Isaiah - Chapter 4
Holy Bible

1 : ಆ ಕಾಲ ಬಂದಾಗ ಏಳು ಮಂದಿ ಅವಿವಾಹಿತ ಮಹಿಳೆಯರು ಒಬ್ಬ ಪುರುಷನನ್ನು ಹಿಡಿದುಕೊಂಡು: “ನಾವು ಸ್ವಂತವಾಗಿ ದುಡಿದು ಊಟಮಾಡುತ್ತೇವೆ, ಸ್ವಂತವಾಗಿ ಸಂಪಾದನೆ ಮಾಡಿ ಬಟ್ಟೆ ಉಡುತ್ತೇವೆ. ನೀನು ನಮ್ಮ ಯಜಮಾನನೆನಿಸಿಕೊಂಡು ನಮ್ಮ ಮಾನವನ್ನು ಕಾಪಾಡಿದರೆ ಸಾಕು,” ಎಂದು ಕೋರುವರು.
2 : ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.
3 : ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿ ಕೊಳ್ಳುವರು.
4 : ಆಗ ಒಡೆಯರಾದ ಸ್ವಾಮಿ ನ್ಯಾಯನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದುಹಾಕುವರು.
5 : ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.
6 : ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು.

Holydivine