Job - Chapter 36
Holy Bible

1 : ಬಳಿಕ ಎಲೀಹುವನು ಮುಂದು ವರೆದು:
2 : “ತಾಳು, ನಾನು ಹೇಳುವುದನು ಇನ್ನೂ ಸ್ವಲ್ಪ ಕೇಳು ದೇವರ ಪರವಾಗಿ ಹೇಳತಕ್ಕವು ಇನ್ನು ಕೆಲವುಂಟು:
3 : ನನ್ನ ಸೃಷ್ಟಿಕರ್ತನು ಸತ್ಯಸ್ವರೂಪನೆಂದು ತೋರಲು ನನ್ನ ವಾದಗಳನ್ನು ಸವಿಸ್ತಾರಗೊಳಿಸುವೆನು:
4 : ನನ್ನ ಮಾತು ಸುಳ್ಳಲ್ಲವೆಂಬುದು ನಿಶ್ಚಯ ನಿನ್ನ ಬಳಿಯಿರುವನು ಜ್ಞಾನಪೂರ್ಣನೋರ್ವ.
5 : ದೇವರು ಸರ್ವಶಕ್ತನು, ಯಾರನ್ನೂ ತುಚ್ಛೀಕರಿಸನು ಆತನ ಬುದ್ಧಿಸಾಮಥ್ರ್ಯ ಅಪಾರವಾದುದು.
6 : ದುರುಳರ ಪ್ರಾಣವನ್ನು ಆತ ಉಳಿಸನು ನಿರ್ಗತಿಕರ ನ್ಯಾಯವನು ಸ್ಥಾಪಿಸುವನು.
7 : ತನ್ನ ಕಟಾಕ್ಷವನ್ನು ಸಜ್ಜನರ ಮೇಲೆ ಅಚಲವಾಗಿರಿಸುವನು ರಾಜರಂತೆ ಸಿಂಹಾಸನದ ಮೇಲೆ ಅವರನು ಕುಳ್ಳಿರಿಸುವನು ಅಮರವಾದ ಉನ್ನತ ಪದವಿಗೆ ಅವರನು ಏರಿಸುವನು.
8 : ಆದರೆ ಅವರು ಬಂಧನಕ್ಕೊಳಗಾದರೆ ಸಂಕಟ ಸಂಕೋಲೆಗಳಿಗೆ ಸಿಕ್ಕಿಕೊಂಡರೆ,
9 : ದೇವರು ಅವರ ದುಷ್ಕøತ್ಯಗಳನು ತೋರಿಸುವನು ಸೊಕ್ಕಿನ ದ್ರೋಹಗಳನು ಸೂಚಿಸುವನು.
10 : ಶಿಕ್ಷಣ ಕೇಳುವಂತೆ ಅವರ ಕಿವಿಯನ್ನು ತರೆಯುವನು ಅಧರ್ಮವನ್ನು ಬಿಟ್ಟು ಬಿಡುವಂತೆ ಆಜ್ಞಾಪಿಸುವನು.
11 : ಅದನ್ನು ಕೇಳಿ ಆತನ ಸೇವಾಸಕ್ತರಾದಲ್ಲಿ ತಮ್ಮ ದಿವಸಗಳನ್ನು ಕಳೆವರು ಸುಖದಲ್ಲಿ ತಮ್ಮ ವರುಷಗಳನು ಹರ್ಷಾನಂದದಲ್ಲಿ.
12 : ಕೇಳದಿದ್ದರೆ ಸಾಗರದಲ್ಲಿ ಮುಳುಗಿ ಹೋಗುವರು ಜ್ಞಾನಹೀನರಾಗಿಯೇ ಪ್ರಾಣ ಕಳೆದುಕೊಳ್ಳುವರು.
13 : ಕಪಟ ಹೃದಯಿಗಳು ಕೋಪಿಷ್ಠರಾಗುವರು ತಮ್ಮನ್ನು ಬಂಧಿಸುವಾಗಲು ಮೊರೆಯಿಡರು.
14 : ಯೌವನ ಪ್ರಾಯದಲ್ಲೇ ಸಾಯುವರು ಪುರುಷಗಾಮಿಗಳ ಮಧ್ಯೆಯಲ್ಲೇ ಗತಿಸಿಹೋಗುವರು.
15 : ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು ಕಷ್ಟಾನುಭವಗಳ ಮೂಲಕವೆ ದೇವರು ಅವರ ಕಿವಿಯನ್ನು ತೆರೆಯುವನು.
16 : ಅಂತೆಯೆ, ಕಷ್ಟದಿಂದ ನಿನ್ನನ್ನು ತಪ್ಪಿಸಬೇಕೆಂಬುದು ಇಕ್ಕಟ್ಟಿಲ್ಲದ ಬಯಲಿಗೆ ನಿನ್ನನ್ನು ತರಬೇಕೆಂಬುದು ನಿನ್ನ ಊಟದ ಮೇಜು ಸಮೃದ್ಧಿಯಾಗಿರ ಬೇಕೆಂಬುದು ದೇವರ ಉದ್ದೇಶವಾಗಿರುವುದು.
17 : ನೀನೋ, ದುಷ್ಟ ನಿರ್ಣಯಗಳಿಂದ ಭರಿತನಾಗಿರುವೆ ನ್ಯಾಯವಿಚಾರಣೆಗೂ ತೀರ್ಪಿಗೂ ಒಳಪಟ್ಟಿರುವೆ.
18 : ಸಿರಿಸಂಪತ್ತು ನಿನ್ನನು ಕುಚೋದ್ಯಕ್ಕೆ ನೂಕೀತು, ಎಚ್ಚರಿಕೆ! ಹೆಚ್ಚು ಲಂಚಕೋರತನದಿಂದ ವಂಚಿತನಾಗಬೇಡ.
19 : ಐಶ್ವರ್ಯವಾಗಲಿ, ಧನಸಾಮಥ್ರ್ಯವಾಗಲಿ ಕಷ್ಟಾನುಭವವಿಲ್ಲದೆ ನಿನಗೆ ಈಡಾಗವಿಲ್ಲಿ.
20 : ತಟ್ಟನೆ ಜನಾಂಗಗಳು ನಿರ್ಮೂಲವಾಗುವಂಥ ರಾತ್ರಿಯನು ಬಯಸಬೇಡ.
21 : ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ! ನಿನ್ನ ಕಷ್ಟಾನುಭವ ಅದನು ತಡೆಗಟ್ಟುತ್ತದೆ.
22 : ದೇವರ ಶಕ್ತಿ ಉನ್ನತೋನ್ನತ ಯಾರಿಹನು ಅವನಂಥ ಬೋಧಕ?
23 : ದೇವರಿಗೆ ಮಾರ್ಗತೋರಿಸಬಲ್ಲವನಾರು? ಆತನಿಗೆ ‘ನೀನು ಮಾಡಿರುವುದು ಅನ್ಯಾಯ’, ಎನ್ನಬಲ್ಲವನಾರು?
24 : ಮಾನವರು ಸ್ತುತಿಸಿರುವ ಆತನ ಕಾರ್ಯಗಳನ್ನ ನೀನೂ ಕೂಡ ಹೊಗಳಲು ಮರೆಯಬೇಡ.
25 : ಮಾನವರೆಲ್ಲರು ಅದನ್ನು ಕಂಡಿರುವರು ನರರಾದ ನಾವು ದೂರದಿಂದ ನೋಡಬಹುದು.
26 : ದೇವರೆನಿತೋ ಮಹೋನ್ನತನು ನಮ್ಮ ಅರಿವಿಗಾತನು ಎಟುಕನು ಅಸಂಖ್ಯಾತ ಆತನ ವರುಷಗಳು.
27 : ನೀರಿನ ಹನಿಗಳನು ಹೀರಿಕೊಳ್ಳುತ್ತಾನೆ ಮಂಜಿನಿಂದ ತಿಳಿಮಳೆಯನು ಸುರಿಸುತ್ತಾನೆ.
28 : ಮೋಡಗಳು ಮಳೆಗರೆಯುತ್ತವೆ, ಹಲವಾರು ಜನರ ಮೇಲೆ ಅದನ್ನು ಚಿಮುಕಿಸುತ್ತವೆ.
29 : ಗ್ರಹಿಸುವವರಾರು ಮೇಘಗಳ ಹಬ್ಬುಗೆಯನು? ದೇವರ ಗುಡಾರದಲ್ಲಿನಾ ಗರ್ಜನೆಯನು?
30 : ಇಗೋ, ಪಸರಿಸುತ್ತಾನೆ ಸುತ್ತಲು ತನ್ನ ಬೆಳಕನ್ನು ಮುಚ್ಚಿಡುತ್ತಾನೆ ಕಡಲಿನ ಅಡಿಭಾಗವನು.
31 : ಹೀಗೆ ಜನಾಂಗಗಳನ್ನು ಪೋಷಣೆ ಮಾಡುತ್ತಾನೆ ಆಹಾರವನ್ನು ಧಾರಾಳವಾಗಿ ದಯಪಾಲಿಸುತ್ತಾನೆ.
32 : ಸಿಡಿಲನ್ನೇ ಕೈತುಂಬ ಹಿಡಿದು ಗುರಿಮುಟ್ಟಲೆಂದು ಆಜ್ಞೆಯಿಡುತ್ತಾನೆ.
33 : ಅದರ ಆರ್ಭಟವು ಆತನನ್ನು ಪ್ರಕಟಿಸುತ್ತದೆ ಆತನ ಆಗಮನವನು ದನಕರುಗಳಿಗೂ ತಿಳಿಸುತ್ತದೆ.”

Holydivine