Isaiah - Chapter 49
Holy Bible

1 : ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ.
2 : ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ.
3 : ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.”
4 : ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ.
5 : ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ.
6 : ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”
7 : ಪೂರ್ತಿಯಾಗಿ ತಿರಸ್ಕøತನಾದವನಿಗೆ ಅನ್ಯಜನಾಂಗಗಳಿಗೆ ಅಸಹ್ಯವಾದವನಿಗೆ ದರ್ಪಾಧಿಪತಿಗಳಿಗೆ ದಾಸನಾದವನಿಗೆ, ಇಸ್ರಯೇಲಿನ ವಿಮೋಚಕನು ಹಾಗೂ ಪರಮಪಾವನನು ಆದ ಸರ್ವೇಶ್ವರನು ಹೀಗೆಂದು ಹೇಳುವನು: “ಸರ್ವೇಶ್ವರಸ್ವಾಮಿಯ ಪ್ರಾಮಾಣಿಕತೆಯನ್ನೂ ಇಸ್ರಯೇಲಿನ ಪರಮ ಪಾವನನಿಂದ ನೀನು ಆಯ್ಕೆಯಾದುದನ್ನೂ ನಿನ್ನ ಅರಸರುಗಳು ಕಂಡು, ಎದ್ದು ನಿಲ್ಲುವರು ನಿನಗೆ ಅಧಿಪತಿಗಳು ಅಡ್ಡ ಬೀಳುವರು.”
8 : ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರಸ್ವಾಮಿ: “ನಿನಗೆ ದಯಪಾಲಿಸುವೆನು ಸದುತ್ತರವನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನು ಕಾಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ.
9 : ‘ಹೊರಟುಹೋಗಿರಿ’ ಎನ್ನುವೆನು ಸೆರೆಯಾಳುಗಳಿಗೆ ‘ಬೆಳಕಿಗೆ ಬನ್ನಿರಿ’ ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ಧಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲು ಗಳಾಗುವುವು ನನ್ನಾ ಮಂದೆಗೆ.
10 : ಇರದು ಅವರಿಗೆ ಹಸಿವು ಬಾಯಾರಿಕೆ ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ.
11 : ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು ಎತ್ತರಿಸುವೆನು ನನ್ನ ರಾಜಮಾರ್ಗಗಳನು.
12 : ನೋಡಿ, ಬರುತಿಹರು ನನ್ನ ಜನರು ದೂರದಿಂದ ಹೌದು, ಬರುತಿಹರು ಉತ್ತರ ಪಶ್ಚಿಮದಿಂದ ದಕ್ಷಿಣದ ಆ ಅಶ್ವಾನ್ ನಾಡಿನಿಂದ.
13 : ಹರ್ಷಧ್ವನಿಗೆ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು.
14 : ಜೆರುಸಲೇಮಿನ ಜನರಾದರೋ ಇಂತೆಂದರು: “ಸರ್ವೇಶ್ವರ ನಮ್ಮನ್ನು ಕೈಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು.”
15 : ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನು ಮರೆಯೆ.
16 : ನೋಡು, ನಿನ್ನ ಚಿತ್ರ ಕೊರೆದಿದೆ ನನ್ನ ಅಂಗೈಗಳಲೆ ನಿನ್ನ ಪೌಳಿಗೋಡೆಗಳು ಇವೆ ಸದಾ ನನ್ನ ಕಣ್ಣೆದುರಿನಲೆ.
17 : ನಿನ್ನ ಮರಳಿ ಕಟ್ಟುವವರು ಬರುತಿಹರು ತ್ವರೆಯಿಂದ ನಿನ್ನ ಕೆಡವಿ ಹಾಳುಮಾಡಿದವರು ಹೊರಡುತಿಹರು ನಿನ್ನಿಂದ.
18 : ಕಣ್ಣೆತ್ತಿ ಸುತ್ತಮುತ್ತಲು ನೋಡು: ಬರುತಿಹರು ನಿನ್ನ ಬಳಿಗೆ ಅವರೆಲ್ಲರು ಕೂಡಿಕೊಂಡು. ನನ್ನ ಜೀವದಾಣೆ ನಿನಗೆ ಹೇಳುವುದೇನೆಂದರೆ: ‘ವಧುವು ಒಡವೆಗಳನು ಧರಿಸಿಕೊಳ್ಳುವಂತೆ ಅವರಾಗುವರು ನಿನಗೆ ಆಭರಣಗಳಂತೆ.’
19 : ಪಾಳುಬಿದ್ದ ನಿನ್ನ ಪ್ರದೇಶಗಳು ಬೀಳುಬಿದ್ದ ನಿನ್ನ ಭೂಮಿಗಳು ಕೆಡವಿಬಿದ್ದ ನಿನ್ನ ಬೀಡುಗಳು ಕಿಕ್ಕಿರಿದಾಗುವುವು ನಿನ್ನ ನಿವಾಸಿಗಳಿಗೆ; ನಿನ್ನ ಕಬಳಿಸಿದವರು ದೂರವಾಗುವರು ನಿನಗೆ.
20 : “ಸರಿದುಕೊ, ನಮಗೆ ಸ್ಥಳಾವಕಾಶ ಸಾಲದು” ಎಂದು ಪೇಳ್ವರು ನಿನ್ನ ಕಿವಿಯೊಳು ಮಕ್ಕಳು ನೀ ಪರದೇಶಿಯಾಗಿದ್ದಾಗ ನಿನಗೆ ಹುಟ್ಟಿದಾ ಮಕ್ಕಳು.
21 : ಆಗ ನೀನು ಹೀಗೆಂದುಕೊಳ್ಳುವೆ ಮನದೊಳು: “ನಾನೋ ಮಕ್ಕಳನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇಷ್ಟೊಂದು ಮಕ್ಕಳನು ಕೊಟ್ಟವರಾರು ನನಗೆ? ಇವರನ್ನು ಪೋಷಿಸಿದವರಾರು ಹೀಗೆ? ಇವರೆಲ್ಲಿದ್ದರು? ನಾನೋ ಒಬ್ಬಂಟಿಗಳಾಗಿದ್ದೆ!”
22 : ಇಂತೆನ್ನುವರು ಸ್ವಾಮಿ ಸರ್ವೇಶ್ವರ: ಇದೋ, ಕೈಸನ್ನೆ ಮಾಡುವೆ ಜನಾಂಗಗಳಿಗೆ ನನ್ನ ಧ್ವಜವನ್ನೆತ್ತುವೆ ದೇಶಾಂತರಗಳವರೆಗೆ ಬರುವರವರು ನಿನ್ನ ಕುವರರನು ಅಪ್ಪಿಕೊಂಡು ಎದೆಗೆ ಕರೆತರುವರು ನಿನ್ನ ಕುವರಿಯರನು ಹೆಗಲಮೇಲೆ.
23 : ಸಾಕುತಂದೆಗಳಾಗುವರು ರಾಜರು ನಿನಗೆ ಸಾಕುತಾಯಿಯರಾಗುವರು ರಾಣಿಯರು ನಿನಗೆ. ನಿನ್ನ ಪಾದಧೂಳಿಯ ನೆಕ್ಕುವರವರು ಸಾಷ್ಟಾಂಗವೆರಗಿ ನನಗೆ. ಆಗ ನಿನಗೆ ಗೊತ್ತಾಗುವುದು ನಾನೇ ಸರ್ವೇಶ್ವರನೆಂದು ನನ್ನನ್ನು ನಿರೀಕ್ಷಿಸುವವರು ಆಶಾಭಂಗ ಪಡರೆಂದು.
24 : ಬಲಾಢ್ಯನಿಂದ ಕೊಳ್ಳೆಯನ್ನು ಕಸಿದುಕೊಳ್ಳಲಾದೀತೆ? ಭೀಕರನಿಗೆ ಸೆರೆಯಾದವರನ್ನು ಬಿಡಿಸಲಾದೀತೆ?
25 : ಸರ್ವೇಶ್ವರ ಹೀಗೆನ್ನುತ್ತಾರೆ: “ಹೌದು, ಅಪಹರಿಸಲಾಗುವುದು ಬಲಾಢ್ಯನ ಸೆರೆಯಾಳುಗಳನು ಕಸಿದುಕೊಳ್ಳಲಾಗುವುದು ಭೀಕರನ ಕೊಳ್ಳೆಯನು. ನಿನ್ನೊಡನೆ ಹೋರಾಡುವವನ ಸಂಗಡ ಹೋರಾಡುವೆ ನಾನೇ. ಅಷ್ಟೇ ಅಲ್ಲ, ನಿನ್ನ ಮಕ್ಕಳನು ಉದ್ಧರಿಸುವೆ ನಾನೇ.
26 : ಮಾಡುವೆನು ನಿನ್ನ ಹಿಂಸಕರು ಸ್ವಮಾಂಸವನ್ನು ತಿನ್ನುವಂತೆ ಅಮಲೇರುವರು ಸ್ವಂತ ರಕ್ತವನ್ನು ಕುಡಿದು ದ್ರಾಕ್ಷಾರಸದಂತೆ. ಅರಿವರು ನರಮಾನವರೆಲ್ಲರು ಇಂತು: ನಾನೇ ಸರ್ವೇಶ್ವರ, ನಿನ್ನ ರಕ್ಷಕ, ನಿನ್ನ ನಿನ್ನ ವಿಮೋಚಕನೆಂದು; ನಾನೇ ಯಕೋಬ ವಂಶದ ಬಲಾಢ್ಯ ದೇವನೆಂದು.”

Holydivine