Isaiah - Chapter 41
Holy Bible

1 : ದೂರದೇಶದವರೇ, ಮೌನದಿಂದ ನನಗೆ ಕಿವಿಗೊಡಿ: ರಾಷ್ಟ್ರಗಳು ಎಷ್ಟೇ ಬಲಿಷ್ಠರಾಗಿರಲಿ ಬಂದು ಮಾತಾಡಲಿ ಸಮೀಪದಲಿ. ಒಟ್ಟಿಗೆ ಸೇರೋಣ ನ್ಯಾಯಸ್ಥಾನದಲಿ.
2 : ಕರೆತಂದವರಾರು ಆ ಪರಾಕ್ರಮಿಯನ್ನು ಪೂರ್ವದಿಂದ? ಅವನು ಗೆದ್ದು ಬರುವಂತೆ ಮಾಡಿದವರಾರು ದಿಗ್ವಿಜಯದಿಂದ? ರಾಷ್ಟ್ರಗಳನ್ನು, ರಾಜರುಗಳನ್ನು ಸೋಲಿಸಿದವರಾರು ಅವನ ಕೈಯಿಂದ? ಧೂಳು ಧೂಳಾಗಿಸುತ್ತಾನೆ ಅವರನ್ನು ಅವನ ಖಡ್ಗದಿಂದ ಗಾಳಿಗೆ ತೂರಿಹೋಗುವ ಹುಲ್ಲನ್ನಾಗಿಸು ತ್ತಾನೆ ಅವನ ಬಿಲ್ಲಿನಿಂದ.
3 : ಹಿಂದಟ್ಟುತ್ತಾನೆ ಅವರನ್ನು ನಿರ್ಭೀತಿಯಿಂದ ಮುನ್ನುಗ್ಗುತ್ತಾನೆ ಕಾಲು ನೆಲ ಊರದಷ್ಟು ವೇಗದಿಂದ.
4 : ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನು ಯಾರು? ಆದಿಯಿಂದ ಈಗಿನವರೆಗೂ ತಲತಲಾಂತರಗಳನ್ನು ಬರಮಾಡುವವರು ಯಾರು? ಸರ್ವೇಶ್ವರನಾದ ನಾನೇ. ಹೌದು, ಆದಿಯಲ್ಲಿದ್ದವನು, ಅಂತ್ಯದಲ್ಲಿ ಇರುವವನು ಆದ ನಾನೇ.
5 : ದೂರದೇಶದವರು ಕಂಡು ಬೆರಗಾದರು ಭೂಮಿಯ ಕಟ್ಟಕಡೆಯವರು ನಡುಗಿದರು ಎಲ್ಲರೂ ಇಲ್ಲಿಗೆ ನೆರೆದುಬಂದಿಹರು.
6 : ಸಹಾಯಮಾಡಿದರು ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು ಒಬ್ಬರಿ ಗೊಬ್ಬರು.
7 : ಚೆನ್ನಾಗಿದೆ ಎನ್ನುತ್ತಾನೆ ಬಡಗಿ ಅಕ್ಕಸಾಲಿಗನಿಗೆ; ಪ್ರೋತ್ಸಾಹ ನೀಡುತ್ತಾನೆ ನುಣುಪು ಮಾಡುವವನು ಅಡಿಗಲ್ಲನ್ನು ತಟ್ಟುವವನಿಗೆ. ಬೆಸುಗೆ ಚೆನ್ನಾಗಿದೆ ಎಂದವರು ಮೊಳೆಗಳನ್ನು ಬಡಿಯುತ್ತಾರೆ ವಿಗ್ರಹ ಅಲುಗದಂತೆ.
8 : ಇಂತಿರಲು ನನ್ನ ದಾಸನಾದ ಇಸ್ರಯೇಲೇ, ನಾನು ಆಯ್ದುಕೊಂಡ ಯಕೋಬೇ, ನನ್ನ ಗೆಳೆಯ ಅಬ್ರಹಾಮನ ಸಂತತಿಯೇ,
9 : ಬರಮಾಡಿದೆ ನಾನು ನಿನ್ನನ್ನು ಭೂಮಿಯ ಕಟ್ಟಕಡೆಯಿಂದ ಕರೆದುತಂದೆ ನಿನ್ನನ್ನು ದಿಗಂತದಿಂದ. ನಿನಗೆ ನಾನು ಇಂತೆಂದೆ: ನೀನೆನ್ನ ದಾಸ, ನಿನ್ನ ನಾ ತಿರಸ್ಕರಿಸದೆ ಆರಿಸಿಕೊಂಡೆ!
10 : ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ. ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ.
11 : ಆಶಾಭಂಗಪಟ್ಟು ಅವಮಾನ ಹೊಂದುವರು ನಿನ್ನ ಮೇಲೆ ಕೋಪಗೊಂಡವರು ನಾಶವಾಗಿ ನಿರ್ಮೂಲವಾಗುವರು ನಿನ್ನ ಸಂಗಡ ವ್ಯಾಜ್ಯವಾಡಿದವರು.
12 : ಹುಡುಕಿದರೂ ಸಿಗರು ನಿನ್ನೊಡನೆ ಹೋರಾಡಿದವರು ನಾಶವಾಗಿ ನಿರ್ನಾಮವಾಗುವರು ನಿನ್ನ ವಿರುದ್ಧ ಯುದ್ಧಮಾಡಿದವರು.
13 : ನಿನ್ನ ದೇವರಾದ ಸರ್ವೇಶ್ವರ ನಾನೇ ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ.
14 : ಸರ್ವೇಶ್ವರ ಇಂತೆನ್ನುತ್ತಾರೆ: “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.
15 : ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ.
16 : ನೀನು ತೂರಲು ಅವುಗಳನ್ನು ಕೊಂಡೊಯ್ವುದು ಗಾಳಿ ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ.
17 : ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ?
18 : ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು.
19 : ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು.
20 : ಇದನು ಕಂಡರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ‘ಇದನ್ನು ಮಾಡಿದ ಹಸ್ತವು ಸರ್ವೇಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ.’
21 : ಯಕೋಬ್ಯರ ಅರಸನಾದ ಸರ್ವೇಶ್ವರ ಇಂತೆನ್ನುತ್ತಾರೆ: “ನಾಡದೇವತೆಗಳೇ, ಹೊರಗೆ ಬರಲಿ ನಿಮ್ಮ ವ್ಯಾಜ್ಯ ಸಾಬೀತಾಗಲಿ ನಿಮ್ಮ ನ್ಯಾಯ.
22 : ಬನ್ನಿರಿ ಮುಂದಕ್ಕೆ ತಿಳಿಸಿ ಭವಿಷ್ಯತ್ತನು ನಮಗೆ. ವಿವರಿಸಿ ಗತಿಸಿದ ಘಟನೆಗಳು ಏನೇನೆಂದು; ಗ್ರಹಿಸುವೆವು ಅವುಗಳ ಪರಿಣಾಮವನ್ನು ಮನಸ್ಸಿಗೆ ತಂದು, ಇಲ್ಲವಾದರೆ ತಿಳಿಸಿ ನಮಗೆ ಸಂಭವಿಸಲಿರುವುದೇನೆಂದು.
23 : ತಿಳಿಸಿ ನಮಗೆ ಮುಂದೆ ನಡೆಯಬೇಕಾದವುಗಳನು ನಂಬುವೆವು ಆಗ ನೀವು ದೇವರುಗಳೆಂಬುದನು, ಪ್ರದರ್ಶಿಸಿ ಒಳಿತನ್ನಾಗಲಿ ಕೆಡುಕನ್ನಾಗಲಿ ಆಗ ನೋಡುವೆವು ಒಟ್ಟಿಗೆ ನಿಬ್ಬೆರಗಾಗಿ !
24 : ಇಗೋ, ನೀವು ಶೂನ್ಯರೇ ಸರಿ, ನಿಮ್ಮ ಕಾರ್ಯವು ವ್ಯರ್ಥವೇ, ಸರಿ ನಿಮ್ಮನ್ನು ಮರೆಹೋಗುವವರು ತುಚ್ಛರೇ ಸರಿ !
25 : ಹುರಿದುಂಬಿಸಿ ಕರೆತಂದಿರುವೆನು ಒಬ್ಬನನ್ನು ಉತ್ತರದಿಂದ ನನ್ನ ನಾಮವನ್ನು ಪ್ರಚುರಪಡಿಸಲು ಬಂದಿಹನಾತ ಪೂರ್ವದಿಂದ ಕುಂಬಾರನು ಜೇಡಿಮಣ್ಣನ್ನು ತುಳಿಯುವಂತೆ ತುಳಿಯುವನಾತ ರಾಜರನ್ನು ಮಣ್ಣಂತೆ.
26 : ಈ ಘಟನೆಯನ್ನು ಅರುಹಿದವನಾರು ಅದು ನೆರವೇರುವ ಮುಂದೆ? ಇದನ್ನು ಮುನ್ನ ತಿಳಿಸಿದವನಾರು ನಮಗೆ ಗೊತ್ತಾಗುವಂತೆ? ತಿಳಿಸಿದ್ದರೆ ಹೇಳುತ್ತಿದ್ದೆವು ಅವನು ಸತ್ಯವಂತನೆಂದೆ. ಆದರೆ ಇದನ್ನು ತಿಳಿಸಿದವನಿಲ್ಲ ಮುನ್ನತಿಳಿಸಬಲ್ಲವನಾರೂ ಇಲ್ಲ ನಿಮ್ಮಿಂದ ಮಾತೊಂದನ್ನು ಕೇಳಿದವನಾರೂ ಇಲ್ಲ.
27 : ಕೇಳಿ, ಇದನ್ನು ಮೊದಲು ತಿಳಿಸಿದವನು ನಾನೇ ಸಿಯೋನಿಗೆ; ಶುಭಸಂದೇಶಕ ದೂತನನ್ನು ಕಳುಹಿಸಿ ದವನು ನಾನೇ ಜೆರುಸಲೇಮಿಗೆ.
28 : ನಾ ನೋಡಲು ಅವರಲ್ಲಿ ಸಮರ್ಥರಾರು ಇಲ್ಲ ನಾ ಪ್ರಶ್ನಿಸಲು ಉತ್ತರಿಸಬಲ್ಲ ವಿವೇಕಿ ಇಲ್ಲ.
29 : ನಿಶ್ಚಯವಾಗಿ ಆ ದೇವತೆಗಳೆಲ್ಲ ಕ್ಷುದ್ರರೇ ಅವರ ಕಾರ್ಯಗಳೆಲ್ಲ ಶೂನ್ಯವೇ ಆ ಎರಕದ ಬೊಂಬೆಗಳೆಲ್ಲಾ ಬರಿ ಗಾಳಿಯೆ!

Holydivine