Isaiah - Chapter 6
Holy Bible

1 : ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲು ವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು.
2 : ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು.
3 : ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ: “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು.
4 : ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು.
5 : ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!” ಎಂದು ಕೂಗಿ ಕೊಂಡೆನು.
6 : ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿ ಬಂದನು.
7 : ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು”, ಎಂದನು.
8 : ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವನು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು.
9 : ಅದಕ್ಕೆ, “ನೀನು ಜನರ ಬಳಿಗೆ ಹೋಗಿ ಹೀಗೆಂದು ಹೇಳು: ‘ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದು, ಕಣ್ಣಾರೆ ಕಂಡರೂ ಗ್ರಹಿಸಬಾರದು.’
10 : ಅದೂ ಅಲ್ಲದೆ, ಆ ಜನರು; “ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ, ಹೃದಯದಿಂದ ಗ್ರಹಿಸಿ, ನನಗೆ ಅಭಿಮುಖರಾಗಿ ನನ್ನಿಂದ ಸ್ವಸ್ಥತೆಯನ್ನು ಹೊಂದದಂತೆ ಅವರ ಹೃದಯವನ್ನು ಕೊಬ್ಬಿಸು, ಕಿವಿಗಳನ್ನು ಮಂದವಾಗಿಸು, ಕಣ್ಣುಗಳನ್ನು ಮಬ್ಬಾಗಿಸು,” ಎಂದು ನನಗೆ ಹೇಳಿದರು.
11 : ಅದಕ್ಕೆ ನಾನು: “ಸ್ವಾಮಿ, ಈ ಪರಿಸ್ಥಿತಿ ಎಷ್ಟರ ತನಕ?” ಎಂದು ಕೇಳಿದೆನು. ಅದಕ್ಕೆ ಪ್ರತ್ಯುತ್ತರವಾಗಿ:
12 : “ನಾನು ಜನರನ್ನು ದೂರ ತೊಲಗಿಸಿ, ನಾಡನ್ನು ನಾಶಗೊಳಿಸಿ, ನಗರಗಳನ್ನು ನಿರ್ಜನಗೊಳಿಸಿ, ಮನೆಗಳನ್ನು ಬರಿದಾಗಿಸಿ, ಧರೆಯನ್ನು ಪೂರ್ತಿಯಾಗಿ ನಾಶಗೊಳಿಸುವ ತನಕ ಪರಿಸ್ಥಿತಿ ಹೀಗಿರುವುದು.
13 : “ನಾಡಿನ ಹತ್ತನೇ ಒಂದು ಭಾಗ ಉಳಿದಿದ್ದರೂ ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ” ಎಂದರು. ಹೀಗೆ ಉಳಿದ ಬುಡವು ಮುಂದೆ ದೇವಜನರಾಗಿ ಚಿಗುರುವುದು.

Holydivine