆ ನಿಮ್ಮ ದೇವರು. ‘ಹೆರುವಂತೆ ಮಾಡುವವನಾದ ನಾನು ಗರ್ಭ ಮುಚ್ಚಿ ಬಿಡುವೆನೊ?’ ಎನ್ನುತ್ತಾರೆ ಸ್ವಾಮಿ ಸರ್ವೇಶ್ವರ.
10 : “ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ.
11 : ಆಕೆಯ ನಿಮಿತ್ತ ದುಃಖಿಸುವವರೇ, ‘ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ಹೌದು, ಆಕೆಯ ಸಿರಿಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು,’ ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ.”
12 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಇಗೋ, ಆಕೆಗೆ ಹರಿಯಮಾಡುವೆನು ಸುಖಶಾಂತಿಯನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ.
13 : ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ.
14 : ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. ‘ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ’ ಎಂಬುವುದು ವ್ಯಕ್ತವಾಗುವುದು ನಿಮಗೆ.
15 : ಸರ್ವೇಶ್ವರ ಬರುವನಿದೋ ಅಗ್ನಿಮಯನಾಗಿ ಆತನ ರಥಗಳು ಬಿರುಗಾಳಿಯಂತೆ ರಭಸವಾಗಿ ತೋರಿಸುವನು ತನ್ನ ಸಿಟ್ಟನ್ನು ರೌದ್ರವೇಶದಿಂದ ಖಂಡಿಸುವನು ಧಗಧಗಿಸುವ ಜ್ವಾಲೆಯಿಂದ
16 : ನ್ಯಾಯ ತೀರಿಸುವನು ಸರ್ವೇಶ್ವರ ಮನುಜರಿಗೆಲ್ಲ ಅಗ್ನಿಯಿಂದ, ತನ್ನ ಖಡ್ಗದಿಂದ. ಹತರಾಗುವರು ಬಹುಜನ ಆತನಿಂದ.
17 : “ತಮ್ಮ ಮಧ್ಯಸ್ಥನ ಮಾತಿನ ಪ್ರಕಾರ, ತೋಪುಗಳನ್ನು ಪ್ರವೇಶಿಸಿ, ಒಬ್ಬನ ಹಿಂದೊಬ್ಬರು ತಮ್ಮನ್ನೇ ಶುದ್ಧೀಕರಿಸಿ, ಪವಿತ್ರೀಕರಿಸಿಕೊಂಡು, ಹಂದಿಯ ಮಾಂಸವನ್ನೂ ಅಸಹ್ಯ ಪದಾರ್ಥಗಳನ್ನೂ ಇಲಿಗಳನ್ನೂ ತಿನ್ನುವ ಜನರು ಒಟ್ಟಿಗೇ ಕೊನೆಗಾಣುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ.
18 : “ಅವರ ಕೃತ್ಯಗಳೂ ಆಲೋಚನೆಗಳೂ ನನಗೆ ತಿಳಿದಿವೆ. ಸಮಸ್ತ ರಾಷ್ಟ್ರಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು. ಅವರು ಬಂದು ನನ್ನ ಮಹಿಮೆಯ ಪ್ರಕಾಶವನ್ನು ಕಾಣುವರು.
19 : ಅವರ ಮಧ್ಯೆ ಒಂದು ಸೂಚಕ ಕಾರ್ಯವನ್ನು ಮಾಡುವೆನು. ಅವರಲ್ಲಿ ಅಳಿದುಳಿದವರನ್ನು ನನ್ನ ಸುದ್ದಿಯನ್ನು ಕೇಳದೆಯೂ ನನ್ನ ಮಹಿಮೆಯನ್ನು ಕಾಣದೆಯೂ ಇರುವವರ ಬಳಿಗೆ ಕಳಿಸುವೆನು. ತಾರ್ಷೀಷ್, ಲಿಬಿಯಾ, ಧನುರ್ಧಾರಿಗಳಾದ ಲೂದಿಯಾ, ತೂಬಲ್, ಗ್ರೀಸ್ ಎಂಬ ನಾಡುಗಳಿಗೂ ದೂರದ ದ್ವೀಪನಿವಾಸಿಗಳ ಬಳಿಗೂ ಕಳಿಸುವೆನು. ಈ ಅನ್ಯಜನಾಂಗಗಳಿಗೆ ಅವರು ನನ್ನ ಮಹಿಮೆಯನ್ನು ಪ್ರಕಟಿಸುವರು.
20 ನನಗೆ ಕಾಣಿಕೆಯಾಗಿ ಎಲ್ಲ ಜನಾಂಗಗಳಿಂದ ನಿಮ್ಮ ಸಹೋದರರನ್ನು ಕರೆದುತರುವರು. ಇಸ್ರಯೇಲರು ನನ್ನ ಆಲಯಕ್ಕೆ ಶುದ್ಧ ಪಾತ್ರೆಯಲ್ಲಿ ನೈವೇದ್ಯವನ್ನು ತೆಗೆದುಕೊಂಡು ಬರುವಂತೆ, ಅವರನ್ನು ಕುದುರೆ, ತೇರು, ಪಲ್ಲಕ್ಕಿ, ಹೇಸರಗತ್ತೆ, ಒಂಟೆ, ಇವುಗಳ ಮೇಲೆ ಏರಿಸಿಕೊಂಡು ಜೆರುಸಲೇಮೆಂಬ ನನ್ನ ಪವಿತ್ರ ಪರ್ವತಕ್ಕೆ ಕರೆದುತರುವರು.
21 : ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸಿಕೊಳ್ಳುವೆನು.” ಇದು ಸರ್ವೇಶ್ವರಸ್ವಾಮಿಯ ನುಡಿ.
22 : “ನಾ ಸೃಷ್ಟಿಸುವ ಹೊಸ ಆಕಾಶ, ಹೊಸ ಭೂಮಿ, ನಿಲ್ಲುವುವು ನನ್ನ ಮುಂದೆ ಸ್ಥಿರವಾಗಿ; ಅಂತೆಯೇ ನಿಮ್ಮ ಸಂತತಿ, ನಿಮ್ಮ ಹೆಸರು ನಿಲ್ಲುವುವು ಸ್ಥಿರವಾಗಿ.
23 : ಅಮವಾಸ್ಯೆಯಿಂದ ಅಮವಾಸ್ಯೆಯವರೆಗೆ ಸಬ್ಬತ್‍ದಿನದಿಂದ ಸಬ್ಬತ್ದಿನವರೆಗೆ ಮನುಜರೆಲ್ಲರು ಬರುವರು ನನ್ನನ್ನು ಆರಾಧಿಸಲಿಕ್ಕೆ.” ಇದು ಸರ್ವೇಶ್ವರಸ್ವಾಮಿಯ ನುಡಿ.
24 : ಅವರು ಹೊರಟುಹೋಗುವಾಗ ನೋಡುವರು ನನಗೆ ದ್ರೋಹವೆಸಗಿದವರ ಹೆಣಗಳನು ಸಾಯುವುದಿಲ್ಲ ಅವುಗಳನ್ನು ಕಡಿಯುವ ಹುಳು ಆರುವುದಿಲ್ಲ ಅವುಗಳನ್ನು ಸುಡುವ ಬೆಂಕಿಯು ಎಲ್ಲ ಮನುಜರಿಗವು ಅಸಹ್ಯವಾಗಿರುವುವು.”

Holydivine