Job - Chapter 30
Holy Bible

1 : “ಈಗಲಾದರೊ ನನಗಿಂತ ಚಿಕ್ಕವರು ನನ್ನನ್ನು ಪರಿಹಾಸ್ಯಮಾಡುತ್ತಾರೆ. ಇವರ ಹೆತ್ತವರು ನನ್ನ ಮುಂದೆ ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆ.
2 : ಅವರ ಭುಜಬಲದಿಂದ ನನಗೇನಾಗುತ್ತಿತ್ತು? ಆಗ ಅವರ ಪುಷ್ಟಿಯು ಕುಗ್ಗಿಹೋಗಿತ್ತು!
3 : ಕೊರತೆಯಿಂದ, ಬರದಿಂದ ಅವರು ಸೊರಗಿ ಹೋಗಿದ್ದರು ನಿನ್ನೆಯವರೆಗೂ ಹಾಳುಬೀಳಾದ ನೆಲವನ್ನು ನೆಕ್ಕುತ್ತಿದ್ದರು.
4 : ಚಕ್ಕೋತ ಸೊಪ್ಪುಗಳನ್ನು ಪೊದೆಗಳಿಂದ ಕಿತ್ತು ತಿನ್ನುತ್ತಿದ್ದರು ಜಾಲಿಯ ಬೇರೇ ಅವರಿಗೆ ಆಹಾರವಾಗಿತ್ತು.
5 : ಜನರು ಅವರನ್ನು ತಳ್ಳಿಬಿಟ್ಟಿದ್ದರು ಕಳ್ಳರನ್ನೋ ಎಂಬಂತೆ ಕೂಗಿ ಅಟ್ಟಿಬಿಟ್ಟಿದ್ದರು.
6 : ವಾಸಮಾಡುತ್ತಿದ್ದರವರು ಭೀಕರ ಡೊಂಗರುಗಳಲಿ, ನೆಲದ ಬಿಲಗಳಲಿ, ಬಂಡೆಗಳ ಸಂದುಗಳಲ್ಲಿ.
7 : ಅರಚಿಕೊಳ್ಳುತ್ತಿದ್ದರು ಪೊದೆಗಳ ನಡುವೆ ಕೂಡಿಕೊಳ್ಳುತ್ತಿದ್ದರು ಮುಳ್ಳುಗಿಡಗಳ ಕೆಳಗೆ.
8 : ಮೂರ್ಖರ ಮಕ್ಕಳು, ನೀಚ ಜಾತಿಯವರು ನಾಡಿನಿಂದ ಹೊರದೂಡಲ್ಪಟ್ಟವರು ಅವರಾಗಿದ್ದರು.
9 : ಅಂಥವರ ಪಾವಣಿಗೆ ನಾನೀಗ ಗುರಿಯಾದೆ ಅವರ ಕಟ್ಟುಕತೆಗಳಿಗೆ ಅಡ್ಡಹೆಸರಾದೆ.
10 : ನನಗೆ ಅಸಹ್ಯಪಟ್ಟು ದೂರಸರಿಯುತ್ತಾರೆ ನನ್ನ ಮೇಲೆ ಉಗುಳುವುದಕ್ಕೂ ಹಿಂಜರಿಯದಿದ್ದಾರೆ.
11 : ದೇವರು ನನ್ನ ಬಿಲ್ಲನು ಸಡಿಲಗೊಳಿಸಿ ಪೆಟ್ಟಿಗೀಡಾಗಿಸಿದ್ದಾರೆ ಅವರೋ ಕಡಿವಾಣವಿಲ್ಲದ ಕುದುರೆಗಳಂತೆ ನನ್ನ ಮುಂದಿದ್ದಾರೆ.
12 : ಕಲಹಗಾರರು ಎದ್ದಿದ್ದಾರೆ ನನ್ನ ಬಲಗಡೆಗೆ ನನ್ನ ಕಾಲುಗಳನು ನೂಕುತ್ತಿದ್ದರೆ ಹಿಂದಕೆ ಸಂಚುಹೂಡುತ್ತಿದ್ದಾರೆ ನನ್ನನ್ನು ನಾಶಮಾಡಲಿಕೆ.
13 : ನನ್ನ ಹಾದಿಯನು ಕಡಿದು ಹಾಕಿದ್ದಾರೆ ನನ್ನ ಉಪದ್ರವವನ್ನು ಹೆಚ್ಚಿಸಿದ್ದಾರೆ ಅವರನ್ನು ತಡೆಯಲು ಯಾರೂ ಇಲ್ಲದಿದ್ದಾರೆ.
14 : ಅಗಲವಾದ ಕೋಟೆಬಿರುಕುಗಳಲಿ ನುಗ್ಗಿ ಬರುತ್ತಿದ್ದಾರೆ ಹಾಳುಬೀಳಿನಲಿ ನಿಂತಿರುವ ನನ್ನ ಮೇಲೆ ಉರುಳಿಬೀಳಲಿದ್ದಾರೆ.
15 : ಅಡ್ಡಿ ಆತಂಕಗಳು ನನ್ನನು ಸುತ್ತುವರೆದಿವೆ ನನ್ನ ಮಾನಮರ್ಯಾದೆ ತೂರಿಹೋಗುತ್ತಿದೆ ಗಾಳಿಯಂತೆ ನನ್ನ ಯೋಗಕ್ಷೇಮ ತೇಲಿಹೋಗುತ್ತಿದೆ ಮೋಡದಂತೆ.
16 : ನನ್ನ ಮನ ಕರಗಿ ನೀರಾಗಿದೆ ಬಾಧೆಗಳು ನನ್ನನು ಬಿಗಿಹಿಡಿದಿವೆ.
17 : ಇರುಳು ನನ್ನೆಲುಬುಗಳನು ಕೊರೆದು ಕೀಳುತ್ತಿದೆ ಸಂಕಟಗಳು ನನ್ನನು ಎಡೆಬಿಡದೆ ತಿನ್ನುತ್ತಿವೆ.
18 : ನನ್ನ ಬಟ್ಟೆಯನು ಗಟ್ಟಿಯಾಗಿ ಹಿಡಿದಿದ್ದಾರೆ ಕೊರಳಪಟ್ಟಿಯಂತೆ ಹಿಸುಕಿ ಹಿಂಡುತ್ತಿದ್ದಾರೆ.
19 : ನನ್ನನು ಕೆಸರಿನಲ್ಲಿ ಕೆಡವಿದ್ದಾರೆ ನನ್ನನು ಭಸ್ಮಕ್ಕೆ ಸಮಾನನನ್ನಾಗಿಸಿದ್ದಾರೆ.
20 : ದೇವರೇ, ನಾನು ಮೊರೆಯಿಟ್ಟರೂ ಉತ್ತರಕೊಡದಿರುವೆ ನಾನೆದ್ದು ನಿಂತರೂ ನೀನು ಸುಮ್ಮನೆ ನೋಡುತ್ತಿರುವೆ.
21 : ನನಗೆ ನೀನು ಕ್ರೂರನಾಗಿಬಿಟ್ಟಿರುವೆ ನಿನ್ನ ಭುಜಬಲದಿಂದ ಹಿಂಸಿಸುತ್ತಿರುವೆ.
22 : ನನ್ನನು ಎತ್ತಿ ತೂರಿಬಿಟ್ಟಿರುವೆ ಬಿರುಗಾಳಿಗೆ ತೊಳಲಾಡುತ್ತಿರುವೆನು ತುಫಾನಿನ ಆರ್ಭಟಕ್ಕೆ.
23 : ನನ್ನನು ಮರಣಕ್ಕೆ ಗುರಿಮಾಡುವೆಯೆಂದು ತಿಳಿದಿದೆ ಸಮಸ್ತಜೀವಿಗಳು ತೆರಳುವ ಮಂದಿರಕ್ಕೆ ಸೇರಿಸುವೆಯೆಂದು ಗೊತ್ತೇ ಇದೆ.
24 : ಆದರೂ ಕೇಡಿಗೆ ಈಡಾದವನು ಕೈಚಾಚುವುದಿಲ್ಲವೆ ಸಹಾಯಕ್ಕಾಗಿ? ಆಪತ್ತಿಗೆ ಗುರಿಯಾದವನು ಕೂಗಿಕೊಳ್ಳುವುದಿಲ್ಲವೆ ನೆರವಿಗಾಗಿ?
25 : ಕಷ್ಟಾನುಭವಿಯನು ಕಂಡು ನಾನು ಕಣ್ಣೀರಿಡಲಿಲ್ಲವೆ? ದಟ್ಟದರಿದ್ರರಿಗೋಸ್ಕರ ನಾನು ದುಃಖಪಡಲಿಲ್ಲವೆ?
26 : ನಾನು ಒಳಿತನು ನಿರೀಕ್ಷಿಸಿದಾಗ ಕೇಡು ಬಂದೊದಗಿತು ಬೆಳಕನು ಎದುರು ನೋಡುವಾಗ ಕತ್ತಲು ಕವಿಯಿತು.
27 : ಕರುಳು ಕುದಿಯುತ್ತಿದೆ ಅಶಾಂತಿಯಿಂದ ಬಂದೊದಗಿದೆ ನನಗೆ ಬಾಧೆಯ ದಿನ.
28 : ಸಂತೈಸುವ ಸೂರ್ಯನಿಲ್ಲದೆ ಅಲೆಯುತ್ತಿರುವೆ ಮಂಕು ಕವಿದು ಅಂಗಲಾಚುತ್ತಿರುವೆ ಸಭೆಯ ಮಧ್ಯೆ ನಿಂತು.
29 : ನರಿಗಳಿಗೆ ಸಹೋದರನಾಗಿರುವೆ ಗೂಬೆಗಳಿಗೆ ನಾನು ಗೆಳೆಯನಾಗಿರುವೆ.
30 : ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.
31 : ಅಳುವ ಧ್ವನಿ ಕೇಳಿಸುತ್ತಿದೆ ನನ್ನ ಕೊಳಲಿನಲಿ ಗೋಳಾಟದ ಸ್ವರವಿದೆ ನನ್ನ ಕಿನ್ನರಿಯಲಿ.”

Holydivine