Isaiah - Chapter 3
Holy Bible

1 : ಇಗೋ, ಪ್ರಭುವೂ ಸೇನಾಧೀಶ್ವರ ಆದ ಸರ್ವೇಶ್ವರಸ್ವಾಮಿ ಜೆರುಸಲೇಮ್ ಮತ್ತು ಜುದೇಯದ ಜನರ ಜೀವನಕ್ಕೆ ಆಧಾರವಾದ ಅನ್ನಪಾನಗಳನ್ನೆಲ್ಲ ತೆಗೆದುಬಿಡುವರು.
2 : ಧೀರರು ಮತ್ತು ಯೋಧರು, ನ್ಯಾಯಾಧಿಪತಿಗಳು ಮತ್ತು ಪ್ರವಾದಿಗಳು, ಶಕುನದವರು ಮತ್ತು ಶಾಸಕರು,
3 : ದಳಪತಿಗಳು ಮತ್ತು ಗಣ್ಯವ್ಯಕ್ತಿಗಳು, ಮಂತ್ರಿಗಳು ಮತ್ತು ಮಂತ್ರತಂತ್ರದವರು - ಎಲ್ಲರನ್ನು ತೊಲಗಿಸಿ ಬಿಡುವರು.
4 : ಸರ್ವೇಶ್ವರ ಅವರಿಗೆ ಬಾಲಕರನ್ನು ಪಾಲಕರನ್ನಾಗಿಸಿ, ಹಸುಳೆಗಳು ಅವರನ್ನು ಆಳುವಂತೆ ಮಾಡುವರು.
5 : ಪ್ರಜೆಗಳೆಲ್ಲ ಪರಸ್ಪರ ವಿರೋಧಿಗಳಾಗಿ, ಒಬ್ಬರನ್ನೊಬ್ಬರು ಹಿಂಸಿಸುವರು. ನೆರೆಹೊರೆಯವರನ್ನು ನಿಂದಿಸುವರು. ಕಿರಿಯರು ಹಿರಿಯರನ್ನು, ದುಷ್ಟರು ಶಿಷ್ಟರನ್ನು ಹೀಯಾಳಿಸುವರು.
6 : ಕಾಲ ಬರುವುದು. ಆಗ ಒಬ್ಬನು ತನ್ನ ಸಹೋದರರಲ್ಲೊಬ್ಬನಿಗೆ: “ನಿನಗೆ ನಿಲುವಂಗಿಯಾದರೂ ಇದೆ. ನೀನೇ ನಮಗೆ ಒಡೆಯನಾಗು. ಹಾಳುಬಿದ್ದ ಈ ಊರಿಗೆ ನೀನೇ ಗೌಡನಾಗು,” ಎಂದು ಹುಟ್ಟುಮನೆಯಲ್ಲೇ ಒತ್ತಾಯಿಸುತ್ತಾ ಹೇಳುವನು.
7 : ಆಗ ಆ ಸಹೋದರನು ಹೂಂಕರಿಸಿ, “ಈ ನಾಡಿಗೆ ವ್ರಣವೈದ್ಯನಾಗಿರಲು ನನಗಿಷ್ಟವಿಲ್ಲ. ಮನೆಯಲ್ಲಿ ತಿನ್ನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ. ನನ್ನನ್ನು ಜನನಾಯಕನನ್ನಾಗಿ ಮಾಡುವುದು ಬೇಡ,” ಎಂದು ತಿರಸ್ಕಾರದಿಂದ ಉತ್ತರಿಸುವನು.
8 : ಜೆರುಸಲೇಮ್ ನಗರ ಹಾಳಾಯಿತು. ಜುದೇಯನಾಡು ಬಿದ್ದುಹೋಯಿತು. ಜನರ ನಡೆನುಡಿಗಳೆಲ್ಲ ಸ್ವಾಮಿಗೆ ವಿರುದ್ಧವಾದವು. ಸ್ವಾಮಿಯ ಮಹಿಮಾ ಸಾನ್ನಿಧ್ಯಕ್ಕೆ ಪ್ರತೀಕೂಲವಾದವು.
9 : ಅವರ ಮುಖಲಕ್ಷಣವೇ ಅವರ ವಿರುದ್ಧ ಸಾಕ್ಷಿಯಾಗಿದೆ. ಅವರು ಸೊದೋಮಿನವರಂತೆ ತಮ್ಮ ಪಾಪಗಳನ್ನು ಮುಚ್ಚುಮರೆಯಿಲ್ಲದೆ ಮೆರೆಯಿಸುತ್ತಾರೆ. ಅಯ್ಯೋ, ಅವರಿಗೆ ಕೇಡು! ತಮಗೆ ತಾವೇ ಕೇಡನ್ನು ಬರಮಾಡಿ ಕೊಂಡಿದ್ದಾರೆ.
10 : ಸಜ್ಜನರಿಗೆ ಶುಭವೆಂದು ಸಾರಿರಿ. ಅವರು ತಮ್ಮ ಕ್ರಿಯೆಗಳ ಸತ್ಫಲವನ್ನು ಸವಿಯುತ್ತಾರೆ.
11 : ದುರ್ಜನರಿಗೆ ಧಿಕ್ಕಾರ! ಅವರ ಕೃತ್ಯಗಳಿಗೆ ಕಹಿ ಫಲ ದೊರಕುತ್ತದೆ.
12 : ನನ್ನ ಜನರನ್ನೋ ಬಾಧಿಸುತ್ತಿರುವವರು ಹುಡುಗರು; ಆಳುತ್ತಿರುವವರೋ ಹೆಂಗಳೆಯರು. ಎಲೈ ನನ್ನ ಜನರೇ, ನಿಮ್ಮ ನಾಯಕರು ನಿಮ್ಮನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ನಿಮ್ಮ ಮಾರ್ಗವನ್ನು ವಕ್ರಗೊಳಿಸುತ್ತಿದ್ದಾರೆ.
13 : ಸ್ವಾಮಿ ವಾದಿಸುವುದಕ್ಕೆ ಸಿದ್ಧವಿದ್ದಾರೆ. ಅವರು ಜನರ ನ್ಯಾಯವನ್ನು ನಿರ್ಣಯಿಸುವುದಕ್ಕೆ ತಯಾರಾಗಿದ್ದಾರೆ.
14 : ಸ್ವಾಮಿ ತಮ್ಮ ಜನರ ನಾಯಕರನ್ನೂ ಅಧಿಪತಿಗಳನ್ನೂ ನ್ಯಾಯವಿಚಾರಣೆಗೆ ಗುರಿಪಡಿಸುವರು. “ನೀವು ದ್ರಾಕ್ಷಾತೋಟವನ್ನು ಕಬಳಿಸಿದ್ದೀರಿ. ಬಡವರಿಂದ ಕೊಳ್ಳೆ ಹೊಡೆದದ್ದನ್ನು ಮನೆಗಳಲ್ಲಿ ತುಂಬಿಸಿಕೊಂಡಿದ್ದೀರಿ.
15 : ನೀವು ನನ್ನ ಜನರನ್ನು ನಸುಕಿಬಿಟ್ಟಿದ್ದೀರಲ್ಲವೇ? ಬಡವರನ್ನು ಹಿಸುಕಿಬಿಟ್ಟಿದ್ದೀರಲ್ಲವೇ?” ಎಂದು ಸೇನಾಧೀಶ್ವರ ಸರ್ವೇಶ್ವರಸ್ವಾಮಿ ವಾದಿಸುತ್ತಾರೆ.
16 : ಸ್ವಾಮಿ ಇಂತೆನ್ನುತ್ತಾರೆ: ಸಿಯೋನಿನ ಮಹಿಳೆಯರ ಒನಪು ಒಯ್ಯಾರಗಳನ್ನು ನೋಡಿರಿ. ಅವರು ಕತ್ತುತೂಗುತ್ತಾ, ಕಡೆಗಣ್ಣು ಹಾಕುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆ ಜಣ ಜಣಿಸುತ್ತಾ ನಡೆಯುತ್ತಾರೆ.
17 : ಒಡೆಯರಾದ ಸ್ವಾಮಿ ಅವರ ನಡುನೆತ್ತಿಯನ್ನು ಹುಣ್ಣಾಗಿಸಿ ಬೋಳುಮಾಡುವರು. ಅವರ ಮಾನವನ್ನು ಬಯಲು ಮಾಡುವರು.
18 : ದಿನ ಬರುವುದು, ಆಗ ಸ್ವಾಮಿ ಅವರ ಬೆಡಗಿನ ಆಭರಣಗಳೆಲ್ಲವನ್ನು ತೆಗೆದುಹಾಕುವರು. ಕಾಲಂದಿಗೆ, ತುರುಬು, ಬಲೆ, ಅರ್ಧಚಂದ್ರ,
19 : ಜುಮಕಿ, ಬಳೆ, ಕುಲಾವಿ, ಶಿರವಸ್ತ್ರ,
20 : ಕಂಠವಸ್ತ್ರ, ಕಾಲಸರಪಣಿ, ಡಾಬು, ಸುಗಂಧ ಭರಣಿ, ತಾಯಿತಿ,
21 : ಮುದ್ರೆ ಉಂಗುರ, ಮೂಗುತಿ,
22 : ಹಬ್ಬದ ಉಡಿಗೆ ತೊಡಿಗೆ, ಮೇಲಂಗಿ, ಶಾಲು, ಕೈಚೀಲ,
23 : ನವಿರು ಜಾಲರಿ, ನಾರುಮಡಿ, ಮುಡಿ ಮುಕುಟ, ಮೇಲ್ವಸ್ತ್ರ ಈ ಸೊಗಸು ಭೂಷಣಗಳನ್ನೆಲ್ಲಾ ತೆಗೆದುಹಾಕುವರು.
24 : ಇದಲ್ಲದೆ ಸುಗಂಧಕ್ಕೆ ಬದಲಾಗಿ ದುರ್ಗಂಧ, ನಡುಪಟ್ಟಿಗೆ ಬದಲಾಗಿ ಹುರಿಹಗ್ಗ, ಜಡೆದಲೆಗೆ ಬದಲಾಗಿ ಬೋಳುದಲೆ, ರೇಷ್ಮೆ ಬಟ್ಟೆಗೆ ಬದಲಾಗಿ ಗೋಣಿತಟ್ಟು, ಬೆಡಗಿಗೆ ಬದಲಾಗಿ ಬೆತ್ತಲೆ, ಇಂಥ ಗತಿ ಅವರಿಗೆ ಬಂದೊದಗುವುದು.
25 : ಎಲೌ, ಸಿಯೋನ್ ನಗರಿಯೇ, ನಿನ್ನ ವೀರರು ಖಡ್ಗಕ್ಕೆ ತುತ್ತಾಗುವರು; ನಿನ್ನ ಯೋಧರು ಯುದ್ಧದಲ್ಲಿ ಮಡಿಯುವರು; ನಿನ್ನ ಯೋಧರು ಯುದ್ಧದಲ್ಲಿ ಮಡಿಯುವರು.
26 : ನಿನ್ನ ಪುರದ್ವಾರಗಳಲ್ಲಿ ದುಃಖ ಪ್ರಲಾಪ ತುಂಬಿರುವುದು. ನೀನು ನಗ್ನಳಂತೆ ನೆಲದ ಮೇಲೆ ಕುಳಿತುಬಿಡುವೆ.

Holydivine