Isaiah - Chapter 57
Holy Bible

1 : ಸಜ್ಜನರು ಸಾಯುತ್ತಾರೆ, ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಶರಣರು ಕಣ್ಮರೆಯಾಗುತ್ತಾರೆ, ‘ಇವರು ಕೇಡಿನಿಂದ ಪಾರಾದರು’ ಎಂದು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.
2 : ಸನ್ಮಾರ್ಗದಲ್ಲಿ ನಡೆಯುವವರು ಶಯ್ಯೆಯಲ್ಲಿ ವಿಶ್ರಮಿಸುತ್ತಾರೆ; ಶಾಂತಿ ಸಮಾಧಾನವನ್ನು ಸೇರುತ್ತಾರೆ.
3 : ಮಾಟಗಾತಿಯ ಮಕ್ಕಳೇ, ವೇಶ್ಯೆ ವ್ಯಭಿಚಾರಿಗಳ ಸಂತಾನದವರೇ, ಬನ್ನಿ ಇಲ್ಲಿಗೆ.
4 : ಯಾರನ್ನು ಅಣಕಿಸಿ ಹಾಸ್ಯಮಾಡುತ್ತಿದ್ದೀರಿ? ಯಾರನ್ನು ನೋಡಿ ಬಾಯಿಕಿಸಿದು ನಾಲಿಗೆಯನ್ನು ಚಾಚುತ್ತೀರಿ?
5 : ಓಕ್‍ಮರಗಳ ತೋಪುಗಳಲ್ಲೂ ಸೊಂಪಾಗಿ ಹರಡಿರುವ ಮರಗಳ ಅಡಿಯಲ್ಲೂ ಕಾಮಾಗ್ನಿಯಿಂದ ಕುದಿಯುತ್ತೀರಿ. ಹೊಳೆಕೊರೆದ ಡೊಗರುಗಳಲ್ಲೂ ಬಂಡೆಬಿರುಕುಗಳಲ್ಲೂ ಮಕ್ಕಳನ್ನು ಬಲಿಕೊಡುತ್ತೀರಿ. ನೀವು ವಿದ್ರೋಹಿಗಳ ಸಂತಾನ, ಸುಳ್ಳುಗಾರರ ಸಂತತಿ.ಓಕ್‍ಮರಗಳ ತೋಪುಗಳಲ್ಲೂ ಸೊಂಪಾಗಿ ಹರಡಿರುವ ಮರಗಳ ಅಡಿಯಲ್ಲೂ ಕಾಮಾಗ್ನಿಯಿಂದ ಕುದಿಯುತ್ತೀರಿ. ಹೊಳೆಕೊರೆದ ಡೊಗರುಗಳಲ್ಲೂ ಬಂಡೆಬಿರುಕುಗಳಲ್ಲೂ ಮಕ್ಕಳನ್ನು ಬಲಿಕೊಡುತ್ತೀರಿ. ನೀವು ವಿದ್ರೋಹಿಗಳ ಸಂತಾನ, ಸುಳ್ಳುಗಾರರ ಸಂತತಿ.
6 : ಎಲೈ ದುಷ್ಟ ಸಂತಾನವೇ, ಹೊಳೆಯ ನುಣುಪುಗಲ್ಲುಗಳೆಂದರೆ ನಿನಗೆ ಅತಿಪ್ರಿಯ. ಹೌದು, ಅವೇ ನಿನ್ನ ಪಾಲಿನ ಭಾಗ್ಯ. ಅವುಗಳಿಗೆ ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದಿರುವೆ, ದವಸಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿರುವೆ. ಇದನ್ನೆಲ್ಲ ನೋಡಿ ಕೋಪವನ್ನು ನಾನು ಅಡಗಿಸಿಕೊಳ್ಳಲಾದೀತೇ?
7 : ಬಲಿಯರ್ಪಿಸಲು ಎತ್ತರವಾದ, ದೊಡ್ಡದಾದ ಬೆಟ್ಟವನ್ನು ಹತ್ತಿರುವೆ. ಆದರೆ ಅಲ್ಲಿ ಕಾಮಕೇಳಿಗಳಲ್ಲಿ ತೊಡಗಿರುವೆ.
8 : ಬಾಗಿಲಿನ ಹಾಗು ಬಾಗಿಲಿನ ನಿಲುವಿನ ಹಿಂಭಾಗದಲ್ಲಿ ಅಶ್ಲೀಲ ಸ್ಮಾರಕಗಳನ್ನು ಇಟ್ಟುಕೊಂಡಿರುವೆ. ನನ್ನನ್ನು ತ್ಯಜಿಸಿಬಿಟ್ಟು, ನಿನ್ನ ಹಾಸಿಗೆಯನ್ನು ಬಿಚ್ಚಿರುವೆ. ಅನ್ಯರ ಸಂಗಮವನ್ನು ಬಯಸಿ ಅವರೊಂದಿಗೆ ಬೆಲೆಗೆ ಒಪ್ಪಂದ ಮಾಡಿಕೊಂಡಿರುವೆ; ಬಳಿಕೆ ಕಾಮ ವಿಲಾಸದಲ್ಲಿ ತೊಡಗಿರುವೆ.
9 : ಬೇಕಾದಷ್ಟು ಪರಿಮಳ ದ್ರವ್ಯವನ್ನು ಕೂಡಿಸಿಕೊಂಡು, ಸುಗಂಧ ತೈಲವನ್ನು ತೆಗೆದುಕೊಂಡು ‘ಮೋಲೆಕ್’ ದೇವತೆಯ ಬಳಿಗೆ ಯಾತ್ರೆಗೈದಿರುವೆ. (ಹೊಸ ದೇವತೆಗಳನ್ನು ಹುಡುಕಲು) ನಿನ್ನ ದೂತರನ್ನು ದೂರದೂರ ನಾಡುಗಳಿಗೆ ಕಳಿಸಿರುವೆ. ಪಾತಾಳದವರೆಗೂ ನಿನ್ನನ್ನು ತಗ್ಗಿಸಿಕೊಂಡಿರುವೆ.
10 : ನಡೆದು ನಡೆದು ದಣಿದಿದ್ದರೂ ‘ಇನ್ನು ಪ್ರಯೋಜನವಿಲ್ಲ’ ಎಂದುಕೊಳ್ಳಲಿಲ್ಲ. ಹೊಸ ಚೈತನ್ಯವನ್ನು ತಂದುಕೊಂಡು ನಿಲ್ಲದೆ ಮುಂದುವರೆದಿರುವೆ.
11 : ನೀನು ಯಾರಿಗೆ ಹೆದರಿ ಬೆದರಿ, ನನ್ನನ್ನು ಮರೆತು, ನನಗೆ ಸುಳ್ಳಾಡಿ ಮೋಸಮಾಡಿರುವೆ? ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ! ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ?
12 : ನಿನ್ನ ನಡತೆಯನ್ನು ಬಯಲಿಗೆ ತರುವೆನು. ಆಗ ನಿನ್ನ ಕೃತ್ಯಗಳು ನಿನಗೆ ನೆರವಾಗವು.
13 : ಸಹಾಯಕ್ಕಾಗಿ ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ಈ ವಿಗ್ರಹಗಳೇ ನಿನಗೆ ರಕ್ಷಣೆ ನೀಡಲಿ. ಇವುಗಳನ್ನೆಲ್ಲ ಗಾಳಿ ಬಡಿದುಕೊಂಡು ಹೋಗುವುದು. ಕೇವಲ ಒಂದು ಉಸಿರು ಸಾಕು, ಇವುಗಳನ್ನು ಒಯ್ದುಬಿಡಲು. ಆದರೆ ನನ್ನನ್ನು ಆಶ್ರಯಿಸಿಕೊಂಡವನು ನಾಡಿಗೆ ಬಾಧ್ಯಸ್ಥನಾಗುವನು; ನನ್ನ ಪವಿತ್ರ ಪರ್ವತವನ್ನು ಸ್ವಾಧೀನ ಮಾಡಿಕೊಳ್ಳುವನು.
14 : “ಸರಿಮಾಡಿ ಮಾರ್ಗವನು ಮಣ್ಣು ಹಾಕಿ, ಹಾಕಿ; ನನ್ನ ಜನರ ದಾರಿಯಿಂದ ತೊಡರುಗಳನ್ನು ಎತ್ತಿಹಾಕಿ,” ಎನ್ನುತ್ತದೆ ವಾಣಿಯೊಂದು.
15 : “ಪರಮ ಪವಿತ್ರನ, ಶಾಶ್ವತ ಲೋಕದ ನಿತ್ಯನಿವಾಸಿಯಾದ ಮಹೋನ್ನತನ ಮಾತಿದು: ಉನ್ನತವಾದ ಪವಿತ್ರಾಲಯದಲ್ಲಿ ವಾಸಿಸುವವನು ನಾನು; ಆದರೂ ಪಶ್ಚಾತ್ತಾಪಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.
16 : ನಾನು ಸರ್ವದಾ ತಪ್ಪು ಹುಡುಕುವವನಲ್ಲ; ಕಡೆಯ ತನಕ ಕೋಪದಿಂದಿರುವವನಲ್ಲ. ಹಾಗೆ ಮಾಡಿದರೆ ಜೀವಾತ್ಮ ಕುಂದಿಹೋದೀತು. ಆ ಜೀವಿಗಳನ್ನು ಸೃಷ್ಟಿಸಿದವನು ನಾನೇ ಅಲ್ಲವೆ?
17 : ನನ್ನ ಜನರ ದುರಾಶೆಯ ದೋಷದ ನಿಮಿತ್ತ ನಾನು ಕೋಪಗೊಂಡೆ, ದುಂಡಿಸಿದೆ, ಮುಖ ಮರೆಸಿಕೊಂಡೆ, ರೋಷಭರಿತನಾದೆ. ಅವರಾದರೋ ಮೊಂಡುತನದಿಂದ ಮನಸ್ಸಿಗೆ ತೋಚಿದ ಹಾಗೆ ನಡೆಯುತ್ತಾ ಬಂದಿದ್ದಾರೆ.
18 : “ಅವರ ವರ್ತನೆಯನ್ನು ನೋಡಿದ್ದೇನೆ. ಆದರೂ ಅವರನ್ನು ಸ್ವಸ್ಥಪಡಿಸುತ್ತೇನೆ. ಅವರಿಗೆ ದಾರಿತೋರಿಸುತ್ತಾ, ಅವರಿಗೂ ಅವರಿಗಾಗಿ ದುಃಖಿಸುವವರಿಗೂ ಸಾಂತ್ವನ ಸಂಭಾವನೆಯನ್ನು ಕೊಡುತ್ತೇನೆ.
19 : ಅವರ ಬಾಯಿಂದ ಸ್ತುತಿ ಸ್ತೋತ್ರ ಹೊರಬರುವಂತೆ ಮಾಡುತ್ತೇನೆ. ಶಾಂತಿ! ಹತ್ತಿರವಿರುವವರಿಗೂ ದೂರವಿರುವವರಿಗೂ ಶಾಂತಿ ಸಮಾಧಾನ! ನಾನು ಅವರನ್ನು ಸ್ವಸ್ಥ ಪಡಿಸುತ್ತೇನೆ,” ಎನ್ನುತ್ತಾರೆ ಸರ್ವೇಶ್ವರಸ್ವಾಮಿ.
20 : “ಆದರೆ, ದುರುಳರು ಅಲ್ಲೋಲಕಲ್ಲೋಲವಾದ ಸಮುದ್ರದಂತೆ ಇದ್ದಾರೆ. ಅದು ಸುಮ್ಮನಿರದು – ಅದರ ಅಲೆಗಳು ಕೆಸರನ್ನೂ ಕೊಳಚೆಯನ್ನೂ ಕಕ್ಕುತ್ತಾ ಇರುತ್ತದೆ.
21 : ದುರುಳರಿಗೆ ಇಲ್ಲ ‘ಶಾಂತಿಸಮಾಧಾನ,” ಎನ್ನುತ್ತಾರೆ ದೇವರು.

Holydivine