Isaiah - Chapter 2
Holy Bible

1 : ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ:
2 : ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠೆಗೊಳ್ಳುವುದು, ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದು ಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದು ಬರುವುವು.
3 : ದೇಶವಿದೇಶಗಳವರು ಬಂದು ಹೇಳುವರು ಹೀಗೆ: “ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ.
4 : ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನು ತೀರಿಸುವನು ರಾಷ್ಟ್ರರಾಷ್ಟ್ರಗಳ ನ್ಯಾಯವನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನು. ಮಾರ್ಪಡಿಸುವರು ಕತ್ತಿಗಳನು ನೇಗಿಲ ಗುಳಗಳನ್ನಾಗಿ ಭರ್ಜಿಗಳನು ಕುಡುಗೋಲುಗಳನ್ನಾಗಿ. ಕತ್ತಿಯನೆತ್ತರು ಜನಾಂಗ ಜನಾಂಗದೆದುರಿಗೆ ಯುದ್ಧವಿದ್ಯೆಯ ಕಲಿಕೆ ಅಗತ್ಯವಿರದು ಅವರಿಗೆ.
5 : ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ.
6 : ಹೇ ಸರ್ವೇಶ್ವರಾ ಯಕೋಬ ಮನೆತನದವರನ್ನು ನೀವು ಕೈ ಬಿಟ್ಟಿದ್ದೀರಿ. ಏಕೆಂದರೆ ಅವರು ಪೌರಸû್ಯರಂತೆ ಮಾಟಮಂತ್ರ ಮಾಡುವವರು. ಫಿಲಿಷ್ಟಿಯರಂತೆ ಕಣಿಹೇಳುವವರು, ಅನ್ಯದೇಶಿಯರಂತೆ ಆಚಾರವಿಚಾರಗಳನ್ನು ಅನುಕರಿಸುವವರು ಆಗಿಬಿಟ್ಟಿದ್ದಾರೆ.
7 : ನಾಡು ಬೆಳ್ಳಿ ಬಂಗಾರದಿಂದ ತುಂಬಿಹೋಗಿದೆ. ಜನರ ನಿಧಿ ನಿಕ್ಷೇಪಗಳಿಗೆ ಮಿತಿಯಿಲ್ಲದಂತಿದೆ. ಎಲ್ಲಾಕಡೆ ಅಶ್ವಬಲ ಯಥೇಚ್ಛವಾಗಿದೆ. ರಥಗಳು ಅಪಾರವಾಗಿವೆ.
8 : ದೇಶದಲ್ಲಿ ವಿಗ್ರಹಗಳು ತುಂಬಿ ತುಳುಕುತ್ತಿವೆ. ಜನರು ತಮ್ಮ ಕೈಯಿಂದ ಮಾಡಿದ ವಿಗ್ರಹಗಳನ್ನೇ ಪೂಜಿಸುತ್ತಿದ್ದಾರೆ.
9 : ಮಾನವನು ತಗ್ಗಿಹೋಗಿದ್ದಾನೆ. ಅಧೋಗತಿಗೆ ಇಳಿದಿದ್ದಾನೆ. ಸ್ವಾಮೀ, ಅವನಿಗೆ ಕ್ಷಮೆ ನೀಡಬೇಡಿ.
10 : ಸ್ವಾಮಿಯ ಭಯಂಕರ ಕೋಪಕ್ಕೆ ಅಂಜಿ, ಆ ಮಹೋನ್ನತನ ವೈಭವಕ್ಕೆ ಹೆದರಿ ಬಂಡೆಯ ಗುಹೆಗಳೊಳಗೆ ನುಗ್ಗಿರಿ, ನೆಲದ ಬಿಲಗಳಲ್ಲಿ ಅವಿತುಕೊಳ್ಳಿರಿ.
11 : ಜನಸಾಮಾನ್ಯರ ಅಟ್ಟಹಾಸವನ್ನು ಅಡಗಿಸಲಾಗುವುದು, ಪ್ರಮುಖರ ಗರ್ವ ಕಮರಿ ಹೋಗುವುದು, ಸ್ವಾಮಿ ಮಾತ್ರ ಅಂದು ಉನ್ನತೋನ್ನತವಾಗಿರುವರು.
12 : ಸೇನಾಧೀಶ್ವರ ಸರ್ವೇಶ್ವರ ದಿನವೊಂದನ್ನು ಗೊತ್ತುಮಾಡಿದ್ದಾರೆ. ಅಹಂಕಾರದಿಂದ ಉಬ್ಬಿಹೋದವರಿಗೆ, ಉದ್ಧಟತನದಿಂದ ಕೊಬ್ಬಿಹೋದವರಿಗೆ,
13 : ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲ ದೇವದಾರು ವೃಕ್ಷಗಳಿಗೆ, ಬಾಷಾನಿನ ಎಲ್ಲಾ ಅಲ್ಲೋನ್ ಮರಗಳಿಗೆ,
14 : ಉನ್ನತವಾಗಿರುವ ಮೇರುಪರ್ವತಗಳಿಗೆ, ಎಲ್ಲಾ ಗುಡ್ಡಬೆಟ್ಟಗಳಿಗೆ,
15 : ಸಮಸ್ತ ಗುಮ್ಮಟ ಗೋಪುರಗಳಿಗೆ, ಸಮಸ್ತ ಕೋಟೆಕೊತ್ತಲಗಳಿಗೆ,
16 : ಎಲ್ಲಾ ದೊಡ್ಡ ದೊಡ್ಡ ಹಡಗುಗಳಿಗೆ, ಎಲ್ಲಾ ಸುಂದರವಾದ ನೌಕೆಗಳಿಗೆ, ಆ ದಿನವು ತಪ್ಪದೆ ಬರುವುದು.
17 : ಜನಸಾಮಾನ್ಯರ ಅಟ್ಟಹಾಸ ಕುಗ್ಗಿಹೋಗುವುದು, ಜನಪ್ರಮುಖರ ಅಹಂಕಾರ ತಗ್ಗಿಹೋಗುವುದು; ಸರ್ವೇಶ್ವರ ಮಾತ್ರ ಆ ದಿನದಂದು ಉನ್ನತೋನ್ನತವಾಗಿರುವರು.
18 : ವಿಗ್ರಹಗಳು ಸಂಪೂರ್ಣವಾಗಿ ಮಾಯವಾಗುವುವು.
19 : ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅವಿತುಕೊಳ್ಳುವರು ಜನರು ಕಲ್ಲುಬಂಡೆಗಳ ಗುಹೆಗಳಲ್ಲಿ, ನೆಲದ ಹಳ್ಳಕೊಳ್ಳಗಳಲ್ಲಿ.
20 : ಆ ದಿನ ಬಂದಾಗ ಮಾನವರು ತಮ್ಮ ಪೂಜೆಗೋಸ್ಕರ ಮಾಡಿಸಿಕೊಂಡ ಬೆಳ್ಳಿಯ ಬೊಂಬೆಗಳನ್ನು ಬಂಗಾರದ ವಿಗ್ರಹಗಳನ್ನೂ ಇಲಿಹೆಗ್ಗಣಗಳ ಬಿಲಗಳಲ್ಲಿ ಬಿಸಾಡುವರು.
21 : ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆ ಹೆದರಿ, ನುಗ್ಗುವರು ಜನರು ಕಲ್ಲು ಬಂಡೆಗಳ ಸಂದುಗೊಂದುಗಳಲ್ಲಿ, ಶಿಲೆಗಳ ಸೀಳು ಪಾಳುಗಳಲ್ಲಿ.
22 : ನರಮಾನವರಲ್ಲಿ ಇಡದಿರು ಭರವಸೆಯನ್ನು; ಯಾವ ಗಣನೆಗೆ ಬಂದಾನು ಅವನು? ಮೂಗಿನಲ್ಲಿ ಉಸಿರಾಡುವ ಅಲ್ಪ ಪ್ರಾಣಿ ಅವನು!

Holydivine