Job - Chapter 9
Holy Bible

1 : ಅದಕ್ಕೆ ಯೋಬನು ಉತ್ತರಿಸುತ್ತಾ ಹೀಗೆಂದನು:
2 : “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?
3 : ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು.
4 : ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.
5 : ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.
6 : ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ.
7 : ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನೂ ಉದಯಿಸನು ಮುದ್ರೆಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.
8 : ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ.
9 : ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿ ಮಂಡಲವನೂ ಮೃಗಶಿರವನ್ನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ.
10 : ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನು ಮಾಡಿರುವನು.
11 : ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದು ಹೋದರೂ ತಿಳಿಯದು.
12 : ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?
13 : ರಹೆಬನ ಸಹಾಯಕರು ಕಾಲಿಗೆರಗಿದರೂ ದೇವರು ತನ್ನ ಸಿಟ್ಟು ಸಿಡುಕನು ಬಿಟ್ಟುಬಿಡನು.
14 : ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು!
15 : ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.
16 : ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.
17 : ನನ್ನನ್ನು ಬಿರುಗಾಳಿಯಿಂದ ಬಡಿಯುತ್ತಾನೆ ಕಾರಣವಿಲ್ಲದೆ ಗಾಯದ ಮೇಲೆ ಗಾಯ ಮಾಡುತ್ತಾನೆ.
18 : ನನಗೆ ಉಸಿರಾಡಲೂ ಬಿಡದೆ ನನ್ನ ಹೊಟ್ಟೆಯನ್ನು ಕಹಿಯಾದವುಗಳಿಂದ ತುಂಬಿಸುತ್ತಾನೆ.
19 : ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.
20 : ನಾನು ಸತ್ಯವಂತನಾಗಿದ್ದರೂ ಬಾಯೇ ನಾನು ಅಪರಾಧಿಯೆಂದು ಒಪ್ಪಿಕೊಳ್ಳುತ್ತದೆ. ನಾನು ನಿರ್ದೋಷಿಯಾಗಿದ್ದರೂ ‘ನಿನ್ನದು ವಕ್ರ ಬುದ್ಧಿ’ ಎನ್ನುತ್ತದೆ.
21 : ನಾನು ನಿರ್ದೋಷಿಯೇ ಹೌದು; ಅದರ ಬಗ್ಗೆ ನನಗಿಲ್ಲ ಚಿಂತೆ. ನನ್ನ ಪ್ರಾಣ ಕೂಡ ನನಗೆ ತೃಣವಾಗಿಬಿಟ್ಟಿದೆ.
22 : ಎಲ್ಲವೂ ಒಂದೇ ಆಗಿಬಿಟ್ಟಿದೆ. ಆದ್ದರಿಂದಲೇ ಇಂತೆನ್ನುತ್ತೇನೆ: ‘ದೋಷಿಯೋ ನಿರ್ದೋಷಿಯೋ’ ದೇವರು ಎಲ್ಲರನೂ ನಾಶಗೊಳಿಸುತ್ತಾನೆ.
23 : ಅಕಸ್ಮಾತ್ತಾಗಿ ಮಹಾವಿನಾಶ ಬಂದೊದಗಿದರೂ ನಿರ್ದೋಷಿಗಳ ಅವಸ್ಥೆಕಂಡು ಹಾಸ್ಯಮಾಡುತ್ತಾನೆ.
24 : ದೇಶವು ದುರುಳರ ಕೈವಶವಾಗಿದ್ದರೂ ನ್ಯಾಯಾಧೀಶರ ಮುಖಕ್ಕೆ ಮುಸುಕು ಹಾಕುತ್ತಾನೆ. ಇದನ್ನು ಮಾಡುವವರು ದೇವರಲ್ಲದೆ ಮತ್ತೆ ಯಾರು?
25 : ನನ್ನ ದಿನಗಳು ಓಟಗಾರನಿಗಿಂತ ವೇಗ ಅವು ಓಡುತ್ತವೆ ಕಾಣದೆ ಯಾವುದೊಂದು ಸುಖ.
26 : ಬೆಂಡಿನ ಹರಗಲು ದೌಡಾಯಿಸುವಂತೆ ಬೇಟೆಯ ಮೇಲೆ ಗರುಡವೆರಗುವಂತೆ ಕಳೆದು ಹೋಗುತ್ತವೆ ಶೀಘ್ರಗತಿಯಲ್ಲೆ.
27 : ನನ್ನ ಪ್ರಲಾಪವನ್ನು ನಾನು ಮರೆತುಬಿಟ್ಟರೆ ಬಾಡಿದ ಮುಖವನ್ನು ಮಾರ್ಪಡಿಸಿಕೊಂಡರೆ ಹರ್ಷಿಸುವೆನೆಂದು ನಾನು ಮನಸ್ಸು ಮಾಡಿದರೆ.
28 : ಸಮಸ್ತ ದುಃಖದುಗುಡಗಳ ನೆನಪು ನನಗೆ ತರುತ್ತವೆ ದಿಗಿಲು ನನಗೆ ಗೊತ್ತು, ನೀ ನನ್ನನು ನಿರಪರಾಧಿ ಎಂದೆಣಿಸಲಾರೆಯೆಂದು.
29 : ಅಪರಾಧಿಯೆಂದೇ ನನಗೆ ನಿರ್ಣಯವಾಗ ಬೇಕಿದ್ದಲ್ಲಿ ನಾನೇಕೆ ಪ್ರಯಾಸ ಪಡಬೇಕು ವ್ಯರ್ಥವಾಗಿ?
30 : ಹಿಮದಿಂದ ನಾನು ಸ್ನಾನ ಮಾಡಿದರೂ ಚೌಳಿನಿಂದ ನಾನು ಕೈ ತೊಳೆದರೂ
31 : ಮುಳುಗಿಸಿ ಬಿಡುವೆ ನನ್ನನ್ನು ತಿಪ್ಪೆಗುಂಡಿಯಲ್ಲಿ ನನ್ನ ಉಡಿಗೆ ತೊಡಿಗೆಗಳೂ ಅಸಹ್ಯಪಡುವುವು ನನ್ನನು ನೋಡಿ.
32 : ದೇವರು ನನ್ನಂಥ ನರನಲ್ಲ, ನಾನಾತನಿಗೆ ಉತ್ತರಿಸಲು ನಾವಿಬ್ಬರೂ ನ್ಯಾಯಾಲಯದಲ್ಲಿ ಕೂಡಿ ವಾದಿಸಲು.
33 : ನಮ್ಮಿಬ್ಬರ ನಡುವೆ ನಿರ್ಣಯಿಸತಕ್ಕವನು ಇಲ್ಲ ಮಧ್ಯಸ್ಥನಾಗಬಲ್ಲ ನ್ಯಾಯಾಧಿಪತಿ ಇಲ್ಲ.
34 : ನನ್ನ ಮೇಲೆತ್ತಿರುವ ಕೋಲನ್ನು ಬಿಸಾಡಲಿ ಆತನ ಭಯಭೀತಿ ನನ್ನನು ಹೆದರಿಸದಿರಲಿ.
35 : ಆಗ ಭಯಪಡದೆ ಮಾತನಾಡುವೆನು ಅಂಜಿಕೆಗೆ ನನ್ನಲ್ಲಿ ಆಸ್ಪದ ಇರದು.

Holydivine