Isaiah - Chapter 13
Holy Bible

1 : ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿ ಬಂದ ದೇವವಾಣಿ:
2 : ಬೋಳುಬೆಟ್ಟದ ಮೇಲೆ ಧ್ವಜವನ್ನು ಏರಿಸಿರಿ. ಪ್ರಭುಗಳ ನಗರದ್ವಾರಗಳನ್ನು ಮುತ್ತುವಂತೆ ಸೈನಿಕರಿಗೆ ಸನ್ನೆಮಾಡಿ ಕೂಗಿ ಹೇಳಿರಿ.
3 : ಆಯ್ಕೆಯಾದವರಿಗೆ ಅಪ್ಪಣೆ ಮಾಡಿದ್ದೇನೆ: ಹೌದು, ಹೆಮ್ಮೆಯಿಂದ ಮೆರೆಯುವ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆ ನೀಡಿದ್ದೇನೆ.
4 : ಇಗೋ, ಬೆಟ್ಟಗುಡ್ಡಗಳಿಂದ ಕೇಳಿಬರುತ್ತಿದೆ ಜನಜಂಗುಳಿಯಂಥ ಗದ್ದಲ; ಒಟ್ಟಿಗೆ ಕೂಡಿಕೊಂಡ ದೇಶವಿದೇಶಗಳ ಆರ್ಭಟ; ಸಜ್ಜಾಗಿ ನಿಂತಿದೆ ಸೇನಾಧೀಶ್ವರ ಸರ್ವೇಶ್ವರನ ಸೈನ್ಯ.
5 : ಅವರು ಬಂದಿರುವುದು ಭೂಮಿಯ ಕಟ್ಟಕಡೆಯ ನಾಡುಗಳಿಂದ; ಇಡೀ ರಾಷ್ಟ್ರವನ್ನು ಹಾಳು ಮಾಡಲಿರುವರು ಸರ್ವೇಶ್ವರ ಕೋಪೋದ್ರೇಕದಿಂದ.
6 : ಪ್ರಲಾಪಿಸಿರಿ, ಸಮೀಪಿಸಿದೆ ಸರ್ವೇಶ್ವರನ ದಿನ; ಸನ್ನಿಹಿತವಾಗಿದೆ, ಸರ್ವನಾಶ ಮಾಡುವ ಸೇನಾಧೀಶ್ವರನ ದಿನ!
7 : ಈ ಕಾರಣ ಜೋಲುಬೀಳುವುವು ಎಲ್ಲರ ಕೈಗಳು; ಕರಗಿ ನೀರಾಗುವುವು ಎಲ್ಲರ ಹೃದಯಗಳು.
8 : ಭಯಭ್ರಾಂತರಾಗುವರು ಅವರೆಲ್ಲರು; ಆಕ್ರಮಿಸುವುವು ಅವರನ್ನು ಯಾತನೆ ವೇದನೆಗಳು. ಸಂಕಟಪಡುವರವರು ಹೆರುವ ಹೆಂಗಸಿನಂತೆ; ಒಬ್ಬರನ್ನೊಬ್ಬರು ನೋಡುವರು ದಿಗ್ಭ್ರಾಂತರಾದವರಂತೆ; ಅವರ ಮುಖಗಳು ಕೆಂಪೇರುವುವು ಬೆಂಕಿಯಂತೆ.
9 : ಇಗೋ, ಸರ್ವೇಶ್ವರನ ದಿನ ಬರುತ್ತಿದೆ! ಭೂಮಿಯನ್ನು ಹಾಳುಮಾಡಲು, ಪಾಪಿಗಳನ್ನು ನಿರ್ಮೂಲ ಮಾಡಲು; ಕೋಪೋದ್ರೇಕದಿಂದ, ರೋಷಾವೇಶದಿಂದ, ಕ್ರೂರವಾಗಿ ಬರುತ್ತಿದೆ!
10 : ಆಕಾಶದ ತಾರೆಗಳು, ನಕ್ಷತ್ರಗಳು ಬೆಳಗವು, ಸೂರ್ಯನು ಅಂಧಕಾರಮಯನಾಗುವನು, ಚಂದ್ರನು ಕಾಂತಿಹೀನನಾಗುವನು.
11 : ಸರ್ವೇಶ್ವರ ಇಂತೆನ್ನುತ್ತಾರೆ: “ನಾನು ಲೋಕದವರಿಗೆ ಪಾಪದ ಫಲವನ್ನೂ ದುರುಳರಿಗೆ ದುಷ್ಕøತ್ಯಗಳ ಫಸಲನ್ನೂ ತಿನ್ನಿಸುವೆನು. ಸೊಕ್ಕಿದವನ ಕೊಬ್ಬನ್ನು ಕರಗಿಸುವೆನು. ಬಲಾತ್ಕಾರ ಮಾಡುವವರ ಹೆಮ್ಮೆಯನ್ನು ಅಡಗಿಸುವೆನು.
12 : ಅಳಿದುಳಿದ ಜನರು ಅಪರಂಜಿಗಿಂತಲೂ ಓಫೀರಿನ ಬಂಗಾರಕ್ಕಿಂತಲೂ ವಿರಳವಾಗಿರುವಂತೆ ಮಾಡುವೆನು.
13 : ಸೇನಾಧೀಶ್ವರ ಸರ್ವೇಶ್ವರನು ಕೋಪೋದ್ರೇಕದಿಂದ ರೋಷಾವೇಶದಿಂದ ಕೆರಳುವ ದಿನದಂದು ಆಕಾಶಮಂಡಲ ನಡುಗುವುದು, ಭೂಮಂಡಲ ಸ್ಥಳಪಲ್ಲಟಗೊಳ್ಳುವುದು.
14 : “ಬೇಟೆಗಾರನಿಂದ ತಪ್ಪಿಸಿಕೊಂಡು ಓಡುತ್ತಿರುವ ಜಿಂಕೆಯಂತೆಯೂ ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನು ಸ್ವಜನರ ಕಡೆಗೆ ತಿರುಗುವನು; ಸ್ವದೇಶದ ಕಡೆಗೆ ಓಡುವನು.
15 : ಸಿಕ್ಕಿಸಿಕ್ಕಿದವರೆಲ್ಲರು ಇರಿತಕ್ಕೆ ಗುರಿಯಾಗುವರು. ಅಟ್ಟಿಹಿಡಿಯಲಾದವರೆಲ್ಲರು ಕತ್ತಿಗೆ ತುತ್ತಾಗುವರು.
16 : ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಲಾಗುವುದು. ಅವರ ಮನೆಗಳನ್ನು ಸೂರೆ ಮಾಡಲಾಗುವುದು. ಅವರ ಹೆಂಗಳೆಯರು ಅತ್ಯಾಚಾರಕ್ಕೆ ಈಡಾಗುವರು.
17 : “ಇಗೋ, ಬಾಬಿಲೋನಿಯದ ಜನರಿಗೆ ವಿರುದ್ಧವಾಗಿ ಮೇದ್ಯರನ್ನು ಎತ್ತಿಕಟ್ಟುವೆನು. ಇವರು ಬೆಳ್ಳಿಬಂಗಾರಕ್ಕೆ ಮಾರುಹೋಗರು.
18 : ಇವರ ಬಿಲ್ಲುಗಳು ಯುವಜನರನ್ನು ಚೂರುಚೂರು ಮಾಡುವುವು; ಇವರು ಕರುಳ ಕುಡಿಗಳನ್ನೂ ಕನಿಕರಿಸರು; ಮಕ್ಕಳುಮರಿಗಳನ್ನೂ ಕರುಣಿಸದು ಇವರ ಕಣ್ಣು.
19 : ಬಾಬಿಲೋನ್ ರಾಜ್ಯಗಳಿಗೆ ಶಿರೋಮಣಿ, ಕಸ್ದೀಯರ ಭವ್ಯ ಭೂಷಣ. ಆದರೆ ದೇವರಾದ ನಾನು ಸೊದೋಮ್ ಮತ್ತು ಗೊಮೋರಾ ನಾಡುಗಳನ್ನು ನಾಶಮಾಡಿದಂತೆ ಇದನ್ನೂ ಕೆಡಿಸಿ ನಾಶಮಾಡುವೆನು.
20 : ಅದು ಎಂದಿಗೂ ನಿವಾಸಕ್ಕೆ ಯೋಗ್ಯವಾಗದು. ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಮಾಡರು. ಯಾವ ಅರಬ್ಬಿಯನೂ ಅಲ್ಲಿ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.
21 : ಆ ನಾಡು ಕಾಡುಮೃಗಗಳಿಗೆ ಬೀಡಾಗುವುದು. ಅದರ ಮನೆಗಳು ಗೂಬೆಗಳ ಗೂಡಾಗುವುವು, ಉಷ್ಟ್ರಪಕ್ಷಿಗಳು ಅಲ್ಲಿ ವಾಸಮಾಡುವುವು. ಕಾಡು ಮೇಕೆಗಳು ಕುಣಿದಾಡುವುವು.
22 : ಅದರ ಅರಮನೆಗಳಲ್ಲಿ ನರಿಗಳು, ಮೋಜಿನ ಮಹಲುಗಳಲ್ಲಿ ತೋಳಗಳು ಕೂಗಾಡುವುವು. ಬಾಬಿಲೋನಿಗೆ ಕಾಲ ಬಂದಿದೆ. ಅದರ ದಿನಗಳು ಮುಗಿಯುತ್ತಿವೆ.

Holydivine